ಚಿಕ್ಕಮಗಳೂರು | ನಿವೇಶನ ರಹಿತರು ಸರಕಾರಿ ಜಾಗದಲ್ಲಿ ನಿರ್ಮಿಸಿಕೊಂಡಿದ್ದ ಮನೆಗಳಿಗೆ ಬಲಾಢ್ಯರಿಂದ ಬೆಂಕಿ; ಆರೋಪ

Update: 2024-02-02 17:35 GMT

ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನ ಎಚ್.ರಂಗಾಪುರ ಗ್ರಾಮದಲ್ಲಿ 15 ಎಕರೆ ಜಮೀನಿನಲ್ಲಿ ನಿರ್ಮಿಸಿಕೊಂಡಿದ್ದ ಮನೆಗಳನ್ನು ಕೆಲವು ಬಲಾಢ್ಯರು ಭೂಮಿ ಆಸೆಗಾಗಿ ಸುಟ್ಟು ಹಾಕಿದ್ದಾರೆ. ಕೃತ್ಯ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಮನೆ ಕಳೆದುಕೊಂಡಿರುವ ನಿರಾಶ್ರಿತರಿಗೆ ನ್ಯಾಯ ಒದಗಿಸಬೇಕು. ತಪ್ಪಿದ್ದಲ್ಲಿ ತರೀಕೆರೆ ತಾಲೂಕು ಕಚೇರಿ ಮುಂದೆ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮರ್ಲೆ ಅಣ್ಣಯ್ಯ ಎಚ್ಚರಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಎಚ್.ರಂಗಾಪುರ ಗ್ರಾಮದಲ್ಲಿ  57 ಎಕರೆ ಜಮೀನಿದ್ದು, ಈ ಜಮೀನಿನಲ್ಲಿ 500 ಕುಟುಂಬಗಳು ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಇವರು ಭದ್ರಾವತಿ ಮತ್ತು ಚಿಕ್ಕಮಗಳೂರು ತಾಲೂಕಿಗೆ ಸೇರಿದವರಾಗಿದ್ದಾರೆ. ಬಡಾವಣೆಗೆ ಜೈ ಭೀಮ್ ಎಂದು ನಾಮಕರಣ ಮಾಡಲಾಗಿದೆ. ಈ ಬಡಾವಣೆಯಲ್ಲಿ ರಸ್ತೆ ಇರಲಿಲ್ಲ, ಜನಗಳೇ ಸೇರಿ ರಸ್ತೆ ನಿರ್ಮಿಸಿಕೊಂಡಿದ್ದಾರೆ. ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇಲ್ಲಿಗೆ ತರೀಕೆರೆ ಶಾಸಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಇಲ್ಲಿನ ಕೆಲವರು ಭೂಮಿಯನ್ನು ಕಬಳಿಸಬೇಕೆಂಬ ಹುನ್ನಾರದಿಂದ ಗುಡಿಸಲುಗಳನ್ನು ಕೆಡವಿ ಸುಟ್ಟು ಹಾಕಿದ್ದಾರೆ. ಜತೆಗೆ ಜೀವಭಯವನ್ನು ಸೃಷ್ಟಿಸಿದ್ದಾರೆ ಎಂದು ದೂರಿದರು.

ಇಲ್ಲಿ ವಾಸವಾಗಿರುವ ಜನರನ್ನು ಒಕ್ಕಲೆಬ್ಬಿಸಿ ಈ ಜಮೀನಿನಲ್ಲಿ ಉಳುಮೆ ಮಾಡಲು ಸಂಚು ರೂಪಿಸಿದ್ದಾರೆ. ಮನೆಗಳನ್ನು ಸುಟ್ಟು ಜೀವ ಭಯ ಹುಟ್ಟಿಸಿದವರ ವಿರುದ್ಧ ದೂರು ನೀಡಿದ್ದರೂ ಇದುವರೆಗೂ ಕಾನೂನು ಕ್ರಮ ಕೈಗೊಂಡಿಲ್ಲ. ಗುಡಿಸಲು ನಾಶ ಮಾಡಿರುವ ತಪ್ಪಿತಸ್ಥರ ವಿರುದ್ಧ ಒಂದು ವಾರದೊಳಗೆ ಕಾನೂನು ಕ್ರಮ ಕೈಗೊಳ್ಳಬೇಕು. ಮನೆ ಕಳೆದುಕೊಂಡವರಿಗೆ ನ್ಯಾಯ ಒದಗಿಸಬೇಕು. ತಪ್ಪಿದಲ್ಲಿ ತಾಲೂಕು ಕಚೇರಿ ಮುಂದೆ ಅಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಲಕ್ಯಾದ ಸಂತೋಷ್, ಉದ್ದೇಬೋರನಹಳ್ಳಿಯ ರಮೇಶ್, ಎಂ.ಸಿ.ಹಳ್ಳಿಯ ಮಧು, ರಮೇಶ್, ವಿಕಾಶ್, ಮೌಂಟ್‍ಬ್ಯಾಟನ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News