ಪಶ್ಚಿಮಘಟ್ಟ ಪ್ರದೇಶದ ಅಕ್ರಮ ಹೋಮ್ ಸ್ಟೇ, ರೆಸಾರ್ಟ್‍ಗಳ ತೆರವಿಗೆ ನೋಟಿಸ್ ಜಾರಿ

Update: 2024-09-10 15:41 GMT

ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು : ವಯನಾಡ್ ಪ್ರಾಕೃತಿಕ ದುರಂತದ ಬಳಿಕ ಎಚ್ಚೆತ್ತುಕೊಂಡಿರುವ ರಾಜ್ಯ ಸರಕಾರ ಪಶ್ಚಿಮಘಟ್ಟ ಪ್ರದೇಶ ಹಾಗೂ ಮಲೆನಾಡು ಭಾಗದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಒತ್ತುವರಿಯಾಗಿರುವ ಅರಣ್ಯ ಪ್ರದೇಶದ ತೆರವಿಗೆ ಆದೇಶಿಸಿದೆ.

ಈ ಆದೇಶದ ಹಿನ್ನೆಲೆಯಲ್ಲಿ ಈಗಾಗಲೇ ನ್ಯಾಯಾಲಯಗಳಲ್ಲಿ ವಿಲೇವಾರಿಯಾಗಿರುವ ಅರಣ್ಯ ಒತ್ತುವರಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ತೆರವು ಮಾಡಿದ್ದು, ಮತ್ತಷ್ಟು ಅರಣ್ಯ ಒತ್ತುವರಿಗೆ ತೆರವಿಗೆ ಸಿದ್ಧತೆ ನಡೆಸಿದೆ.

ಇದರ ಬೆನ್ನಲ್ಲೇ ಜಿಲ್ಲಾದ್ಯಂತ ಇರುವ ಅನಧೀಕೃತ ರೆಸಾರ್ಟ್, ಹೋಮ್ ಸ್ಟೇಗಳಿಗೆ ನೋಟಿಸ್ ನೀಡುವ ಮೂಲಕ ಪರಿಸರ ಸೂಕ್ಷ್ಮ ಪ್ರದೇಶ ಹಾಗೂ ಅರಣ್ಯ ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಹೋಮ್‍ಸ್ಟೇ, ರೆಸಾರ್ಟ್‍ಗಳ ತೆರವಿಗೆ ಅರಣ್ಯ ಇಲಾಖೆ ಮುಂದಾಗಿದೆ. ಚಿಕ್ಕಮಗಳೂರು ಉಪ ಅರಣ್ಯ ವಿಭಾಗ ವ್ಯಾಪ್ತಿಯಲ್ಲಿರುವ ಸುಮಾರು 25ಕ್ಕೂ ಹೆಚ್ಚು ಹೋಮ್ ಸ್ಟೇ ಹಾಗೂ ರೆಸಾರ್ಟ್‍ಗಳಿಗೆ ನೋಟಿಸ್ ನೀಡಿರುವ ಚಿಕ್ಕಮಗಳೂರು ಅರಣ್ಯ ವಿಭಾಗದ ಡಿಎಫ್‍ಒ ರಮೇಶ್ ಬಾಬು, ಹೋಮ್‍ಸ್ಟೇ, ರೆಸಾರ್ಟ್ ನಿರ್ಮಾಣಕ್ಕೆ ಸಂಬಂಧಿಸಿದ ಕಂದಾಯ ಹಾಗೂ ಸಂಬಂಧಿಸಿದ ದಾಖಲಾತಿಗಳನ್ನು ಹಾಜರುಪಡಿಸಲು ಸೂಚಿಸಿದ್ದಾರೆ.

