ಚಿಕ್ಕಮಗಳೂರು | ಮೈತ್ರಿ ಪಕ್ಷಗಳ ಪಾಲಾದ ನಗರಸಭೆ ಅಧಿಕಾರ: ಅಧ್ಯಕ್ಷೆಯಾಗಿ ಸುಜಾತಾ ಶಿವಕುಮಾರ್, ಉಪಾಧ್ಯಕ್ಷೆಯಾಗಿ ಅನು ಮಧುಕರ್ ಆಯ್ಕೆ

Update: 2024-08-22 17:39 GMT

ಚಿಕ್ಕಮಗಳೂರು: ಇಲ್ಲಿನ ನಗರಸಭೆಯಲ್ಲಿ ಅಧಿಕಾರ ಹಿಡಿಯುವ ಕಾಂಗ್ರೆಸ್ ಪಕ್ಷದ ಕಸರತ್ತು ವಿಫಲವಾಗಿದ್ದು, ನಗರಸಭೆ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳು ಯಶಸ್ವಿಯಾಗಿವೆ. ಗುರುವಾರ ನಗರಸಭೆ ನೂತನ ಅಧ್ಯಕ್ಷೆ, ಉಪಾಧ್ಯಕ್ಷರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಪಕ್ಷಗಳ ಸದಸ್ಯರು ಬಹುಮತದೊಂದಿಗೆ ಆಯ್ಕೆಯಾಗಿದ್ದಾರೆ. ನಗರಸಭೆ ವ್ಯಾಪ್ತಿಯ ವಾರ್ಡ್ ನಂ.6ರ ಸದಸ್ಯೆ ಸುಜಾತಾ ಶಿವಕುಮಾರ್ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರೆ, ವಾರ್ಡ್ ನಂ.14ರ ಅನುಮಧುಕರ್ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.

ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಹಾಗೂ ಉಪಾಧ್ಯಕ್ಷ ಅಮೃತ್ ಚೆನ್ನಕೇಶವ ಅವರ ಅಧಿಕಾರವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಆ.12ರಂದು ಅಧಿಸೂಚನೆ ಹೊರಡಿಸಲಾಗಿದ್ದು, ಆ.22ಕ್ಕೆ ಚುನಾವಣಾ ದಿನಾಂಕ ನಿಗದಿ ಮಾಡಿ ಚುನಾವಣಾಧಿಕಾರಿ ಹಾಗೂ ಕಂದಾಯ ಉಪವಿಭಾಗಾಧಿಕಾರಿ ದಲ್ಜಿತ್ ಕುಮಾರ್ ಆದೇಶ ಹೊರಡಿಸಿದ್ದರು.

ಅದರಂತೆ ಗುರುವಾರ ನಗರಸಭೆ ಕಚೇರಿ ಸಭಾಂಗಣದಲ್ಲಿ ಚುನಾವಣೆ ನಡೆದಿದ್ದು, ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಸುಜಾತಾ ಶಿವಕುಮಾರ್ ನಾಮಪತ್ರ ಸಲ್ಲಿಸಿದ್ದರೆ, ಕಾಂಗ್ರೆಸ್ ಪಕ್ಷದಿಂದ ಸಿ.ಎನ್.ಸಲ್ಮಾ ಹಾಗೂ ಗೌಸಿಯಾಖಾನಂ ಎಂಬ ಇಬ್ಬರು ಸದಸ್ಯರು ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷರ ಸ್ಥಾನಕ್ಕೆ ಬಿಜೆಪಿಯಿಂದ ಅನು ಮಧುಕರ್ ಹಾಗೂ ಕಾಂಗ್ರೆಸ್ ಪಕ್ಷದಿಂದ ಎಂ.ಕೆ.ಇಂದಿರಾ ನಾಮಪತ್ರ ಸಲ್ಲಿಸಿದ್ದರು. ಮತಪತ್ರಗಳ ಪರಿಶೀಲನೆ ಬಳಿಕ ನಾಮಪತ್ರ ಹಿಂಪಡೆಯಲು ಇದ್ದ ಕಾಲಾವಧಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷೆ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಗೌಸಿಯಾಖಾನಂ ತಮ್ಮ ನಾಮಪತ್ರವನ್ನು ಹಿಂಪಡೆದರು.

ಬಳಿಕ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಸದಸ್ಯೆ ಸುಜಾತಾ ಶಿವಕುಮಾರ್ ಪರ 25 ಮತಗಳು ಬಂದಿದ್ದರೆ, ವಿರೋಧವಾಗಿ 15 ಮತಗಳು ಬಂದಿದ್ದವು. ಇದೇ ವೇಳೆ ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಿ.ಎನ್.ಸಲ್ಮಾ ಪರ ಸದಸ್ಯರು ಕೈ ಎತ್ತುವ ಮೂಲಕ ಮತ ನೀಡಿದರೆ, 25 ಸದಸ್ಯರು ವಿರೋಧವಾಗಿ ಮತಚಲಾಯಿಸಿದ್ದರು. ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಅನು ಮುಧುಕರ್ ಪರ 25, ವಿರೋಧವಾಗಿ 15 ಮತಗಳು ಬಂದಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಇಂದಿರಾ ಪರ 15, ವಿರೋಧವಾಗಿ 25 ಮತಗಳು ಚಲಾವಣೆಗೊಂಡವು. ಬಿಜೆಪಿ ಅಭ್ಯರ್ಥಿಗಳ ಪರ ನಗರಸಭೆಯ 18 ಬಿಜೆಪಿ ಸದಸ್ಯರಲ್ಲದೇ ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್, ವಿಧಾನ ಪರಿಷತ್ ಸದಸ್ಯರಾದ ಸಿ.ಟಿ.ರವಿ, ಎಸ್.ಎಲ್.ಭೋಜೇಗೌಡ ಹಾಗೂ ಜೆಡಿಎಸ್‍ನ ಇಬ್ಬರು ಸದಸ್ಯರು ಮತ್ತು ರಾಜೀನಾಮೆ ವಿಚಾರಕ್ಕೆ ಬಿಜೆಪಿಯಿಂದ ಅಮಾನತುಗೊಂಡಿದ್ದ ಮಾಜಿ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಕೂಡ ಮತಚಲಾಯಿಸಿದರು. ಕಾಂಗ್ರೆಸ್ ಅಭ್ಯರ್ಥಿಗಳ ಪರ 12 ಕಾಂಗ್ರೆಸ್ ಸದಸ್ಯರೊಂದಿಗೆ ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ, ಎಸ್‍ಡಿಪಿಐ ಪಕ್ಷದ ಮಂಜುಳಾ ಶ್ರೀನಿವಾಸ್ ಹಾಗೂ ಓರ್ವ ಪಕ್ಷೇತರ ಸದಸ್ಯರು ಮತಚಲಾಯಿಸಿದ್ದರು.

ಚುನಾವಣೆ ಬಳಿಕ 25 ಮತಗಳನ್ನು ಪಡೆದ ಬಿಜೆಪಿ ಪಕ್ಷದ ಸುಜತಾ ಶಿವಕುಮಾರ್ ಹಾಗೂ ಅನು ಮಧುಕರ್ ಅವರು ನಗರಸಭೆಯ ನೂತನ ಅಧ್ಯಕ್ಷೆ, ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವುದನ್ನು ಚುನಾವಣಾಧಿಕಾರಿ ದಲ್ಜಿತ್‍ಕುಮಾರ್ ಘೋಷಣೆ ಮಾಡಿದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News