ಮಂಗಳೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ರೋಡ್‌ ಮ್ಯಾಪ್: ಯು.ಟಿ.ಖಾದರ್

Update: 2023-09-08 10:15 GMT

ಮಂಗಳೂರು, ಸೆ.8: ಮುಂದಿನ 30-40 ವರ್ಷಗಳ ಜನಸಂಖ್ಯೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕುಡಿಯುವ ನೀರು, ರಸ್ತೆ, ವಿದ್ಯುತ್ ಮೂಲಭೂತ ಸೌಕರ್ಯವನ್ನು ಒದಗಿಸುವ ಮೂಲಕ, ಮಂಗಳೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ರೋಡ್ ಮ್ಯಾಪ್ ಸಿದ್ಧಪಡಿಸಲಾಗುವುದು ಎಂದು ವಿಧಾನ ಸಭೆಯ ಸ್ಪೀಕರ್, ಸ್ಥಳೀಯ ಶಾಸಕ ಯು.ಟಿ.ಖಾದರ್ ತಿಳಿಸಿದ್ದಾರೆ.

ನಗರದ ಸರ್ಕ್ಯೂಟ್ ಹೌಸ್ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ಕ್ಷೇತ್ರದಲ್ಲಿ ವಿದ್ಯುತ್ ಸೌಲಭ್ಯ ಕಲ್ಪಿಸುವಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುವುದು. ಯಾವುದೇ ಅಭಿವೃದ್ಧಿಗೂ ವಿದ್ಯುತ್ ಅಗತ್ಯ. ಈ ನಿಟ್ಟಿನಲ್ಲಿ ಮಂಗಳೂರು ಕ್ಷೇತ್ರದ ತೊಕ್ಕೊಟ್ಟುವಿನಲ್ಲಿರುವ ಈಗ ಇರುವ ಸಬ್ ಸ್ಟೇಷನ್ ನ್ನು ಮೇಲ್ದರ್ಜೆಗೇರಿಸಿ ಸಬ್ ಡಿವಿಜನ್ ಮಾಡಲಾಗುವುದು. ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು. 110 ಕೆವಿ ದೊಡ್ಡ ಮಟ್ಟದ ಪವರ್ ಸ್ಟೇಷನ್ ಮಾಡಲಾಗುವುದು ಎಂದರು.

ಕೋಣಾಜೆಯ ಸಬ್ ಸ್ಟೇಷನ್ ನ ಸಾಮರ್ಥ್ಯವನ್ನು 110 ಕೆವಿಗೆ ಏರಿಸಲಾಗುವುದು. ಮೂರು ಸಬ್ಸ್ಟೇಷನ್ ಗಳನ್ನು ಮಾಡಲಾಗುವುದು ಎಂದರು. ಕೋಣಾಜೆ ಸಬ್ಸ್ಟೇಷನ್ಗೆ ಜಾಗ ಗುರುತಿಸಲಾಗುವುದು. ಎಂದು ತಿಳಿಸಿದರು.

ದಿನದ 24 ಗಂಟೆಯೂ ಕುಡಿಯುವ ನೀರು ದೊರೆಯುವ ರೀತಿಯಲ್ಲಿ ಯೋಜನೆ ರೂಪಿಸಲಾಗುವುದು. ಜೆಜೆಎಂ ಮೂಲಕ ಮನೆಮನೆಗೆ ನೀರನ್ನು ತಲುಪಿಸಲಾಗುವುದು. ಉಳ್ಳಾಲ-ಕೋಟೆಕಾರ್ಗೆ ಹೆಚ್ಚುವರಿ ನೀರಿನ ಸಂಪರ್ಕ ಕಲ್ಪಿಸಲಾಗುವುದು. ಹರೇಕಳ ಡ್ಯಾಮ್ನ ಕಾಮಗಾರಿ ಮುಗಿದಿದೆ. ಈ ಡ್ಯಾಮ್ ಮೂಲಕ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ. ಮನಪಾ ವ್ಯಾಪ್ತಿಯಲ್ಲಿ ನೀರಿನ ಕೊರತೆ ಉಂಟಾದಾಗ ಇಲ್ಲಿಂದಲೇ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಯೋಜನೆ ರೂಪಿಸಬೇಕಾಗಿದೆ ಎಂದು ಹೇಳಿದರು.

