ಕೇರಳ ಮಾದರಿ ಯೋಜನೆ ರೂಪಿಸಲು ಡಾ.ಆರತಿ ಕೃಷ್ಣರಿಗೆ ಗಲ್ಫ್ ರಿಟಾಯರೀಸ್ ಅಸೋಸಿಯೇಶನ್ ಮನವಿ
ಮಂಗಳೂರು: ಮಂಗಳೂರಿಗೆ ಆಗಮಿಸಿದ ಕರ್ನಾಟಕ ರಾಜ್ಯ ಅನಿವಾಸಿ ಕನ್ನಡ ಕೋಶದ ಉಪಾಧ್ಯಕ್ಷ ಡಾ.ಆರತಿಕೃಷ್ಣ ಅವರನ್ನು ಮಂಗಳೂರು ಗಲ್ಫ್ ರಿಟಾಯರೀಸ್ ಅಸೋಸಿಯೇಶನ್‌ನ ಅಧ್ಯಕ್ಷ ಹಂಝ ಮಿತ್ತೂರು ಮತ್ತು ಆಡಳಿತ ಸಮಿತಿ ಸದಸ್ಯರು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಗಲ್ಫ್ ರಾಜ್ಯಗಳಲ್ಲಿ ಸಣ್ಣ ಸಣ್ಣ ಉದ್ಯೋಗಗಳನ್ನು ನಿರ್ವಹಿಸಿ ರಾಜ್ಯಕ್ಕೆ ವಿದೇಶೀ ವಿನಿಮಯ ಗಳಿಸಿಕೊಟ್ಟು ವಯಸ್ಸಾಗಿ ವಾಪಸು ಬಂದ ಅನೇಕರು ಇಂದು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ.ಯಾವುದೇ ಉದ್ಯೋಗವಿಲ್ಲದೆ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸಕ್ಕೂ ಹಣವಿಲ್ಲದೆ ತೊಂದರೆಯಲ್ಲಿದ್ದಾರೆ. ಕೇರಳ ರಾಜ್ಯದಲ್ಲಿ ಇಂತಹ ಅನಿವಾಸಿ ಭಾರತೀಯರಿಗೆ ಪೆನ್ಶನ್, ಆರೋಗ್ಯವಿಮೆ,ಅಪಘಾತ ವಿಮೆ,ಮಕ್ಕಳಿಗೆ ವಿದ್ಯಾರ್ಥಿವೇತನ ಮುಂತಾದ ಹಲವು ಯೋಜನೆಗಳಿಗೆ ವಾರ್ಷಿಕ ರೂ.೩೫೦ ಕೋಟಿ ಅನುದಾನ ನೀಡಲಾಗುತ್ತಿದೆ. ಅದೇ ರೀತಿ ಯೋಜನೆಗಳನ್ನು ಈಗ ಗಲ್ಫ್ ದೇಶಗಳಲ್ಲಿ ಕೆಲಸ ಮಾಡುತ್ತಿರುವ ಕರ್ನಾಟಕದ ಅನಿವಾಸಿಗಳು ಮತ್ತು ಈಗಾಗಲೇ ಕೆಲಸದಿಂದ ನಿವೃತ್ತಿ ಹೊಂದಿ ಕರ್ನಾಟಕಕ್ಕೆ ವಾಪಾಸು ಬಂದು ನೆಲೆಸಿರುವವರಿಗೂ ಕೇರಳ ಮಾದರಿಯಲ್ಲಿ ಯೋಜನೆ ರೂಪಿಸಲು ಈ ಸಲದ ಬಜೆಟ್ ನಲ್ಲಿ ಅನುದಾನ ಮಂಜೂರು ಮಾಡಲು ಮಾನ್ಯ ಮುಖ್ಯಮಂತ್ರಿಗೆ ಮನವಿ ಮಾಡಬೇಕೆಂದು ಮನವಿ ಸಲ್ಲಿಸಿದರು.
ನಿಯೋಗದಲ್ಲಿ ಸಾಲಿಹ್ ಕೋಯಾ ತಂಙಳ್, ಸತೀಶ್ ಕುಮಾರ್ ಬಜಾಲ್ ಕೆಎಸ್‌ಎ, ಮುಹಮ್ಮದ್ ಹುಸೈನ್, ಜಿಆರ್‌ಎ ಉಪಾಧ್ಯಕ್ಷ ಆದಂ ಬ್ಯಾರಿ, ಕಾರ್ಯದರ್ಶಿ ಜಮಾಲುದ್ದೀನ್, ಕೋಶಾಧಿಕಾರಿ ಬಾವ ಅಬ್ದುಲ್ ಖಾದರ್, ಜತೆ ಕಾರ್ಯದರ್ಶಿ ಯೂಸುಫ್ ಆಲಡ್ಕ, ಮತ್ತು ಸಲಹೆಗಾರರಾದ ಸಾಹುಲ್ ಹಮೀದ್ ತಂಙಳ್ ಮತ್ತು ಮುಹಮದ್ ಬ್ಯಾರಿ ಬೊಳ್ಳಾಯಿ ಉಪಸ್ಥಿತರಿದ್ದರು