ಬೋಳಿಯಾರ್ ಪ್ರಕರಣ: ವಿಧಾನಸಭೆ ಸ್ಪೀಕರ್, ಪೊಲೀಸ್ ಆಯುಕ್ತರ ವಿರುದ್ಧ ಸಿಟಿ ರವಿ ವಾಗ್ದಾಳಿ

Update: 2024-06-15 10:13 GMT

ಮಂಗಳೂರು, ಜು. 15: ಬೋಳಿಯಾರು ಚೂರಿ ಇರಿತ ಪ್ರಕರಣಕ್ಕೆ ಅಲ್ಲಿ ಮುಸ್ಲಿಮರ ವಿರುದ್ಧ ಮೆರವಣಿಗೆಯಲ್ಲಿದ್ದ ಕೆಲವರು ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿರುವುದೇ ಪ್ರಮುಖ ಕಾರಣ ಎಂಬ ಪೊಲೀಸ್ ಆಯುಕ್ತರ ಹೇಳಿಕೆಯ ಕುರಿತಂತೆ ವಾಗ್ದಾಳಿ ನಡೆಸಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಕಮಿಷನರ್ ಅನುಪಮ್ ಅಗ್ರವಾಲ್ ಅವರು ಪಾಕಿಸ್ತಾನದ ಕಮಿಷನರ್ ತರ ವರ್ತಿಸಿದ್ದೀರಿ ಎಂದು ವಾಗ್ದಾಳಿ ನಡೆಸಿದ್ದಾರೆ.

ದ.ಕ. ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಖಾದರ್ ಸಾಮ್ರಾಜ್ಯದಲ್ಲಿ ಇರುವವರು ಪಾಕಿಸ್ತಾನದವರು ಇರುವುದು ಸ್ಪಷ್ಟ ಎಂದು ಆಕ್ಷೇಪಾರ್ಹ ಹೇಳಿಕೆಯನ್ನು ಹೇಳುತ್ತಾ ವಾಗ್ದಾಳಿ ನಡೆಸಿದರು.

ಕಮಿಷನರ್ ಹೇಳಿಕೆ ಸಮರ್ಥನೀಯವಲ್ಲ. ಅದನ್ನು ವಾಪಾಸು ಪಡೆಯಬೇಕು. ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆಂಬ ಕುರಿತು ಮಸೀದಿ ವತಿಯಿಂದ ದೂರು ನೀಡಿದವರ ವಿರುದ್ಧ ಪ್ರಕರಣ ದಾಖಲಿಸಬೇಕು. ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಹಾಕಲಾದ ಪ್ರಕರಣಕ್ಕೆ ಬಿ ರಿಪೋರ್ಟ್ ಸಲ್ಲಿಸಬೇಕು. ಚೂರಿ ಇರಿತಕ್ಕೆ ಒಳಗಾದವರ ಕುಟುಂಬಕ್ಕೆ ಸರಕಾರ ಪರಿಹಾರ ನೀಡಬೇಕು ಎಂದು ಸಿಟಿ ರವಿ ಒತ್ತಾಯಿಸಿದರು.

ಅಂತಹ ಘೋಷಣೆ ಕೂಗಿದ್ದರೆ, ಅಂತಹವರಾಗಿದ್ದವರೆ ಮಾತ್ರ ಪ್ರಚೋದನೆಗೊಳಗಾಬೇಕು. ನಿಜವಾದ ಭಾರತದ ಮಕ್ಕಳು ಇಂತಹ ಹೇಳಿಕೆಗಳಿಗೆ ಪ್ರಚೋದನೆಗೊಳಗಾಗುವುದಿಲ್ಲ. ಅಂತಹವನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡಬೇಕು ಎಂದು ಸಿಟಿ ರವಿ ಹೇಳಿದರು.

