ಚಿಕ್ಕಮಗಳೂರು | ಅನಿವಾಸಿ ಭಾರತೀಯ ವೈದ್ಯೆಯ ಅತ್ಯಾಚಾರ: 'ಕೇವಲ' ಆಶ್ರಮದ ಯೋಗ ಗುರು ಬಂಧನ
ಚಿಕ್ಕಮಗಳೂರು: ಅನಿವಾಸಿ ಭಾರತೀಯ ವೈದ್ಯೆಯೊಬ್ಬಳ ಮೇಲೆ ಅತ್ಯಾಚಾರ ಎಸಗಿರುವ ಆರೋಪದಲ್ಲಿ ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿರುವ 'ಕೇವಲ ಆಶ್ರಮ'ದ ಯೋಗ ಗುರುವೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಕೇವಲ ಆಶ್ರಮದ ಯೋಗ ಗುರು ಎನ್ನಲಾದ ಪ್ರದೀಪ್ ಬಂಧಿತ ಆರೋಪಿ. ಅಮೆರಿಕದ ಪೌರತ್ವ ಪಡೆದಿರುವ ಪಂಜಾಬ್ ಮೂಲದ ವೈದ್ಯೆ ಸಂತ್ರಸ್ತೆಯಾಗಿದ್ದಾರೆ. ಸಂತ್ರಸ್ತ ವೈದ್ಯೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರದೀಪ್ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ್ದಾರೆ. ಅದರ ಆಧಾರದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಘಟನೆ ಬಗ್ಗೆ ತನ್ನ 'ಎಕ್ಸ್' ಖಾತೆಯಲ್ಲಿ ಅಳಲು ತೋಡಿಕೊಂಡಿರುವ ವೈದ್ಯೆ, ಮಲ್ಲೇನಹಳ್ಳಿ ಗ್ರಾಮದಲ್ಲಿರುವ 'ಕೇವಲ' ಆಶ್ರಮದಲ್ಲಿ ಯೋಗಗುರು ಪ್ರದೀಪ್ ಅತ್ಯಾಚಾರ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಆರೋಪಿಸಿದ್ದಾರೆ.
ಅಮೆರಿಕದಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತ ಅಲ್ಲಿನ ಪೌರತ್ವ ಪಡೆದಿರುವ ಮಹಿಳೆ ಮೂರು ತಿಂಗಳ ಹಿಂದೆ ಕೇವಲ ಆಶ್ರಮಕ್ಕೆ ಯೋಗ, ಧ್ಯಾನಕ್ಕಾಗಿ ಭೇಟಿ ನೀಡಿದ್ದರು. ಈ ಆಶ್ರಮದಲ್ಲಿ ವಿದೇಶಿ ಮಹಿಳೆಯರಿಗೆ ಯೋಗ, ಧ್ಯಾನ ಕಲಿಸುತ್ತಿರುವ ಪ್ರದೀಪ್ ಎಂಬಾತ ತನ್ನ ಮೇಲೆ ದೌರ್ಜನ್ಯ ಎಸಗಿದ್ದಾನೆ ಎಂದು ದೂರಿದ್ದಾರೆ.
ಈ ಆಶ್ರಮಕ್ಕೆ ಭೇಟಿ ನೀಡುವ ಮಹಿಳೆಯರು ಎಚ್ಚರ ವಹಿಸುವಂತೆ ಸೂಚಿಸಿರುವ ವೈದ್ಯೆ, ಇದು ಮಹಿಳೆಯರಿಗೆ ಸುರಕ್ಷಿತ ಸ್ಥಳವಲ್ಲ ಎಂದು ಅಭಿಪ್ರಾಯಿಸಿದ್ದಾರೆ.