ಪ್ರೇಕ್ಷಕರ ಕೊರತೆ: ಎರಡೇ ದಿನದಲ್ಲಿ ಕಂಗನಾ ನಟನೆಯ ʼತೇಜಸ್‌ʼ ಚಿತ್ರದ 95% ಪ್ರದರ್ಶನ ರದ್ದು!

Update: 2023-10-28 15:26 GMT

Photo: bookmyshow.com

ಮುಂಬೈ: ಸರಣಿ ಸೋಲುಗಳಿಂದ ಕಂಗೆಟ್ಟಿರುವ ನಟಿ ಕಂಗನಾ ರಣಾವತ್‌ಗೆ ಅವರ ಬಹು ನಿರೀಕ್ಷಿತ ʼತೇಜಸ್‌ʼ ಕೂಡಾ ನಿರಾಶೆಯನ್ನೇ ನೀಡಿದೆ.

ಇಂದು ಮಧ್ಯಾಹ್ನ 3 ಗಂಟೆವರೆಗೆ ದೇಶಾದ್ಯಂತ ಇರುವ ಪಿವಿಆರ್‌ ಐನಾಕ್ಸ್‌ನಲ್ಲಿ ಕೇವಲ 37 ಲಕ್ಷ ರೂಗಳನ್ನು ʼತೇಜಸ್‌ʼ ಗಳಿಸಿದ್ದು, ಸಿನೆಪೊಲಿಸ್‌ ಮಂದಿರಗಳಲ್ಲಿ ಕೇವಲ 11 ಲಕ್ಷ ಗಳಿಸಿದೆ. ಒಟ್ಟಾರೆ, ದೇಶಾದ್ಯಂತ ಇರುವ ಮೂರು ಮಲ್ಟಿಪ್ಲೆಕ್ಸ್‌ ಚೈನ್‌ಗಳಲ್ಲಿ ಒಟ್ಟು ಗಳಿಕೆ 50 ಲಕ್ಷವನ್ನು ಕೂಡಾ ದಾಟಲಿಲ್ಲ ಎಂದು ವರದಿಯಾಗಿದೆ.

ತೇಜಸ್ ಚಿತ್ರದಲ್ಲಿ ಏರ್ ಫೋರ್ಸ್ ಪೈಲಟ್ ಪಾತ್ರದಲ್ಲಿ ಕಂಗನಾ ನಟಿಸಿದ್ದು, ಸರ್ವೇಶ್ ಮೇವಾರಾ ಬರೆದು ನಿರ್ದೇಶಿಸಿದ ಈ ಚಿತ್ರದಲ್ಲಿ ಕಂಗನಾ ಪಾತ್ರವು ಪಾಕಿಸ್ತಾನದಲ್ಲಿ ಸೆರೆಯಲ್ಲಿರುವ ಭಾರತೀಯ ಗೂಢಚಾರನನ್ನು ರಕ್ಷಿಸಿ ಕರೆತರಲು ಪ್ರಯತ್ನಿಸುವ ಕಥಾ ಹಂದರವನ್ನು ಹೊಂದಿದೆ. ಚಿತ್ರದ ಟ್ರೇಲರ್ ತಕ್ಕ ಮಟ್ಟಿಗಿನ ಪ್ರತಿಕ್ರಿಯೆಯನ್ನು ಪಡೆದಿದ್ದರೂ, ಅದು ಬಾಕ್ಸ್ ಆಫೀಸ್‌ನಲ್ಲಿ ಹೆಚ್ಚಿನ ಟಿಕೆಟ್‌ಗಳನ್ನು ಮಾರಾಟ ಮಾಡಲು ಸಾಧ್ಯವಾಗಲಿಲ್ಲ. ಟೈಮ್ಸ್ ನೌ ವರದಿಯ ಪ್ರಕಾರ, ಶುಕ್ರವಾರ ಚಿತ್ರವು PVR, INOX ಮತ್ತು Cinepolis ನಾದ್ಯಂತ ಕೇವಲ 3,000 ಟಿಕೆಟ್‌ಗಳನ್ನು ಮಾತ್ರ ಮಾರಾಟವಾಗಿತ್ತು.

ತೇಜಸ್ ಸಂಪೂರ್ಣ ನೆಲ ಕಚ್ಚಿದರೆ, ಕಂಗನಾಗೆ ಇದು ಸತತ ಐದನೇ ಫ್ಲಾಪ್ ಚಿತ್ರವಾತ್ತದೆ. ಕಂಗನಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ ಕೊನೆಯ ಚಿತ್ರವಾದ ಢಾಕಡ್ (2022) ಕೇವಲ 2.58 ಕೋಟಿ ಗಳಿಸಿತ್ತು. ಬಹು ನಿರೀಕ್ಷಿತ ತಲೈವಿ (2021) ಕೂಡಾ ಕೇವಲ 1.46 ಕೋಟಿ ಗಳಿಕೆಯೊಂದಿಗೆ ಪರಾಜಯಗೊಂಡಿತ್ತು. ಅದೇ ರೀತಿ, ಪ್ರೇಕ್ಷಕರು ಅವರ ಪಂಗಾ (2020) ಮತ್ತು ಜಡ್ಜ್‌ಮೆಂಟಲ್ ಹೈ ಕ್ಯಾ (2019) ಚಿತ್ರಗಳನ್ನು ಕೂಡಾ ತಿರಸ್ಕರಿಸಿದರು.

ಚಿತ್ರದ ಮೊದಲ ಪ್ರದರ್ಶನಕ್ಕೆ ಜನರು ಥೀಯೇಟರ್‌ನತ್ತ ಸುಳಿಯದ್ದರಿಂದ ಚಿತ್ರದ ಬಹುತೇಕ 95% ಶೋಗಳನ್ನು ರದ್ದು ಪಡಿಸಲಾಗಿದೆ ಎಂದು ವಿಮರ್ಷಕ ಕಮಾಲ್‌ ಆರ್‌ ಖಾನ್‌ ಟ್ವೀಟ್‌ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News