ಕಾಂಗ್ರೆಸ್‌ನ ʼಗ್ಯಾರಂಟಿʼ ಪದವನ್ನು ಕದ್ದು ಈಗ ಬಿಜೆಪಿಯವರು ಮೋದಿ ಗ್ಯಾರಂಟಿ ಅಂತಿದ್ದಾರೆ : ಸಿಎಂ ಸಿದ್ದರಾಮಯ್ಯ

Update: 2024-02-18 06:05 GMT

ಮಂಗಳೂರು: ಕಾಂಗ್ರೆಸ್‌ನ ಗ್ಯಾರಂಟಿ ಪದವನ್ನು ಬಿಜೆಪಿಯವರು ಕದ್ದು ಈಗ ಮೋದಿ ಗ್ಯಾರಂಟಿ ಅಂತಿದ್ದಾರೆ. ನಮ್ಮ ಕಾರ್ಯಕರ್ತರು ಸರಕಾರದ ಗ್ಯಾರಂಟಿ ಯೋಜನೆಗಳನ್ನು ಮನೆಗಳಿಗೆ ತಲುಪಿಸದೇ ಇದ್ದರೆ ಬಿಜೆಪಿಯವರು ನಾವೇ ಮಾಡಿದ್ದು ಅನ್ನುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದ ಅಡ್ಯಾರಿನ ಸಹ್ಯಾದ್ರಿ ಮೈದಾನದಲ್ಲಿ ಶನಿವಾರ ರಾಜ್ಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಬಿಜೆಪಿಯನ್ನು ತೀವ್ರವಾಗಿ ತರಾಟೆಗೈದ ಅವರು, ಬಿಜೆಪಿಯವರು ಹಿಂದೆ ನಮ್ಮ ಗ್ಯಾರಂಟಿ ಯೋಜನೆಗಳು ಜಾರಿ ಆಗಲ್ಲ ಎನ್ನುತ್ತಿದ್ದರು, ಈಗ ನಮ್ಮ ಗ್ಯಾರಂಟಿ ಪದವನ್ನು ಕದ್ದು ಮೋದಿ ಗ್ಯಾರಂಟಿ ಎನ್ನುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್‌ನ ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಸ್ವತಃ ನರೇಂದ್ರ ಮೋದಿಯೇ ಹೇಳಿದ್ದರು. ದಿವಾಳಿ ಆಗಿರುತ್ತಿದ್ದರೆ 3.71 ಕೋಟಿ ರೂ.ಗಳ ಬಜೆಟ್ ಮಂಡಿಸಲು ಆಗುತ್ತಿತ್ತಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ರಾಜ್ಯ ಈಗ ಆರ್ಥಿಕವಾಗಿ ಸುಭದ್ರವಾಗಿದೆ. ಬಿಜೆಪಿ, ಮೋದಿ ಯಾಕೆ ಇಷ್ಟೊಂದು ಸುಳ್ಳು ಹೇಳುತ್ತಿದ್ದಾರೆಂದರೆ ಅವರಲ್ಲಿ ಬೇರೆ ಯಾವ ಬಂಡವಾಳವೇ ಇಲ್ಲ ಎಂದರು.