ರಾಜಧರ್ಮದ ಬಗ್ಗೆ ಮಾತನಾಡುವ ವಿಧಾನಸಭಾ ಸ್ಪೀಕರ್‌ಗೆ ಗಾಯಾಳುಗಳನ್ನು ಭೇಟಿ ಮಾಡಬೇಕು ಅನ್ನಿಸಿಲ್ಲ. ತಮ್ಮ ಜಾತ್ಯತೀತತೆಗೆ ಧಕ್ಕೆ ಬರುವ ಭಯದಿಂದ ಆಸ್ಪತ್ರೆಗೆ ಬಂದರೂ ಗಾಯಾಳುಗಳನ್ನು ವಿಚಾರಿಸಿಲ್ಲ. ಇದು ಅವರ ಜಾತ್ಯತೀಯತೆಯ ಮಾದರಿ ಎಂದು ವ್ಯಂಗ್ಯವಾಡಿದ ಸಿ.ಟಿ. ರವಿ, ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಆಡಳಿತಕ್ಕೆ ಬಂದು 13 ತಿಂಗಳಾಗಿದೆ. ಹತ್ಯೆ, ಆತ್ಮಹತ್ಯೆ ಪ್ರಕರಣಗಳಲ್ಲಿ ಹಿಂದಿನ ಎಲ್ಲಾ ರೆಕಾರ್ಡ್‌ಗಳನ್ನು ರಾಜ್ಯದಲ್ಲಿ ಮುರಿಯಲಾಗಿದೆ. ಎನ್‌ಸಿಆರ್‌ಪಿ ವರದಿ ಪ್ರಕಾರ ಕಳೆದ ನಾಲ್ಕು ತಿಂಗಳಲ್ಲಿ ಹತ್ಯೆಯಾದವರ ಸಂಖ್ಯೆ 500ರ ಗಡಿ ದಾಟಿದೆ. ರೈತರ ಆತ್ಮಹತ್ಯೆ 700ಕ್ಕೂ ಅಧಿಕ, ಕೊಲೆ, ಸುಲಿಗೆ, ಭಯ ಇಲ್ಲದ ಕ್ರಿಮಿನಲ್‌ಗಳ ನಡುವಳಿಕೆ ಮತೀಯ ಚಟುವಟಿಕೆಗಳು ಹೆಚ್ಚಾಗಿವೆ ಎಂದು ಸಿ.ಟಿ. ರವಿ ಆರೋಪಿಸಿದರು.

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಎನ್‌ಐಎ ವರದಿ ನೀಡಿದ್ದು, ಐಸಿಎಸ್, ಮುಜಾಹಿದ್ದೀನ್ ಸಂಘಟನೆಗೆ ಸೇರಿದವರು ರಾಜ್ಯದಲ್ಲಿ ಸಕ್ರಿಯವಾಗಿರುವ ಬಗ್ಗೆ ತಿಳಿಸಲಾಗಿದೆ. ಯು.ಟಿ. ಖಾದರ್ ಅವರು ಹೊರಗಿನವರು ಎಂದು ಇಂತಹ ಭಯೋತ್ಪಾದಕ ಶಕ್ತಿಗಳನ್ನು ಪರಿಗಣಿಸಬೇಕು. ಸರಕಾರದ ನೀತಿ ಮತ ಬ್ಯಾಂಕ್‌ಗಾಗಿ ಮತಾಂಧರನ್ನು ಓಲೈಸುವುದಾಗಿದ್ದು, ದೇಶದ ಭದ್ರತೆಗೆ ಇದು ಅಪಾಯಕಾರಿ. ಲವ್ ಜಿಹಾದ್ ಸನಾತನ ಧರ್ಮವನ್ನು ಮುಗಿಸಿದರೆ, ಓಟ್ ಜಿಹಾದ್ ಸಂವಿಧಾನವನ್ನು ಮುಗಿಸುವ ಸಂಚು ನಡೆಸುತ್ತಿದೆ ಎಂದು ಸಿ.ಟಿ. ರವಿ ಹೇಳಿದರು.

