ದ.ಕ|ಎಸೆಸೆಲ್ಸಿ, ಪಿಯುಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ: ಜಿಲ್ಲಾಧಿಕಾರಿ, ಸಿಇಒ ಅಭಿನಂದನೆ

Update: 2024-05-15 08:55 GMT

ಮಂಗಳೂರು, ಮೇ 15: ದ.ಕ. ಜಿಲ್ಲೆಯು ಪ್ರಸಕ್ತ ಸಾಲಿನ ಎಸೆಸೆಲ್ಸಿ ಹಾಗೂ ಪಿಯುಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ತೋರಿರುವ ಬಗ್ಗೆ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹಾಗೂ ದ.ಕ. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ವೀಡಿಯೋ ಮೂಲಕ ಅಭಿನಂದನೆ ಸಲ್ಲಿಸಿರುವ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ದಕ್ಷಿಣ ಕನ್ನಡ ಜಿಲ್ಲೆಯು 2024ನೆ ಸಾಲಿನ ಪಿಯುಸಿ ಫಲಿತಾಂಶದಲ್ಲಿ ಪ್ರಥಮ ಹಾಗೂ ಎಸೆಸೆಲ್ಸಿಯಲ್ಲಿ ದ್ವಿತೀಯ ಸ್ಥಾನ ಪಡೆದಿರುವುದು ಖುಷಿಯ ವಿಚಾರ. ಇದಕ್ಕಾಗಿ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಇಲಾಖಾ ಸಿಬ್ಬಂದಿಗೆ ಅಧಿಕಾರಿ, ಸಿಬ್ಬಂದಿ ಹೆಚ್ಚಿನ ಶ್ರಮ ವಹಿಸಿದ್ದು, ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದಾದರೆ.

ಎಸೆಸೆಲ್ಸಿಯಲ್ಲಿ ಕಳೆದ ವರ್ಷ ಶೇ. 100 ಫಲಿತಾಂಶ ಪಡೆದ ಶಾಲೆಗಳ ಸಂಖ್ಯೆ 125ರಿಂದ ಈ ಬಾರಿ 270ಕ್ಕೆ ಏರಿಕೆ ಆಗಿರುವುದು ಗಮನಾರ್ಹ ಬೆಳವಣಿಗೆ. ಅದರಲ್ಲೂ ಶೇ. 100 ಫಲಿತಾಂಶ ಪಡೆದ ಸರಕಾರಿ ಶಾಲೆಗಳ ಸಂಖ್ಯೆ 35ರಿಂದ 84ಕ್ಕೆ ಏರಿಕೆಯಾಗಿದೆ. ಪಿಯುಸಿಯಲ್ಲಿ ಕಳೆದ ವರ್ಷ 37 ಕಾಲೇಜುಗಳು ಶೇ. 100 ಫಲಿತಾಂಶ ಪಡೆದಿದ್ದರೆ ಈ ಬಾರಿ ಅದು 59ಕ್ಕೆ ಏರಿಕೆಯಾಗಿರುವುದು ಉತ್ತಮ ವಿಚಾರ ಎಂದು ಅವರು ಹೇಳಿದ್ದಾರೆ.

ದ.ಕ. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಪ್ರತಿಕ್ರಿಯಿಸಿ, ಪಿಯುಸಿಯಲ್ಲಿ ಪ್ರಥಮ ಹಾಗೂ ಎಸೆಸೆಲ್ಸಿಯಲ್ಲಿ ದ್ವಿತೀಯ ಸ್ಥಾನ ಪಡೆಯುವಲ್ಲಿ ಈ ಬಾರಿ ಸಾಕಷ್ಟು ಪೂರ್ವ ಸಿದ್ಧತೆಗಳನ್ನು ಇಲಾಖೆಯ ಮೂಲಕ ಮಾಡಲಾಗಿತ್ತು. ಎಸೆಸೆಲ್ಸಿ ಪರೀಕ್ಷೆಗೆ ಸಂಬಂಧಿಸಿ ಹಿಂದಿನ ವರ್ಷದಲ್ಲಿ ಶಾಲೆಗಳಲ್ಲಿ ದೊರಕಿದ ಫಲಿತಾಂಶವನ್ನು ಪರಾಮರ್ಶಿಸಿ ಎ, ಬಿ ಮತ್ತು ಸಿ ವಿಭಾಗವಾಗಿ ವರ್ಗೀಕರಿಸಲಾಗಿತ್ತು. ಸಿ ವಿಭಾಗದ ಶಾಲಾ ಮುಖ್ಯೋಪಾಧ್ಯಾಯರ ಮೂಲಕ ಅಲ್ಲಿನ ಶಿಕ್ಷಕರು, ವಿಷಯದ ಕುರಿತಾದ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ಯಾವ ವಿಷಯದಲ್ಲಿ ಯಾವ ಶಾಲೆ ಕಡಿಮೆ ಫಲಿತಾಂಶವನ್ನು ಪಡೆದಿದೆ ಎಂದು ಗುರುತಿಸಿ, ಆ ಶಾಲೆಗಳಲ್ಲಿ ವಿಶೇಷ ಕಾಳಜಿ ವಹಿಸಿ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಒಂದು ಗಂಟೆ ವಿಶೇಷ ತರಬೇತಿ ನೀಡುವ ಕಾರ್ಯ ನಡೆಸಲಾಗಿತ್ತು. ಈ ಮೂಲಕ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗಿದೆ. ಈ ಮೂಲಕ ಕಳೆದ ಬಾರಿಯ 17ನೆ ಸ್ಥಾನದಿಂದ ಈ ಬಾರಿ 2ನೆ ಸ್ಥಾನಕ್ಕೇರಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಇದರಲ್ಲಿ ವಿದ್ಯಾರ್ಥಿಗಳು, ಇಲಾಖೆ, ಶಿಕ್ಷಕರ ಜತೆ ಪೋಷಕರಪಾತ್ರವೂ ಪ್ರಮುಖವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News