ಸರ್ವಧರ್ಮಿಯರ ಸೌಹಾರ್ದತೆಗೆ ಸಾಕ್ಷಿಯಾಗುತ್ತಿದೆ ಹುರುಳಿಸಾಲ್ ಆಹ್ಮದ್ ಸಯೀದ್ ಜಾಮಿಯಾ ಮಸೀದಿ: ಜೆ.ಡಿ.ನಾಯ್ಕ

Update: 2024-04-06 14:31 GMT

ಭಟ್ಕಳ: ಭಟ್ಕಳ ತಾಲೂಕಿನ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಹುರುಳಿಸಾಲಿನಲ್ಲಿರುವ ಆಹಮದ್ ಸಯೀದ್ ಜಾಮಿಯಾ ಮಸೀದಿ ಹಿಂದು-ಮುಸ್ಲಿಮ್ ಭಾವೈಕ್ಯತೆ ಮತ್ತು ಸೌಹಾರ್ದತೆಗೆ ಸಾಕ್ಷಿಯಾಗುತ್ತಿದೆ. ಕಳೆದ ೧೦-೧೫ ವರ್ಷ ಗಳಿಂದ ಈ ಭಾಗದಲ್ಲಿ ವಾಸವಾಗಿರುವ ಹಿಂದುಗಳೊಂದಿಗೆ ಸೇರಿಕೊಂಡು ಮಸೀದಿಯಲ್ಲಿ ಇಫ್ತಾರ್ ಕೂಟಗಳು, ಮಸೀದಿ ದರ್ಶನ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ಗುರುವಾರ ಮಸೀದಿಯಲ್ಲಿ ನಡೆದ ಇಫ್ತಾರ್ ಸೌಹಾರ್ದ ಕೂಟ ಕಾರ್ಯಕ್ರಮಕ್ಕೆ ನೂರಾರು ಹಿಂದೂ, ಮುಸ್ಲಿಮ್, ಕ್ರೈಸ್ತರು ಸಾಕ್ಷಿಯಾದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಜೆ.ಡಿ.ನಾಯ್ಕ ಹುರುಳಿಸಾಲ್ ಜಾಮಿಯಾ ಮಸೀದಿ ಪ್ರತಿ ವರ್ಷ ತಪ್ಪದೆ ಸ್ಥಳಿಯರನ್ನು ಸೇರಿಸಿಕೊಂಡು ಸೌಹಾರ್ದ ಕಾರ್ಯಕ್ರಮ ಆಯೋಜಸುತ್ತಿರುವುದು ನಿಜಕ್ಕೂ ಶ್ಲಾಘನೀಯ, ಇದು ಇಲ್ಲಿನ ಧಾರ್ಮಿಕ ಭಾವೈಕ್ಯತೆಗೆ ಕೊಂಡಿಯಾಗಿಯಾದೆ ಎಂದು ಅಭಿಪ್ರಾಯಪಟ್ಟರು.

ಅಂಜುಮನ್ ಪದವಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಪ್ರೋ.ಆರ್.ಎಸ್.ನಾಯಕ ಮಾತನಾಡಿ ಮನುಷ್ಯರು ಪರಸ್ಪರ ಅರ್ಥ ಮಾಡಿಕೊಂಡು ಬದುಕುವುದೇ ಹಬ್ಬಗಳ ಮೌಲ್ಯ. ಈ ಮೌಲ್ಯಗಳನ್ನು ಗಟ್ಟಿಗೊಳಿಸಲು ಪ್ರತಿವರ್ಷ ಈ ಮಸೀದಿ ವತಿಯಿಂದ ಸೌಹಾರ್ದ ಕಾರ್ಯಕ್ರಮಗಳು ನಡೆಯುತ್ತವೆ ಎಂದರು.

ಸದ್ಭಾವನ ಮಂಚ್ ಅಧ್ಯಕ್ಷ ಸತೀಶ್ ಕುಮಾರ್ ನಾಯ್ಕ ಮಾತನಾಡಿ, ಎಲ್ಲರೂ ಸೇರಿ ನೆಮ್ಮದಿ ಇದ್ದೇವೆ ಎಂದು ತೊರ್ಪಡಿಸುವ ಈ ಕಾರ್ಯಕ್ರಮವು ಮುಂದಿನ ದಿನಗಳಲ್ಲಿ ಹಬ್ಬವನ್ನು ಉತ್ತಮ ರೀತಿಯಲ್ಲಿ ನಡೆಸುವಂತಾಗಲಿ ಎಂದರು.

ಭಟ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹಾಗೂ ಸದ್ಭಾವನ ಮಂಚ್ ನ ಕಾರ್ಯದರ್ಶಿ ಎಂ.ಆರ್.ಮಾನ್ವಿ ಮಾತನಾಡಿ, ನಮ್ಮಲ್ಲಿ ಭಯ, ಆತಂಕ, ದ್ವೇಷದ ವಾತವರಣದ ನಡುವೆ ಇಲ್ಲಿ ಪ್ರೀತಿ, ಪ್ರೇಮ, ಸೌಹಾರ್ದತೆಯ ಕುರಿತು ಚರ್ಚೆಗಳು ನಡೆಯುತ್ತಿರುವುದು ಸಂತೋಷದ ವಿಷಯ. ನಾವು ನಮ್ಮ ಧರ್ಮಗಳನ್ನು ಪಾಲಿಸುವುದರೊಂದಿಗೆ ಇತರರ ಧರ್ಮ, ನಂಬಿಕೆಗಳನ್ನು ಗೌರವಿಸಿದಾಗ ಮಾತ್ರ ಸಮಾಜದಲ್ಲಿ ಸೌಹಾರ್ದತೆ ಉಂಟಾಗಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಆಹ್ಮದ್ ಸಯೀದ್ ಜಾಮಿಯಾ ಮಸೀದಿಯ ಇಮಾಮ್ ಮತ್ತು ಖತೀಬ್ ಮೌಲಾನ ಮುಹಮ್ಮದ್ ಜಾಫರ್ ಫಕ್ಕಿಭಾವ್, ಜಮಾಅತೆ ಇಸ್ಲಾಮಿ ಹಿಂದ್ ಪ್ರಭಾರಿ ಅಧ್ಯಕ್ಷ ಮುಜಾಹಿದ್ ಮುಸ್ತಫಾ ಸೇರಿದಂತೆ ಹಿಂದೂ-ಮುಸ್ಲಿಮ್, ಕ್ರೈಸ್ತ ಮುಖಂಡರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News