ತೆರಿಗೆ ಸಂಗ್ರಹದಲ್ಲಿ ದೇಶದಲ್ಲೇ 2ನೇ ದೊಡ್ಡ ರಾಜ್ಯವಾಗಿ 4.30 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹಿಸಿ ಕೇಂದ್ರಕ್ಕೆ ನೀಡುತ್ತಿದ್ದರೂ ನಮ್ಮ ಪಾಲಿನ 50,257 ಕೋಟಿ ರೂ. ಕೊಟ್ಟಿಲ್ಲ. ಕರ್ನಾಟಕಕ್ಕೆ ನರೇಂದ್ರ ಮೋದಿ ಅನ್ಯಾಯ ಮಾಡುತ್ತಿದ್ದಾರೆ. ಇದನ್ನು ಹೇಳಿದರೆ ಬಿಜೆಪಿಯವರಿಗೆ ಯಾಕೆ ಮೈ ಉರಿ? ರಾಜ್ಯದ 7 ಕೋಟಿ ಕನ್ನಡಿಗರ ಹಿತರಕ್ಷಣೆಯ ಬದ್ಧತೆ ನಿಮ್ಮಲ್ಲಿ ಇದ್ದಿದ್ದರೆ ದೆಹಲಿಯಲ್ಲಿ ನಡೆದ ನಮ್ಮ ಚಳವಳಿಯಲ್ಲಿ ಭಾಗವಹಿಸಬೇಕಿತ್ತು. ಕೇಂದ್ರ ಬಿಜೆಪಿ ಸರ್ಕಾರದಿಂದ ಕನ್ನಡಿಗರಿಗೆ ಅನ್ಯಾಯ ಆಗಿದ್ದಷ್ಟೇ ಅಲ್ಲ, ಇಡೀ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಆಗಿದೆ ಎಂದು ಸಿದ್ದರಾಮಯ್ಯ ದೂರಿದರು.

15ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಕ್ಕೆ 5,495 ಕೋಟಿ ರೂ. ಅನುದಾನ, ಬೆಂಗಳೂರು ಅಭಿವೃದ್ಧಿಗೆ ವಿಶೇಷ ಅನುದಾನ ಸೇರಿ 11,495 ಕೋಟಿ ರೂ. ಬರಬೇಕಿತ್ತು. ಆದರೆ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಹೋದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಹಣ ಕೊಡಲಾಗದು ಎಂದು ತಿರಸ್ಕಾರ ಮಾಡಿದ್ದಾರೆ. ರಾಜ್ಯದಿಂದಲೇ ಗೆದ್ದು ಅಧಿಕಾರ ಪಡೆದವರು ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ, ಇದು ನ್ಯಾಯವೇ ಎಂದು ಸಿಎಂ ಪ್ರಶ್ನಿಸಿದರು.

ಸಬ್ ಕಾ ಸಾಥ್, ಸಬ್‌ಕಾ ವಿಕಾಸ್ ಎಂದು ನರೇಂದ್ರ ಮೋದಿ ಹೇಳಿದರೆ, ಟೋಪಿ, ಬುರ್ಖಾ ಹಾಕಿದವರು ಆಫೀಸ್‌ಗೇ ಬರಬೇಡಿ ಎಂದು ಬಿಜೆಪಿ ಶಾಸಕ ಬಸವರಾಜ ಯತ್ನಾಳ್ ಹೇಳುತ್ತಾರೆ. ಇವರು ಹೇಳಿದಂತೆ ಯಾವತ್ತಾದರೂ ನಡೆದು ಕೊಂಡಿದ್ದಾರಾ ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು.

ಕಾರ್ಪೊರೇಟ್ ಬಂಡವಾಳಶಾಹಿಗಳಿಗೆ ಮನಮೋಹನ್ ಸಿಂಗ್ ಸರ್ಕಾರದ ಕಾಲದಲ್ಲಿ ಶೇ.30 ತೆರಿಗೆ ವಿಧಿಸಲಾಗುತ್ತಿ ದ್ದುದನ್ನು ನರೇಂದ್ರ ಮೋದಿ ಶೇ.22.5ಕ್ಕೆ ಇಳಿಸಿದ್ದಾರೆ. ಆದರೆ ಬಡವರ ಮೇಲಿನ ತೆರಿಗೆ ಹೆಚ್ಚಿಸಿದ್ದಾರೆ. ಪೆಟ್ರೋಲ್, ಡೀಸೆಲ್, ಗ್ಯಾಸ್, ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಬಿಜೆಪಿ ಸರಕಾರ ಕೇವಲ ಕಾರ್ಪೊರೇಟ್ ಧನಿಕರ ಪರವಾಗಿದ್ದಾರೆಯೇ ಹೊರತು ಬಡವರ ಪರ ಅಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.