ಉಳ್ಳಾಲದಲ್ಲಿ ಮೀನುಗಾರಿಕೆ ಮಿನಿ ಜೆಟ್ಟಿ ನಿರ್ಮಾಣದ ಯೋಜನೆ ಇದೆ. ಇದರಿಂದ ಸಣ್ಣ ಸಣ್ಣ ಮೀನುಗಾರರಿಗೆ ಅನುಕೂಲವಾಗಲಿದೆ ಎಂದು ನುಡಿದರು.

ಕಡಲ್ಕೊರೆತ ತಡೆಯಲು ಸಮದ್ರ ಬದಿಗೆ ತಡೆಗೋಡೆ ರಚನೆಗೆ ಸಂಬಂಧಿಸಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸಮುದ್ರದ ತೆರೆ ಎಲ್ಲ ಕಡೆ ಒಂದೇ ರೀತಿಯಲ್ಲಿ ಇರುವುದಿಲ್ಲ. ಉಳ್ಳಾಲದಲ್ಲಿ ಈ ಬಾರಿ ಕಡಲ್ಕೊರೆತ ತಡೆಯಲು ಕಲ್ಲುಗಳನ್ನು ಹಾಕಿದ ಪರಿಣಾಮವಾಗಿ 20 ಮನೆಗಳು ಸಮುದ್ರ ಪಾಲಾಗುವುದು ತಪ್ಪಿದೆ ಎಂದರು.

ಮಂಗಳೂರು ವಿವಿಯ ಫಲಿತಾಂಶ ಬಂದಿಲ್ಲ; ಜನಪ್ರತಿನಿಧಿಗಳು ಯಾಕೆ ಮೌನ

ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಯ ಫಲಿತಾಂಶ ಬಾರದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸಮಸ್ಯೆಯಲ್ಲಿದ್ದಾರೆ. ಮುಂದಿನ ಶಿಕ್ಷಣ ಮತ್ತು ಉದ್ಯೋಗ ವಿಚಾರದಲ್ಲಿ ವಿದ್ಯಾರ್ಥಿಗಳು ತೊಂದರೆಯಲ್ಲಿದ್ದಾರೆ.ಆದರೆ ಈ ಬಗ್ಗೆ ಜನಪ್ರತಿನಿಧಿಗಳು ಯಾಕೆ ಮೌನ ವಹಿಸಿದ್ದಾರೆ ಗೊತ್ತಿಲ್ಲ ಎಂದು ಖಾದರ್ ಹೇಳಿದರು.

ನಿವೃತ್ತ ಶಿಕ್ಷಕರಿಗೆ ನಿವೃತ್ತಿ ವೇತನ ಸಿಕ್ಕಿಲ್ಲ. ನಿವೃತ್ತರಿಗೆ ಕೊಡಬೇಕಾದ ಹಣವನ್ನು ಕಟ್ಟಡ ಕಾಮಗಾರಿ ನಿರ್ವಹಿಸಿದ ಗುತ್ತಿಗಾರನಿಗೆ ನೀಡಲಾಗಿದೆ. ಶಿಕ್ಷಕರಿಗೆ ಸಂಬಳ ದೊರೆಯದೆ ಮೂರು ತಿಂಗಳಾಯಿತು. ವಿವಿ ಎ ಗ್ರೇಡ್ ನಿಂದ  ಬಿ ಗ್ರೇಡ್ ಗೆ ಇಳಿದಿದೆ. ಇದರ ಬಗ್ಗೆ ಯಾರೂ ಕೂಡಾ ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಮಂಗಳೂರು ವಿಶ್ವವಿದ್ಯಾನಿಲಯ ಕ್ಯಾಂಪಸ್ ನಲ್ಲಿ ಹಿಂದಿನಿಂದಲೂ ಗಣೇಶೋತ್ಸವ ಆಚರಿಸುತ್ತಾರೆ. ಆದರೆ ಈಗ ಯಾಕೆ ಸಮಸ್ಯೆ ಕಾಣಿಸಿಕೊಂಡಿದೆ. ಅಲ್ಲಿನ ವಿಚಾರದ ಬಗ್ಗೆ ನಿರ್ಧಾರ ಕೈಗೊಳ್ಳಲು ಉಪ ಕುಲಪತಿ ಇದ್ದಾರೆ. ಹೊರಗಿನವರು ತಲೆ ಹಾಕಬೇಕಾದ ಅಗತ್ಯ ಇಲ್ಲ ಎಂದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News