ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ | ಮಾ. 28ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ: ಮುಲ್ಲೈ ಮುಗಿಲನ್

Update: 2024-03-27 11:07 GMT

ಮಂಗಳೂರು, ಮಾ.27: ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದ ವೇಳಾಪಟ್ಟಿಯಂತೆ 2024ನೆ ಸಾಲಿನ ಲೋಕಸಭಾ ಚುನಾವಣೆಗೆ ದ.ಕ. ಜಿಲ್ಲೆಯಲ್ಲಿ ಮಾ. 28ರಿಂದ ಎ. 4ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿ ನೀಡಿದ ಅವರು, ಮಾ. 29 ಹಾಗೂ 31ರಂದು ಸರಕಾರಿ ರಜಾ ದಿನ ಆಗಿರುವ ಕಾರಣ ಆ ದಿನಗಳಂದು ನಾಮಪತ್ರ ಸಲ್ಲಿಸಲು ಅವಕಾಶವಿಲ್ಲ. ಉಳಿದ ದಿನಗಳಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟಯವರೆಗೆ ಜಿಲ್ಲಾಧಿಕಾರಿ ಕಚೇರಿಯ ಮೂರನೆ ಮಹಡಿಯ ಕೋರ್ಟ್ ಹಾಲ್‌ನಲ್ಲಿ ನಾಮಪತ್ರ ಸಲ್ಲಿಕೆಗೆ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾ ಚುನಾವಣಾಧಿಕಾರಿ (ಆರ್‌ಒ) ಅಥವಾ ಎಆರ್‌ಒ (ಅಪರ ಜಿಲ್ಲಾಧಿಕಾರಿ) ಗೆ ನಾಮಪತ್ರ ಸಲ್ಲಿಸಬಹುದು ಎಂದರು.

ಚುನಾವಣೆಗೆ ನಾಮಪತ್ರ ಸಲ್ಲಿಸುವ ಅಭ್ಯರ್ಥಿಯು ರಾಷ್ಟ್ರೀಯ ಅಥವಾ ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದಿರುವ ಪಕ್ಷದಿಂದ ಸ್ಪರ್ಧಿಸುತ್ತಿದ್ದರೆ ಕ್ಷೇತ್ರದ ಒಬ್ಬ ಮತದಾರ ಸೂಚಕನಾಗಿ ಸಹಿ ಮಾಡಿರಬೇಕು. ಮಾನ್ಯತೆ ಪಡೆಯದ ರಾಜಕೀಯ ಪಕ್ಷದಿಂದ ಸಪರ್ಧಿಸುತ್ತಿದ್ದರೆ, ಕ್ಷೇತ್ರದ 10 ಮತದಾರರು ಸೂಚಕರಾಗಿ ಸಹಿ ಮಾಡಿರಬೇಕು. ನಾಮಪತ್ರ ಸಲ್ಲಿಕೆಯ ಸಂದರ್ಭ ಚುನಾವಣಾಧಿಕಾರಿ ಕಚೇರಿಯ 100 ಮೀಟರ್ ವ್ಯಾಪ್ತಿಯೊಳಗೆ ಮೂರು ವಾಹನಗಳ ಪ್ರವೇಶಕ್ಕೆ ಮಾತ್ರ ಅವಕಾಶವಿದೆ. ಆರ್‌ಒ ಕೊಠಡಿಗೆ ಅಭ್ಯರ್ಥಿ ಸೇರಿ ಐದು ಮಂದಿ ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸಬಹುದು. ನಾಮಪತ್ರದ ಜತೆ ಅಭ್ಯರ್ಥಿ ಫಾರಂ 26ರಲ್ಲಿ ತನ್ನ ವೈಯಕ್ತಿಕ ವಿವರವನ್ನು ಅಫಿದವಿತ್‌ನೊಂದಿಗೆ ಒದಗಿಸಬೇಕು. ಯಾವುದೇ ಕಾಲಂ ಖಾಲಿ ಬಿಡುವಂತಿಲ್ಲ. ಜತೆಗೆ ಯಾವುದೇ ಸರಕಾರಿ ಲೆಕ್ಕಶೀರ್ಷಿಕೆ ಬಾಕಿ ಇಲ್ಲ ಎಂಬ ಪ್ರಮಾಣಪತ್ರವನ್ನು ನೀಡಬೇಕು. ಅಭ್ಯರ್ಥಿ ನಾಮಪತ್ರ ಸಲ್ಲಿಕೆಯ ಸಮಯದಿಂದೇ ಆತನ ಚುನಾವಣಾ ಖರ್ಚು ವೆಚ್ಚಗಳು ಲೆಕ್ಕಾಚಾರ ಆರಂಭವಾಗಲಿದ್ದು, ಒಂದೇ ಬ್ಯಾಕ್ ಖಾತೆಯ ಮೂಲಕ ಎಲ್ಲಾ ರೀತಿಯ ಆರ್ಥಿಕ ವ್ಯವಹಾರವನ್ನು ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಅಪರ ಜಿಲ್ಲಾಧಿಕಾರಿ ಡಜಾ. ಸಂತೋಷ್ ಉಪಸ್ಥಿತರಿದ್ದರು.

