ಟಿ.ಕೃಷ್ಣ ಭಟ್

Update: 2024-06-13 17:53 GMT

ಮಂಗಳೂರು: ಅಡ್ಯನಡ್ಕ ಜನತಾ ಪದವಿಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕ ಟಿ.ಕೃಷ್ಣ ಭಟ್ (79) ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ಪುತ್ತೂರಿನ ಪುರುಷರ ಕಟ್ಟೆ ಸಮೀಪದ ಕರ್ಗಲ್ಲುವಿನ ಸ್ವಗೃಹದಲ್ಲಿ ನಿಧನರಾದರು.

ಶಿಕ್ಷಕರಾಗಿ ಮೂರುವರೆ ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಟಿ.ಕೃಷ್ಣ ಭಟ್ ಅವರು ಅಡ್ಯನಡ್ಕ ಜನತಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ, ಬಳಿಕ ಜನತಾಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

ಟಿ.ಕೆ.ಕೃಷ್ಣ ಭಟ್ ಅವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು, ಅಪಾರ ಬಂಧುಬಳಗವನ್ನು ಅಗಲಿದ್ದಾರೆ. 

ಮೂಲತ: ಅಡ್ಯನಡ್ಕದ ತಲಂಜೇರಿಯ ನಿವಾಸಿಯಾಗಿದ್ದ ಟಿ.ಕೃಷ್ಣ ಭಟ್ ಅವರು ಎರಡು ವರ್ಷಗಳಿಂದ ಪುತ್ತೂರಿನ ಪುರುಷರ ಕಟ್ಟೆ ಸಮೀಪದ ಕರ್ಗಲ್ಲುವಿನಲ್ಲಿ ನೆಲೆಸಿದ್ದರು. ಟಿ.ಕೆ.ಮಾಷ್ಟ್ರು ಎಂದೇ ಜನಪ್ರಿಯರಾಗಿದ್ದ ಕೃಷ್ಣ ಭಟ್ಟರು ಯಕ್ಷಗಾನ ಕಲಾವಿದರೂ ಆಗಿದ್ದರು. ಅಡ್ಯನಡ್ಕದಲ್ಲಿ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಸಂಘದ ಸ್ಥಾಪಕರಲ್ಲಿ ಒಬ್ಬರಾ ಗಿದ್ದು ಅನೇಕ ಯಕ್ಷಗಾನ ಬಯಲಾಟ, ತಾಳಮದ್ದಳೆಗಳನ್ನು ಆಯೋಜಿಸಿದ್ದರು. ಮಾತ್ರವಲ್ಲದೆ ವೇಷಧಾರಿಯಾಗಿ, ಅರ್ಥಧಾರಿಯಾಗಿ ಪ್ರಸಿದ್ಧರಾಗಿದ್ದರು. ಶಾಲಾ ವಾರ್ಷಿಕೋತ್ಸವದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ನೃತ್ಯ, ಅರ್ಥಗಾರಿಕೆಯ ತರಬೇತಿ ನೀಡಿ ಯಕ್ಷಗಾನ ಸಂಘಟಿಸುತ್ತಿದ್ದರು. ಯಕ್ಷಗಾನ ಕಲಾವಿದೆಯೂ ಆಗಿರುವ ಪತ್ನಿ ರತ್ನಾವತಿ ಟಿ.ಕೆ. ಭಟ್ ಅವರು ಅಮೈ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ. ಅವರು ಸಂಚಾಲಕಿಯಾಗಿರುವ ಅಡ್ಯನಡ್ಕ ಮಹಿಳಾ ಯಕ್ಷಗಾನ ಸಂಘದ ಬೆನ್ನೆಲುಬಾಗಿದ್ದರು.

ಶಾಲಾ ವಾರ್ಷಿಕೋತ್ಸವದ ವೇದಿಕೆ ನಿರ್ಮಾಣದಲ್ಲಿ ಪರಿಣತರಾಗಿದ್ದ ಮುಖವರ್ಣಿಕೆ ಬರೆಯುವುದರಲ್ಲಿಯೂ ನಿಸ್ಸೀಮ ರಾಗಿದ್ದರು. ಗಮಕ ವಾಚನ ಪ್ರವಚನ ಕಾರ್ಯಕ್ರಮಗಳಲ್ಲಿ ಪ್ರವಚನಕಾರರಾಗಿಯೂ, ಧಾರ್ಮಿಕ ಭಾಷಣಕಾರರಾಗಿಯೂ ಜನಮನ್ನಣೆ ಗಳಿಸಿದ್ದರು. ಅಡ್ಯನಡ್ಕದ ಅಯ್ಯಪ್ಪಸ್ವಾಮಿ ದುರ್ಗಾಪರಮೇಶ್ವರಿ ಭಜನಾ ಮಂದಿರದ ಅಧ್ಯಕ್ಷರಾಗಿ ಹಲವು ವರ್ಷ ಮುನ್ನಡೆಸಿದ್ದರು, ಪ್ರಸ್ತುತ ಅದರ ಗೌರವಾಧ್ಯಕ್ಷರಾಗಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಹಮೀದ್ ಹಾಜಿ
ಭೋಜ ಪೂಜಾರಿ
ಡಾ. ಆಶಾ ಭಟ್