ಕುಳಾಯಿ ಜೆಟ್ಟಿಯ ಕಾಮಗಾರಿ ಸ್ಥಗಿತಗೊಳಿಸುವಂತೆ ಮೀನುಗಾರರ ಒತ್ತಾಯ

Update: 2024-10-16 17:39 GMT

ಸುರತ್ಕಲ್‌: ಕೇಂದ್ರ ಸರಕಾರದ 196.51 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕುಳಾಯಿ ಜೆಟ್ಟಿಯ ಕಾಮಗಾರಿ ಸ್ಥಗಿತಗೊಳಿಸುವಂತೆ ಮೀನುಗಾರರು, ರಾಜ್ಯ ಮೀನುಗಾರಿ ಸಚಿವರು, ಮೀನುಗಾರಿಕಾ ಇಲಾಖೆ ಪತ್ರದ ಮೂಲಕ ನವ ಮಂಗಳೂರು ಬಂದರು ಪ್ರಾಧಿಕಾರಕ್ಕೆ ಸೂಚನೆ ನೀಡಿದ್ದರೂ ಇವೆಲ್ಲವನ್ನೂ ದಿಕ್ಕರಿಸಿ ಎನ್‌ಎಂಪಿಎ ಜೆಟ್ಟ ಕಾಮಗಾರಿ ಮುಂದುವರಿಸಿರುವುದಕ್ಕೆ ಮೀನುಗಾರರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಈ ಸಂಬಂಧ ಶಾಸಕ ಭರತ್‌ ಶೆಟ್ಟಿ, ಸಂಸದ ಬೃಜೇಶ್‌ ಚೌಟ, ಉಡುಪಿ ಶಾಸಕ ಯಶ್ಪಾಲ್‌ ಸುವರ್ಣ, ಅಧಿಕಾರಿಗಳು ಹಾಗೂ 10 ಮಂದಿ ಮೀನುಗಾರರ ಸಭೆ ಬುಧವಾರ ನವ ಮಂಗಳೂರು ಬಂದರು ಪ್ರಾಧಿಕಾರದ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ಅವೈಜ್ಞಾನಿಕ ಜೆಟ್ಟಿಯ ಸಂಬಂಧ ಪರ ವಿರೋಧದ ಚರ್ಚೆಗಳು ನಡೆದವು. ಸಂಜೆ 4ಗಂಟೆಗೆ ಆರಂಭ ಗೊಂಡ ಸಭೆಯು ರಾತ್ರಿ 8.30ರ ವರೆಗೆ ನಡೆಯಿತು. ಸಭೆಯಲ್ಲಿ ಮೀನುಗಾರರು ಪ್ರಮುಖ ಮೂರು ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಬಂದರು ಪ್ರಾಧಿಕಾರದ ಅಧ್ಯಕ್ಷರಾದ ವೆಂಕಟರಮಣ ಅಣ್ಣರಾಜು ಅವರಿಗೆ ನೀಡಿದರು.

ಮನವಿಯಲ್ಲಿ ಪ್ರಸ್ತುತ ಬ್ರೇಕ್‌ವಾಟರ್‌ನ್ನು ಕೇವಲ 250 ಉದ್ದಕ್ಕೆ ನಿಲ್ಲಿಸಿರುವುದನ್ನು 500 ಮೀಟರ್‌ನಷ್ಟು ಉದ್ದಕ್ಕೆ ವಿಸ್ತರಿಸ ಬೇಕು. ಪ್ರಸ್ತುತ ಇರುವ ಬ್ರೇಕ್‌ ವಾಟರ್‌ನ ಉದ್ದವು ತೀರಾ ಕಡಿಮೆಯಾಗಿದ್ದು, ತೆರೆಗಳು ಅಲ್ಲಿಯೇ ಏಳುತ್ತಿರುವುದರಿಂದ ಮೀನುಗಾರಿಕೆ ನಡೆಸುವುದು ಅಸಾಧ್ಯ ಹಾಗೂ ಈಗಿರುವ ಬ್ರೇಕ್‌ವಾಟರ್ ನಿಷ್ಟಯೋಜಕವಾಗಿದೆ. ಜೆಟ್ಟಿಯಲ್ಲಿನ ದಡ ಪ್ರದೇಶದಲ್ಲಿ ಯಾವುದೇ ಡಾಕ್ ಕಾಮಗಾರಿಯನ್ನು ನಡೆಸಬಾರದು. ಏಕೆಂದರೆ ನಮ್ಮ ಸುಮಾರು 300ರಷ್ಟಿರುವ ದೋಣಿ ಗಳನ್ನು ನಿಲ್ಲಿಸುವರೇ ದಡವು ಮರಳು ಪ್ರದೇಶವಾಗಿರಬೇಕು. ಆದುದರಿಂದ ಜೆಟ್ಟಿಯಲ್ಲಿನ ದಡಪ್ರದೇಶದಲ್ಲಿ ಡಾಕ್ ಕಾರ್ಯ ಮಾಡಬಾರದು. ಮಳೆಗಾಲದ ಸಮಯದಲ್ಲಿ ಕುಳಾಯಿ ಜೆಟ್ಟಿಯಲ್ಲಿ ಮೀನುಗಾರಿಕೆಗೆ ಆಡಚಣೆಯಾದರೆ ಜೂನ್ ತಿಂಗಳಿಂದ ಅಕ್ಟೋಬರ್ ತಿಂಗಳ ವರೆಗೆ ಈಗಿರುವಂತೆ ಎನ್.ಎಂ.ಪಿ.ಎ. ಒಳಗಡೆ ಮೀನುಗಾರಿಕೆ ನಡೆಸಲು ಅವಕಾಶ ನೀಡಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಸಭೆಯಲ್ಲಿ ಮಾತನಾಡಿದ ಪ್ರಾಧಿಕಾರದ ಅಧ್ಯಕ್ಷರು, ಕುಳಾಯಿ ಜೆಟ್ಟಿಯ ಕಾಮಗಾರಿ ವೈಜ್ಞಾನಿಕವಾಗಿಯೇ ಇದೆ ಎಂದು ಅದರ ರೂಪುರೇಷೆ ತಯಾರಿಸಿರುವ ಇಂಜಿನಿಯರ್‌ ಗಳು ಹೇಳಿದ್ದಾರೆ. ಈಗ ನಡೆಯುತ್ತಿರುವ ಕಾಮಗಾರಿ ನಿಲ್ಲಿಸಿದರೆ ಯೋಜನೆಯೇ ನನೆಗುದಿಗೆ ನೀಳುವ ಸಾಧ್ಯತೆಗಳಿವೆ. ಈಗ ನಡೆಯುತ್ತಿರುವ ಕಾಮಗಾರಿ ಮುಂದುವರಿಯಲಿ, ಅದರಲ್ಲಿ ಯಾವುದೇ ರೀತಿಯ ಸಮಸ್ಯೆ, ತೊಂದರೆಗಳಾದರೆ ಅದಕ್ಕೆ ರೂಪುರೇಷೆ ತಯಾರಿಸಿದವರು, ಕಾಮಗಾರಿ ನಡೆಸಿರುವ ಗುತ್ತಿಗೆದಾರರೇ ಹೊಣೆಗಾರರಾಗುತ್ತಾರೆ. ಹಾಗಾಗಿ ಅವೈಜ್ಞಾನಿಕ ಕಾಮಗಾರಿ ನಡೆಸಲು ಹೇಗೆ ಸಾಧ್ಯ ಎಂದು ಹೇಳಿದರು ಎಂದು ತಿಳಿದು ಬಂದಿದೆ.

ಕುಳಾಯಿ ಜಟ್ಟಿ ಸಂಬಂಧಿಸಿ ಬುಧವಾರ ನವ ಮಂಗಳೂರು ಪ್ರಾಧಿಕಾರದ ಕಚೇರಿಯಲ್ಲಿ ನಡೆದ ಸಭೆಗೆ ರಾಜ್ಯ ಮೀನು ಗಾರಿಕಾ ಸಚಿವರಿಗೆ ಮಾಹಿತಿ ನೀಡಿಲ್ಲ ಎನ್ನಲಾಗಿದೆ. ಹಾಗಾಗಿ ಇಂದು ನಡೆದ ಸಭೆಯಲ್ಲಿ ಮೀನುಗಾರಿ ಸಚಿವ ಮಾಂಕಾಳ ವೈದ್ಯ ಅವರು ಉಪಸ್ಥಿತರಿರಲಿಲ್ಲ. ಈ ಹಿನ್ನೆಲೆಯಲ್ಲಿ ಅ.25ರಂದು ಶಾಸಕರು, ಸಂಸದರು, ಇಂಜಿನಿಯತ್‌ ಗಳು, ಮೀನುಗಾರರು ಹಾಗೂ ಸಚಿಬ ಮಾಂಕಾಳ ವೈದ್ಯ ಅವರ ನೇತೃತ್ವದಲ್ಲಿ ಸಭೆ ನಡೆಸಲು ಇಂದಿನ ಸಭೆಯಲ್ಲಿ ನಿರ್ಣಯಿಸಲಾಯಿತು ಎಂದು ತಿಳಿದು ಬಂದಿದೆ.



Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News