ಮಂಗಳೂರು | ಜು.22ರಂದು 'ಮೀಫ್ ಎಕ್ಸಲೆನ್ಸ್ ಅವಾರ್ಡ್' ಪ್ರದಾನ ಕಾರ್ಯಕ್ರಮ

Update: 2023-07-19 07:07 GMT

ಮಂಗಳೂರು, ಜು. 19: ಮುಸ್ಲಿಮ್ ಶೈಕ್ಷಣಿಕ ಸಂಸ್ಥೆಗಳ ಒಕ್ಕೂಟ(MEIF)ದ ವಾರ್ಷಿಕ ಮಹಾಸಭೆ ಮತ್ತು ಮೀಫ್ ಎಕ್ಸಲೆನ್ಸ್ ಅವಾರ್ಡ್ ಪ್ರದಾನ ಸಮಾರಂಭ ಜು.22ರಂದು ಜಪ್ಪಿನಮೊಗರಿನ ಪ್ರೆಸ್ಟೀಜ್ ಇಂಟರ್ ನ್ಯಾಶನಲ್ ಸ್ಕೂಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ತಿಳಿಸಿದ್ದಾರೆ.

ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ವಿಷಯ ತಿಳಿಸಿದ ಅವರು, ಅಂದು ಬೆಳಗ್ಗೆ 9:30ಕ್ಕೆ ಸಮಾರಂಭ

ಉದ್ಘಾಟನೆಗೊಳ್ಳಲಿದ್ದು, ಸಮಾರಂಭದಲ್ಲಿ 8 ಶಿಕ್ಷಣ ಸಂಸ್ಥೆಗಳಿಗೆ, 12 ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಶೇ. 100 ಫಲಿತಾಂಶ ದಾಖಲಿಸಿದ 45 ವಿದ್ಯಾ ಸಂಸ್ಥೆಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಕಣಚೂರು ಅಕಾಡಮಿ ಆಫ್ ಜನರಲ್ ಎಜುಕೇಶನ್ನ ಅಧ್ಯಕ್ಷ ಡಾ.ಯು.ಕೆ ಮೋನು, ಬೆಂಗಳೂರು ಪ್ರೆಸಿಡೆನ್ಸಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ನಿಸಾರ್ ಅಹ್ಮದ್ ಅವರನ್ನು ಸನ್ಮಾನಿಸಲಾಗುವುದು. ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್ ಕಾರ್ಯಕ್ರಮವನ್ನು ಉದ್ಘಾಟಿಸುವರು. ಮೀಫ್ ಅತ್ಯುತ್ತಮ ಶಾಲಾ ಪ್ರಶಸ್ತಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪ್ರದಾನ ಮಾಡಲಿದ್ದಾರೆ ಎಂದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸರಕಾರಿ ಭರವಸೆಗಳ ಸಮಿತಿಯ ಅಧ್ಯಕ್ಷ ಬಿ.ಎಂ.ಫಾರೂಕ್, ಮಂಗಳೂರಿನ ಪ್ರೆಸ್ಟೀಜ್ ಇಂಟರ್ ನ್ಯಾಷನಲ್ ಸ್ಕೂಲ್ ಅಧ್ಯಕ್ಷ ಹೈದರ್ ಅಲಿ ಕೆ. ಹಾಗೂ ರಾಷ್ಟ್ರೀಯ ತರಬೇತುದಾರ ಪ್ರೊ.ರಾಜೇಂದ್ರ ಭಟ್ ಭಾಗವಹಿಸಲಿದ್ದಾರೆ. ಮೀಫ್ ಗೌರವಾಧ್ಯಕ್ಷ ಉಮರ್ ಟಿ.ಕೆ. ದಿಕ್ಸೂಚಿ ಭಾಷಣ ನೀಡಲಿದ್ದಾರೆ. ಗೌರವ ಸಲಹೆಗಾರ ಸೈಯದ್ ಮುಹಮ್ಮದ್ ಬ್ಯಾರಿ ಯೋಜನೆಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ಒಕ್ಕೂಟದ ಉಪಾಧ್ಯಕ್ಷ ಬಿ.ಎಂ.ಮುಮ್ತಾಝ್ ಅಲಿ ವಿವರಿಸಿದರು.

ಮೀಫ್ ನಡಿ ದ.ಕ. ಹಾಗೂ ಉಡುಪಿ ಜಿಲ್ಲೆಗಳಿಂದ ಸುಮಾರು 175 ಶಾಲೆಗಳು ಸದಸ್ಯತ್ವ ಹೊಂದಿವೆ. ಶಿಕ್ಷಣ ಸಂಸ್ಥೆಗಳ ಫಲಿತಾಂಶ ಮತ್ತು ಗುಣಮಟ್ಟವನ್ನು ಸುಧಾರಿಸಲು ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ನಿರಂತರ ತರಬೇತಿ ಮೇಲೆ ಕೇಂದ್ರೀಕರಿಸಲಾಗುತ್ತಿದೆ. ಈ ವರ್ಷ ಮೀಫ್ ವಿದ್ಯಾಸಂಸ್ಥೆಗಳ ಫಲಿತಾಂಶ ಶೇ.80ರಿಂದ ಶೇ. 96ಕ್ಕೆ ಏರಿಕೆಯಾಗಿದೆ. ಒಟ್ಟು ತೇರ್ಗಡೆಗೊಂಡ ವಿದ್ಯಾರ್ಥಿಗಳ ಪೈಕಿ ಶೇ. 83 ಮಂದಿ ಉನ್ನತ ಶ್ರೇಣಿ ಮತ್ತು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಮೀಫ್ ವ್ಯಾಪ್ತಿಯ 59 ಎಸೆಸೆಲ್ಸಿ ವಿದ್ಯಾಸಂಸ್ಥೆಗಳ ಪೈಕಿ 33 ಸಂಸ್ಥೆಗಳು ಶೇ. 100 ಫಲಿತಾಂಶ ದಾಖಲಿಸಿವೆ. ದ್ವಿತೀಯ ಪಿಯುಸಿಯಲ್ಲೂ ಮೀಫ್ ವಿದ್ಯಾ ಸಂಸ್ಥೆಗಳು ಶೇ. 98 ಫಲಿತಾಂಶ ದಾಖಲಿಸಿವೆ ಎಂದು ಮುಮ್ತಾಝ್ ಅಲಿ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ನಿಸಾರ್ ಮುಹಮ್ಮದ್, ಕಾರ್ಯಕ್ರಮ ಕಾರ್ಯದರ್ಶಿ ರಿಯಾಝ್ ಅಹ್ಮದ್, ಮಾಧ್ಯಮ ಕಾರ್ಯದರ್ಶಿ ಪಿ.ಎ. ಇಲ್ಯಾಸ್ ಕಾಟಿಪಳ್ಳ ಉಪಸ್ಥಿತರಿದ್ದರು.




 


 



Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News