ಜೀವ ರಕ್ಷಕ ಚಾರ್ಮಾಡಿ ಹಸನಬ್ಬ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ

Update: 2023-10-31 10:15 GMT

ಮಂಗಳೂರು: ಸಮಾಜ ಸೇವೆಯನ್ನು ಅದರಲ್ಲೂ ಇತರರ ಪ್ರಾಣ ರಕ್ಷಣೆಯನ್ನೇ ತನ್ನ ಉಸಿರನ್ನಾಗಿಸಿಕೊಂಡಿರುವ ಚಾರ್ಮಾಡಿ ಹಸನಬ್ಬ ಅವರು ಕಳೆದ 38 ವರ್ಷಗಳಿಂದ ಸಾವಿರಾರು ಮಂದಿಯ ಪ್ರಾಣವನ್ನು ಜಾತಿ, ಮತ ಭೇದವಿಲ್ಲದೆ ರಕ್ಷಿಸುವ ಮೂಲಕ ಸಾರ್ವಜನಿಕ ವಲಯದಲ್ಲಿ ಚಿರಪರಿಚಿತರಾಗಿದ್ದಾರೆ. ಅವರ ಈ ಅನನ್ಯ ಸೇವೆಯನ್ನು ಪರಿಗಣಿಸಿ ರಾಜ್ಯ ಸರಕಾರವು ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಸಮೀಪದ ಲಾಲ ಎಂಬಲ್ಲಿನ ಇಜ್ಜಬ್ಬ-ಬೀಫಾತಿಮಾ ದಂಪತಿಯ ಪುತ್ರನಾಗಿ 1951ರಲ್ಲಿ ಜನಿಸಿದ ಹಸನಬ್ಬ ತುತ್ತು ಅನ್ನಕ್ಕೆ ಕಷ್ಟವಿದ್ದ ಆ ಕಾಲದಲ್ಲಿ ಕೇವಲ ಒಂದನೇ ತರಗತಿಯಷ್ಟೇ ಕಲಿತರು. ತನ್ನ 8ನೆ ವಯಸ್ಸಿನಲ್ಲಿ ಬಾಳೆಹೊನ್ನೂರಿಗೆ ತೆರಳಿ ಚಿಕ್ಕ ಹೊಟೇಲೊಂದರಲ್ಲಿ ಲೋಟ ತೊಳೆಯುವ ಕೆಲಸ ಮಾಡುತ್ತಲೇ ಹೊಟೇಲ್ ಉದ್ಯಮದ ಕಲೆ ಕರಗತ ಮಾಡಿಕೊಂಡರು. ತನ್ನ 18ನೆ ವಯಸ್ಸಿನಲ್ಲಿ ಹುಟ್ಟೂರಿಗೆ ಮರಳಿ ಸಣ್ಣ ಹೋಟೆಲ್ ತೆರೆದರು. ಪಕ್ಕದಲ್ಲೇ ಮನೆಯನ್ನೂ ಕಟ್ಟಿ ಸಂಸಾರ ಸಾಗಿಸಿದರು.

ಹೊಟೇಲ್‌ಗೆ ಬರುತ್ತಿದ್ದ ಲಾರಿ ಚಾಲಕರು ನೀಡಿದ ಮಾಹಿತಿಯ ಮೇರೆಗೆ ಆ ಮಾರ್ಗದಲ್ಲಿ ದಿನನಿತ್ಯ ನಡೆಯುವ ಅಪಘಾತ ಗಳ ಬಗ್ಗೆ ಅರಿತುಕೊಂಡ ಹಸನಬ್ಬ 1985ರಲ್ಲಿ ಟ್ರಕ್ ಚಾಲಕರ ಪ್ರಾಣ ಉಳಿಸುವ ಮೂಲಕ ಸಮಾಜ ಸೇವೆಗೆ ಮುಂದಾ ದರು. ತನ್ನ ಮಾರುತಿ 800 ಕಾರಿನಲ್ಲಿ ಆಪ್ತ ಗೆಳೆಯರ ಜೊತೆಗೂಡಿ ಅಪಘಾತ ನಡೆದ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಆರಂಭಿಸಿದರು.

