ತೊಕ್ಕೊಟ್ಟು| ಹದಗೆಟ್ಟ ರಸ್ತೆಗೆ ಎಸೆಯಲ್ಪಟ್ಟ ಮಹಿಳೆಯ ಮೇಲೆ ಹರಿದ ಟ್ಯಾಂಕರ್; ಸಾರ್ವಜನಿಕರಿಂದ ಆಕ್ರೋಶ-ಪ್ರತಿಭಟನೆ

Update: 2024-11-09 15:43 GMT

ಉಳ್ಳಾಲ : ದೇರಳಕಟ್ಟೆಯಿಂದ ಮಂಗಳೂರು ಕಡೆಗೆ ಚಲಿಸುತ್ತಿದ್ದ ಸ್ಕೂಟರ್ ಸ್ಕಿಡ್ಡಾಗಿ ಬಿದ್ದ ಪರಿಣಾಮ ರಸ್ತೆಗೆ ಎಸೆಯಲ್ಪಟ್ಟ ಮಹಿಳೆಯ ಮೇಲೆ ಟ್ಯಾಂಕರ್ ಹರಿದು ಮೃತಪಟ್ಟ ಘಟನೆ ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡ ಬಳಿ ಶನಿವಾರ ಸಂಜೆ ನಡೆದಿದೆ.

ಮೃತ ಮಹಿಳೆಯನ್ನು ಮೂಲತಃ ಕುಳಾಯಿಯ ಪ್ರಸಕ್ತ ದೇರಳಕಟ್ಟೆಯಲ್ಲಿ ವಾಸವಾಗಿದ್ದ ರಹ್ಮತ್ (47) ಎಂದು ಗುರುತಿಸಲಾಗಿದೆ. ಈ ಅಪಘಾತದಲ್ಲಿ ರಹ್ಮತ್‌ರ ಪತಿ ಅಬ್ದುಲ್ ರಶೀದ್ ಅವರಿಗೂ ಗಾಯವಾಗಿದೆ.

ರಶೀದ್ ಅವರು ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಯಲ್ಲಿ ಇಲೆಕ್ಟ್ರಿಕಲ್ ವಿಭಾಗದ ಸಿಬ್ಬಂದಿಯಾಗಿದ್ದು, ಶನಿವಾರ ಸಂಜೆ ಸುಮಾರು 4:30ಕ್ಕೆ ತನ್ನ ಆ್ಯಕ್ಟಿವಾ ಸ್ಕೂಟರ್‌ನಲ್ಲಿ ತನ್ನ ಪತ್ನಿ ರಹ್ಮತ್‌ರನ್ನು ಕುಳ್ಳಿರಿಸಿ ದೇರಳಕಟ್ಟೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದರು. ತೊಕ್ಕೊಟ್ಟು-ಚೆಂಬುಗುಡ್ಡೆಯ ಸೇವಾ ಸೌಧದ ಬಳಿ ಹದಗೆಟ್ಟ ರಸ್ತೆಯ ಗುಂಡಿಯಿಂದ ಪಾರಾಗಲು ರಶೀದ್ ಹರಸಾಹಸ ಪಡುತ್ತಿದ್ದಂತೆಯೇ ನಿಯಂತ್ರಣ ಕಳಕೊಂಡು ಸ್ಕೂಟರ್ ಸ್ಕಿಡ್ಡಾಗಿ ಬಿತ್ತು ಎನ್ನಲಾಗಿದೆ. ಇದರಿಂದ ಸ್ಕೂಟರ್‌ನ ಹಿಂಬದಿ ಕುಳಿತಿದ್ದ ರಹ್ಮತ್ ರಸ್ತೆಗೆ ಎಸೆಯಲ್ಪಟ್ಟರು. ಅದೇ ರಸ್ತೆಯಲ್ಲಿ ವೇಗದಲ್ಲಿದ್ದ ಟ್ಯಾಂಕರ್ ರಹ್ಮತ್‌ರ ಮೇಲೆಯೇ ಹರಿಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಅಪಘಾತದಿಂದ ರಹ್ಮತ್ ಗಂಭೀರ ಗಾಯಗೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಪರೀಕ್ಷಿಸಿದ ವೈದ್ಯರು ರಹ್ಮತ್ ಮೃತಪಟ್ಟಿರುವುದಾಗಿ ಘೋಷಿಸಿದರು.