 

ಮನೆಯಿಂದ ಮತದಾನ ಆಯ್ದುಕೊಂಡರೆ ಮತಗಟ್ಟೆಯಲ್ಲಿ ಅವಕಾಶ ಸಿಗದು

ಕಳೆದ ವಿಧಾನಸಭಾ ಚುನಾವಣೆಯಂತೆ ಈ ಬಾರಿಯೂ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವಿಕಲಚೇತನರಿಗೆ (ಶೇ. 40ಕ್ಕಿಂತ ಹೆಚ್ಚಿನ ವಿಕಲಚೇತನರಿಗೆ) ಮನೆಯಿಂದಲೇ ಮತದಾನ ಮಾಡುವ ಅವಕಾಶವಿದೆ. ಈ ರೀತಿ ಮತದಾನ ಮಾಡಲು ಆಯ್ದುಕೊಂಡಲ್ಲಿ ಅವರ ಮನೆಗಳಿಗೆ ಸಂಬಂಧಪಟ್ಟ ಚುನಾವಣಾ ಅಧಿಕಾರಿ ಹಾಗೂ ಸಿಬ್ಬಂದಿ ಎರಡು ಬಾರಿ ಭೇಟಿ ನೀಡಿ ಮತದಾನ ಪ್ರಕ್ರಿಯೆ ನಡೆಸಲಿದ್ದಾರೆ. ಈ ರೀತಿ ಮನೆಯಿಂದಲೇ ಮತದಾನ ಆಯ್ಕೆ ಮಾಡುವವರಿಗೆ ನಿಗದಿತ ದಿನಾಂಕವನ್ನು ನೀಡಲಾಗುತ್ತದೆ. ಆ ರೀತಿ ಎರಡು ಸಂದರ್ಭಗಳಲ್ಲಿ ಮತದಾರರು ಲಭ್ಯವಿಲ್ಲದಿದ್ದರೆ ಅವರು ಮತ್ತೆ ಮತಗಟ್ಟೆಗೆ ಬಂದು ಮತದಾನ ಪಡೆಯುವ ಅರ್ಹತೆ ಹೊಂದಿರುವುದಿಲ್ಲ. ಪ್ರಜಾಪ್ರಭುತ್ವದ ಹಬ್ಬವಾದ ಮತದಾನವನ್ನು ಮತಗಟ್ಟೆಗಳಲ್ಲಿಯೇ ಬಂದು ಚಲಾಯಿಸಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.

ಸ್ವೀಪ್ ಮೂಲಕ ಮತದಾನಕ್ಕೆ ಪ್ರೋತ್ಸಾಹ

ದ.ಕ. ಜಿಲ್ಲೆಯಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಶೇ. 77.9ರಷ್ಟು ಮತದಾನವಾಗಿದೆ. ಆದರೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿಯ ರಾಜ್ಯದ ಶೇಕಡಾವಾರು (ಶೇ.68)ಕ್ಕಿಂತಲೂ ಕಡಿಮೆ ಇದೆ. ಈ ರೀತಿ ಒಟ್ಟು 57 ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ವಿಶೇಷ ಸ್ವೀಪ್ ಕಾರ್ಯಕ್ರಮದ ಮೂಲಕ ಈ ಬಾರಿ ಮತದಾರರನ್ನು ಮತ ಚಲಾವಣೆಗೆ ಪ್ರೋತ್ಸಾಹಿಸಲು ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮತದಾರರನ್ನು ಮತದಾನಕ್ಕೆ ಪ್ರೇರೇಪಿಸಲು 14 ಮಂದಿ ಜಿಲ್ಲಾ ಐಕಾನ್‌ಗಳನ್ನು ಆಯ್ಕೆ ಮಾಡಲಾಗಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News