ಅಮೃತ್ ರೈಲು ನಿಲ್ದಾಣವು ನಗರದ ಆಧುನಿಕ ಆಶಯಗಳ ಸಂಕೇತ: ಪ್ರಧಾನಿ ಮೋದಿ

Update: 2023-08-06 12:42 GMT

ಮಂಗಳೂರು: ದೇಶದಲ್ಲಿ ಪ್ರತಿಯೊಂದು ಅಮೃತ್ ರೈಲು ನಿಲ್ದಾಣವು ನಗರದ ಆಧುನಿಕ ಆಶಯಗಳ ಸಂಕೇತವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಮಂಗಳೂರಿನ ಕಂಕನಾಡಿ ಜಂಕ್ಷನ್ ಸೇರಿದಂತೆ ದೇಶಾದ್ಯಂತ 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ರವಿವಾರ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು.

ಅಭಿವೃದ್ಧಿಯ ಗುರಿಯತ್ತ ಸಾಗುತ್ತಿರುವ ಭಾರತವು ಅಮೃತ ಕಾಲದ ಆರಂಭದಲ್ಲಿದೆ. ಹೊಸ ಶಕ್ತಿ, ಹೊಸ ಸ್ಫೂರ್ತಿ ಮತ್ತು ಹೊಸ ಸಂಕಲ್ಪಗಳಿವೆ ಮತ್ತು ಈ ಉತ್ಸಾಹದಲ್ಲಿ ರೈಲು ನಿಲ್ದಾಣಗಳ ಪುನರಾಭಿವೃದ್ಧಿಯೊಂದಿಗೆ ಭಾರತೀಯ ರೈಲ್ವೇ ಇತಿಹಾಸದಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗುತ್ತಿದೆ ಎಂದು ಅವರು ಹೇಳಿದರು.

24,470 ಕೋಟಿ ರೂ. ವೆಚ್ಚದಲ್ಲಿ ರೈಲ್ವೇಯಲ್ಲಿ ಅಭಿವೃದ್ಧಿಯ ಮೂಲಕ ಪ್ರಯಾಣಿಕರಿಗೆ ಆಧುನಿಕ ಸೌಕರ್ಯಗಳನ್ನು ಒದಗಿಸಲಾಗುವುದು ಎಂದರು.

*ವಿಪಕ್ಷಗಳ ವಿರುದ್ಧ ಮೋದಿ ವಾಗ್ದಾಳಿ: ರೈಲು ನಿಲ್ದಾಣಗಳ ಪುನರ್ ಅಭಿವೃದ್ಧಿಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

ವಿಪಕ್ಷದ ಒಂದು ವಿಭಾಗವು ಕೆಲಸ ಮಾಡುವುದಿಲ್ಲ ಅಥವಾ ಇತರರನ್ನು ಕೆಲಸ ಮಾಡಲು ಬಿಡುವುದಿಲ್ಲ ಎಂಬ ತತ್ವದಲ್ಲಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ವಿಪಕ್ಷಗಳು ಋಣಾತ್ಮಕ ರಾಜಕಾರಣ ಮಾಡುತ್ತಿವೆ ಎಂದು ಆರೋಪಿಸಿರುವ ಅವರು, ಈಗ ಇಡೀ ದೇಶವೇ ಭ್ರಷ್ಟಾಚಾರ, ರಾಜವಂಶ ಮತ್ತು ‘ಕ್ವಿಟ್ ಇಂಡಿಯಾ’ ಎಂಬ ಓಲೈಕೆಗಾಗಿ ಬೇರೂರುತ್ತಿದೆ ಎಂದು ಎಂದರು.

70 ವರ್ಷಗಳಿಂದ ದೇಶದಲ್ಲಿ ಆಡಳಿತದಲ್ಲಿದ್ದವರು ಹುತಾತ್ಮರಿಗೆ ಯುದ್ಧ ಸ್ಮಾರಕವನ್ನು ನಿರ್ಮಿಸಲಿಲ್ಲ ಆದರೆ ನಾವು ಅದನ್ನು ನಿರ್ಮಿಸಿದಾಗ ಅದನ್ನು ವಿರೋಧಿಸಲು ನಾಚಿಕೆಪಡಲಿಲ್ಲ ಎಂದರು.

