ಲಾಲ್‌ಬಾಗ್‌ನಿಂದ ಉರ್ವ ಮೈದಾನ: ಸಂಗೀತದೊಂದಿಗೆ ಸ್ವಚ್ಚತೆ ಅಭಿಯಾನ

Update: 2025-04-13 12:15 IST
ಲಾಲ್‌ಬಾಗ್‌ನಿಂದ ಉರ್ವ ಮೈದಾನ:  ಸಂಗೀತದೊಂದಿಗೆ ಸ್ವಚ್ಚತೆ ಅಭಿಯಾನ
  • whatsapp icon

ಮಂಗಳೂರು, ಎ.13: ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ವತಿಯಿಂದ ನಗರದ ಲಾಲ್‌ಭಾಗ್ ನಿಂದ ಉರ್ವ ಮೈದಾನ ತನಕ ಭಾನುವಾರ ಬೆಳಗ್ಗೆ ಜರುಗಿದ ಸಂಗೀತದೊಂದಿಗೆ ಸ್ವಚ್ಚತೆ ಅಭಿಯಾನ ರವಿವಾರ ಬೆಳಗ್ಗೆ ನಡೆಯಿತು.

ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದ ದ.ಕ. ಜಿಲ್ಲೆಯ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಮಾತನಾಡಿ, ಸ್ವಚ್ಛತೆಯೇ ಸಮೃದ್ಧಿ. ಸಂಪೂರ್ಣ ಸ್ವಚ್ಛತೆ ಇರುವಲ್ಲಿ ದೇವರು ನೆಲೆಸುತ್ತಾನೆ. ಅಂತರಂಗ- ಬಹಿರಂಗ ಶುದ್ಧತೆ ನಮ್ಮನ್ನು ದೈವತ್ವದತ್ತ ಕೊಂಡೊಯ್ಯುತ್ತದೆ ಎಂದು ಹೇಳಿದರು.

ಸ್ವರ್ಗದಂತಿದ್ದ ಮಂಗಳೂರು ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಸ್ವಚ್ಛತೆಯ ವಿಷಯದಲ್ಲಿ ನರಕದತ್ತ ಸಾಗುತ್ತಿದೆ. ಕ್ಯಾನ್ಸರ್‌ಕಾರಕ, ಪರಿಸರಕ್ಕೆ ಮಾರಕ ಪ್ಲಾಸ್ಟಿಕ್ ಹಾಗೂ ಇತರ ಕೆಲವು ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡುವುದು, ಸುಡುವುದು ಕಾನೂನು ಬಾಹಿರ ಹಾಗೂ ಶಿಕ್ಷಾರ್ಹ ಅಪರಾಧ. ಹಸಿ ಕಸ, ಒಣ ಕಸ, ಪ್ಯಾಡ್, ಡೈಪರ್‌ಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ಕಸ ಸಾಗಾಟದ ವಾಹನಗಳಿಗೆ ನೀಡಿ ಕಸ, ತ್ಯಾಜ್ಯದ ಸಮರ್ಪಕ ನಿರ್ವಹಣೆಗೆ ನಗರದ ಜನರು ಸಹಕರಿಸಿದರೆ ಮಂಗಳೂರು ನಗರ ಸ್ವಚ್ಛ ನಗರ ಆಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಸಿದರು.

ವಿಶ್ವ ಸಂಸ್ಥೆ ವೇದಿಕೆಯಲ್ಲಿ ಇರಾ

ದಕ ಜಿಲ್ಲೆಯಲ್ಲಿ ಸ್ವಚ್ಛತಾಅಭಿಯಾನ ಬಂದು 20 ವರ್ಷ ಆಯಿತು. ಆ ಸಮಯದಲ್ಲಿ ಜಿಲ್ಲೆಯ ಇರಾ ಗ್ರಾಮದಲ್ಲಿ ಗ್ರಾಮಸ್ಥರಿಂದಲೇ ಒಂದು ಪವಾಡ ನಡೆಯಿತು. ಗ್ರಾಮದ ಎಲ್ಲ 1300 ಮನೆಗಳಿಗೆ ಶೌಚಗೃಹ ನಿರ್ಮಾಣವಾಯಿತು. ಗ್ರಾಮದ ಎಲ್ಲ ಕಡೆಯ ಕಸಗಳನ್ನು ಸಂಗ್ರಹಿಸುವ ಪ್ಲಾಸ್ಟಿಕ್ ಪರ್ವತ ಪಂಚಾಯಿತಿ ಕಟ್ಟಡ ನಿರ್ಮಾಣವಾಯಿತು. ಹೊರಗಿನ ಜನರ ಹಾಗೂ ಹಣಕಾಸಿನ ಬೆಂಬಲವಿಲ್ಲದೆ, ಊರವರ ಸಂಕಕಲ್ಪದಿಂದ ನಡೆದ ಈ ಕಾರ್ಯಕ್ರಮ ವಿಶ್ವ ಸಂಸ್ಥೆಯಲ್ಲಿ ಪ್ರಸ್ತಾಪವಾಯಿತು. ಈ ಯಶೋಗಾಥೆಯನ್ನು ವೀಕ್ಷಿಸಲು ಏಳು ದೇಶಗಳ ಪ್ರತಿನಿಧಿಗಳು ಇರಾ ಗ್ರಾಮಕ್ಕೆ ಆಗಮಿಸಿದರು ಎಂದು ಅವರು ವಿವರಿಸಿದರು.

