ಧರ್ಮ, ಜಾತಿಯ ಹೆಸರಿನಲ್ಲಿ ಮತ ಕೇಳುವುದು ದೇಶಕ್ಕೆ ಅಪಾಯ : ಪ್ರಿಯಾಂಕಾ ಗಾಂಧಿ

Update: 2024-04-23 14:19 GMT

ಚಿತ್ರದುರ್ಗ : ಧರ್ಮ,ಜಾತಿಯ ಹೆಸರಿನಲ್ಲಿ ಮತ ಕೇಳುವುದು ದೇಶಕ್ಕೆ ಅಪಾಯ ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದರು.

ಚಿತ್ರದುರ್ಗದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ನ್ಯಾಯ ಸಂಕಲ್ಪ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಕಳೆದ ಹತ್ತು ವರ್ಷಗಳಿಂದ ಅಧಿಕಾರದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಬಹುಪಾಲು ಆಸ್ತಿಯನ್ನು ತಮ್ಮ ಇಬ್ಬರು ಬಂಡವಾಳಶಾಹಿ ಸ್ನೇಹಿತರಿಗೆ ಮತ್ತು ಬಹುರಾಷ್ಟ್ರೀಯ ಕಂಪನಿಗಳಿಗೆ ಮಾರಾಟಮಾಡಿ ತಾನು ದೊಡ್ಡ ಸಾಧನೆ ಮಾಡಿದ್ದೇನೆ ಎಂಬಂತೆ ಪ್ರಚಾರಪಡಿಸುತ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣೆ ಸಂದರ್ಭದಲ್ಲಿ ಅಭಿವೃದ್ಧಿ ಕೆಲಸಗಳನ್ನು ಹೇಳಿಕೊಂಡು ಮತ ಕೇಳುವ ಬದಲಾಗಿ ಧರ್ಮ ಮತ್ತು ಜಾತಿ ಹೆಸರಿನಲ್ಲಿ ಮತ ಕೇಳಿ ದೇಶವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಿದರು.

ಜೀವನ ಸಂಘರ್ಷ ಹೆಚ್ಚುತ್ತಲೇ ಸಾಗುತ್ತಿದೆ ಕೃಷಿಕರಿಗೆ ಬೆಂಬಲ ಬೆಲೆ, ಜಿಎಸ್ಟಿಯಿಂದ ಸಮಸ್ಯೆ ಆಗುತ್ತಿದೆ ಪ್ರಧಾನಿ ಮೋದಿ ದೇಶದ ಕೆಲ ಬಂಡವಾಳಶಾಹಿಗಳಿಗೆ 16ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದ್ದಾರೆ. ಮೋದಿ ತಮ್ಮ ಗೆಳೆಯರಿಗಾಗಿ ಎಲ್ಲವನ್ನೂ ಕೊಡುತ್ತಿದ್ದಾರೆ. ದೇಶದ ಆಸ್ತಿಗಳನ್ನು ತಮ್ಮ ಸ್ನೇಹಿತರಿಗೆ ಮಾರಾಟ ಮಾಡುತ್ತಿದ್ದಾರೆ. ರೈತರು ಸಾಲದಲ್ಲಿ ಮುಳುಗುತ್ತಿದ್ದಾರೆ, ಉದ್ಯೋಗಪತಿಗಳ ಸಾಲ ಮಾತ್ರ ಮನ್ನಾ, ಯಾರು ಜನಪರ ಮಾತಾಡುತ್ತಾರೋ ಅವರ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾಗ್ದಾಳಿಯನ್ನು ನಡೆಸಿದರು.

