ಮಾನವ ಬದುಕಿಗೆ ಅಗತ್ಯದ ಸಿದ್ಧಾಂತವನ್ನು ಪ್ರವಾದಿ ಮುಹಮ್ಮದ್ (ಸ) ಪ್ರತಿಪಾದಿಸಿದ್ದರು: ಡಾ. ಅಬ್ದುಲ್ ರಶೀದ್ ಝೈನಿ

Update: 2024-09-14 18:02 GMT

ಮಂಗಳೂರು, ಸೆ.14: ಸಾಮಾಜಿಕ, ರಾಜಕೀಯ, ಧಾರ್ಮಿಕ, ಕೌಟುಂಬಿಕ ಆರ್ಥಿಕ ಸೇರಿದಂತೆ ಮಾನವನ ಬದುಕಿಗೆ ಅಗತ್ಯದ ಸರ್ವ ಸಿದ್ಧಾಂತಗಳನ್ನು ವಿಶ್ವ ಪ್ರವಾದಿ ಪೈಗಂಬರರು ಪ್ರತಿಪಾದಿಸಿದ್ದರು ಎಂದು ಇಸ್ಲಾಮಿಕ್ ವಿದ್ವಾಂಸ ಹಾಗೂ ಎಸ್‌ವೈಎಸ್ ರಾಜ್ಯ ನಾಯಕ ಡಾ .ಎಂಎಸ್‌ಎಂ ಅಬ್ದುಲ್ ರಶೀದ್ ಝೈನಿ ಹೇಳಿದ್ದಾರೆ.

ವಿಶ್ವ ಪ್ರವಾದಿ ಮುಹಮ್ಮದ್ ಪೈಗಂಬರ್ (ಸ.ಅ) ಜನ್ಮದಿನಾಚರಣೆ ಅಂಗವಾಗಿ ಕರ್ನಾಟ ಮುಸ್ಲಿಂ ಜಮಾಅತ್, ಎಸ್‌ವೈಎಸ್, ಎಸ್ ಎಸ್ಎಫ್ (ದ. ಕ. ಜಿಲ್ಲೆ ವೆಸ್ಟ್) ಸಂಘಟನೆಗಳ ಜಂಟಿ ಆಶ್ರಯದಲ್ಲಿ ನಗರದ ಮಿನಿವಿಧಾನ ಸೌಧದ ಬಳಿ ಶನಿವಾರ ಇಲಲ್ ಹಬೀಬ್ ಬೃಹತ್ ಮೀಲಾದ್ ರ್‍ಯಾಲಿಯ ಸಮಾರೋಪದಲ್ಲಿ ಸಂದೇಶ ಭಾಷಣ ಮಾಡಿದರು.

ಮಹಮ್ಮದ್ ಪೈಗಂಬರ್ ಅವರ ಸಿದ್ಧಾಂತ ಕೇವಲ ಆಧ್ಯಾತ್ಮ ಸಿದ್ಧಾಂತವಾಗಿರಲಿಲ್ಲ, ಮಸೀದಿ, ಮದ್ರಸ, ಧಾರ್ಮಿಕ ಆಚಾರ ವಿಚಾರಗಳನ್ನು ಪಸರಿಸುವ ಸಿದ್ಧಾಂತವಾಗಿದ್ದು, ಮಾನವರು ಎದುರಿಸುವ ಎಲ್ಲ ಸಮಸ್ಯೆಗಳಿಗೆ ಅತ್ಯಂತ ಸಮರ್ಪಕವಾಗಿ ಪರಿಹಾರ ನೀಡುವುದು ಅವರ ಸಿದ್ಧಾಂತವಾಗಿತ್ತು ಎಂದು ಹೇಳಿದರು.

ಪ್ರವಾದಿಯವರ ಬೋಧನೆಗಳು ಸಂಘರ್ಷರಹಿತವಾಗಿತ್ತು. ಅವರು ಜಗತ್ತಿಗೆ ಸಹೋದರತೆಯ, ಮಾನವೀಯತೆಯ, ಏಕತೆಯ, ಸೌಹಾರ್ದತೆಯ, ಶಾಂತಿಯ ಸಂದೇಶವನ್ನು ಸಾರಿದ್ದರು ಎಂದು ನುಡಿದರು.

ಮಹಮ್ಮದ್ ಪೈಗಂಬರ್ ಮನುಕುಲದ ಪ್ರವಾದಿಯಾಗಿ ಶಾಂತಿದೂತರಾಗಿ ಜಗತ್ತಿಗೆ ನೀಡಿದ ಕೊಡುಗೆಗಳನ್ನು ನಾವಿಂದು ಅರ್ಥ ಮಾಡಿಕೊಳ್ಳಬೇಕಾಗಿದೆ. ಎಲ್ಲ ಧರ್ಮಗಳನ್ನು ಗೌರವಿಸುವ ಮೂಲಕ ಇವತ್ತು ಸುಂದರ ಸಮಾಜವನ್ನು ನಾವು ಕಟ್ಟಬೇಕಾಗಿದೆ ಎಂದು ಹೇಳಿದರು.

