ಕೊರಗ ಜನಾಂಗದವರ ವೇಷ ಧರಿಸಿದರೆ ಜೈಲು ಶಿಕ್ಷೆ: ಸಮಾಜ ಕಲ್ಯಾಣ ಇಲಾಖಾಧಿಕಾರಿ ಎಚ್ಚರಿಕೆ

Update: 2023-10-16 15:46 GMT

ಸಾಂದರ್ಭಿಕ ಚಿತ್ರ

ಮಂಗಳೂರು, ಅ.16: ದ.ಕ. ಜಿಲ್ಲೆಯಲ್ಲಿ ದಸರಾ ಆಚರಣೆಯ ಸಂದರ್ಭ ಇತರ ಜಾತಿ-ಜನಾಂಗದವರು ಕೊರಗ ಜನಾಂಗದವರ ವೇಷ ಧರಿಸಿ ಅಂಗಡಿ, ಮನೆಗಳ ಮುಂದೆ ಕುಣಿದು ಜಾತಿ ನಿಂದನೆ ಮಾಡಿದರೆ, ಅಮವಾಸ್ಯೆ ದಿನಗಳಲ್ಲಿ ಕೊರಗ ಜನಾಂಗದವರ ಹೆಂಗಸರಿಗೆ ಉಗುರು, ತಲೆಕೂದಲುಗಳನ್ನು ಊಟದಲ್ಲಿ ಹಾಕಿ ತಿನ್ನಲು ಕೊಡುವುದು, ಬೇರೆ ಜನಾಂಗದವರ ಚಿಕ್ಕ ಮಕ್ಕಳಿಗೆ ಕಾಯಿಲೆ ಇದ್ದಾಗ ಕೊರಗ ಜನಾಂಗದ ಮಹಿಳೆಯನ್ನು ಕರೆದು ಆ ಮಗುವಿಗೆ ಹಾಲು ಉಣಿಸಲು ಬಳಸಿಕೊಂಡು ಮಗುವಿನ ಕಾಯಿಲೆಯನ್ನು ಕೊರಗ ಜನಾಂಗದವರಿಗೆ ಹರಡುವಂತೆ ಮಾಡುವುದನ್ನು ನಿಷೇಧಿಸಲಾಗಿದೆ. ಅಲ್ಲದೆ ಕಾನೂನಿಗೆ ವಿರುದ್ಧವಾಗಿ ವರ್ತಿಸಿದರೆ ಅಂತಹವರಿಗೆ ಜೈಲು ಶಿಕ್ಷೆ ವಿಧಿಸಲು ಕ್ರಮ ಜರಗಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಎಚ್ಚರಿಕೆ ನೀಡಿದ್ದಾರೆ.

ದ.ಕ. ಜಿಲ್ಲೆಯ ಜಾನಪದ ಕ್ರೀಡೆಯಾದ ಕಂಬಳದಲ್ಲಿ ಕಂಬಳದ ಹಿಂದಿನ ದಿನ ಕಂಬಳದ ಕೆರೆಯಲ್ಲಿ ಕುಪ್ಪಿಚೂರು, ಮುಳ್ಳು ಇದ್ದರೆ ಅದನ್ನು ತೆಗೆಯಲು ಕೊರಗ ಜನಾಂಗದವರನ್ನು ಬಳಸಿಕೊಳ್ಳುವುದು, ಜಾತ್ರೆ, ಕಂಬಳ ಮತ್ತಿತರ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕೊರಗ ಜನಾಂಗದವರನ್ನು ಡೋಲು ಬಡಿಸಿ ಕುಣಿತಕ್ಕೆ ಬಳಸಿಕೊಳ್ಳುವುದನ್ನು ಕೂಡ ನಿಷೇಧಿಸಲಾಗಿದೆ.

ಇತರ ಜನಾಂಗದ ಹೆಂಗಸರ ಸೀಮಂತದ ದಿನ ಎಂಜಲು ಊಟವನ್ನು ಕೊರಗ ಜನಾಂಗದ ಮಹಿಳೆಯರಿಗೆ ನೀಡುವುದನ್ನು ಕೂಡ ನಿಷೇಧಿಸಲಾಗಿದೆ.

ಈ ಎಲ್ಲ ಚಟುವಟಿಕೆಗಳು ಕೊರಗರ ಅಜಲು ಪದ್ಧತಿ ನಿಷೇಧ ಕಾಯ್ದೆಯಡಿ ಬರುತ್ತದೆ. ಹಾಗಾಗಿ ಇಂತಹ ಆಚರಣೆಗಳು ಕಂಡು ಬಂದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲೆ ದೌರ್ಜನ್ಯ ನಿಷೇಧ ಆಧಿನಿಯಮ 1989ರಡಿ ನೋಂದಾಯಿಸಿ ಕಾನೂನು ಕ್ರಮ ಜರುಗಿಸಲಾಗುವುದು. 5ರಿಂದ 6 ವಷರ್ದವರೆಗೆ ಕಾರಾಗೃಹ ವಾಸ ಮತ್ತು 5000 ರೂ.ದಂಡ ವಿಧಿಸಲಾಗುವುದು. ದಸರಾ ಹಬ್ಬಗಳ ಸಮಯದಲ್ಲಿ ಇಂತಹ ಪ್ರಸಂಗಗಳು ಕಂಡು ಬಂದರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು (ಗ್ರೇಡ್-1) ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News