ಮಂಗಳೂರು: ವಂದೇ ಭಾರತ್ ಎಕ್ಸ್ ‌ಪ್ರೆಸ್ ರೈಲಿಗೆ ಚಾಲನೆ

Update: 2023-12-30 09:18 GMT

ಮಂಗಳೂರು, ಡಿ. 30: ಪ್ರಧಾನ ನಗರಗಳನ್ನು ಜೋಡಿಸುವ ಸೆಮಿ ಹೈ ಸ್ಪೀಡ್ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಮಂಗಳೂರು ಸೆಂಟ್ರಲ್ ನಿಲ್ದಾಣ ದಿಂದ ಮಡಗಾಂವ್ ಗೆ  ಶನಿವಾರ 12.12ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಪ್ರಥಮ ಪ್ರಯಾಣ ಆರಂಭಿಸಿದೆ.

ಪ್ರಯಾಣ ಆರಂಭದ ಸಮಯ ಬೆಳಿಗ್ಗೆ 11 ಗಂಟೆಗೆ  ನಿಗದಿಯಾಗಿದ್ದರೂ ನಂತರ  10.30 ಎಂದು ಬದಲಿಸಲಾಗಿತ್ತು.    

ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರು - ಮಡಗಾಂವ್ ಸೇರಿ 6 ವಂದೇ ಭಾರತ್ ಹಾಗೂ 2 ಅಮೃತ್ ಭಾರತ್ ರೈಲುಗಳಿಗೆ ಏಕ ಕಾಲದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಹಸಿರು ನಿಶಾನೆ ತೋರಿದರು.

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಆಯೋಜಿಸಲಾದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಂಸದ ನಳಿನ್ ಕುಮಾರ್, ದೇಶದಲ್ಲಿ 2014 ರ ಬಳಿಕ ಪರಿವರ್ತನೆ ಯುಗ ಆರಂಭವಾಗಿದೆ. ರೈಲ್ವೆ ಇಲಾಖೆಯಲ್ಲಿ ಅದ್ಭುತ ಪರಿವರ್ತನೆ , ಆಮೂಲಾಗ್ರ ಬದಲಾವಣೆ ಆಗಿದೆ ಎಂದರು.

ಮಂಗಳೂರಿನಿಂದ ಬೆಂಗಳೂರಿಗೆ ವಂದೇ ಭಾರತ್ ಬೇಡಿಕೆ ಇದೆ. ರೈಲ್ವೇ ಹಳಿ ವಿದ್ಯುದೀಕರಣ  ಆಗುತ್ತಿದೆ. ಮಾರ್ಚ್ ನಲ್ಲಿ ಪೂರ್ಣ ಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಎಪ್ರಿಲ್ ನಲ್ಲಿ ಬೆಂಗಳೂರಿಗೆ ವಂದೇ ಭಾರತ್ ಆರಂಭವಾಗಲಿದೆ ಎಂದು ನಳಿನ್ ಹೇಳಿದರು.

ಶಾಸಕ ವೇದವ್ಯಾಸ ಕಾಮತ್ ಅವರು ಮಾತನಾಡಿ, 35 ವರ್ಷಗಳಲ್ಲಿ ಹೊಸ ಪ್ಲ್ಯಾಟ್ ಫಾರ್ಮ್ ಆಗಿರಲಿಲ್ಲ. ಇದೀಗ 4 ಮತ್ತು 5 ಪ್ಲ್ಯಾಟ್ ಫಾರ್ಮ್ ಆಗಿದೆ. ಇದು ಅಭೂತಪೂರ್ವ ಅಭಿವೃದ್ಧಿ ಎಂದು ಹೇಳಿದರು.

ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಶಾಸಕ ಡಾ. ಭಾರತ್ ಶೆಟ್ಟಿ, ಉಪ ಮೇಯರ್ ಸುನೀತ, ಮನಪಾ ಸದಸ್ಯ ವಿನಯ್ ರಾಜ್, ಪಾಲ್ಘಾಟ್ ರೈಲ್ವೆಯ ಡಿಆರ್ ಎಂ  ಅರುಣ್ ಕುಮಾರ್ ಚತುರ್ವೇದಿ, ಎಡಿಆರ್ ಎಂ ಜಯಕೃಷ್ಣನ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News