ಪ್ರವಾದಿ ಕೇವಲ ಧರ್ಮಗುರುವಾಗಿರದೆ ಅವರು ಉತ್ತಮ ಆಡಳಿತಗಾರರಾಗಿದ್ದರು. ಮದೀನಾ ಕೇಂದ್ರವಾಗಿ ಸುಂದರ, ಜಾತ್ಯತೀತ ರಾಷ್ಟ್ರವನ್ನು ಅವರು ಕಟ್ಟಿದ್ದರು ಎಂದು ಹೇಳಿದರು. ಜ್ಯೋತಿ ಸರ್ಕಲ್‌ ನಿಂದ ಹೊರಟ ರ್‍ಯಾಲಿ ಮಿನಿ ವಿಧಾನಸೌಧ ಬಳಿ ಕೊನೆಗೊಂಡಿತು.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಸುರತ್ಕಲ್, ಮೂಡಬಿದಿರೆ, ಬಂಟ್ವಾಳ,ಮುಡಿಪು, ದೇರಳಕಟ್ಟೆ, ಉಳ್ಳಾಲ ವಲಯಗಳಿಂದ ವಿವಿಧ ಸ್ಕೌಟ್ ತಂಡಗಳು, ದಫ್ ತಂಡಗಳು, ಭಾಗವಹಿಸಿದ್ದವು.

ಎಸ್‌ವೈಎಸ್ ಇಸಾಬ ಸದಸ್ಯರ ವಿಶೇಷ ತಂಡ ರ್‍ಯಾಲಿಯಲ್ಲಿ ಗಮನ ಸೆಳೆಯಿತು. ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಬಿ.ಎ.ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಅವರು ರ್‍ಯಾಲಿಯ ಸ್ವಾಗತ ಸಮಿತಿಯ ಚೇರ್ಮೆನ್ ಅಬ್ದುಲ್ ಮುತ್ತಲಿಬ್ ಮೂಡಬಿದ್ರೆ ಅವರಿಗೆ ಧ್ವಜ ಹಸ್ತಾಂತರಿಸುವ ಮೂಲಕ ರ್‍ಯಾಲಿಗೆ ಚಾಲನೆ ನೀಡಿದರು.

ರ್‍ಯಾಲಿಯಲ್ಲಿ ಎಸ್‌ವೈಎಸ್ ಸಂಘಟನಾ ಕಾರ್ಯದರ್ಶಿ ಕೆ. ಎಂ ಸಿದ್ದೀಕ್ ಮೋಂಟುಗೋಳಿ, ಕರ್ನಾಟಕ ಮುಸ್ಲಿಂ ಜಮಾತ್‌ನ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹೀಂ ಸಅದಿ ಖತರ್, ಉಪಾಧ್ಯಕ್ಷರಾದ ಆಲಿಕುಂಞಿ ಪಾರೆ ,ಅಶ್ರಫ್ ಸಅದಿ ಮಲ್ಲೂರು, ಕೋಶಾಧಿಕಾರಿ ಎಸ್.ಕೆ.ಖಾದರ್ ಹಾಜಿ ಮುಡಿಪು, ಎಸ್‌ವೈಎಸ್ ಜಿಲ್ಲಾಧ್ಯಕ್ಷ ಇಸ್ಹಾಕ್ ಝುಹ್ರಿ ಕಾನಕೆರೆ, ಎಸ್‌ಎಸ್‌ಎಫ್ ಜಿಲಾಧ್ಯಕ್ಷ ಮನ್ಸೂರ್ ಹಿಮಮಿ ಮರಿಕ್ಕಳ, ಎಸ್‌ಎಸ್‌ಎಫ್ ಜಿಲ್ಲಾಧ್ಯಕ್ಷ ಮನ್ಸೂರ್ ಹಿಮಮಿ ಮೊಂಟೆಪದವು , ಎಸ್‌ಎಸ್‌ಎಫ್ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಅಜ್ಜಲ್ ಕಾವೂರು , ಎಸ್‌ವೈಎಸ್ ರಾಜ್ಯ ನಾಯಕರಾದ ಬದ್ರುದ್ದೀನ್ ಅಝಹರಿ ಕೈಕಂಬ, , ಕಲೀಲ್ ಮಾಲಿಕ್ ಕಾವೂರು, ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ, ಸಿಎಚ್ ಮುಹಮ್ಮದಲಿ ಸಖಾಫಿ ಸುರಿಬೈಲ್, ಎಸ್‌ವೈಎಸ್ ಜಿಲ್ಲಾ ನಾಯಕರಾದ ಹಾಫಿಳ್ ಯಾಕೂಬ್ ಸಅದಿ , ಅಬ್ದುಲ್ ರಝಾಕ್ ಭಾರತ್‌ ಮತ್ತಿತರು ಭಾಗವಹಿಸಿದ್ದರು. ಇಲಲ್ ಹಬೀಬ್ ಮೀಲಾದ್ ರ್‍ಯಾಲಿಯ ಸ್ವಾಗತ ಸಮಿತಿಯ ಕನ್ವಿನರ್ ಮುಹಮ್ಮದ್ ಸಿನಾನ್ ಸಖಾಫಿ ಸ್ವಾಗತಿಸಿ, ವಂದಿಸಿದರು.

ರ್‍ಯಾಲಿಯಲ್ಲಿ ಶಿಸ್ತಿನ ತಂಡವಾಗಿ ಮಂಗಳೂರು ವಲಯ ತಂಡ ಪ್ರಥಮ , ಬಂಟ್ವಾಳ ದ್ವಿತೀಯ, ತೃತೀಯ ಸುರತ್ಕಲ್ ತಂಡ ಪಡೆಯಿತು.








 


 


 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News