ಗ್ರಾಮೀಣ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಗೆ ಒತ್ತು: ಸಚಿವ ದಿನೇಶ್ ಗುಂಡೂರಾವ್

Update: 2023-11-01 07:42 GMT

ಮಂಗಳೂರು, ನ.1: ದ.ಕ. ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಗೆ ಸರಕಾರ ಗಮನಹರಿಸಿದ್ದು, ಗಾಮೀಣ ಪ್ರದೇಶಗಳ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ದ.ಕ. ಜಿಲ್ಲಾಡಳಿತದ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಆಯೋಜಿಸಲಾದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಅವರು ಸಂದೇಶ ನೀಡಿದರು.

ವಸತಿ, ಶಿಕ್ಷಣದ ಕ್ಷೇತ್ರಕ್ಕೆ ಒತ್ತು ನೀಡುವ ಜತೆಗೆ ಧಾರ್ಮಿಕ ಕ್ಷೇತ್ರಗಳು ಹಾಗೂ ಪ್ರವಾಸಿ ತಾಣಗಳಿಗೆ ಖ್ಯಾತಿ ಪಡೆದಿರುವ ದ.ಕ. ಜಿಲ್ಲೆಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲು ಯೋಜನೆ ಕೈಗೊಳ್ಳಲಾಗಿದೆ. ಮೂಲ ಸೌಕರ್ಯಗಳಿಗೆ ಇನ್ನಷ್ಟು ಆದ್ಯತೆ ನೀಡುವ ಮೂಲಕ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಆಗಮಿಸುವ ಪ್ರವಾಸಿಗರಿಗೆ ಉತ್ತಮ ಸೌಲಭ್ಯ ಕಲ್ಪಿಸಲು ಕಾರ್ಯಪ್ರವೃತ್ತರಾಗಿರುವುದಾಗಿ ಅವರು ಹೇಳಿದರು.

ಜೀವನ ಸಾಗಿಸಲು ತೀವ್ರ ಸಂಕಷ್ಟ ಪಡುತ್ತಿದ್ದ ಜನಸಾಮಾನ್ಯರ ಬದುಕಿನಲ್ಲಿ ಹರ್ಷದ ಹೊನಲು ಹರಿಸುವಲ್ಲಿ ನಮ್ಮ ಸರಕಾರ ಯಶಸ್ವಿಯಾಗಿದೆ ಎಂದು ಹೇಳಿದ ಸಚಿವರು, ಗೃಹಲಕ್ಷ್ಮಿ ಯೋಜನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ 3.44 ಲಕ್ಷ ಫಲಾನುಭವಿಗಳು ನೋಂದಣಿ ಮಾಡಿದ್ದಾರೆ. ಎಲ್ಲ ಫಲಾನುಭವಿಗಳಿಗೂ ಮಾಸಿಕ ಎರಡು ಸಾವಿರ ರೂ. ಬಿಡುಗಡೆ ಮಾಡಲಾಗುತ್ತಿದೆ. ತಾಂತ್ರಿಕ ಸಮಸ್ಯೆಗಳಿಂದ ಜಮೆಯಾಗದ ಫಲಾನುಭವಿಗಳ ಸಮಸ್ಯೆ ಬಗೆಹರಿಸಲು ಒತ್ತು ನೀಡಲಾಗುತ್ತಿದೆ ಎಂದರು.

ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ 248 ಲಕ್ಷ ಫಲಾನುಭವಿಗಳಿದ್ದಾರೆ. ಇವರಿಗೆ ನಗದು ವರ್ಗಾವಣೆ, ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಇದುವರೆಗೂ 17,30 ಕೋಟಿ ರೂ. ಮೊತ್ತವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡುವ ಮೂಲಕ ಬಡವರ ಬಾಳನಲ್ಲಿ ನೆಮ್ಮದಿ ತರಲಾಗಿದೆ. ಸರಕಾರದ ಮತ್ತೊಂದು ಅಭೂತಪೂರ್ವ ಯೋಜನೆ ಶಕ್ತಿ ಮಹಿಳೆಯರ ಸ್ವಾವಲಂಬನೆ ಮತ್ತು ಘನತೆಯನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು ಮತ್ತು ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗಗಳ ಘಟಕಗಳಲ್ಲಿ ಇದುವರೆಗೆ 183 ಲಕ್ಷ ಮಹಿಳಾ ಪ್ರಯಾಣಿಕರು ಈ ಯೋಜನೆಯ ಸದುಪಯೋಗ ಪಡೆದು ಉಚಿತವಾಗಿ ಪ್ರಯಾಣಿಸಿದ್ದು ಒಟ್ಟು 6,072 ಲಕ್ಷ ರೂ. ಆದಾಯ ಬಂದಿದೆ ಎಂದರು.

ಬಹು ಗ್ರಾಮ, ಕುಡಿಯುವ ನೀರಿನ ಯೋಜನೆ ಮಂಜೂರಾಗಿದ್ದು, ಕಿನ್ನಿಗೋಳಿ, ಮರವೂರು, ಕರೋಪಾಡಿ, ಸಂಗಬೆಟ್ಟು, ಮಾಣಿ ಸರಪಾಡಿ ಮತ್ತು ನರಿಕೊಂಬು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಪೂರ್ಣಗೊಂಡಿರುತ್ತವೆ ಎಂದು ಜಿಲ್ಲೆಯ ವಿವಿಧ ಯೋಜನೆಗಳ ಬಗ್ಗೆ ಸಚಿವರು ವಿವರ ನೀಡಿದರು.

ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುವಂತರೊದಿಗೆ ನಮ್ಮದೇ ಆದ ತುಳು, ಕೊಂಕಣಿ ಮತ್ತು ಬ್ಯಾರಿ ಭಾಷೆಗಳ ಸಾಹಿತ್ಯ ಹಾಗೂ ಸಂಸ್ಕೃತಿಗಳ ಉತ್ತೇಜನಕ್ಕೂ ಸರಕಾರ ಒತ್ತು ನೀಡಲಿದೆ ಎಂದರು.

ಸಮಾರಂಭದಲ್ಲಿ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್, ಮೇಯರ್ ಸುಧೀರ್ ಶೆಟ್ಟಿ, ಸಂಸದ ನಳಿನ್ ಕುಮಾರ್, ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಮಂಜುನಾಥ ಭಂಡಾರಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಜಿಪಂ ಸಿಇಒ ಡಾ.ಆನಂದ್, ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಪಾಲಿಕೆ ಆಯುಕ್ತ ಆನಂದ್, ಪಾಲಿಕೆ ಪ್ರತಿಪಕ್ಷದ ನಾಯಕ ಪ್ರವೀಣ್ ಚಂದ್ರ ಆಳ್ವ, ಸದಸ್ಯರು ಉಪಸ್ಥಿತರಿದ್ದರು.

ಆಕರ್ಷಕ ಮೆರವಣಿಗೆ; ಪಥ ಸಂಚಲನ

ಬೆಳಗ್ಗೆ ಅಂಬೇಡ್ಕರ್ ವೃತ್ತದಿಂದ ನೆಹರೂ ಮೈದಾನದವರೆಗೆ ಕನ್ನಡ ಭುವನೇಶ್ವರಿಯ ಭಾವಚಿತ್ರ ಹಾಗೂ ಕುವೆಂಪು ಅವರ ಮೂರ್ತಿಯ ಸ್ತಬ್ಧಚಿತ್ರದೊಂದಿಗೆ ಮೆರವಣಿಗೆ ನಡೆಯಿತು.

ಧ್ವಜಾರೋಹಣದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರು ತೆರೆದ ವಾಹನದಲ್ಲಿ ಕವಾಯತು ವೀಕ್ಷಿಸಿದರು. ಬಳಿಕ ನಡೆದ ಪಥ ಸಂಚಲನದಲ್ಲಿ ಭುವನೇಶ್ವರಿ ದೇವಿ, ಕುವೆಂಪು ಸ್ತಬ್ಧಚಿತ್ರಗಳೂ ಭಾಗವಹಿಸಿದ್ದವು. ಪಥ ಸಂಚಲದಲ್ಲಿ ಉತ್ತಮ ನಿರ್ವಹಣೆ ತೋರಿದ ಎನ್ನೆಸ್ಸೆಸ್ ತಂಡ ಪ್ರಥಮ ಹಾಗೂ ಭಾರತ್ ಸೇವಾ ದಳ ದ್ವಿತೀಯ ಬಹುಮಾನ ಪಡೆದುಕೊಂಡಿತು.

ಇದೇವೇಳೆ ಪಾಲಿಕೆಯಲ್ಲಿ ನೇರಪಾವತಿಯಡಿ ನೇಮಕಗೊಂಡ ಪೌರ ಕಾರ್ಮಿಕರಿಗೆ ಸಾಂಕೇತಿಕವಾಗಿ ಆದೇಶ ಪತ್ರ, ತಳ್ಳುಗಾಡಿ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಹಾಗೂ ತಳ್ಳುಗಾಡಿ ವ್ಯಾಪಾರಸ್ಥರ ಪ್ರಮಾಣಪತ್ರವನ್ನು ಸಾಂಕೇತಿಕವಾಗಿ ವಿತರಿಸಲಾಯಿತು.


ಗಮನ ಸೆಳೆದ ಒನಕೆ ಓಬವ್ವ ರೂಪಕ!

ಕನ್ನಡ ರಾಜ್ಯೋತ್ಸವದ ಅಂಗವಾಗಿ ನೆಹರೂ ಮೈದಾನದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೊಂಚಾಡಿಯ ರವಿಶಂಕರ ವಿದ್ಯಾಮಂದಿರ, ವಾಮಂಜೂರಿನ ಶುಭೋದಯ ಆಂಗ್ಲ ಮಾಧ್ಯಮ ಶಾಲೆ, ಗೋವಿಂದ ದಾಸ ಕಾಲೇಜು, ಸೈಂಟ್ ಆ್ಯಗ್ನೆಸ್ ಕಾಲೇಜು, ಬಲ್ಮಠದ ಸ.ಪ್ರ. ದ. ಮಹಿಳಾ ಕಾಲೇಜು, ಡಾ.ದಯಾನಂದ ಪೈ- ಪಿ. ಸತೀಶ್ ಪೈ ಪ.ದ. ಕಾಲೇಜಿನ ವಿದ್ಯಾರ್ಥಿಗಳು ಕಲಾ ವೈಭವವನ್ನು ಪ್ರದರ್ಶಿಸಿದರು. ವಾಮಂಜೂರಿನ ಶುಭೋದಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಒನಕೆ ಓಬವ್ವ ನೃತ್ಯ ರೂಪಕ ಗಮನಸೆಳೆಯಿತು.

ಪತ್ರಕರ್ತರಾದ ಇಬ್ರಾಹಿಂ ಅಡ್ಕಸ್ಥಳ, ರವಿ ಪೊಸವಣಿಕೆ ಸೇರಿ 46 ಮಂದಿಗೆ ಪ್ರಶಸ್ತಿ ಪ್ರದಾನ

‘ವಾರ್ತಾಭಾರತಿ’ ಪತ್ರಿಕೆಯ ಹಿರಿಯ ವರದಿಗಾರ ಇಬ್ರಾಹಿಂ ಅಡ್ಕಸ್ಥಳ, ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಹಿರಿಯ ಛಾಯಾಚಿತ್ರಗ್ರಾಹಕ ರವಿ ಪೊಸವಣಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ 48 ಮಂದಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ವೇಳೆ 19 ಸಂಘ ಸಂಸ್ಥೆಗಳನ್ನೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಮೂಲಕ ಗೌರವಿಸಲಾಯಿತು.

 

 

 

 

 

 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News