ಬಂಟ್ವಾಳ : ಹಿರಿಯ ರಂಗಕರ್ಮಿ, ತರಬೇತುದಾರ ಮಂಜು ವಿಟ್ಲ ನಿಧನ
ಬಂಟ್ವಾಳ: ಹಿರಿಯ ಚಿತ್ರ ಕಲಾವಿದ, ರಂಗ ನಿರ್ದೇಶಕ ಮಂಜು ವಿಟ್ಲ (76) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನಲ್ಲಿರುವ ಪುತ್ರಿಯ ಮನೆಯಲ್ಲಿ ಬುಧವಾರ ನಿಧನ ಹೊಂದಿದರು.
ಪಂಚಾಯತ್ ರಾಜ್ ರಾಷ್ಟ್ರೀಯ ತರಬೇತುದಾರರಾಗಿದ್ದ ಅವರು ಸಾವಿರಕ್ಕೂ ಅಧಿಕ ತರಬೇತಿ ಕಾರ್ಯಾಗಾರಗಳನ್ನು ನಡೆಸಿಕೊಟ್ಟಿದ್ದರು. ಜತೆಗೆ 500 ಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯ ಮಾಡಿದ್ದರು. ಚಿತ್ರಕಲೆ, ಮೂರ್ತಿ ಕಲೆ, ನಾಟಕ ನಿರ್ದೇಶನ, ರಂಗಸಜ್ಜಿಕೆ, ಪ್ರಸಾದನ, ಅಭಿನಯ, ಲೇಖನ ಹೀಗೆ ಹಲವು ಕ್ಷೇತ್ರಗಳಲ್ಲಿ ಸಕ್ರೀಯರಾಗಿದ್ದರು.
ಮಾಣಿಲ ಶ್ರೀಧಾಮ ಪ್ರತಿಷ್ಠಾನದ ಟ್ರಸ್ಟಿಯಾಗಿ, ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಸಲಹೆಗಾರರಾಗಿ, ಡಾ. ಅಮ್ಮೆಂಬಳ ಬಾಳಪ್ಪ ಜನ್ಮಶತಾಬ್ದಿ ಸಮಾರಂಭ ಸಮಿತಿಯ ಪ್ರಧಾನ ಸಂಯೋಜಕರಾಗಿ, ಬಂಟ್ವಾಳ ತುಳು ಕೂಟ, ನಾಟಕ ಕಲಾವಿದರ ಒಕ್ಕೂಟ, ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿದ್ದರು.
ಮೃತರು ಪತ್ನಿ, ಪುತ್ರಿ, ಅಳಿಯ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.
ಅವರ ನಿಧನಕ್ಕೆ ಮಾಜಿ ಸಚಿವ ಬಿ.ರಮಾನಾಥ ರೈ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಮಾಣಿಲ ಮೋಹನದಾಸ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.