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ‘ಏಕತೆಯ ಪ್ರತಿಮೆ’ ವಿಶ್ವದ ಅತಿದೊಡ್ಡ ಪ್ರತಿಮೆಯಾಗಿದೆ ಮತ್ತು ಎಲ್ಲಾ ಭಾರತೀಯರು ಅದರ ಬಗ್ಗೆ ಹೆಮ್ಮೆಪಡುತ್ತಾರೆ. ಆದರೆ ಕೆಲವು ಪಕ್ಷಗಳು ಸ್ವತಂತ್ರ ಭಾರತದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್‌ರನ್ನು ಚುನಾವಣಾ ಸಮಯದಲ್ಲಿ ನೆನಪಿಸಿಕೊಳ್ಳುತ್ತಿದೆ ಎಂದು ಮೋದಿ ಟೀಕಿಸಿದರು.

ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಷ್ಠೆ ಹೆಚ್ಚಿದೆ ಎಂದು ಪ್ರತಿಪಾದಿಸಿದ ಮೋದಿ ಭಾರತದ ಬಗೆಗಿನ ವಿಶ್ವದ ವರ್ತನೆ ಬದಲಾಗಿದೆ. ಇದರ ಹಿಂದೆ ಎರಡು ಪ್ರಮುಖ ಕಾರಣಗಳಿವೆ . ಮೊದಲನೆಯದು ದೇಶದಲ್ಲಿ ಸುಮಾರು ಮೂರು ದಶಕಗಳ ನಂತರ ಜನರು ಪೂರ್ಣ ಬಹುಮತದ ಸರಕಾರವನ್ನು ಆಯ್ಕೆ ಮಾಡಿದರು ಮತ್ತು ಎರಡನೆಯದಾಗಿ ಪೂರ್ಣ ಬಹುಮತದ ಸರಕಾರವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿತು ಮತ್ತು ದೇಶದ ಮುಂದಿರುವ ಸವಾಲುಗಳಿಗೆ ಶಾಶ್ವತ ಪರಿಹಾರಕ್ಕಾಗಿ ನಿರಂತರವಾಗಿ ಶ್ರಮಿಸಿದೆ ಎಂದು ಮೋದಿ ಹೇಳಿದರು.

ಕ್ವಿಟ್ ಇಂಡಿಯಾ ಚಳವಳಿಯು ಸ್ವಾತಂತ್ರ್ಯವನ್ನು ಪಡೆಯುವ ಭಾರತದ ಹೆಜ್ಜೆಗಳಲ್ಲಿ ಹೊಸ ಶಕ್ತಿಯನ್ನು ತುಂಬಿತು. ಇದರಿಂದ ಪ್ರೇರಿತರಾಗಿ ಇಂದು ಇಡೀ ದೇಶವೇ ಎಲ್ಲ ಅನಿಷ್ಟಗಳಿಗೂ ‘ಕ್ವಿಟ್ ಇಂಡಿಯಾ’ ಎನ್ನುತ್ತಿದೆ. ಎಲ್ಲೆಡೆ ಒಂದೇ ಧ್ವನಿ ಇದೆ. ಭ್ರಷ್ಟಾಚಾರ, ರಾಜವಂಶ, ತುಷ್ಟೀಕರಣ, ಭಾರತ ಬಿಟ್ಟು ತೊಲಗಿ ಎಂಬ ಧ್ವನಿ ಎಲ್ಲಡೆ ಕೇಳಿ ಬರುತ್ತಿದೆ’’ ಎಂದರು.

