‘ಮುಳುಗು ತಜ್ಞ’ ಈಶ್ವರ್ ಮಲ್ಪೆಗೆ ಮೂಲತ್ವ ವಿಶ್ವ ಪ್ರಶಸ್ತಿ ಪ್ರದಾನ
ಮಂಗಳೂರು: ‘ಮುಳುಗು ತಜ್ಞ’ ಈಶ್ವರ್ ಮಲ್ಪೆ ಅವರಿಗೆ ಮೂಲತ್ವ ಫೌಂಡೇಶನ್ ಚಾರಿಟೆಬಲ್ ಟ್ರಸ್ಟ್‌ನ 10ನೇ ವರ್ಷದ ‘ಮೂಲತ್ವ ವಿಶ್ವ ಪ್ರಶಸ್ತಿ 2024’ಯನ್ನು ನಗರದ ಕೊಡಿಯಾಲಬೈಲಿನ ಶಾರದಾ ವಿದ್ಯಾಲಯ ಸಭಾಂಗಣದಲ್ಲಿ ಪ್ರದಾನ ಮಾಡಲಾಯಿತು.
ಪ್ರಶಸ್ತಿಯು 1 ಲಕ್ಷ ರೂ.ನಗದು, ಫಲಕ, ಪ್ರಶಸ್ತಿ ಪತ್ರವನ್ನು ಒಳಗೊಂಡಿತ್ತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಈಶ್ವರ್ ಮಲ್ಪೆ ನಾನು ಮಾಡುತ್ತಿರುವ ಕಿಂಚಿತ್ ಸಮಾಜ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವ ಮೂಲತ್ವ ಫೌಂಡೇಶನ್‌ಗೆ ಆಭಾರಿಯಾಗಿದ್ದೇನೆ. ನಿಮ್ಮೆಲ್ಲರ ಆಶೀರ್ವಾದದಿಂದ ನನಗೆ ಈ ಪ್ರಶಸ್ತಿ ಲಭಿಸಿದೆ. ದೇಶದ ವಿವಿಧೆಡೆ ಎಲೆಮರೆಯ ಕಾಯಿ ಯಂತಿರುವ ಸಮಾಜ ಸೇವಕರನ್ನು ಹುಡುಕಿ ಪ್ರಶಸ್ತಿ ನೀಡುತ್ತಿರವ ಶ್ಲಾಘನಾರ್ಹ ಕೆಲಸ ಮೂಲತ್ವ ಸಂಸ್ಥೆ ಮಾಡುತ್ತಿದೆ ಎಂದರು.
ಶಾಲೆಗಳಲ್ಲಿ ಈಜು ಕಲಿಕೆಯನ್ನು ಕಡ್ಡಾಯ ಮಾಡಬೇಕು. ಸಣ್ಣ ಈಜು ಕೊಳಗಳನ್ನು ನಿರ್ಮಿಸಿ ಮಕ್ಕಳಿಗೆ ಶಿಕ್ಷಕರ ಮೂಲಕ ಈಜು ಕಲಿಸಿಕೊಡಬೇಕು. ತಾಯಂದಿರು ಕೂಡಾ ಮಕ್ಕಳನ್ನು ಈಜು ತರಗತಿಗಳಿಗೆ ಕಳುಹಿಸಬೇಕು. ಈಜು ಕಲಿಯುವು ದರಿಂದ ನೀರಿನಲ್ಲಿ ಅವಘಡಗಳು ಸಂಭವಿಸಿದಾಗ ನಮ್ಮನ್ನು ನಾವೇ ರಕ್ಷಿಸಿಕೊಳ್ಳಬಹುದು ಎಂದು ಈಶ್ವರ್ ಮಲ್ಪೆ ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೀನುಗಾರಿಕಾ ಕಾಲೇಜಿನ ಡೀನ್ ಡಾ. ಎಚ್. ಎನ್. ಆಂಜನೇಯಪ್ಪ ಮಾತನಾಡಿ, ವಿದ್ಯಾರ್ಥಿಗಳು ಈಶ್ವರ್ ಮಲ್ಪೆ ಅವರ ಸಾಧನೆಯಿಂದ ಪ್ರೇರಣೆಗೊಂಡು ದೇಶ, ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಡೈಜಿವರ್ಲ್ಡ್ ಸಂಸ್ಥಾಪಕ ವಾಲ್ಟರ್ ನಂದಳಿಕೆ, ಸಮಾಜ ಸೇವಕ ರವಿ ಕಟಪಾಡಿ, ಮೊಗವೀರ ಮಹಾಜನಸಭಾ ಉಚ್ಚಿಲ ಉಪಾಧ್ಯಕ್ಷ ಮೋಹನ್ ಬೆಂಗ್ರೆ, ಫೌಂಡೇಶನ್‌ನ ಟ್ರಸ್ಟಿಗಳಾದ ಕಲ್ಪನಾ ಕೋಟ್ಯಾನ್, ಶೈನಿ ಉಪಸ್ಥಿತರಿದ್ದರು.
ಫೌಂಡೇಶನ್ ಸಂಸ್ಥಾಪಕ ಪ್ರಕಾಶ್ ಮೂಲತ್ವ ಸ್ವಾಗತಿಸಿದರು. ಗೋವಿಂದದಾಸ್ ಕಾಲೇಜಿ ನಿವೃತ್ತ ಪ್ರಾಂಶುಪಾಲ ಪ್ರೊ. ರಾಜ್ ಮೋಹನ್ ರಾವ್ ಪ್ರಶಸ್ತಿ ಪತ್ರ ವಾಚಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.