ಲೋಕಸಭಾ ಚುನಾವಣೆ: ದ.ಕ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್. ಆರ್ ಪೂಜಾರಿ ನಾಮಪತ್ರ ಸಲ್ಲಿಕೆ
ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಬುಧವಾರ ನಾಮ ಪತ್ರ ಸಲ್ಲಿಸಿದರು.
ಬುಧವಾರ ಬೆಳಗ್ಗೆ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆಯಲ್ಲಿ ಕಾಂಗ್ರೆಸ್ ನಾಯಕರು,ಕಾರ್ಯಕರ್ತರು ,ಅಭಿಮಾನಿಗಳೊಂದಿಗೆ ಪದ್ಮರಾಜ್ ಅವರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದರು.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಮುಲ್ಲೈ ಮುಗಿಲನ್ ಅವರು ನಾಮಪತ್ರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ಡಾ.ಮಂಜುನಾಥ ಭಂಡಾರಿ, ಹರೀಶ್ ಕುಮಾರ್, ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ಶಾಸಕ ಜೆ.ಆರ್.ಲೋಬೊ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ,ಮಾಜಿ ಸಚಿವ ಅಭಯಚಂದ್ರ ಜೈನ್, ಮತ್ತಿತರರು ಉಪಸ್ಥಿತರಿದ್ದರು.
ನಾಮಪತ್ರ ಸಲ್ಲಿಕೆಗೆ ಪೂರ್ವಭಾವಿಯಾಗಿ ನಡೆದ ಮೆರವಣಿಗೆಗೆ ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಚಾಲನೆ ನೀಡಿದರು. ಅಳಕೆ, ನ್ಯೂಚಿತ್ರಾ ಟಾಕೀಸ್, ಉಷಾ ಕಿರಣ್ ಹೋಟೆಲ್ (ಎಡ),ಟೆಂಪಲ್ ಸ್ಕ್ವಾರ್, ಜಿಎಚ್ಎಸ್ ರೋಡ್(ಬಲ), ಗಣಪತಿ ಹೈಸ್ಕೂಲ್ ರಸ್ತೆ, ಓಲ್ಡ್ ಐಡಿಯಲ್ ಪಾರ್ಲರ್, ಮಂಗಳೂರು ವಿವಿ ಕಾಲೇಜು ರೋಡ್, ಕ್ಲಾಕ್ ಟವರ್, ಟೌನ್ ಹಾಲ್ ರಸ್ತೆಯ ಮೂಲಕ ಸಾಗಿ ಬಂದ ಮೆರವಣಿಗೆಯು ಎ.ಬಿ. ಶೆಟ್ಟಿ ಸರ್ಕಲ್ ಬಳಿ ಸಮಾವೇಶಗೊಂಡಿತು.
ಗೊಂಬೆ ಬಳಗ, ಚೆಂಡೆ, ಕೊಂಬು ಸಹಿತ ಮೆರವಣಿಗೆಯಲ್ಲಿ ಕಾರ್ಯಕರ್ತರು ಹೆಜ್ಜೆ ಹಾಕಿದರು. ತೆರೆದ ವಾಹನದಲ್ಲಿ ಅಭ್ಯರ್ಥಿ ಪದ್ಮರಾಜ್ ಆರ್., ಮೆರವಣಿಗೆಯಲ್ಲಿ ತುಳುನಾಡ ಧ್ವಜ ರಾರಾಜಿಸುತ್ತಿತ್ತು. ಕಾಂಗ್ರೆಸ್ ಧ್ವಜದೊಂದಿಗೆ ಕಾರ್ಯಕರ್ತರು ಹೆಜ್ಜೆ ಹಾಕಿದರು.