ಒಮ್ಮೆ ಚಿಕ್ಕಮಗಳೂರಿನಿಂದ ಪ್ರಯಾಣಿಸುತ್ತಿದ್ದ ತಂದೆ-ಮಗ ಚಾರ್ಮಡಿ ಘಾಟ್‌ನಲ್ಲಿ ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಮಾಹಿತಿ ತಿಳಿದ ಹಸನಬ್ಬ ತಕ್ಷಣ ಅಲ್ಲಿಗೆ ಧಾವಿಸಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದರು. 11 ದಿನಗಳ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡ ಆ ತಂದೆ-ಮಗ ಗುಣಮುಖರಾದ ಬಳಿಕ ಹಸನಬ್ಬನ ಮನೆಗೆ ತೆರಳಿ ಕೃತಜ್ಞತೆ ಸಲ್ಲಿಸಿದರು. ಆವಾಗ ‘ಸಮಾಜ ಸೇವೆಯನ್ನು ಮುಂದುವರಿಸು’ ಎಂಬ ತನ್ನ ತಾಯಿಯ ಪ್ರೋತ್ಸಾಹದ ಮಾತಿನಿಂದ ಸ್ಫೂರ್ತಿ ಪಡೆದ ಹಸನಬ್ಬ ಬಳಿಕ ಹಿಂದಿರುಗಿ ನೋಡಲಿಲ್ಲ. ಚಾರ್ಮಾಡಿ ಘಾಟಿ ಪ್ರದೇಶದ ಎಂತಹ ದುರ್ಗಮ ಹಾದಿಗೂ ತೆರಳಿ ಗಾಯಾಳುಗಳ ಪ್ರಾಣ ರಕ್ಷಣೆಯನ್ನೇ ತನ್ನ ಉಸಿರನ್ನಾಗಿಸಿಕೊಂಡಿದ್ದಾರೆ.

ಅಪಘಾತದ ಪ್ರಾಣ ರಕ್ಷಣೆ ಮಾತ್ರವಲ್ಲ ಘಾಟಿಯಲ್ಲಿ ಭೂ ಕುಸಿತದ ಬಗ್ಗೆಯೂ ಮಾಹಿತಿ ಪಡೆದು ಮರಗಳನ್ನು ಕಡಿಯಲು, ರಸ್ತೆಯನ್ನೂ ತೆರವುಗೊಳಿಸಲು ಮುಂದಾಗುತ್ತಿದ್ದರು. ಒಮ್ಮೆ ಕಡಿದ ಮರವು ಸ್ವತಃ ಚಾರ್ಮಾಡಿ ಹಸನಬ್ಬರ ಕಾರಿನ ಮೇಲೆ ಬಿದ್ದು ಹಾನಿಯಾಗಿತ್ತು. ಆದರೂ ಧೃತಿಗೆಡದ ಹಸನಬ್ಬ ಮರಗಳನ್ನು ಕಡಿಯುವ ಕೆಲಸ ಪೂರ್ತಿಗೊಳಿಸಿದ ಬಳಿಕವೇ ಅಲ್ಲಿಂದ ವಿರಮಿಸುತ್ತಿದ್ದರು.

ಕೊಲೆ, ದರೋಡೆ ಸಹಿತ ಅನೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾಕ್ಷಿದಾರರಾಗಿಯೂ ಚಾರ್ಮಾಡಿ ಹಸನಬ್ಬ ಪೊಲೀಸರಿಗೆ ಸಹಕರಿಸಿದ್ದಾರೆ.

ಚಾರ್ಮಾಡಿ ಜುಮಾ ಮಸೀದಿಯ ಅಧ್ಯಕ್ಷರಾಗಿ 1984ರಿಂದ 2015ರವರೆಗೆ ಕಾರ್ಯನಿರ್ವಹಿಸಿದ್ದರು. ಬೆಳ್ತಂಗಡಿ ತಾಲೂಕು ಮುಸ್ಲಿಂ ಒಕ್ಕೂಟದ ಸ್ಥಾಪಕ ಅಧ್ಯಕ್ಷರಾಗಿದ್ದರು. ಮುಸ್ಲಿಂ ಐಕ್ಯತಾ ವೇದಿಕೆಯ ಸ್ಥಾಪಕ ಸದಸ್ಯರಾಗಿದ್ದರು. ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಸದಸ್ಯರಾಗಿದ್ದರು.

ಬೆಳ್ತಂಗಡಿ ತಾಲೂಕು ಮತ್ತು ದ.ಕ.ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಬೆಂಗಳೂರಿನ ಅಖಿಲ ಭಾರತ ಚಾಲಕರ ಸಂಘದ ‘ಸಾರಥಿ ನಂಬರ್ 1’, ಬೆಂಗಳೂರಿನ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್‌ನ ವರ್ಷದ ವ್ಯಕ್ತಿ ಪ್ರಶಸ್ತಿ’ ಎ ಶ್ಯಾಮರಾವ್ ಸ್ಮಾರಕ ಪ್ರಶಸ್ತಿ, ಬ್ಯಾರಿ ಸಾಹಿತ್ಯ ಅಕಾಡಮಿಯ ಸಹಯೋಗದಲ್ಲಿ ಆಳ್ವಾಸ್ ನುಡಿಸಿರಿ ಪ್ರಶಸ್ತಿಗಳಲ್ಲದೆ ಅನೇಕ ಸಂಘ-ಸಂಸ್ಥೆಗಳಿಂದ ಸನ್ಮಾನಿತರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News