ಶಿಕ್ಷಣ ಸಂಸ್ಥೆಗಳು ಸೌಹಾರ್ದದ ಕೇಂದ್ರವಾಗಲಿ: ಡಾ. ಎಂ.ಮೋಹನ್ ಆಳ್ವ

Update: 2024-01-11 15:15 GMT

ಮಂಗಳೂರು, ಜ.11: ಶೈಕ್ಷಣಿಕ ಸಂಸ್ಥೆಗಳು ದೇಶದ ಸತ್ಪ್ರಜೆ ರೂಪಿಸುವ ಕೇಂದ್ರಗಳಾಗಿವೆ. ಜಾತಿ, ಧರ್ಮ, ಭಾಷೆ ಮತ್ತು ಪ್ರಾದೇಶಿಕ ವ್ಯತ್ಯಾಸವಿಲ್ಲದೆ ವಿದ್ಯೆ ನೀಡುವುದೇ ಶಿಕ್ಷಣ ಸಂಸ್ಥೆಗಳ ಉದ್ದೇಶವಾಗಿದೆ. ಇಂತಹ ಶಿಕ್ಷಣ ಸಂಸ್ಥೆಗಳ ಸೌಹಾರ್ದವನ್ನು ಕೆಡವಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಅವಕಾಶ ಕಲ್ಪಿಸದೆ ಶಿಕ್ಷಣ ಸಂಸ್ಥೆಗಳು ಸದಾ ಸೌಹಾರ್ದದ ಕೇಂದ್ರಗಳಾಗಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಆಳ್ವಾಸ್ ಎಜುಕೇಶನ್ ಫೌಂಡೇಶನ್‌ನ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು.

ನಗರದ ಪುರಭವನದಲ್ಲಿ ಗುರುವಾರ "ಭಾರತದ ಛಾಯೆಗಳು - ಈ ಹಿಂದಿನ ಪ್ರತಿಧ್ವನಿಗಳು- ಭವಿಷ್ಯದ ದೃಷ್ಟಿಕೋನ" ಎಂಬ ಹೆಸರಿನಲ್ಲಿ ನಡೆದ ‘ಬ್ಯಾರೀಸ್ ಪಬ್ಲಿಕ್ ಸ್ಕೂಲ್ ಮತ್ತು ಹಿಸ್‌ಗ್ರೇಸ್ ಮೊಂಟೆಸ್ಸರಿ’ಯ 24ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ದಿಕ್ಸೂಚಿ ಭಾಷಣಗೈದರು.

ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ಸಾಮಾಜಿಕ ಪರಿಕಲ್ಪನೆ ಇದೆ. ವಿದ್ಯಾರ್ಥಿಗಳ ಶುಲ್ಕ ಹೆಚ್ಚಿಸಿ ಮಧ್ಯಮ ವರ್ಗದ ಕುಟುಂಬ ವನ್ನು ಸಂಕಷ್ಟಕ್ಕೆ ಸಿಲುಕಿಸಲು ಯಾವ ಆಡಳಿತ ಮಂಡಳಿಯೂ ಬಯಸುವುದಿಲ್ಲ. ಬದಲಾಗಿ ಯಾರಿಗೂ ಸಮಸ್ಯೆ ಯಾಗದಂತೆ ಆಡಳಿತ ಮಂಡಳಿ ಪ್ರಯತ್ನಿಸಲಿದೆ. ಮಕ್ಕಳ ಚಲನವಲನ, ವರ್ತನೆಗಳ ಬಗ್ಗೆ ಶಾಲೆಯ ಶಿಕ್ಷಕ ಮತ್ತು ಶಿಕ್ಷಕೇತರ ವೃಂದ ಮಾತ್ರವಲ್ಲ ಹೆತ್ತವರೂ ಕೂಡ ಗಮನಹರಿಸಬೇಕು. ಮಕ್ಕಳು ಮೊಬೈಲ್‌ಗೆ ಒಗ್ಗಿಕೊಳ್ಳದಂತೆ ಎಚ್ಚರಿಕೆ ವಹಿಸಬೇಕು ಎಂದು ಕಿವಿಮಾತು ಹೇಳಿದರು.

