ಮತೀಯ ದ್ವೇಷದ ಅಜೆಂಡಾ ಸಿಕ್ಕಿದಾಗ ಮಾತ್ರ ಶಾಸಕ ಭರತ್‌ ಶೆಟ್ಟಿ ಪ್ರತ್ಯಕ್ಷ: ಮುನೀರ್‌ ಕಾಟಿಪಳ್ಳ

Update: 2024-02-12 10:02 GMT

ಮಂಗಳೂರು: ಉಳಿದ ಅವಧಿಯಲ್ಲಿ ಕಾಣೆಯಾಗುವ ಸುರತ್ಕಲ್ ಶಾಸಕ ಭರತ್ ಶೆಟ್ಟಿ, ಮತೀಯ ದ್ವೇಷದ ಅಜೆಂಡಾ ಸಿಕ್ಕಿದಾಗ ಮಾತ್ರ ಶೋಭ ಕರಂದ್ಲಾಜೆ, ಅನಂತ ಕುಮಾರ್ ಹೆಗಡೆ ತರ ಓಡೋಡಿ ಬರುತ್ತಾರೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.

"ಕ್ರಿಶ್ಚಿಯನ್ ಆಡಳಿತದ ಶಾಲೆಗಳನ್ನು ಹಿಂದು ವಿದ್ಯಾರ್ಥಿಗಳು ಬಹಿಷ್ಕರಿಸಬೇಕು" ಎಂದು ಸಂವಿಧಾನ ವಿರೋಧಿ, ಕ್ರಿಮಿನಲ್ ಅಪರಾಧದ ಹೇಳಿಕೆ ನೀಡಿರುವ ಭರತ್ ಶೆಟ್ಟರು ತನ್ನ ಕ್ಷೇತ್ರದಲ್ಲಿ "ಹಿಂದು" ವಿದ್ಯಾರ್ಥಿಗಳಿಗಾಗಿ ಎಷ್ಟು ಸರಕಾರಿ ಶಾಲೆ, ಕಾಲೇಜುಗಳನ್ನು ತನ್ನ ಅವಧಿಯಲ್ಲಿ ಸ್ಥಾಪಿಸಿದ್ದಾರೆ ಎಂದು ಹೇಳಲಿ. ಶಿಕ್ಷಕರ, ಕೊಠಡಿಗಳ ಸಮಸ್ಯೆ ಎದುರಿಸುತ್ತಿರುವ ತನ್ನ ಕ್ಷೇತ್ರದಲ್ಲಿರುವ ಸರಾಕರಿ ಶಾಲೆ ಕಾಲೇಜುಗಳ ಸಮಸ್ಯೆ ಬಗೆಹರಿಸಲು ಏನಾದರು ಪ್ರಯತ್ನ ಮಾಡಿದ್ದರೆ ತಿಳಿಸಲಿ. ಸುರತ್ಕಲ್ ಜನತಾ ಕಾಲನಿಯ ಸರಕಾರಿ ಪ್ರಾಥಮಿಕ ಶಾಲೆಯ ಜಮೀನು ಕಬಳಿಸುತ್ತಿರುವ ಶಕ್ತಿಗಳ ಎದುರಾಗಿ ಒಂದು ಶಬ್ದವಾದರೂ ಯಾಕೆ ಮಾತಾಡಿಲ್ಲ ಎಂದು ಎಂದು ಪ್ರಶ್ನಿಸಿದ್ದಾರೆ.

ಈಗ ಮಿಷನರಿಗಳು ನಡೆಸುವ ಕಡಿಮೆ ಫೀಸಿನ ಶಾಲೆ, ಕಾಲೇಜು ತೊರೆದು "ಹಿಂದು" ವಿದ್ಯಾರ್ಥಿಗಳು ಯಾವ ಶಾಲೆ ಕಾಲೇಜುಗಳಿಗೆ ಸೇರಬೇಕು ಶಾಸಕ ಭರತ್ ಶೆಟ್ಟರೆ ? ನಿಮ್ಮ ಬಳಗದಲ್ಲಿ ಕಾಣಿಸಿಕೊಳ್ಳುವ ಶಿಕ್ಷಣದ ವ್ಯಾಪಾರಿಗಳ ದುಬಾರಿ ಫೀಸು, ಡೊನೇಶನ್ನುಗಳ ಶಿಕ್ಷಣ ಸಂಸ್ಥೆಗಳಿಗಾ ? ನಿಮ್ಮ ಕರೆಗೆ ಓಗೊಡುವ "ಹಿಂದು" ವಿದ್ಯಾರ್ಥಿಗಳಿಗೆ ಈ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಉಚಿತ ಪ್ರವೇಶ ಕಲ್ಪಿಸುತ್ತೀರಾ ? ಅದು ನಿಮ್ಮಿಂದ ಸಾಧ್ಯವಾ ? ಮತೀಯ ಧ್ರುವೀಕರಣದ ರಾಜಕೀಯ ಆಟದ ನಿಮ್ಮ ಹೇಳಿಕೆಗಳ ಹಿಂದೆ ಇರುವುದು ಯಾರ ಹಿತಾಸಕ್ತಿ ? ಶಿಕ್ಷಣ, ಆರೋಗ್ಯದ ವ್ಯಾಪಾರಿಗಳದ್ದು ತಾನೆ ? ಇದೇನು ಜನರಿಗೆ ಅರ್ಥ ಆಗುವುದಿಲ್ಲ ಎಂದು ತಿಳಿದಿದ್ದೀರಾ ಶಾಸಕ ಭರತ್ ಶೆಟ್ಟರೆ ? "ಬಣ್ಣ" ದ ಮುಖವಾಡಗಳು ಕಳಚಿ ಬೀಳುವ ದಿನಗಳು ಬಂದೇ ಬರುತ್ತದೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News