ದಾವಣಗೆರೆ| ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಕುಸಿತ; ಎರಡು ಶಾಲೆಗೆ ಬೀಗ

Update: 2023-11-29 13:32 GMT

ಶೂನ್ಯ ದಾಖಲಾತಿ ಹಿನ್ನಲೆಯಲ್ಲಿ ಚನ್ನಗಿರಿ ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಬೀಗ ಹಾಕಿರುವ ಚಿತ್ರ

ದಾವಣಗೆರೆ :ಗುಣಮಟ್ಟದ ಶಿಕ್ಷಣಕ್ಕಾಗಿ ರಾಜ್ಯ ಸರಕಾರ ಕೋಟ್ಯಂತರ ರೂಪಾಯಿ ಅನುದಾನ ವ್ಯಯ ಮಾಡುತ್ತಿದೆ. ಅದರೆ, ಸರಕಾರಿ ಶಾಲೆಗಳಿಗೆ ದಾಖಲಾಗುವ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣವಾಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ.

ಜಿಲ್ಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶೂನ್ಯ ದಾಖಲಾತಿ ಹಿನ್ನಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಎರಡು ಶಾಲೆಗಳಿಗೆ ಬೀಗ ಹಾಕಲಾಗಿದೆ.

ಜಿಲ್ಲೆಯಲ್ಲಿ 2022-23ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 1,06,777 ಮಕ್ಕಳು ದಾಖಲಾಗಿದ್ದರು. 2023-24ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ 99,059 ಮಕ್ಕಳು ದಾಖಲಾಗಿದ್ದಾರೆ. ಇದರಿಂದ 7723ಮಕ್ಕಳು ಸರಕಾರಿ ಶಾಲೆ ತೊರೆದು ಖಾಸಗಿ ಶಾಲೆಯತ್ತ ಮುಖಮಾಡಿದ್ದಾರೆ.

2022-23ನೇ ಸಾಲಿನಲ್ಲಿ ಜಿಲ್ಲೆಯ ಅನುದಾನ ರಹಿತ ಶಾಲೆಗಳ ದಾಖಲಾತಿ -104185 ಮತ್ತು 2023-24 ಈ ಶೈಕ್ಷಣಿಕ ವರ್ಷದ ದಾಖಲಾತಿ 111217 ಈ ವರ್ಷದ ದಾಖಲಾತಿಯಲ್ಲಿ ಹೆಚ್ಚಳ ಕಂಡುಬಂದಿರುವುದು ಅಂಕಿ ಅಂಶಗಳಿಂದ ಗೊತ್ತಾಗಿದೆ.

2023 -24ನೇ ಸಾಲಿಗೆ ಶಾಲಾ ಶಿಕ್ಷಣ ಇಲಾಖೆ ನೀಡಿದ ಮಾಹಿತಿಯಂತೆ ಜಿಲ್ಲೆಯ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ಸಂಖ್ಯೆ 1 ರಿಂದ 10 ರೊಳಗೆ ಇರುವ ಶಾಲೆಗಳ ಸಂಖ್ಯೆ 66 (ಕನ್ನಡ ಮತ್ತು ಉರ್ದು ಮಾಧ್ಯಮ ಸೇರಿ)ಜಿಲ್ಲೆಯಲ್ಲಿ ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಈ ಶಾಲೆಗಳಿಗೂ ಬೀಗ ಬೀಳುವ ಸಾಧ್ಯತೆ ದಟ್ಟವಾಗಿದೆ.

ಎರಡು ಶಾಲೆ ಬಂದ್

ಶೂನ್ಯ ದಾಖಲಾತಿ ಹಿನ್ನಲೆಯಲ್ಲಿ ಜಿಲ್ಲೆಯ ಚನ್ನಗಿರಿ ತಾಲೂಕಿನ ನಾಗೇನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕೊಡಗಿನಕೆರೆ ಕ್ಯಾಂಪ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಂದ್ ಮಾಡಲಾಗಿದೆ. ಉಚಿತ ಪಠ್ಯ ಪುಸ್ತಕ, ಉಚಿತ ಸಮವಸ್ತ್ರ, ಕ್ಷೀರ ಭಾಗ್ಯ, ಅಕ್ಷರ ದಾಸೋಹ, ಮೊಟ್ಟೆ, ಶೇಂಗಾ ಚೆಕ್ಕಿ, ಬಾಳೆಹಣ್ಣು ವಿತರಣೆ ಹೀಗೆ ಹತ್ತು ಹಲವಾರು ಯೋಜನೆಗಳ ಮೂಲಕ ರಾಜ್ಯ ಸರಕಾರ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕಾಗಿ ಅನುದಾನ ವ್ಯಯವಾಗುತ್ತಿದೆ. ಅದರೆ, ಹಲವಾರು ಯೋಜನೆ ಜಾರಿಯಲ್ಲಿದ್ದರು ಸಹ ಸರಕಾರಿ ಶಾಲೆಗಳತ್ತ ವಿದ್ಯಾರ್ಥಿಗಳ ನಿರ್ಲಕ್ಷ್ಯ ಏಕೆ ಶಿಕ್ಷಣ ತಜ್ಞರ ಪ್ರಶ್ನೆಯಾಗಿದೆ.

