ತ್ರಿಶಾ, ಖುಷ್ಬೂ ಹಾಗೂ ಚಿರಂಜೀವಿ ವಿರುದ್ಧ ಮಾನಹಾನಿ ಮೊಕದ್ದಮೆ ಹೂಡಿದ ನಟ ಮನ್ಸೂರ್ ಅಲಿ ಖಾನ್

Update: 2023-12-09 06:33 GMT

ಮನ್ಸೂರ್ ಅಲಿ ಖಾನ್ (Photo: Instagram)

ಚೆನ್ನೈ: ತಮ್ಮ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ ನಟಿಯರಾದ ತ್ರಿಶಾ, ಖುಷ್ಬೂ ಹಾಗೂ ನಟ ಚಿರಂಜೀವಿ ವಿರುದ್ಧ ನಟ ಮನ್ಸೂರ್ ಅಲಿ ಖಾನ್ ಮದ್ರಾಸ್ ಹೈಕೋರ್ಟ್ ನಲ್ಲಿ ಮಾನಹಾನಿ ಮೊಕದ್ದಮೆ ಹೂಡಿದ್ದಾರೆ ಎಂದು livelaw.com ವರದಿ ಮಾಡಿದೆ.

ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ವಿರುದ್ಧ ಮಾನಹಾನಿಕಾರ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ತ್ರಿಶಾ ಕೃಷ್ಣನ್, ಖುಷ್ಬೂ ಸುಂದರ್ ಹಾಗೂ ಚಿರಂಜೀವಿ ಕೊನಿಡೇಲಾ ವಿರುದ್ಧ ನಟ ಮನ್ಸೂರ್ ಅಲಿ ಖಾನ್ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಇದಕ್ಕೂ ಮುನ್ನ, ‘ಲಿಯೊ’ ಚಿತ್ರದ ಯಶಸ್ಸಿನ ಕುರಿತು ಮಾಧ್ಯಮಗಳೊಂದಿಗೆ ಮಾತನಾಡುವಾಗ ಮನ್ಸೂರ್ ಅವರು ತಮ್ಮ ಸಹ ನಟಿ ತ್ರಿಶಾ ಕುರಿತು ಕೆಲವು ಹೇಳಿಕೆಗಳನ್ನು ನೀಡಿದ್ದರು. ಅವರ ಆ ಹೇಳಿಕೆಯನ್ನು ಮಹಿಳಾ ದ್ವೇಷ ಹಾಗೂ ಅಗೌರವಯುತ ಎಂದು ವ್ಯಾಪಕವಾಗಿ ಖಂಡಿಸಲಾಗಿತ್ತು. ಮನ್ಸೂರ್ ಹೇಳಿಕೆ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಸಮಾಧಾನ ಹೊರ ಹಾಕಿದ್ದ ನಟಿ ತ್ರಿಶಾ ಕೂಡಾ, ಅವರ ಹೇಳಿಕೆಯನ್ನು ಖಂಡಿಸಿದ್ದರು.

ಚೆನ್ನೈ ಪೊಲೀಸರೂ ಕೂಡಾ ಮನ್ಸೂರ್ ಅಲಿ ಖಾನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354ಎ ಹಾಗೂ 509ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಇದರ ವಿರುದ್ಧ ನಿರೀಕ್ಷಣಾ ಜಾಮೀನಿಗಾಗಿ ಮನ್ಸೂರ್ ಅಲಿ ಖಾನ್ ನ್ಯಾಯಾಲಯದ ಮೊರೆ ಹೋಗಿದ್ದರಾದರೂ, ಪ್ರಕರಣದ ವಿವರಗಳು ಲಭ್ಯವಿಲ್ಲದೆ ಇದ್ದುದರಿಂದ ಅವರ ಮನವಿಯನ್ನು ನ್ಯಾಯಾಲಯವು ತಿರಸ್ಕರಿಸಿತ್ತು. ತಮ್ಮ ಹೇಳಿಕೆ ಕುರಿತು ಮನ್ಸೂರ್ ಸಾರ್ವಜನಿಕ ಕ್ಷಮಾಪಣೆಯನ್ನೂ ಕೋರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News