ಬಿಜೆಪಿಯವರನ್ನು ಯಾವತ್ತೂ ನಂಬಬೇಡಿ. ಅವರು ಅಧಿಕಾರಕ್ಕೆ ಬಂದಾಗ ನುಡಿದಂತೆ ನಡೆಯಲ್ಲ. 10 ವರ್ಷ ಹಿಂದೆ ನರೇಂದ್ರ ಮೋದಿ ನೀಡಿದ ಯಾವ ಪ್ರಮುಖ ಭರವಸೆಯನ್ನು ಈಡೇರಿಸಿದ್ದಾರೆ? ಕೇವಲ ಕೋಮುವಾದ, ಧರ್ಮ, ಜಾತಿಗಳ ನಡುವೆ ಬೆಂಕಿ ಹಚ್ಚೋದು, ಭಾವನಾತ್ಮಕ- ಧಾರ್ಮಿಕ ವಿಚಾರಗಳನ್ನು ಇಟ್ಟುಕೊಂಡು ಅಧಿಕಾರ ನಡೆಸುತ್ತಿದ್ದಾರೆ. ಆದರೆ ನಾವು ನುಡಿದಂತೆ ನಡೆದಿದ್ದೇವೆ. ಎಲ್ಲ ಐದೂ ಗ್ಯಾರಂಟಿ ಭರವಸೆ ಈಡೇರಿಸಿದ್ದೇವೆ. ಮಹಿಳೆಯರು ಈವರೆಗೆ 155 ಕೋಟಿ ಬಾರಿ ಉಚಿತವಾಗಿ ಸರಕಾರಿ ಬಸ್ಸುಗಳಲ್ಲಿ ಪ್ರಯಾಣ ಮಾಡಿದ್ದಾರೆ. 1.20 ಕೋಟಿ ಕುಟುಂಬಗಳಿಗೆ 5 ಕೆಜಿ ಅಕ್ಕಿಯ ಹಣವನ್ನು ನೀಡುತ್ತಿದ್ದೇವೆ. 1.17 ಕೋಟಿ ಮಹಿಳೆಯರಿಗೆ 2 ಸಾವಿರ ರೂ ಗೃಹಲಕ್ಷ್ಮೀ ಹಣ ತಲುಪುತ್ತಿದೆ. ಈ ವರ್ಷ 36 ಸಾವಿರ ಕೋಟಿ ರೂ.ಗಳು ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಫಲಾನುಭವಿಗಳ ಕೈ ತಲುಪಿದೆ ಎಂದು ಲೆಕ್ಕ ಹೇಳಿದ ಸಿದ್ದರಾಮಯ್ಯ, ಬಿಜೆಪಿಯವರಿಗೆ ಯಾವತ್ತಾದರೂ ಇಂಥ ಕೆಲಸ ಮಾಡಲು ಸಾಧ್ಯವಾಗಿದಾ ಎಂದು ಪ್ರಶ್ನಿಸಿದರು.



ನಿಮ್ಮನ್ನು ಮಂಗಳೂರು, ಉಡುಪಿ ಜನ ಯಾಕೆ ಗೆಲ್ಲಿಸಬೇಕು ಕಟೀಲ್ ಅವರೇ, ಕರಂದ್ಲಾಜೆ ಅವರೇ, ಬನ್ನಿ ಜಿಲ್ಲೆಯ ಸ್ವಾಭಿಮಾನಿ ಜನತೆಗೆ ಉತ್ತರ ಕೊಡಿ. ನಳಿನ್ ಕುಮಾರ್ ಕಟೀಲ್ ಅವರೇ ಒಂದೇ ಒಂದು ದಿನ ರಾಜ್ಯದ ಪರವಾಗಿ ಪಾರ್ಲಿಮೆಂಟಿನಲ್ಲಿ ಧ್ವನಿ ಎತ್ತಿದಿಯೇನಪ್ಪಾ? ತಾಯಿ ಶೋಭಾ ಕರಂದ್ಲಾಜೆ ನೀವಾದ್ರೂ ರಾಜ್ಯದ ಪರವಾಗಿ ಒಂದೇ ಒಂದು ಮಾತಾಡಿದ್ದೀಯೇನಮ್ಮಾ ತಾಯಿ? ಎಂದು ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News