ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಕೇರಳಿಗರ ಬಂಧನ
ಮಂಗಳೂರು: ಒರಿಸ್ಸಾದಿಂದ ಮಂಗಳೂರು ಹಾಗೂ ಕೇರಳಕ್ಕೆ ಬೃಹತ್ ಪ್ರಮಾಣದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಕೇರಳದ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ 120 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಕೇರಳದ ವಯನಾಡು ಜಿಲ್ಲೆಯ ಅನೂಪ್ ಎಂ.ಎಸ್(28) ಮತ್ತು ಕಣ್ಣೂರು ಜಿಲ್ಲೆಯ ಲತೀಫ್ ಕೆ.ವಿ (36), ಎಂದು ಗುರುತಿಸಲಾಗಿದೆ.
ಗಾಂಜಾ ಸಾಗಾಟದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಇನ್‌ಸ್ಪೆಕ್ಟರ್ ಶ್ಯಾಮ್‌ಸುಂದರ್ ಹೆಚ್‌ಎಂ ನೇತೃತ್ವದ ಸಿಸಿಬಿ ಪೊಲೀಸರು ತಲಪಾಡಿ ಗ್ರಾಮದ ಪಿಲಿಕೂರು ಎಂಬಲ್ಲಿ ಮಂಗಳವಾರ ಕಾರ್ಯಾಚರಣೆ ನಡೆಸಿದರು.
ಆರೋಪಿಗಳಿಂದ 28 ಲಕ್ಷ ರೂ. ಮೌಲ್ಯದ 120 ಕೆಜಿ ಗಾಂಜಾ, 3 ಮೊಬೈಲ್ ಫೋನ್‌ಗಳು, 4,020 ರೂ. ನಗದು ಹಾಗೂ ಜೀಪು ವಶಪಡಿಸಿಕೊಳ್ಳಲಾಗಿದೆ. ಇವುಗಳಒಟ್ಟು ಮೌಲ್ಯ 35,14,520 ರೂ. ಎಂದು ಅಂದಾಜಿಸಲಾಗಿದೆ.
ಆರೋಪಿಗಳು ಒರಿಸ್ಸಾದಿಂದ ಅಂಧ್ರಪ್ರದೇಶ, ಬೆಂಗಳೂರು ಮೂಲಕ ಗಾಂಜಾವನ್ನು ಕಾರಿನಲ್ಲಿ ಸಾಗಾಟ ಮಾಡುತ್ತಿದ್ದರು. ಗಾಂಜಾವನ್ನು ಕಳ್ಳ ಸಾಗಾಣಿಕೆ ಮಾಡುವ ಸಲುವಾಗಿ ಆರೋಪಿಗಳು ಬೋಲೆರೋ ವಾಹನದ ಹಿಂಬದಿಯ ಢಿಕ್ಕಿಯಲ್ಲಿ ಪ್ರತ್ಯೇಕವಾದ ಒಂದು ಕಬ್ಬಿಣದ ಬಾಕ್ಸ್ ಮಾಡಿಕೊಂಡಿದ್ದರು. ಈ ಗಾಂಜಾ ಮಾರಾಟ/ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ. ಈ ಬಗ್ಗೆ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳ ಪೈಕಿ ಅನೂಪ್ ಎಂಬಾತನ ವಿರುದ್ಧ 2018ರಲ್ಲಿ ಮೈಸೂರು ಜಿಲ್ಲೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ. ಕೇರಳದ ವಯನಾಡು ಜಿಲ್ಲೆಯ ಮೆಪ್ಪಳ್ಳಿ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಸಾಗಾಟ ಪ್ರಕರಣ, ವಯನಾಡು ಜಿಲ್ಲೆ ಕಲ್ಪಟ್ಟ ಪೊಲೀಸ್ ಠಾಣೆಯಲ್ಲಿ 2 ದರೋಡೆ ಪ್ರಕರಣ, 1 ಹಲ್ಲೆ ಪ್ರಕರಣ, ವಯನಾಡು ಜಿಲ್ಲೆಯ ಅಂಬಲವಯಲ್ ಪೊಲೀಸ್ ಠಾಣೆಯಲ್ಲಿ 2 ಕಳವು ಪ್ರಕರಣಗಳು ದಾಖಲಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಎಸ್ಸೈಗಳಾದ ರಾಜೇಂದ್ರ ಬಿ, ನರೇಂದ್ರ, ಸುದೀಪ್, ಶರಣಪ್ಪ ಭಂಡಾರಿ, ಎಎಸ್ಸೈಗಳಾದ ಮೋಹನ್ ಕೆ.ವಿ, ಶೀನಪ್ಪ ಮತ್ತಿತರರು ಪಾಲ್ಗೊಂಡಿದ್ದರು.