ಬೆಳ್ತಂಗಡಿ: ವಿದ್ಯಾರ್ಥಿಗೆ ಹಲ್ಲೆ ಆರೋಪ; ಎಸ್.ಡಿ.ಎಂ.ಸಿ ಅಧ್ಯಕ್ಷ, ಇಬ್ಬರು ಶಿಕ್ಷಕರ ವಿರುದ್ಧ ಪ್ರಕರಣ ದಾಖಲು
ಬೆಳ್ತಂಗಡಿ: ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗೆ ಎಸ್.ಡಿ.ಎಂ.ಸಿ ಅಧ್ಯಕ್ಷ ಹಲ್ಲೆ ನಡೆಸಿದ ಘಟನೆ ಬಳ್ಳಮಂಜ ಮಚ್ಚಿನದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದು, ಎಸ್.ಡಿ. ಎಂ.ಸಿ ಅಧ್ಯಕ್ಷ ಹಾಗೂ ಇಬ್ಬರು ಶಿಕ್ಷಕರ ವಿರುದ್ಧ ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಎಸ್.ಡಿ.ಎಂ.ಸಿ ಸಮಿತಿ ಅಧ್ಯಕ್ಷ ಪರಮೇಶ್ ಹಾಗೂ ಶಾಲೆಯ ಮುಖ್ಯ ಶಿಕ್ಷಕಿ ಪ್ರಮೀಳಾ ಹಾಗೂ ಶಿಕ್ಷಕ ರಮೇಶ್ ವಿರುದ್ಧ ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
8ನೇ ತರಗತಿಯ ವಿದ್ಯಾರ್ಥಿ ಮಹಮ್ಮದ್ ತಫ್ಸೀರ್ ಹಲ್ಲೆಗೆ ಒಳಗಾದ ಬಾಲಕ. ಎಸ್.ಡಿ.ಎಂ.ಸಿ ಅಧ್ಯಕ್ಷ ಪರಮೇಶ್ ಹಲ್ಲೆ ಮಾಡಿದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯಾರ್ಥಿ ತಫ್ಸೀರ್ ತನ್ಮ ಸೈಕಲ್ ಅನ್ನು ಇನ್ನೊಬ್ಬ ವಿದ್ಯಾರ್ಥಿಗೆ ಮಾರಾಟ ಮಾಡಿದ್ದ ಎನ್ನಲಾಗಿದ್ದು, ಈ ವಿಚಾರವಾಗಿ ನ.28ರಂದು ಬಾಲಕನನ್ನು ಶಿಕ್ಷಕರ ಕೊಠಡಿಗೆ ಕರೆಸಿದ ಆರೋಪಿ ಪರಮೇಶ್ ವಿದ್ಯಾರ್ಥಿಯ ತಾಯಿಯ ಎದುರಲ್ಲಿಯೇ ಆತನ ಮೇಲೆ ಕೋಲಿನಿಂದ ಹಾಗೂ ಕೈಯಿಂದ ಹಲ್ಲೆ ನಡೆಸಿದ್ದಾನೆ, ಬಾಲಕನ ಎದೆಗೂ ಗುದ್ದಿದ್ದಾನೆ ಎನ್ನಲಾಗಿದ್ದು ಕೋಲಿನಿಂದ ನಡೆಸಿದ ಹಲ್ಲೆಯಿಂದ ಬಾಲಕನ ಕಾಲಿನಲ್ಲಿ ಗಾಯವಾಗಿದೆ. ಹಲ್ಲೆ ನಡೆಸಿದ ಬಳಿಕ ಇದನ್ನು ಯಾರಿಗೂ ಹೇಳುವುದು ಬೇಡ ಹೇಳಿದರೆ ಸೈಕಲ್ ಕಳ್ಳತನ ಮಾಡಿರುವುದಾಗಿ ಕೇಸ್ ಮಾಡಿಸುತ್ತೇನೆ ಎಂದು ಬೆದರಿಕೆಯನ್ನೂ ಪರಮೇಶ್ ಹಾಕಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.
ನ. 30ರಂದು ಬಾಲಕನಿಗೆ ಎದೆನೋವು ಕಾಣಿಸಿಕೊಂಡಿದ್ದು, ಈ ವೇಳೆ ಬಾಲಕನ ತಾಯಿ ಹಲ್ಲೆ ಮಾಡಿರುವ ಬಗ್ಗೆ ಸಂಬಂಧಿಕರಿಗೆ ಹೇಳಿದ್ದು, ಆಗಲೇ ಹಲ್ಲೆ ಪ್ರಕರಣ ಬೆಳಕಿಗೆ ಬಂದಿದೆ. ಬಾಲಕನನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆಯ ಬಗ್ಗೆ ಪೂಂಜಾಲಕಟ್ಟೆ ಪೊಲೀಸರಿಗೆ ದೂರು ನೀಡಲಾಗಿದೆ.
ಇದೀಗ ದೂರಿನಂತೆ ಎಸ್.ಡಿ.ಎಂ.ಸಿ ಸಮಿತಿ ಅಧ್ಯಕ್ಷ ಪರಮೇಶ್ ಹಾಗೂ ಶಾಲೆಯ ಮುಖ್ಯ ಶಿಕ್ಷಕಿ ಪ್ರಮೀಳಾ ಹಾಗೂ ಶಿಕ್ಷಕ ರಮೇಶ್ ವಿರುದ್ಧ ಪೂಂಜಾಲಕಟ್ಟೆ ಠಾಣೆಯಲ್ಲಿ ಕಲಂ 323, 324,506,114 ಹಾಗೂ ಬಾಲನ್ಯಾಯ ಕಾಯಿದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಘಟನೆಯ ಬಗ್ಗೆ ಮಾಹಿತಿ ತಿಳಿದು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಬಾಲಕನಿಂದ ಮಾಹಿತಿ ಪಡೆದಿದ್ದಾರೆ.