ಭಾರತವು ಯುವ ಸಂಪತ್ತು ಹೊಂದಿದ ದೇಶವಾಗಿದೆ. ದೇಶದಲ್ಲಿ 1ರಿಂದ ಪಿಯುಸಿವರೆಗೆ 37 ಕೋಟಿ ಮಂದಿ ವಿದ್ಯೆ ಕಲಿಯುತ್ತಿದ್ದಾರೆ. ದೇಶದ 125 ವಿಶ್ವವಿದ್ಯಾನಿಲಯಗಳ ಅಧೀನದಲ್ಲಿರುವ 45 ಸಾವಿರ ಕಾಲೇಜುಗಳಲ್ಲಿ 11.68 ಕೋಟಿ ಮಂದಿ ಪದವಿ ಮತ್ತು ಸ್ನಾತಕೋತ್ತರ ಪದವಿ ಕಲಿಯುತ್ತಿದ್ದಾರೆ. ಒಟ್ಟಾರೆ 48 ಕೋಟಿ ವಿದ್ಯಾರ್ಥಿಗಳು ದೇಶದಲ್ಲಿ ಕಲಿಯುತ್ತಿದ್ದು, ಇಂತಹ ಯುವ ಸಂಪತ್ತು ಹೊಂದಿದ ದೇಶ ಜಗತ್ತಿನ ಬೇರೆ ಎಲ್ಲೂ ಇಲ್ಲ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ‘ಬ್ಯಾರೀಸ್ ಅಕಾಡಮಿ ಆಫ್ ಲರ್ನಿಂಗ್’ನ ಅಧ್ಯಕ್ಷ ಹಾಗೂ ಮ್ಯಾನೆಜಿಂಗ್ ಟ್ರಸ್ಟಿ ಸೈಯದ್ ಮುಹಮ್ಮದ್ ಬ್ಯಾರಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಕೇವಲ ಆಡಳಿತ ಮಂಡಳಿ ಮಾತ್ರವಲ್ಲ ಶಿಕ್ಷಕರು ಹಾಗೂ ಶಿಕ್ಷಕೇತರರ ಪರಿಶ್ರಮವೂ ಇದೆ. ಇದಕ್ಕೆ ಪೂರಕವಾಗಿ ವಿದ್ಯಾರ್ಥಿಗಳ ಹೆತ್ತವರ, ಪೋಷಕರ ಸಹಕಾರವೂ ಅಗತ್ಯವಿದೆ. ಪ್ರತಿಯೊಬ್ಬರ ಪರಿಶ್ರಮಕ್ಕೂ ತನ್ನದೇ ಆದ ಪ್ರತಿಫಲವಿದೆ. ಬದುಕಿನ ಗುರಿ ಸಾಧಿಸಲು ಕಠಿಣ ಪರಿಶ್ರಮದ ಅಗತ್ಯವಿದೆ ಎಂದರು.

ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಮತ್ತು ರಾಜ್ಯೋತ್ಸವ ಪುರಸ್ಕೃತ ‘ಮೀಫ್’ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಯಾಗಿ ನ್ಯಾಯವಾದಿ, ನೋಟರಿ ಅನಿತಾ ಎಫ್. ಪತ್ರಾವೋ ಭಾಗವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಉಪ ಪ್ರಾಂಶುಪಾಲೆ ಕ್ರಿಸ್ಟಿನಾ ಖಾನ್ ಉಪಸ್ಥಿತರಿದ್ದರು.

ಪ್ರಾಂಶುಪಾಲೆ ಖತೀಜತುಲ್ ಖುಬ್ರಾ ವಾರ್ಷಿಕ ವರದಿ ವಾಚಿಸಿದರು. ಝಿಯಾ ಇಫ್ರಾ ಸ್ವಾಗತಿಸಿದರು. ಮುಹಮ್ಮದ್ ಹಾಫಿಲ್ ಹಸನ್ ಮತ್ತು ಮುಹಮ್ಮದ್ ಶಮ್ಮಾಸ್ ಕಾರ್ಯಕ್ರಮ ನಿರೂಪಿಸಿದರು. ಲುಬ್ನ ನಿಲೋಫರ್ ನಸೀಮ್ ಮತ್ತು ಫಾತಿಮಾ ರುಶ್ದಾ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.

ಸಯ್ಯದ್ ಬ್ಯಾರಿ ನೇತೃತ್ವದಲ್ಲಿ ಬ್ಯಾರೀಸ್ ನಿಂದ ಅದ್ಭುತ ಸಾಧನೆ : ಡಾ. ಮೋಹನ್ ಆಳ್ವ

ಬ್ಯಾರೀಸ್ ಶಿಕ್ಷಣ ಸಂಸ್ಥೆಯು ಕಳೆದ ಹಲವು ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದೆ. ಹಲವು ಪ್ರತಿಭೆಗಳನ್ನು ಸಮಾಜಕ್ಕೆ ಅರ್ಪಿಸಿದೆ. ಉನ್ನತ ವಿದ್ಯಾಭ್ಯಾಸ ಪಡೆಯಲು ಉತ್ತಮ ವಾತಾವರಣದಲ್ಲಿ ಪ್ರಾಥಮಿಕ ವಿದ್ಯೆಯ ಅಗತ್ಯವಿದೆ. ಇಂತಹ ಉತ್ತಮ ವಾತಾವರಣವನ್ನು ಪ್ರಾಥಮಿಕ ಹಂತದಲ್ಲೇ ಬ್ಯಾರೀಸ್ ಶಿಕ್ಷಣ ಸಂಸ್ಥೆಯು ನೀಡುತ್ತಿದೆ. ‘ಬ್ಯಾರೀಸ್ ಅಕಾಡಮಿ ಆಫ್ ಲರ್ನಿಂಗ್’ನ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ಅವರು ಕಠಿಣ ಪರಿಶ್ರಮದಿಂದ ಈ ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಪ್ರಾಥಮಿಕ ಹಂತದಲ್ಲೇ ಮಕ್ಕಳ ಬುದ್ಧಿಮತ್ತೆ ಹೆಚ್ಚಿಸಲು ಬೇಕಾದ ಶಿಕ್ಷಣಾ ಕ್ರಮವನ್ನು ರೂಪಿಸಿ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ ಎಂದು ಡಾ. ಮೋಹನ್ ಆಳ್ವ ಹೇಳಿದರು.
















































Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News