ಆರು ಶಾಸಕರಿಗೆ ಕೊಕ್ ನೀಡಿದ ಕಾಂಗ್ರೆಸ್ ಗೆ ಬಂಡಾಯದ ಭೀತಿ

Update: 2023-10-21 02:17 GMT

ಭೋಪಾಲ್: ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಕಾಂಗ್ರೆಸ್ ಪಕ್ಷ ಗುರುವಾರ ರಾತ್ರಿ ಬಿಡುಗಡೆ ಮಾಡಿದ ಬೆನ್ನಲ್ಲೇ ಅಸಮಾಧಾನ ಸ್ಫೋಟಗೊಂಡಿದೆ. ಟಿಕೆಟ್ ವಂಚಿತರಾಗಿರುವ ಆರು ಮಂದಿ ಬಂಡಾಯದ ಬಾವುಟ ಹಾರಿಸಿದ್ದಾರೆ. ಈ ಪೈಕಿ ನಾಲ್ಕು ಮಂದಿ 2020ರ ನವೆಂಬರ್ ನಲ್ಲಿ ನಡೆದ ಉಪಚುನಾವಣೆಯಲ್ಲಿ ಜ್ಯೋತಿರಾದಿತ್ಯ ಸಿಂಧ್ಯಾ ಬೆಂಬಲಿಗರ ವಿರುದ್ಧ ಜಯ ಸಾಧಿಸಿದವರು.

ಸುಮವಲಿ ಶಾಸಕ ಅಜಾಬ್ ಸಿಂಗ್ ಕುಶ್ವಾಹ, ಬಿಯಾರೊ ಶಾಸಕ ರಾಮಚಂದ್ರ ಡಾಂಗಿ, ಗೋಹಡ್ ನ ಮೆವರಾಂ ಜಟವ್ ಮತ್ತು ಮೊರೇನಾ ಕ್ಷೇತ್ರದ ರಾಕೇಶ್ ಮವೈ ಜತೆಗೆ ಬಾದನಗರ ಕ್ಷೇತ್ರದ ಮುರಲಿ ಮೊರ್ವಾಲ್ ಹಾಗೂ ಸೆಂಧವಾ ಕ್ಷೇತ್ರದ ಗ್ಯಾರ್ಸೈಲ್ ರಾವತ್ ಟಿಕೆಟ್ ವಂಚಿತರಾಗಿದ್ದಾರೆ.

ಈಗಾಗಲೇ ಪಕ್ಷ ನಡೆಸಿದ ಸಮೀಕ್ಷೆಯ ಅನ್ವಯ ಟಿಕೆಟ್ ಹಂಚಿಕೆ ಮಾಡಲಾಗಿದ್ದು, ಬಾದನಗರ ಕ್ಷೇತ್ರದಿಂದ ರಾಜೇಂದ್ರ ಸಿಂಗ್ ಸೋಳಂಕಿ ಮತ್ತು ಸೆಂಧ್ವಾ ಕ್ಷೇತ್ರದಿಂದ ಮೋಟು ಸೋಳಂಕಿ ಅವರನ್ನು ಕಣಕ್ಕೆ ಇಳಿಸಲಾಗಿದೆ ಎಂದು ಪಕ್ಷ ಸಮುಜಾಯಿಷಿ ನೀಡಿದೆ. ಸುಮಾವಲಿ ಕ್ಷೇತ್ರದಿಂದ ಕುಲದೀಪ್ ಸಿಕರವಾರ್ ಅವರು ಸ್ಪರ್ಧಿಸುತ್ತಿದ್ದು, ಬಿಯಾರೋ ಕ್ಷೇತ್ರದಿಂದ ಪುರುಷೋತ್ತಮ ಡಾಂಗಿ, ಗೊಹಾದ್ ಕ್ಷೇತ್ರದಿಂದ ಕೇಶವ ದೇಶಾಯಿ ಅಧಿಕೃತ ಅಭ್ಯರ್ಥಿಗಳು. ಮೊರೇನಾ ಕ್ಷೇತ್ರದಿಂದ ರಾಜ್ಯ ಕಿಸಾನ್ ಕಾಂಗ್ರೆಸ್ ಮುಖ್ಯಸ್ಥ ದಿನೇಶ್ ಸಿಂಗ್ ಗುರ್ಜರ್ ಕಣಕ್ಕೆ ಇಳಿದಿದ್ದಾರೆ.

ಈ ಬದಲಾವಣೆಯ ಬೆನ್ನಲ್ಲೇ ಪಕ್ಷದಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ರಾಕೇಶ್ ಮಾವೈ ಶುಕ್ರವಾರ ಬಹಿರಂಗ ಹೇಳಿಕೆ ನೀಡಿ, "ನನಗೆ ಟಿಕೆಟ್ ನಿರಾಕರಿಸಲು ನಾನು ಮಾಡಿರುವ ತಪ್ಪಾದರೂ ಏನು ಎನ್ನುವುದನ್ನು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ಅವರಿಗೆ ಕೇಳಬಯಸುತ್ತೇನೆ" ಎಂದು ಗುಡುಗಿದ್ದಾರೆ. ವಿದ್ಯಾರ್ಥಿ ಜೀವನದಿಂದಲೇ ಪಕ್ಷಕ್ಕೆ ನಿಷ್ಠನಾಗಿದ್ದವನು ನಾನು. ವಿದ್ಯಾರ್ಥಿ ಕಾಂಗ್ರೆಸ್ ಮತ್ತು ಎನ್ಎಸ್ ಯು ಐಗೆ ಕೆಲಸ ಮಾಡಿದ್ದೇನೆ. ನಾನು ಬಿಎಸ್ಪಿ ಅಥವಾ ಬಿಜೆಪಿ ಕಾರ್ಯಕರ್ತರಾಗಿ ಪಕ್ಷಕ್ಕೆ ಸೇರಿವನಲ್ಲ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News