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, ರೈಲು ನಿಲ್ದಾಣಗಳ ಅಭಿವೃದ್ಧಿಯು ಸರಕಾರದ ಪ್ರಮುಖ ಗಮನವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರೈಲು ನಿಲ್ದಾಣಗಳ ಪ್ರಗತಿಯನ್ನು ವೈಯಕ್ತಿಕವಾಗಿ ಗಮನಿಸುತ್ತಿದ್ದಾರೆ. ಅವರು ಈ ನಿಲ್ದಾಣಗಳ ವಿನ್ಯಾಸಗಳಲ್ಲಿ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಹೇಳಿದರು.

*ರೈಲು ಅಭಿವೃದ್ಧಿಗೆ ಮಂಗಳೂರಿಗೆ ಅತಿ ಹೆಚ್ವು ಅನುದಾನ: ಮಂಗಳೂರು ಜಂಕ್ಷನ್ ರೈಲು ನಿಲ್ದಾಣ ಆವರಣದಲ್ಲಿ ನಡೆದ ಶಂಕುಸ್ಥಾಪನಾ ಸಮಾರಂಭವನ್ನು ಉದ್ಘಾಟಿದ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ ಕಳೆದ 9 ವರ್ಷಗಳಲ್ಲಿ ರೈಲು ಅಭಿವೃದ್ಧಿಗೆ ಮಂಗಳೂರಿಗೆ ಅತಿ ಹೆಚ್ವು ಅನುದಾನ ಬಂದಿದೆ ಎಂದರು.

ಮಂಗಳೂರು ಜಂಕ್ಷನ್ ರೈಲು ನಿಲ್ದಾಣವು ಅಂತರ್ ರಾಷ್ಟ್ರೀಯ ದರ್ಜೆಯ ಉನ್ನತ ಮಟ್ಟದ ರೈಲು ನಿಲ್ದಾಣವಾಗಿ ಅಭಿವೃದ್ಧಿ ಯಾಗಲಿದೆ. ಮಂಗಳೂರು ರೈಲು ನಿಲ್ದಾಣದ ಜೊತೆಗೆ ಬಂಟ್ವಾಳ ರೈಲು ನಿಲ್ದಾಣವನ್ನು 26.18 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಮತ್ತು ಈ ಯೋಜನೆಯಡಿ ಸುಬ್ರಹ್ಮಣ್ಯ ರೈಲು ನಿಲ್ದಾಣವನ್ನು 23.73 ಕೋಟಿ ರೂಪಾಯಿಗಳಲ್ಲಿ ನವೀಕರಿಸಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲು ಮಾಹಿತಿ ನೀಡಿದರು.

ವಂದೇ ಭಾರತ್ ರೈಲ್‌ನ್ನು ಕಾಸರಗೋಡಿನಿಂದ ಮಂಗಳೂರಿಗೆ ವಿಸ್ತರಿಸುವಂತೆ ರೈಲ್ವೆ ಸಚಿವರಿಗೆ ಮನವಿ ಮಾಡಿರುವುದಾಗಿ ಸಂಸದ ನಳಿನ್ ಕುಮಾರ್ ತಿಳಿಸಿದರು.

ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ, ಸುಳ್ಯ ಶಾಸಕಿ ಭಾಗೀರಥಿ, ಕೋಟ ಶ್ರೀನಿವಾಸ ಪೂಜಾರಿ, ಪ್ರತಾಪ್ ಸಿಂಹ ನಾಯಕ್, ಮಂಗಳೂರು ಮನಪಾ ಮೇಯರ್ ಜಯಾನಂದ ಅಂಚನ್, ಉಪ ಮೇಯರ್ ಪೂರ್ಣಿಮಾ, ಸ್ಥಳೀಯ ಸದಸ್ಯೆ ಶೋಭಾ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ರೈಲ್ವೇ ವಿಭಾಗೀಯ ಕಾರ್ಯನಿರ್ವಾಹಕಾ ಇಂಜಿನಿಯರ್ ರಾಜಗೋಪಾಲ್ ಸ್ವಾಗತಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News