ರೋಹನ್ ಕಾರ್ಪೊರೇಷನ್ ಆಡಳಿತ ನಿರ್ದೇಶಕರಾದ ರೋಹನ್ ಮೊಂತೆರೋ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಗೀತದೊಂದಿಗೆ ಸ್ವಚ್ಚತೆ ಕಾರ್ಯಕ್ರಮದ ಮುಖಂಡ ಜಗದೀಶ್ ಶೆಟ್ಟಿ ಬೋಳೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗೀತ ಕಲಾವಿದ ಪುಷ್ಕಳ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು

ಅಭಿಯಾನದ ಮುಖಂಡ ಮುಹಮ್ಮದ್ ಇಕ್ಬಾಲ್, ಜನ ಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಕೃಷ್ಣ ಮೂಲ್ಯ, ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷ ಕೇಶವ ಕನಿಲ, ಮುಖಂಡರಾದ ದೀಪಕ್ ರಾಜ್ ಉಳ್ಳಾಲ್, ರಮೇಶ್ ಸಾಲ್ಯಾನ್, ಮಲ್ಲಿಕಾ ಶೆಟ್ಟಿ, ರಾಮ್ ಕುಮಾರ್, ಹರಿಣಿ ಮುಂತಾದವರು ಉಪಸ್ಥಿತರಿದ್ದರು.

ಇರಾ ಗ್ರಾಮದ ರೀತಿ ಸಂಗೀತದೊಂದಿಗೆ ಸ್ವಚ್ಚತೆ ಸಂಗೀತ ಅಭಿಯಾನದ ಮೂಲಕ ಮಂಗಳೂರು ಮಹಾನಗರದಿಂದ ರಾಜ್ಯಕ್ಕೆ, ರಾಷ್ಟ್ರ- ಜಗತ್ತಿಗೆ ಒಂದು ಸಂದೇಶ ರವಾನೆಯಾಗಬೇಕು. ಹಸಿ ಕಸ, ಒಣ ಕಸ, ಪ್ಯಾಡ್, ಪ್ಯಾಂಪರ್ಸ್‌ಗಳ ಸಮರ್ಪಕ ನಿರ್ವಹಣೆಯ ಮಾದರಿ ವಾರ್ಡ್ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿರ್ಮಾಣವಾಗಬೇಕು. ಇಲ್ಲಿಯ ಜನರ ಕೆಲಸ ಪಾಲಿಕೆಯ ಇತರ ವಾರ್ಡ್‌ಗಳಿಗೆ ಪ್ರೇರಣೆಯಾಗಬೇಕು ಎಂದು ದಕ ಜಿಲ್ಲೆಯ ಸ್ವಚ್ಛತಾರಾಯಭಾರಿ ಶೀನ ಶೆಟ್ಟಿ ಕರೆೆ ನೀಡಿದರು.

ಸಂಗೀತದೊಂದಿಗೆ ಸ್ವಚ್ಛತೆ ಸಮಾಜದ ಕಳಕಳಿ. ಮಂಗಳೂರು ಅತ್ಯಂತ ಸುಂದರ ನಗರ. ಜಗತ್ತಿನ ಯಾವ ಕಡೆಗೆ ತೆರಳಿದರೂ ಈ ನಗರ ನಮ್ಮನ್ನು ವಾಪಾಸು ಕರೆಯುತ್ತದೆ. ಆರೋಗ್ಯಪೂರ್ಣ ಜೀವನ ನಡೆಸುವ ಉದ್ದೇಶದಿಂದ ಇಲ್ಲಿಯ ಸ್ವಚ್ಛತೆ ಪಾಲನೆಯ ಸಾಮೂಹಿಕ ಜವಾಬ್ದಾರಿಯನ್ನು ವಹಿಸೋಣ.

-ರೋಹನ್ ಮೊಂತೆರೋ, ಉದ್ಯಮಿ


Delete Edit



Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News