ಚಾರ್ಮಾಡಿ ಘಾಟಿಯಲ್ಲಿ ದಟ್ಟ ಮಂಜು: 100 ಅಡಿ ಪ್ರಪಾತಕ್ಕೆ ಉರುಳಿದ ಲಾರಿ
ಬೆಳ್ತಂಗಡಿ, ಸೆ.16: ಭಾರೀ ಮಳೆ ಕಾರಣ ಚಾರ್ಮಾಡಿ ಘಾಟಿಯಲ್ಲಿ ದಟ್ಟ ಮಂಜು ಆವರಿಸಿಕೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ದಟ್ಟ ಮಂಜಿನ ಕಾರಣಕ್ಕೆ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ನೂರು ಅಡಿ ಪ್ರಪಾತಕ್ಕೆ ಉರುಳಿಬಿದ್ದ ಘಟನೆ ಚಾರ್ಮಾಡಿ ಘಾಟಿಯ ಸೋಮನಕಾಡು ಬಳಿ ಶುಕ್ರವಾರ ರಾತ್ರಿ ಸಂಭವಿಸಿದೆ.
ಅಪಘಾತದಲ್ಲಿ ಲಾರಿ ಚಾಲಕ ಹಾಗೂ ಕ್ಲೀನರ್ ಗೆ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಪಾಯದಿಂದ ಪಾರಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಪುತ್ತೂರಿನಿಂದ ಚಿತ್ರದುರ್ಗಕ್ಕೆ ನೀರಿನ ಬಾಟಲ್ ಹೇರಿಕೊಂಡು ಹೋಗುತ್ತಿದ್ದ ಲಾರಿ ಚಾರ್ಮಾಡಿ ಘಾಟಿಯಲ್ಲಿ ಆವರಿಸಿದ ದಟ್ಟ ಮಂಜಿನಿಂದ ದಾರಿ ಕಾಣದೆ 100 ಅಡಿ ಪ್ರಪಾತಕ್ಕೆ ಬಿದ್ದಿದೆ.
ಮರದಲ್ಲಿ ಸಿಲುಕಿದ್ದರಿಂದ ತಪ್ಪಿದ ಭಾರೀ ಅನಾಹುತ
ಲಾರಿಯು ರಸ್ತೆ ಬದಿಯ ತಡೆಗೋಡೆಗೆ ಢಿಕ್ಕಿ ಹೊಡೆದು ಪ್ರಪಾತಕ್ಕೆ ಉರುಳಿದೆ. ಸುಮಾರು ನೂರು ಅಡಿ ಆಳಕ್ಕೆ ಉರುಳಿದ ಲಾರಿ ಅಲ್ಲಿದ್ದ ಭಾರೀ ಮರವೊಂದರಲ್ಲಿ ಸಿಲುಕಿಕೊಂಡಿದೆ. ಇಲ್ಲವಾಗಿದ್ದಲ್ಲಿ ಲಾರಿ ಸಾವಿರ ಅಡಿ ಪ್ರಪಾತಕ್ಕೆ ಉರುಳಿಬಿದ್ದು, ಭಾರೀ ಅನಾಹುತ ಸಂಭವಿಸುತ್ತಿತ್ತು ಎನ್ನಲಾಗಿದೆ.
ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.