ಪೊಲೀಸ್ ಇಲಾಖೆಯನ್ನು ದುರ್ಬಲಗೊಳಿಸುವ ಸರಾಕಾರದ ನೀತಿ ದೇಶದ ಭದ್ರತೆಗೆ ಅಆಯಕಾರಿ. ಆಯುಕ್ತರು ಮತೀಯ ಶಕ್ತಿಗಳ ಕೈಗೊಂಬೆ ಅಲ್ಲ ಎಂಬುದನ್ನು ನಿರೂಪಿಸಬೇಕು ಸಿಟಿ ರವಿ ಹೇಳಿದರು. ಇತ್ತೀಚೆಗೆ ಪತ್ರಿಕಾಗೋಷ್ಟಿಯಲ್ಲಿ ಬೋಳಿಯಾರ್ ಚೂರಿ ಇರಿತ ಪ್ರಕರಣಕ್ಕೆ ಪ್ರಚೋದನಾಕಾರಿ ಘೋಷಣೆ ಪ್ರಮುಖವಾಗಿದ್ದು ಅದನ್ನು ಕ್ಯಾಮರಾ ಎದುರು ಹೇಳುವಂತಿಲ್ಲ ಎಂದು ಖುದ್ದು ಪೊಲೀಸ್ ಆಯುಕ್ತರೇ ನೇರವಾಗಿ ಹೇಳಲು ಹಿಂಜರಿಕೆ ತೋರಿದ್ದ ಪದಗಳನ್ನು ಪದೇ ಪದೇ ಉಚ್ಚರಿಸುವ ಮೂಲಕ ರಾಜ್ಯ ಸರಕಾರ ಮತ್ತು ಪೊಲೀಸ್ ಆಯುಕ್ತರಿಗೇ ಸಿಟಿ ರವಿ ಸವಾಲೆಸೆದರು.

ನನಗೆ ಪಕ್ಷದ ಮೇಲವೆ ಸಿಟ್ಟಿತ್ತು ಎಂದು ಎಲ್ಲೂ ಹೇಳಿರಲಿಲ್ಲ. ಆದರೆ ಆವತ್ತು ಚುನಾವಣೆ ಬಳಿಕ ಕೆಲವು ವಿಷಯ ಹೇಳುವುದಾಗಿ ಹೇಳಿದ್ದು ಹೌದು. ಆದರೆ ಯಾವಾಗ ಅಂತ ಹೇಳಿಲ್ಲ. ನನಗೆ ಸ್ಥಾನಮಾನ ಕೊಟ್ಟ ಪಕ್ಷದ ಮೇಲೆ ಯಾವುದೇ ಸಿಟ್ಟಿಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸಿ.ಟಿ. ರವಿ ಉತ್ತರಿಸಿದರು.

ಎನ್‌ಡಿಎ ಮೈತ್ರಿ ಪಕ್ಷದ ಮುಸ್ಲಿಂ ಮೀಸಲಾತಿ ನಿಲುವಿನ ಕುರಿತಂತೆ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಸಿ.ಟಿ. ರವಿ, ಡಾ. ಅಂಬೇಡ್ಕರ್ ಅವರೇ ಮತ ಆಧಾರಿತ ಮೀಸಲಾತಿ ಬೇಡ ಎಂದಿದ್ದರು. ಇಂತಹ ಮೀಸಲಾತಿ ಸಂವಿಧಾನ ಬಾಹಿರ. ಈ ಬಗ್ಗೆ ನ್ಯಾಯಾಲದಲ್ಲೂ ಪ್ರಕರಣವಿದೆ. ನಾವು ಮತೀಯ ಆಧಾರದ ಮೀಸಲಾತಿ ಪರ ಇಲ್ಲ ಎಂದರು.

ಸುದ್ದಿಗೋಷ್ಟಿಯಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಮುಖಂಡರಾದ ಪ್ರತಾಪ್ ಸಿಂಹ ನಾಯಕ್, ಸತೀಶ್ ಕುಂಪಲ, ಪ್ರೇಮಾನಂದ ಶೆಟ್ಟಿ, ನಂದನ್ ಮಲ್ಯ, ನಿತಿನ್ ಕುಮಾರ್, ಕಿಶೋರ್, ವಸಂತ್, ಜಗದೀಶ್ ಶೇಣವ ಮೊದಲಾದವರು ಉಪಸ್ಥಿತರಿದ್ದರು.

 




Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News