ಸರ್ಕಾರ ಸರ್ಕಾರಿ ಶಾಲೆಗಳ ಗುಣಮಟ್ಟದ ಶಿಕ್ಷಣಕ್ಕಾಗಿ ಹಲವಾರು ಪ್ರೋತ್ಸಾಹದಾಯಕ ಯೋಜನೆಗಳನ್ನು ಜಾರಿಗೆ ತಂದರು ಕೂಡ ದಾಖಲಾತಿಯಲ್ಲಿ ಹೆಚ್ಚಳ ಕಂಡು ಬಂದಿರುವುದಿಲ್ಲ. 2005 ರ ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ ಪ್ರತಿ ಸಮಯವು ಮಗುವಿನ ಕಲಿಕಾ ಸಮಯವಾಗಿರಬೇಕು ಎಂದು ಹೇಳುತ್ತದೆ. ಅದರೆ, ಶಿಕ್ಷಕರನ್ನು ಬೋಧಕೇತರ ಮತ್ತು ಇಲಾಖೇತರ ಕೆಲಸಗಳ ನಿರ್ವಹಣೆಯಲ್ಲಿ ತೊಡಗಿದ್ದು ಇದು ಬೋಧನೆ ಮತ್ತು ಕಲಿಕೆಯ ಪರಿಣಾಮ ಬೀರುತ್ತಿದ್ದು ಸರಕಾರ ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ.

ದಾಖಲಾತಿ ಹೆಚ್ಚಳಕ್ಕೆ ಕ್ರಮ

ಸರ್ಕಾರ ಗಂಭೀರವಾಗಿ ಈ ಕಡೆ ಚಿಂತನೆ ಮಾಡಿ ಬೋಧನಾ ಕಾರ್ಯಗಳಲ್ಲಿ ಶಿಕ್ಷಕರನ್ನು ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಗಮನಹರಿಸಿ ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯದ ಜೊತೆಗೆ ತಂತ್ರಜ್ಞಾನ ಆಧಾರಿತ ಶಿಕ್ಷಣ, ನವನವೀನ ಬೋಧನ ಪದ್ಧತಿಗಳು,ಶಿಕ್ಷಕರಿಗೆ ತರಬೇತಿ ಆಯೋಜನೆ, ಪಠ್ಯ ಕ್ರಮ ಶ್ರೀಮಂತಗೊಳಿಸಿ ಸರಕಾರಿ ಶಾಲೆಗಳ ಉಳಿವಿನತ್ತ ಸರ್ಕಾರ ಚಿಂತಿಸಬೇಕಾಗಿದೆ.

►ಜಿಲ್ಲೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳ ಸಂಖ್ಯೆ :1066,

►ಸರ್ಕಾರಿ ಪ್ರೌಢಶಾಲೆಗಳ ಸಂಖ್ಯೆ :135

►ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಖ್ಯೆ :4098

►ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಖ್ಯೆ :1280

ದಾಖಲಾತಿ ಕುಸಿತಕ್ಕೆ ಇಂಗ್ಲಿಷ್ ವ್ಯಾಮೋಹ ಕಾರಣ

ಸರಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕಡಿಮೆಯಾಗಲು ಇಂಗ್ಲಿಷ್ ಮಾಧ್ಯಮದ ಮೇಲೆ ಪೋಷಕರ ಒಲವು ಕಾರಣವಾಗಿದೆ. ಅದ್ದರಿಂದ ರಾಜ್ಯ ಸರಕಾರವು ಜಿಲ್ಲೆಯ ಸರಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಒಂದು ಭಾಷೆಯಾಗಿ ಕಲಿಸಲಾಗುತ್ತಿದೆ. 10 ಪಬ್ಲಿಕ್ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತೆರೆಯಲಾಗಿದೆ. 65 ಶಾಲೆಗಳಲ್ಲಿ 1 ನೇ ತರಗತಿಯಿಂದ 5 ರವರೆಗೆ ಇಂಗ್ಲಿಷ್ ಒಂದು ಭಾಷೆಯಾಗಿ ಕಲಿಸಲಾಗುತ್ತಿದೆ.

-ಜಿ.ಕೊಟ್ರೇಶ್

ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ, ದಾವಣಗೆರೆ

ಮೂಲಭೂತ ಸೌಕರ್ಯ ಹೆಚ್ಚಿಸಿ

ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಕೊರತೆ. ವಿಷಯವಾರು ಶಿಕ್ಷಕರ ಕೊರತೆ, ತಂತ್ರಜ್ಞಾನ ಆಧಾರಿತ ಶಿಕ್ಷಣ ನೀಡಬೇಕು

-ಬಸವರಾಜಪ್ಪ

ಪೋಷಕರು, ದಾವಣಗೆರೆ

Writer - ವಾರ್ತಾಭಾರತಿ

contributor

Editor - Thalhath

contributor

Byline - ಪ್ರಕಾಶ್ ಎಚ್. ಎನ್.

contributor

Similar News