ಸಿಎಂ ಸಿದ್ದರಾಮಯ್ಯ ಕೇಂದ್ರದ ಬಳಿ ಅನೇಕ ಸಲ ಅನುದಾನ ಕೇಳಿದರು. ಆದರೆ ಈವರೆಗೆ ಒಂದು ಪೈಸೆ ಕೊಡಲಿಲ್ಲ. ರಾಯಚೂರಲ್ಲಿ ಏಮ್ಸ್ ನಿರ್ಮಾಣದ ಕನಸಿದೆ, ಈವರೆಗೆ ಆಗಿಲ್ಲ. ಕಳಸ ಬಂಡೂರಿ ಯೋಜನೆ ಈವರೆಗೆ ಕೇಂದ್ರದಿಂದ ಮಂಜೂರಾಗಿಲ್ಲ. ಭದ್ರಾ ಯೋಜನೆಗೆ ಕೇಂದ್ರ ಸರ್ಕಾರ ಹಣ ಕೊಡಲಿಲ್ಲ, ರಾಜ್ಯದ ತೆರಿಗೆ ಹಣ ಸಹ ನೀಡದೆ ನಷ್ಟ ಮಾಡಿದ್ದಾರೆ ಟೀಕಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಜಾರಿಗೊಳಿಸಿದೆ. ಗೃಹಲಕ್ಷ್ಮೀ ಯೋಜನೆಯಿಂದ ಪ್ರತಿ ಮಹಿಳೆಗೆ 2ಸಾವಿರ ಹಣ, ಉಚಿತ ವಿದ್ಯುತ್, ಅನ್ನಭಾಗ್ಯ, ಶಕ್ತಿ ಯೋಜನೆಯಿಂದ ಉಚಿತ ಪ್ರಯಾಣ, ಯುವನಿಧಿ ಯೋಜನೆ ಇದು ಕೇವಲ ಆರಂಭ,  ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದರೆ ಪ್ರತಿ ಕುಟುಂಬದ ಮಹಿಳೆ 1ಲಕ್ಷ ಸೇರಿ ಹಲವು ಗ್ಯಾರಂಟಿಗಳನ್ನು ಈ ಚುನಾವಣೆಯಲ್ಲಿ ಕಾಂಗ್ರೆಸ್  ಪಕ್ಷ ಮತದಾರರಿಗೆ ನೀಡುತ್ತದೆ ಎಂದು ಭರವಸೆಯನ್ನು ನೀಡಿದರು.

ಜಗತ್ತಿನ ಅತಿ ಶ್ರೀಮಂತರ ಪಟ್ಟಿಯಲ್ಲಿ ಇಬ್ಬರು ಮೋದಿ ಮಿತ್ರರಿದ್ದಾರೆ. ದೇಶದ ಗೌರವ ಹೆಚ್ಚಿದೆ ಎಂದು ಹೇಳುತ್ತಾರೆ. ಜನರಿಗೇನು ಸಿಕ್ಕಿದೆ ಹೇಳಿ ನಿಮ್ಮ ಮಕ್ಕಳಿಗೆ ಕೆಲಸ ಸಿಕ್ಕಿದೆಯೇ?, ಬೆಲೆ ಏರಿಕೆ ಕಡಿಮೆ ಆಗಿದೆಯೇ?, ಆಸ್ಪತ್ರೆ ಕಟ್ಟಿಸಿದ್ದಾರೆಯೇ?, ಏಮ್ಸ್, ಐಐಟಿ ಕಟ್ಟಿಸಿದ್ದಾರೆಯೇ? ಹತ್ತು ವರ್ಷದಲ್ಲಿ ಮೋದಿ ಏನು ಮಾಡಿದ್ದಾರೆ?. ಅಭಿವೃದ್ಧಿ ಆಧಾರದ ಮೇಲೆ ಏಕೆ ಮತ ಕೇಳುತ್ತಿಲ್ಲ ಜಾತಿ, ಧರ್ಮದ ಆಧಾರದಲ್ಲಿ ಏಕೆ ಮತ ಕೇಳುತ್ತಿದ್ದಾರೆ ಎಂದು ಪ್ರಸ್ನಿಸಿದರು.

ಕಾಡುಗೊಲ್ಲ ಜನಾಂವನ್ನು ಎಸ್‍ಟಿಗೆ ಸೇರಿಸಲಾಗುವುದು

ಎಸ್ಸಿ, ಎಸ್ಟಿಗೆ ವಿಶೇಷ ಅನುದಾನ, ಇಡೀ ದೇಶದಲ್ಲಿ ಜಾತಿ ಗಣತಿ ಕಾಡುಗೊಲ್ಲ ಸಮಾಜವನ್ನು ಎಸ್ಟಿಗೆ ಸೇರಿಸಲಾಗುವುದು, ರೈತರಿಗೆ ಬೆಂಬಲ ಬೆಲೆ, ಕೃಷಿಗೆ ಜಿಎಸ್ಟಿ ಮುಕ್ತಗೊಳಿಸುತ್ತೇವೆ, ಭೂಮಿ ಇಲ್ಲದವರಿಗೆ ಭೂಮಿ ನೀಡುವುದು, ಬೆಳೆ ನಷ್ಟವಾದವರಿಗೆ 30ದಿನದಲ್ಲಿ ವಿಮೆ ಹಣ ಕೊಡುವ ಯೋಜನೆ ತರುತ್ತೇವೆ. ಈ ದೇಶದ ಸಂವಿಧಾನ, ಪ್ರಜಾಪ್ರಭುತ್ವ, ರೈತರು, ಸಾಮಾನ್ಯ ಜನರ ಉಳುವಿಗಾಗಿ ಕಾಂಗ್ರೆಸ್‍ಗೆ ಮತ ನೀಡಿ ಎಂದು ಪ್ರಿಯಾಂಕಾ ಗಾಂಧಿ ಮನವಿ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News