ಪಶ್ಚಿಮಘಟ್ಟ ಪ್ರದೇಶದಲ್ಲಿನ ಅರಣ್ಯ ಪ್ರದೇಶ ಹಾಗೂ ಇತರ ಪರಿಸರ ಸೂಕ್ಷ್ಮ(ಗಿರಿಶ್ರೇಣಿ) ಪ್ರದೇಶ ಒತ್ತುವರಿ ಮಾಡಿ, ಅಲ್ಲಿ ಅಕ್ರಮವಾಗಿ ರೆಸಾರ್ಟ್, ಹೋಮ್ ಸ್ಟೇ ನಿರ್ಮಿಸಲಾಗಿದ್ದು, ಇವುಗಳಿಗೆ ಸಂಬಂಧಿಸಿದ ದಾಖಲಾತಿಗಳನ್ನು ಪರಿಶೀಲಿಸಿ ಅನಧಿಕೃತ ರೆಸಾರ್ಟ್, ಹೋಮ್ ಸ್ಟೇಗಳನ್ನು ತೆರವು ಮಾಡಲು ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಹಾಗೂ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ವಿಭಾಗ ವ್ಯಾಪ್ತಿಯಲ್ಲಿನ ಅಧಿಸೂಚಿತ ಅರಣ್ಯ ಪ್ರದೇಶದಲ್ಲಿರುವ ಅನಧಿಕೃತ ಹೋಮ್ ಸ್ಟೇ, ರೆಸಾರ್ಟ್‍ಗಳ ಮಾಲಕರು ಸಂಬಂಧಿಸಿದ ಕಂದಾಯ ದಾಖಲಾತಿಗಳನ್ನು ಕೂಡಲೇ ಅರಣ್ಯ ಇಲಾಖೆ ಕಚೇರಿಗೆ ಸಲ್ಲಿಸಬೇಕು ಎಂದು ನೋಟಿಸ್‍ನಲ್ಲಿ ಸೂಚಿಸಲಾಗಿದೆ.

ಚಿಕ್ಕಮಗಳೂರು ಅರಣ್ಯ ವಿಭಾಗದಲ್ಲಿ ಸುಮಾರು 25ಕ್ಕೂ ಹೆಚ್ಚು ಅನಧಿಕೃತ ಹೋಮ್ ಸ್ಟೇ, ರೆಸಾರ್ಟ್‍ಗಳಿಗೆ ಡಿಎಫ್‍ಒ ರಮೇಶ್ ಬಾಬು ನೋಟಿಸ್ ಜಾರಿ ಮಾಡಿದ್ದು, ರೆಸಾರ್ಟ್, ಹೋಮ್ ಸ್ಟೇಗಳೊಂದಿಗೆ ಪರಿಸರ ಸೂಕ್ಷ್ಮ ಪರಿಸರದಲ್ಲಿ ಅರಣ್ಯ ಒತ್ತುವರಿ ಮಾಡಿ ಅಕ್ರಮವಾಗಿ ಬಡಾವಣೆ ನಿರ್ಮಿಸಿರುವುದು, ತೋಟಗಳ ನಿರ್ಮಾಣವನ್ನೂ ತೆರವು ಮಾಡಲು ಅರಣ್ಯ ಇಲಾಖೆ ಮುಂದಾಗಿದ್ದು, ತೋಟಗಳ ಮಾಲಕರು ಕಂದಾಯ ದಾಖಲೆಗಳನ್ನು ಇಲಾಖೆಗೆ ಸಲ್ಲಿಸಬೇಕೆಂದು ನೋಟಿಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಪಶ್ಚಿಮಘಟ್ಟ ಪ್ರದೇಶದ ಗಿರಿಶ್ರೇಣಿಗಳು ಹಾದು ಹೋಗಿದ್ದು, ಇಲ್ಲಿನ ಸುಂದರ ಪರಿಸರ ನೋಡಲು ರಾಜ್ಯದ ಮೂಲೆ ಮೂಲೆಗಳಿಂದ ಪ್ರವಾಸಿಗರು ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಹೀಗೆ ಬರುವ ಪ್ರವಾಸಿಗರಿಂದಾಗಿ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರ ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಿದೆ.

ಪ್ರವಾಸಿಗರಿಗೆ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲೆಯ ಗಿರಿಶ್ರೇಣಿಗಳೂ ಸೇರಿದಂತೆ ಎಲ್ಲೆಂದರಲ್ಲಿ ಹೋಮ್‍ಸ್ಟೇ, ರೆಸಾರ್ಟ್‍ಗಳು ತಲೆ ಎತ್ತುತ್ತಿವೆ. ಇಂತಹ ರೆಸಾರ್ಟ್, ಹೋಮ್ ಸ್ಟೇಗಳ ವಿರುದ್ಧ ಪರಿಸರವಾದಿಗಳು ನಿರಂತರವಾಗಿ ಧ್ವನಿ ಎತ್ತುತ್ತಿದ್ದು, ವಯನಾಡ್ ದುರಂತದ ಬಳಿಕ ಅಕ್ರಮ ರೆಸಾರ್ಟ್, ಹೋಮ್ ಸ್ಟೇ ತೆರವು ಹಾಗೂ ಅರಣ್ಯ ಒತ್ತುವರಿ ತೆರವು ವಿಚಾರ ಮುನ್ನಲೆಗೆ ಬಂದಿದೆ. 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News