ಡ್ರೋನ್ ಟೆಕ್ನಿಷಿಯನ್ ಆತ್ಮಹತ್ಯೆ ಯತ್ನ ಪ್ರಕರಣ: ಸಚಿವ ಝಮೀರ್ ಅಹ್ಮದ್ ಪುತ್ರನ ವಿರುದ್ಧ ಪ್ರಕರಣ ದಾಖಲು
ಬೆಂಗಳೂರು: ಡ್ರೋನ್ ಟೆಕ್ನಿಷಿಯನ್ ಆತಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ಸೇರಿದಂತೆ ಇಬ್ಬರ ವಿರುದ್ಧ ಇಲ್ಲಿನ ಮಾಗಡಿ ರಸ್ತೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ʼಕಲ್ಟ್ʼ ಚಿತ್ರ ತಂಡದಲ್ಲಿ ಡ್ರೋಣ್ ತಂತ್ರಜ್ಞನಾಗಿ ಸಂತೋಷ್ ಕೆಲಸ ಮಾಡುತ್ತಿದ್ದು, ನ.25ರಂದು ಚಿತ್ರದುರ್ಗದಲ್ಲಿ ಚಿತ್ರೀಕರಣ ನಡೆಸುತ್ತಿದ್ದ ವೇಳೆ ಡ್ರೋನ್ ಗೆ ಹಾನಿಯಾಗಿತ್ತು. ಇದರ ನಷ್ಟ ಕಟ್ಟಿಕೊಡುವಂತೆ ಮನವಿ ಮಾಡಿದರೂ ಪರಿಹಾರ ನೀಡದೆ ಮೆಮೊರಿ ಕಾರ್ಡ್ ಕಿತ್ತುಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇದರಿಂದ ಮನನೊಂದ ಡ್ರೋನ್ ತಂತ್ರಜ್ಞ ಸಂತೋಷ್ ಆತಹತ್ಯೆಗೆ ಯತ್ನಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಸಂತೋಷ್ ಅವರ ಸಹೋದರಿ ನೀಡಿರುವ ದೂರಿನ್ವಯ ನಾಯಕ ನಟ ಝೈದ್ ಖಾನ್ ಹಾಗೂ ಸಿನೆಮಾ ನಿರ್ದೇಶಕ ಅನಿಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಡಿ.3ರಂದು ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ.