ಪುತ್ತೂರು: ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾಟ

Update: 2024-10-17 13:31 GMT

ಪುತ್ತೂರು: ನಗರದ ತೆಂಕಿಲ ವಿವೇಕಾನಂದ ಆಂಗ್ಲ ಮಾದ್ಯಮ ಶಾಲಾ ಮೈದಾನದಲ್ಲಿ ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಣ ಸಂಸ್ಥಾನಮ್ ವತಿಯಿಂದ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾಟವು ಆರಂಭಗೊಂಡಿದ್ದು, ಅ.16ರಿಂದ 19ರ ತನಕ ನಡೆಯುವ ಈ ಪಂದ್ಯಾಟದಲ್ಲಿ 6ರಿಂದ 12ನೇ ತರಗತಿಯ ವಯೋಮಿತಿಯ ವಿದ್ಯಾರ್ಥಿಗಳನ್ನು ಒಳಗೊಂಡಂತೆ 56 ತಂಡಗಳು ಭಾಗವಹಿಸುತ್ತಿದೆ.

ಬಾಲವರ್ಗ, ಕಿಶೋರವರ್ಗ ಮತ್ತು ತರುಣವರ್ಗ ಹೀಗೆ 3 ವರ್ಗಗಳಲ್ಲಿ ಬಾಲಕ-ಬಾಲಕಿಯರ ತಂಡಗಳು ಪಂದ್ಯಾಟ ಆಡುತ್ತಿದ್ದಾರೆ. ಬಾಲವರ್ಗದಲ್ಲಿ 6,7,8 ತರಗತಿ ಕಿಶೋರವರ್ಗದಲ್ಲಿ 9, 10 ತರಗತಿ ಹಾಗೂ ತರುಣ ವರ್ಗದಲ್ಲಿ 11, 12ನೇ ತರಗತಿಯ ವಿದ್ಯಾರ್ಥಿಗಳು ಪಂದ್ಯವಾಡುತ್ತಿದ್ದಾರೆ. ಲೀಗ್ ಕಂ ನಾಕೌಟ್ ಮಾದರಿಯಲ್ಲಿ ಸ್ಪರ್ಧೆ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಯಿಂದ ರಾತ್ರಿ 8 ಗಂಟೆಗೆ ವರೆಗೂ ಪಂದ್ಯಾಟ ನಡೆಯುತ್ತಿದ್ದು, ಪ್ರತಿದಿನ 40 ಪಂದ್ಯಾಟಗಳನ್ನು ನಡೆಸುವ ಗುರಿ ಇರಿಸಿಕೊಳ್ಳಲಾಗಿದೆ. ಆದರೆ ಮಳೆಯ ಕಾರಣದಿಂದ ಮೊದಲ ದಿನದಂದು 20 ಪಂದ್ಯಾಗಳಷ್ಟೇ ನಡೆಸಲು ಸಾಧ್ಯ ವಾಗಿದೆ. ಆಟಕ್ಕೆ 6 ಕ್ರೀಡಾಂಗಣಗಳನ್ನು ಸಿದ್ದಪಡಿಸಲಾಗಿದ್ದು, ಈ ಪೈಕಿ 2 ಕ್ರೀಡಾಂಗಣದಲ್ಲಿ ಹೊನಲು ಬೆಳಕಿನಲ್ಲಿ ಆಡಲು ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಂದು ಪಂದ್ಯಾಟಕ್ಕೆ ಸುಮಾರು 1.30 ಗಂಟೆಯ ಅವಧಿಯನ್ನು ನಿಗದಿ ಪಡಿಸಿಕೊಳ್ಳಲಾಗಿದೆ.

ವಿದ್ಯಾಭಾರತಿ ಖೇಲ್ ಪರಿಷತ್ ಸಂಯೋಜನೆಯಲ್ಲಿ ನಡೆಯುವ ಈ ವಾಲಿಬಾಲ್ ಪಂದ್ಯಾಟದಲ್ಲಿ ವಿದ್ಯಾಭಾರತಿ ದಕ್ಷಿಣ ಮದ್ಯ ಕ್ಷೇತ್ರಿಯ ವ್ಯಾಪ್ತಿಯನ್ನು ಒಳಗೊಂಡ 11 ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳ ತಂಡಗಳು ಭಾಗವಹಿಸಿವೆ. 595 ವಿದ್ಯಾರ್ಥಿ ಕ್ರೀಡಾಪಟುಗಳು, 71 ಮಂದಿ ವ್ಯವಸ್ಥಾಪಕರು ಹಾಗೂ ಕೋಚ್, 32 ಮಂದಿ ಅಧಿಕಾರಿಗಳು ಸೇರಿದಂತೆ ಒಟ್ಟು 698 ಮಂದಿ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News