63 ವರ್ಷಗಳ ಬಳಿಕ ಹಾಲಿವುಡ್‌ಗೆ ಮುಷ್ಕರದ ಬಿಸಿ

Update: 2023-07-14 07:24 GMT

Photo : Twitter / @DailyLoud

ಲಾಸ್ ಏಂಜಲೀಸ್: ಹಾಲಿವುಡ್‌ನ ನಟ-ನಟಿಯರು ಹಾಗೂ ತಂತ್ರಜ್ಞರು ಗುರುವಾರ ರಾತ್ರಿಯಿಂದ ಮುಷ್ಕರ ನಡೆಸುವುದಾಗಿ ಘೋಷಿಸಿದ್ದಾರೆ. ಇದರಿಂದಾಗಿ ಅತ್ಯಂತ ಶ್ರೀಮಂತ ಚಿತ್ರರಂಗವು ಸ್ಥಗಿತಗೊಂಡಿದೆ.

63 ವರ್ಷಗಳ ನಂತರ ಮೊದಲ ಬಾರಿಗೆ ಹಾಲಿವುಡ್‌ ನಲ್ಲಿ ದುಡಿಯುವವರು ಪ್ರತಿಭಟನೆಗೆ ಇಳಿದಿದ್ದಾರೆ. ಹಾಲಿವುಡ್‌ ಬರಹಗಾರರು ಕಳೆದ ಕೆಲವು ದಿನಗಳಿಂದ ನಡೆಸುತ್ತಿರುವ ಮಾತುಕತೆಯು ವಿಫಲವಾದ ಹಿನ್ನೆಲೆಯಲ್ಲಿ ಮುಷ್ಕರ ಘೋಷಿಸಿದ್ದು, ಅವರೊಂದಿಗೆ ಹಾಲಿವುಡ್‌ ನಟರೂ ಸೇರಿಕೊಂಡಿದ್ದಾರೆ. ಇದರಿಂದಾಗಿ ಹಾಲಿವುಡ್‌ ನ ಬಹುತೇಕ ಎಲ್ಲಾ ಚಲನಚಿತ್ರ ಮತ್ತು ದೂರದರ್ಶನ ನಿರ್ಮಾಣಗಳು ಸ್ಥಗಿತಗೊಳ್ಳಲು ಸಿದ್ಧವಾಗಿದೆ.

ಎ-ಲಿಸ್ಟ್ ಸ್ಟಾರ್‌ಗಳು ಸೇರಿದಂತೆ 1,60,000 ನಟ-ನಟಿಯರನ್ನು ಪ್ರತಿನಿಧಿಸುವ ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ (SAG-AFTRA) ಸಂಘಟನೆಯು ಮುಷ್ಕರದಲ್ಲಿ ಸೇರಿದ್ದು, ಕ್ಷೀಣಿಸುತ್ತಿರುವ ವೇತನ ಮತ್ತು ಕೃತಕ ಬುದ್ಧಿಮತ್ತೆಯಿಂದ ಉಂಟಾಗುವ ಬೆದರಿಕೆಯ ಕುರಿತು ತಮ್ಮ ಬೇಡಿಕೆಗಳ ಬಗ್ಗೆ ನಡೆದ ಮಾತುಕತೆಗಳು ಯಾವುದೇ ಒಪ್ಪಂದವಿಲ್ಲದೆ ಕೊನೆಗೊಂಡಿವೆ ಎಂದು ಹೇಳಿದೆ. ಪ್ರೊಡಕ್ಷನ್ ಕಂಪನಿಗಳು ಬಳಸುತ್ತಿರುವ AI ತಂತ್ರಜ್ಞಾನದಿಂದ ಕೆಲಸ ಕಳೆದುಕೊಳ್ಳುವ ಭೀತಿಯ ವಿರುದ್ಧ ಕೆಲವು ಬೇಡಿಕೆಗಳನ್ನು ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಮುಂದಿಟ್ಟಿತ್ತು. ಆ ಮಾತುಕತೆ ಫಲಪ್ರದವಾಗಲಿಲ್ಲ ಎಂದು ಸಂಘಟನೆ ಹೇಳಿದೆ.

ಮುಷ್ಕರವು ಗುರುವಾರ ಮಧ್ಯರಾತ್ರಿ (0700 GMT ಶುಕ್ರವಾರ) ಪ್ರಾರಂಭವಾಗಿದೆ.

ಮುಷ್ಕರದ ಭಾಗವಾಗಿ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಅವರ ಹೊಸ ಚಲನಚಿತ್ರ "ಓಪೆನ್‌ಹೈಮರ್" ನ ಲಂಡನ್ ಪ್ರೀಮಿಯರ್‌ ನಿಂದ ಅದರ ನಟರು ಹೊರನಡೆದಿದ್ದಾರೆ ಎಂದು Variety ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News