ಅಪಘಾತ ನಡೆದ ತಕ್ಷಣ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು 108 ಅಂಬ್ಯುಲೆನ್ಸ್ ಚಾಲಕ ತಾಂತ್ರಿಕ ಕಾರಣ ನೀಡಿ ನಿರಾಕರಿಸಿದ ಎಂದು ಹೇಳಲಾಗುತ್ತಿದೆ. ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಹದಗೆಟ್ಟ ರಸ್ತೆಯನ್ನು ದುರಸ್ತಿಪಡಿಸಬೇಕು ಎಂದು ಆಗ್ರಹಿಸಿ ಕೆಲಕಾಲ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ತೊಕ್ಕೊಟ್ಟಿನಿಂದ ದೇರಳಕಟ್ಟೆಯವರೆಗೆ ಮುಖ್ಯರಸ್ತೆಯು ಗುಂಡಿಗಳಿಂದ ಆವೃತವಾಗಿವೆ. ದ್ವಿಚಕ್ರ ವಾಹನಿಗರು ಈ ರಸ್ತೆ ಯಲ್ಲಿ ಹರಸಾಹಸ ಪಡುವಂತಾಗಿದೆ. ರಾತ್ರಿ ವೇಳೆಯಂತೂ ದಾರಿದೀಪವಿಲ್ಲದ ಕಾರಣ ಪ್ರಯಾಣಿಸುವುದು ಸವಾಲಾಗಿ ಪರಿಣಮಿಸಿದೆ. ಒಂದೆಡೆ ಎದುರಿನಿಂದ ಬರುವ ಪ್ರಖರ ಬೆಳಕಿನ ವಾಹನಗಳು, ಇನ್ನೊಂದೆಡೆ ದಾರಿದೀಪವಿಲ್ಲದ ಕಾರಣ ರಸ್ತೆ ಗುಂಡಿಯನ್ನು ತಪ್ಪಿಸುವುದು ದ್ವಿಚಕ್ರ ವಾಹನಿಗರಿಗೆ ಸವಾಲಿನ ಕೆಲಸವಾಗಿದೆ.

ಒಂದೆಡೆ ಹದಗೆಟ್ಟ ರಸ್ತೆ, ಇನ್ನೊಂದೆಡೆ ಆ್ಯಂಬುಲೆನ್ಸ್ ಸಿಬ್ಬಂದಿಯ ಕಾರ್ಯವೈಖರಿಯಿಂದ ಆಕ್ರೋಶಗೊಂಡ ಸಾರ್ವಜನಿಕರು ಪ್ರತಿಭಟಿಸಿದ ಕಾರಣ ಕೆಲಕಾಲ ಸಂಚಾರಕ್ಕೆ ಅಡಚಣೆಯಾಯಿತು.

ಸ್ಥಳಕ್ಕೆ ಡಿಸಿಪಿ ದಿನೇಶ್ ಕುಮಾರ್, ಸಂಚಾರ ವಿಭಾಗದ ಎಸಿಪಿ ನಜ್ಮಾ ಫಾರೂಕಿ, ಎಸಿಪಿ ಧನ್ಯನಾಯಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ, ಆಕ್ರೋಶಿತರನ್ನು ಸಮಾಧಾನ ಪಡಿಸಿದರು.

ಸ್ಪೀಕರ್ ಯುಟಿ ಖಾದರ್ ವಿರುದ್ಧ ಆಕ್ರೋಶ

ಕಳೆದ ಮೂರು ವರ್ಷದಿಂದ ಈ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಸ್ಪೀಕರ್ ಯು.ಟಿ.ಖಾದರ್‌ಗೆ ಈ ರಸ್ತೆಯ ಬಗ್ಗೆ ಸಂಪೂರ್ಣ ಅರಿವು ಇದೆ. ಆದರೆ ಅವರು ಇದರ ದುರಸ್ತಿಗೆ ಆದ್ಯತೆ ನೀಡಿಲ್ಲ. ಅಧಿಕಾರಿಗಳು ಕೂಡ ಇದರತ್ತ ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸಂಚಾರ ಪೊಲೀಸರು ಈ ರಸ್ತೆಯಾಗಿ ಚಲಿಸುವ ವಾಹನಿಗರನ್ನು ತಡೆದು ನಿಲ್ಲಿಸಿ ದಂಡ ಹಾಕುತ್ತಾರೆ. ಆದರೆ ಹದಗೆಟ್ಟ ರಸ್ತೆಯ ಬಗ್ಗೆ ಈ ಪೊಲೀಸರು ಸಂಬಂಧಪಟ್ಟ ಇಲಾಖೆಯ ಗಮನ ಹರಿಸುತ್ತಿಲ್ಲ. ದೇರಳಕಟ್ಟೆ-ನಾಟೆಕಲ್ ಪರಿಸರದಲ್ಲಿ ನಾಲ್ಕು ಪ್ರಮುಖ ಆಸ್ಪತ್ರೆಗಳಿವೆ. ದಿನನಿತ್ಯ ಸಾವಿರಾರು ಮಂದಿ ಈ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ವಾಹನಗಳ ಓಡಾಟವೂ ಅಧಿಕವಿದೆ. ರಸ್ತೆ ಹದಗೆಟ್ಟು ಸಂಚಾರ ಅಪಾಯಕಾರಿಯಾಗಿದೆ. ಜನಸಾಮಾನ್ಯರ ಜೀವ ಬಲಿಯಾಗುತ್ತಿದೆ. ಆದರೂ ಸ್ಪೀಕರ್, ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.



 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News