ಧರ್ಮಸ್ಥಳ: ಯುವತಿ ಪ್ರಯಾಣಿಸಿದ ಕಾರಣಕ್ಕೆ ಆಟೊ ರಿಕ್ಷಾ ಚಾಲಕನಿಗೆ ತಂಡದಿಂದ ಮಾರಣಾಂತಿಕ ಹಲ್ಲೆ
ಬೆಳ್ತಂಗಡಿ, ಆ.3: ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರ ಎಚ್ಚರಿಕೆಯ ಮಧ್ಯೆಯೂ ದ.ಕ. ಜಿಲ್ಲೆಯಲ್ಲಿ ಅನೈತಿಕ ಪೊಲೀಸ್ ಗಿರಿ ಮುಂದುವರಿದಿದೆ. ಕಳೆದೊಂದು ವಾರದಲ್ಲಿ ಪೊಲೀಸ್ ಸಿಬ್ಬಂದಿ, ಪತ್ರಕರ್ತ ಅನೈತಿಕ ಪೊಲೀಸ್ ಗಿರಿಗೆ ಒಳಗಾಗಿದ್ದರೆ, ಆ.2ರಂದು ರಾತ್ರಿ ಧರ್ಮಸ್ಥಳದಲ್ಲಿ ಆಟೊ ಚಾಲಕನೋರ್ವ ಮೇಲೆ ಅನೈತಿಕ ಪೊಲೀಸ್ ಗಿರಿ ನಡೆದಿರುವುದು ವರದಿಯಾಗಿದೆ.
ಉಜಿರ ಹಳೆ ಪೇಟೆ ನಿವಾಸಿ, ಆಟೊ ರಿಕ್ಷಾ ಚಾಲಕ ಮುಹಮ್ಮದ್ ಆಶಿಕ್ ಎಂಬವರ ಮೇಲೆ ನಾಲ್ವರ ತಂಡವೊಂದು ಬುಧವಾರ ರಾತ್ರಿ ಧರ್ಮಸ್ಥಳ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ತೀವ್ರವಾಗಿ ಹಲ್ಲೆ ನಡೆಸಿದೆ.
ಕಳೆದ ರಾತ್ರಿ ಧರ್ಮಸ್ಥಳ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ರಿಕ್ಷಾದಲ್ಲಿ ಬಾಡಿಗೆಗೆ ತೆರಳಿ ಹಿಂದಿರುಗುತ್ತಿದ್ದ ವೇಳೆ ನಾಲ್ವರು ತಂಡ ಅಡ್ಡಗಟ್ಟಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ ಎಂದು ಆಶಿಕ್ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಮಾರಣಾಂತಿಕ ಹಲ್ಲೆಗೊಳಗಾದ ಮುಹಮ್ಮದ್ ಆಶಿಕ್ ಅವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಿಕ್ಷಾದಲ್ಲಿ ಯುವತಿ ಪ್ರಯಾಣಿಸಿದ್ದೇ ಹಲ್ಲೆಗೆ ಕಾರಣ
ಮಹಮ್ಮದ್ ಆಶಿಕ್ ಉಜಿರೆಯಲ್ಲಿ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದು, ಬುಧವಾರ ರಾತ್ರಿ ಬಸ್ಸಿನಲ್ಲಿ ಬೆಂಗಳೂರಿಗೆ ಹೋಗಬೇಕಾಗಿದ್ದ ಯುವತಿಯೊಬ್ಬಳನ್ನು ತನ್ನ ರಿಕ್ಷಾದಲ್ಲಿ ಬಾಡಿಗೆಗೆ ಧರ್ಮಸ್ಥಳ ಬಸ್ ನಿಲ್ದಾಣಕ್ಕೆ ಕರೆದೊಯ್ದು ಬಿಟ್ಟಿದ್ದಾರೆ. ಅಲ್ಲಿಂದ ಹಿಂದಿರುಗುತ್ತಿದ್ದ ವೇಳೆ ತಂಡವು ಬಸ್ ನಿಲ್ದಾಣದ ಸಮೀಪ ರಿಕ್ಷಾವನ್ನು ತಡೆದು ಆಶಿಕ್ ಮೇಲೆ ಯದ್ವಾತದ್ವಾ ಹಲ್ಲೆ ನಡೆಸಿದೆ ಎಂದು ದೂರಲಾಗಿದೆ.
ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಠಾಣ ಅಪರಾಧ ಕ್ರಮಾಂಕ: 48/2023 ಕಲಂ: 143.147.341.323.504.506.R/W 149 IPCಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.