ಮಂಗಳೂರು: ಗಣರಾಜ್ಯೋತ್ಸವ ಧ್ವಜಾರೋಹಣ ನಡೆಸಿ ಮನೆಗೆ ತೆರಳಿದ ವ್ಯಕ್ತಿ ಕುಸಿದುಬಿದ್ದು ಮೃತ್ಯು
Update: 2024-01-26 11:51 GMT
ಮಂಗಳೂರು: ಗಣರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನಡೆಸಿದ ವ್ಯಕ್ತಿಯೊಬ್ಬರು ಮನೆಗೆ ತೆರಳಿದಾಗ ಕುಸಿದು ಬಿದ್ದು ಮೃತಪಟ್ಟ ಘಟನೆ ಇಂದು ನಡೆದಿದೆ.
ನಗರದ ಬಿಜೈ ನ್ಯೂ ರೋಡ್ ನಲ್ಲಿರುವ ಫೆಲಿಸಿಟಿ ಅಪಾಟ್೯ಮೆಂಟ್ ಅಸೋಸಿಯೇಶನ್ ವತಿಯಿಂದ ಇಂದು ಗಣರಾಜ್ಯೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಬೆಳಗ್ಗೆ 7 ಗಂಟೆಗೆ ಧ್ವಜಾರೋಹಣವನ್ನು ಅಪಾಟ್೯ಮೆಂಟ್ ನ ಹಿರಿಯ ನಾಗರಿಕರಾದ, ನಿವೃತ್ತ ಸರಕಾರಿ ಅಧಿಕಾರಿ ಅಬ್ದುಲ್ ಸಮದ್ (80) ಅವರು ಧ್ವಜಾರೋಹಣ ನಡೆಸಿದ್ದರು. ನಂತರ ಭಾಷಣವನ್ನೂ ಮಾಡಿದ್ದ ಅವರು ಕಾರ್ಯಕ್ರಮ ಮುಗಿದ ಬಳಿಕ ಎಲ್ಲರಿಗೂ ಹಸ್ತಲಾಘವ ಮಾಡಿ, ಮನೆಗೆ ತೆರಳಿದ್ದರು.
ಮನೆಯ ಒಳಗೆ ಬಂದು ಆಸೀನರಾದಾಗ ಕುಸಿದು ಬಿದ್ದರು. ತಕ್ಷಣವೇ ಅಕ್ಕಪಕ್ಕದ ನಿವಾಸಿಗಳು ಬಂದು ಆಸ್ಪತ್ರೆಗೆ ಕರೆದೊಯ್ಯಲು ಸಿದ್ಧತೆ ನಡೆಸುತ್ತಿದ್ದಾಗಲೇ ಅವರು ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ.
ಮೂಲತ: ಕುಂದಾಪುರದ ಗಂಗೊಳ್ಳಿ ನಿವಾಸಿಯಾಗಿರುವ ಅಬ್ದುಲ್ ಸಮದ್ ಅವರ ಮೃತದೇಹವನ್ನು ನಂತರ ಊರಿಗೆ ಕೊಂಡೊಯ್ಯಲಾಯಿತು.