ಪರಂಬೋಕು ಜಮೀನು ಅತಿಕ್ರಮಿಸಿ ಕಾಲೇಜು ಕಟ್ಟಡ ನಿರ್ಮಾಣ ಆರೋಪ: ಮುಕ್ಕ ಶ್ರೀನಿವಾಸ ಕಾಲೇಜು ಮುಖ್ಯಸ್ಥರು, ಪಾಲುದಾರರ ವಿರುದ್ಧ ಪ್ರಕರಣ ದಾಖಲು

ಸುರತ್ಕಲ್: ಪರಂಬೋಕು ಜಮೀನನ್ನು ಅತಿಕ್ರಮಿಸಿಕೊಂಡು ಕಾಲೇಜು ಕಟ್ಟಡ ನಿರ್ಮಾಣ ಮಾಡುತ್ತಿರುವ ಕುರಿತು ಮುಕ್ಕ ಶ್ರೀನಿವಾಸ್ ಕಾಲೇಜಿನ ಮುಖ್ಯಸ್ಥರಾದ ಶ್ರೀನಿವಾಸ್ ರಾವ್ ಮತ್ತು ಅದರ ಇತರ ಪಾಲುದಾರರ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಕ್ಕ ಬಳಿಯ ಸರ್ವೆ ನಂಬ್ರ 47-1-ಎ1ರಲ್ಲಿರುವ 4.11ಎಕರೆ ಪರಂಬೋಕು ಸ್ಥಳದ ಬದಿಯಲ್ಲಿ ಶ್ರೀನಿವಾಸ್ ಕಾಲೇಜು 0.23 ಎಕರೆ ಸ್ಥಳವನ್ನು ಅಕ್ರಮವಾಗಿ ಕಬಳಿಸಿಕೊಂಡು ತನ್ನ ಕಾಲೇಜು ಕಟ್ಟಡವನ್ನು ನಿರ್ಮಾಣ ಮಾಡುತ್ತಿದೆ. ಈ ಬಗ್ಗೆ ಸುರತ್ಕಲ್ ಹೋಬಳಿ ಕಂದಾಯ ನಿರೀಕ್ಷಕ ಎನ್.ಜಿ. ಪ್ರಸಾದ್ ಅವರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪರಂಬೋಕು ಜಮೀನನನ್ನು ಅಕ್ರಮವಾಗಿ ಕಬಳಿಸಿಕೊಂಡು ಶ್ರೀನಿವಾಸ ಕಾಲೇಜು ನೂತನ ಕಟ್ಟಡ ಕಟ್ಟುತ್ತಿರುವ ಕುರಿತು ದೂರು ಬಂದಿದ್ದ ಹಿನ್ನೆಲೆಯಲ್ಲಿ ಮಾ.6ರಂದು ಸ್ಥಳಕ್ಕೆ ಭೇಟಿ ನೀಡಿ ಸರಕಾರಿ ನಿಶಾಂತ್ ತಂತ್ರಾಂಶದ ಮೂಲಕ ಪರಿಶಿಲನೆ ನಡೆಸಲಾಗಿತ್ತು. ಈ ವೇಳೆ 0.23 ಎಕರೆ ಸ್ಥಳವನ್ನು ಅಕ್ರಮವಾಗಿ ಕಬಳಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಮಾ.10ರಂದು ಮುಂದಿನ ಮಹಜರು ಕಾರ್ಯ ನಡೆಸಲಾಗಿದೆ ಎಂದು ಕಂದಾಯ ನಿರೀಕ್ಷಕ ಎನ್.ಜಿ. ಪ್ರಸಾದ್ ಅವರು ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಶ್ರೀನಿವಾಸ ಕಾಲೇಜಿನ ವಿಷ ಪೂರಿತ ತ್ಯಾಜ್ಯ ನೀರನ್ನು ನಂದಿನಿ ನದಿಗೆ ಬಿಡುತ್ತಿದ್ದು, ಇದರಿಂದಾಗಿ ನಂದಿನಿ ನದಿ ಸಂಪೂರ್ಣ ಕಲುಷಿತ ಗೊಂಡಿದೆ ಎಂದು ಆರೋಪಿಸಿ ಚೇಳಾಯರು ಗ್ರಾಮಸ್ಥರು ನಂದಿನಿ ನದಿ ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ ಬೃಹತ್ ಪೆರತಿಭಟನೆ ನಡೆಸಿದ್ದರು. ಪ್ರತಿಭಟನೆಯ ಹಿನ್ನೆಲೆ ಉಪ ಲೋಕಾಯುಕ್ತರಾದ ಬಿ. ವೀರಪ್ಪ ಅವರು ಮಾ.8ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ನದಿಗೆ ಮಣ್ಣು ತುಂಬಿಸಿ ನದಿಯನ್ನು ಓತ್ತುವರಿ ಮಾಡಿ ಶ್ರೀನಿವಾಸ ಕಾಲೇಜು ಕಟ್ಟಡ ಕಟ್ಟುತ್ತಿರುದ್ದರೂ ಕ್ರಮ ಕೈಗೊಳ್ಳದ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು ಅಲ್ಲದೆ, ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದ ಪಕ್ಷದಲ್ಲಿ ಅಧಿಕಾರಿಗಳು ತಲೆದಂಡ ತೆರಬೇಕಾಗಬಹುದು ಎಂದು ಎಚ್ಚರಿಕೆಯನ್ನೂ ನೀಡಿದ್ದರು. ಉಪಲೋಕಾಯುಕ್ತರ ಎಚ್ಚರಿಕೆಗೆ ಎಚ್ಚೆತ್ತುಕೊಂಡ ಕಂದಾಯ ಇಲಾಖೆಯ ಅಧಿಕಾರಿಗಳು ಸದ್ಯ ಮುಕ್ಕ ಶ್ರೀನಿವಾಸ ಕಾಲೇಜು ಪರಂಬೋಕು ಜಮೀನನ್ನು ಒತ್ತು ಮಾಡಿಕೊಂಡಿರುವ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.