ಮಂಗಳೂರು| ಬಸ್ ಪ್ರಯಾಣಿಕೆಗೆ ಆದ ನಷ್ಟಕ್ಕೆ 1 ಲಕ್ಷ ರೂ. ಪರಿಹಾರ ನೀಡಲು ಆದೇಶ

Update: 2024-12-31 04:19 GMT

ಮಂಗಳೂರು, ಡಿ.30: ಬಸ್‌ನಲ್ಲಿ ತಿಗಣಿ ಕಾಟದಿಂದ ತೊಂದರೆಗೊಳಗಾದ ಬಸ್ ಪ್ರಯಾಣಿಕೆಗೆ 1 ಲಕ್ಷ ರೂ. ಪರಿಹಾರ ನೀಡುವಂತೆ ಸೀ ಬರ್ಡ್ ಟೂರಿಸ್ಟ್ ಸಂಸ್ಥೆಗೆ ದ.ಕ. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗವು ಆದೇಶ ನೀಡಿದೆ.

ಬಸ್‌ನಲ್ಲಿ ಪ್ರಯಾಣದ ವೇಳೆ ತೊಂದರೆಗೊಳಗಾಗಿದ್ದ ಪಾವೂರಿನ ದೀಪಿಕಾ ಸುವರ್ಣರಿಗೆ ಪರಿಹಾರ ಧನ ನೀಡುವಂತೆ ಆಯೋಗವು ತೀರ್ಪು ನೀಡಿದೆ.

*ಘಟನೆಯ ವಿವರ: ಕಲರ್ಸ್ ಕನ್ನಡದ ‘ರಾಜಾರಾಣಿ’ ರಿಯಾಲಿಟಿ ಶೋದಲ್ಲಿ ತನ್ನ ಪತಿ ಶೋಭರಾಜ್ ಪಾವೂರು ಅವರೊಂದಿಗೆ ಕಾಣಿಸಿಕೊಳ್ಳುತ್ತಿದ್ದ ದೀಪಿಕಾ ಸುವರ್ಣ ಅವರು 2022ರ ಆ.16ರಂದು ರಾತ್ರಿ 10:37ಕ್ಕೆ ಮಂಗಳೂರಿನಿಂದ ಬೆಂಗಳೂರಿಗೆ ಬಸ್‌ನಲ್ಲಿ ಪ್ರಯಾಣಿಸಲು ಬೆಂಗಳೂರಿನ ರೆಡ್ ಬಸ್ ಆನ್‌ಲೈನ್ ಎಪಿಪಿ, ಇಬಿಬೋ ಗ್ರೂಪ್ ಪ್ರೈವೆಟ್ ಲಿಮಿಟೆಡ್ ಮೂಲಕ ಟಿಕೆಟ್ ಕಾಯ್ದಿರಿಸಿದ್ದರು. ಮರುದಿನ ಅವರಿಗೆ ಅಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸ ಬೇಕಿತ್ತು. ಅವರು ಟಿಕೆಟ್ ಕಾಯ್ದಿರಿಸುವಾಗ ಉತ್ತಮ ಸೇವೆಯನ್ನು ಒದಗಿಸುವ ಭರವಸೆಯನ್ನು ಸಂಬಂಧಪಟ್ಟ ಬಸ್‌ನವರು ನೀಡಿದ್ದರು.

ಅದರಂತೆ ರಾತ್ರಿ ಬಸ್ ಹತ್ತಿದ ಅವರಿಗೆ ಬಸ್‌ನ ಸ್ಲೀಪರ್ ಕೋಚ್‌ನಲ್ಲಿ ವಿಪರೀತ ತಿಗಣಿ ಕಡಿತದ ಅನುಭವ ಉಂಟಾ ಯಿತು. ಇದನ್ನು ಬಸ್‌ನ ನಿರ್ವಾಹಕರ ಗಮನಕ್ಕೆ ತಂದರೂ ಫಲಕಾರಿಯಾಗಲಿಲ್ಲ. ತಿಗಣಿ ಕಡಿತದಿಂದಾಗಿ ಮೈ ಮೇಲೆ ವಿಪರೀತ ತುರಿಕೆ ಕಾಣಿಸಿಕೊಂಡಿತು. ತೊಂದರೆಗೊಳಗಾದ ಅವರು ಬಸ್ ಚಾಲಕನ ಗಮನಕ್ಕೆ ತಂದರೂ ಅವರ ಮಾತನ್ನು ಚಾಲಕ ಗಣನೆಗೆ ತೆಗದುಕೊಳ್ಳಲಿಲ್ಲ ಎನ್ನಲಾಗಿದೆ.

ಬಸ್‌ನಲ್ಲಿ ತಿಗಣಿ ಕಾಟದಿಂದ ಆಗಿರುವ ತೊಂದರೆಯಿಂದಾಗಿ ದೀಪಿಕಾ ಸುವರ್ಣ ಬಳಿಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದರು. ಈ ವಿಚಾರವನ್ನು ಸೀಬರ್ಡ್ ಟೂರಿಸ್ಟ್ ಸಂಸ್ಥೆಯ ಗಮನಕ್ಕೆ ತಂದರೂ ನ್ಯಾಯ ಸಿಗಲಿಲ್ಲ. ಬಸ್ ಸಂಸ್ಥೆಯ ಈ ಧೋರಣೆಯನ್ನು ಪ್ರಶ್ನಿಸಿ ನ್ಯಾಯಕ್ಕಾಗಿ ದ.ಕ. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗದ ಮೊರೆ ಹೋಗಿದ್ದರು. ದೀಪಿಕಾರ ದೂರನ್ನು ಆಲಿಸಿದ ಸೋಮಶೇಖರಪ್ಪ ಕೆ. ಹಂದೀಗೋಳ್ (ಪ್ರಭಾರ ಅಧ್ಯಕ್ಷರು) ಮತ್ತು ಶಾರದಮ್ಮ ಎಚ್.ಜಿ (ಸದಸ್ಯೆ) ನೇತೃತ್ವದ ದ.ಕ. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗವು ಸಂತ್ರಸ್ತೆ ದೀಪಿಕಾ ಸುವರ್ಣ ಅವರಿಗೆ 1 ಲಕ್ಷ ಪರಿಹಾರ, 18650 ದಂಡ, 850 ಟಿಕೆಟ್ ಹಣ ಹಾಗೂ ಕಾನೂನು ಸಮರದ 10 ಸಾವಿರ ನೀಡಲು ಆದೇಶ ನೀಡಿದೆ. ಅರ್ಜಿದಾರರ ಪರವಾಗಿ ವಕೀಲರಾದ ಎಂಸಿ ಕೆದಿಲಾಯ ವಾದಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News