ಮೂಡುಬಿದಿರೆ: ಹಳೆ ಪ್ರಕರಣದ ಆರೋಪಿ ಬಂಧನ

Update: 2024-08-31 18:32 GMT

ಮೂಡುಬಿದಿರೆ: ಹಳೆ ಪ್ರಕರಣವೊಂದರಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ 14 ವರ್ಷಗಳಿಂದ ತಲೆಮರೆಸಿ ಕೊಂಡಿದ್ದ ಆರೋಪಿಯೋರ್ವನನ್ನು ಮೂಡುಬಿದಿರೆ ಪೊಲೀಸರ ತಂಡವು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.

ಮಂಗಳೂರು ತಾಲೂಕು ಕೊಳವೂರಿನ ಅಯ್ಯನ ಮನೆ ನಿವಾಸಿ ರಮೇಶ (38) ಬಂಧಿತ ಆರೋಪಿ.

ಮೂಡುಬಿದಿರೆಯ ಗಾಂಧಿನಗರದ ನ್ಯೂ ಕಿರಣ್ ಫ್ಯಾಕ್ಟರಿಗೆ ಬ್ಯಾಂಕೊಂದರಿಂದ 2010ರಲ್ಲಿ ಸಾಲ ಪಡೆದುಕೊಳ್ಳಲಾಗಿತ್ತು. ಅದನ್ನು ಹಿಂದಿರುಗಿ ಪಾವತಿಸಿಲ್ಲ ಎಂದು ಆರೋಪಿಸಿ ಬ್ಯಾಕ್‌ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿತ್ತು. ನ್ಯಾಯಾಲಯದ ಆದೇಶದ ಅನ್ವಯ ಬ್ಯಾಂಕ್‌ ನ ವ್ಯವಸ್ಥಾಪಕರಾದ ಎಲ್.ಸಿ. ಸಿಂದಗೇರಿ ಅವರು ಫ್ಯಾಕ್ಟರಿಯ ಸ್ಥಿರಾಸ್ತಿ ಹಾಗೂ ಸೊತ್ತುಗಳನ್ನು 2010 ಸೆಪ್ಟೆಂಬರ್ 6ರಂದು ಜಫ್ತಿ ಮಾಡಿ ಸೀಲ್‌ ಮಾಡಿಸಿದ್ದರು. ಆರೋಪಿ ರಮೇಶ ಸಹಿತ ಫ್ಯಾಕ್ಟರಿಯ ಎಂ.ಎಂ. ಮಹದೇವಪ್ಪ, ಹರೀಶ ಶೆಟ್ಟಿ, ಹರೀಶ, ನಾಗೇಶ, ರಾಮಚಂದ್ರ ಮೊದಲಾದವರು 2010ರ ಸೆ.18ರಂದು ರಾತ್ರಿ ಸೀಲ್‌ ಮಾಡಿದ್ದ ಫ್ಯಾಕ್ಟರಿಯ ಬೀಗ ಮುರಿದು ಗಾವಲುಗಾರನಿಗೆ ಬೆದರಿಕೆ ಹಾಕಿದ್ದರು. ಈ ಸಂಬಂಧ ಬ್ಯಾಂಕ್‌ ನ ವ್ಯವಸ್ಥಾಪಕರಾದ ಎಲ್.ಸಿ. ಸಿಂದಗೇರಿ ಅವರು ಮೂಡಬಿದಿರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಈ ಪ್ರಕರಣದಲ್ಲಿ ಕಳೆದ 14 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ರಮೇಶನ ಇರುವಿಕೆ ಯನ್ನು ಪತ್ತೆಹಚ್ಚಿದ ಮೂಡುಬಿದಿರೆ ಪೊಲೀಸ್‌ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ.ಅವರ ನೇತೃತ್ವದ ಪೊಲೀಸ್ ತಂಡ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News