ಕನ್ನಡ ಚಿತ್ರರಂಗ ಬೆಳೆಸಿದ ದ್ವಾರಕೀಶ್
ದ್ವಾರಕೀಶ್ ಎಂಬ ಬೆಳ್ಳಿ ತೆರೆಯ ಹೆಸರಿನಿಂದ ಪರಿಚಿತರಾದ ಬಂಗ್ಲೆ ಶಾಮರಾವ್ ದ್ವಾರಕಾನಾಥ್, ಜನಪ್ರಿಯ ಕಲಾವಿದ ಮತ್ತು ಕನ್ನಡದ ಚಿತ್ರರಂಗವನ್ನು ಹಲವು ದಶಕಗಳ ಕಾಲ ಯಶಸ್ಸಿನ ಹಾದಿಯಲ್ಲಿ ಮುನ್ನಡೆಸಿದ ಯಶಸ್ವಿ ಚಲನಚಿತ್ರ ನಿರ್ಮಾಪಕ - ನಿರ್ದೇಶಕ.
ಮಹಾತ್ವಾಕಾಂಕ್ಷಿ, ವ್ಯವಹಾರ ಚತುರ ಮತ್ತು ಅದ್ದೂರಿತನಕ್ಕೆ ಹೆಸರಾದ ಅವರು ಕನ್ನಡ ಚಲನಚಿತ್ರರಂಗದ ಮೊದಲ ಶೋಮ್ಯಾನ್. ಅವರು ನಿರ್ಮಿಸಿದ ಚಿತ್ರಗಳಲ್ಲಿ ಎದ್ದುಕಾಣುವ ಅಂಶವೆಂದರೆ ನಿರ್ಮಾಣದಲ್ಲಿ ಶ್ರೀಮಂತಿಕೆ, ಮಧುರ ಹಾಡುಗಳ ಸಂಗೀತ, ಮನೆಮಂದಿ ಕುಳಿತು ನೋಡಬಹುದಾದ ಸಾಮಾಜಿಕ ವಸ್ತುಗಳ ಚಿತ್ರಗಳ ನಿರೂಪಣೆ ಜೊತೆಗೆ ವಾಣಿಜ್ಯವಾಗಿ ಯಶಸ್ವಿಯಾಗಲು ಪ್ರೇಕ್ಷಕರ ಕುತೂಹಲ ಕೆರಳಿಸುವ ಅಗತ್ಯ ಅಂಶಗಳ ಅಳವಡಿಕೆ. ಸುಮಾರು ಆರು ದಶಕಗಳ ಚಿತ್ರರಂಗದ ವೃತ್ತಿಬದುಕಿನಲ್ಲಿ ದ್ವಾರಕೀಶ್ ಅವರು ಕನ್ನಡ ಸಿನೆಮಾಜಗತ್ತಿಗೆ ಹಲವಾರು ಸಾರ್ವಕಾಲಿಕ ಯಶಸ್ಸಿನ ಚಿತ್ರಗಳನ್ನು ನೀಡಿದ್ದಾರೆ. ಚಿತ್ರರಂಗದ ಬೆಳವಣಿಗೆಗೆ ಹಲವು ರೀತಿಯಲ್ಲಿ ಕಾಣಿಕೆ ಸಲ್ಲಿಸಿದ್ದಾರೆ. ಅವರು ಜನಪ್ರಿಯ ಕಲಾವಿದ ನಿರ್ಮಾಪಕರಾದರೂ ಅಷ್ಟೇ ವಿವಾದಗಳು ಅವರನ್ನು ಸುತ್ತುವರಿದಿದ್ದವು. ಚಿತ್ರರಂಗದಲ್ಲಿ ಯಶಸ್ಸು ಮತ್ತು ಸೋಲನ್ನು ಸಮಪ್ರಮಾಣದಲ್ಲಿ ಎದುರುಗೊಂಡ ವ್ಯಕ್ತಿ.
ಮೈಸೂರಿನಲ್ಲಿ ಆಟೊಮೊಬೈಲ್ ವ್ಯವಹಾರದಲ್ಲಿ ತೊಡಗಿದ್ದ ದ್ವಾರಕೀಶ್(ಜನನ 19.8.1942) ಅವರ ಚಿತ್ರರಂಗ ಪ್ರವೇಶ ಆಕಸ್ಮಿಕ. ನಟನೆಯಲ್ಲಿ ಯಾವುದೇ ತರಬೇತು ಇರದ ಅವರು ಸೋದರಮಾವ ಹುಣಸೂರು ಕೃಷ್ಣಮೂರ್ತಿ ಅವರು ತಮ್ಮ ಚಿತ್ರ ‘ವೀರಸಂಕಲ್ಪ’(1964) ದಲ್ಲಿ ನೀಡಿದ ಸಣ್ಣ ಪಾತ್ರವೊಂದರ ಮೂಲಕ ಚಿತ್ರರಂಗ ಪ್ರವೇಶಿಸಿದರು.
ನಂತರ ಹುಣಸೂರರ ಸತ್ಯ ಹರಿಶ್ಚಂದ್ರ, ಮದುವೆ ಮಾಡಿ ನೋಡು, ಕನ್ನಿಕಾ ಪರಮೇಶ್ವರಿ ಕಥೆ ಹಾಗೂ ರವಿ ಅವರ ಲಗ್ನಪತ್ರಿಕೆ ಮೊದಲಾದ ಚಿತ್ರಗಳಲ್ಲಿ ನರಸಿಂಹರಾಜು ಅವರ ಜೊತೆ ಸಹ ಹಾಸ್ಯನಟರಾಗಿ ನಿಧಾನವಾಗಿ ಪ್ರೇಕ್ಷಕರು ಗುರುತಿಸುವಷ್ಟು ಕಲಾವಿದರಾಗಿ ಬೆಳೆದರು. ಅವರು ನರಸಿಂಹರಾಜು ಅವರನ್ನು ಅನುಕರಿಸದೆ ಭಿನ್ನವಾದ ಅಭಿನಯದಿಂದ ತಮ್ಮ ಸ್ಥಾನ ಭದ್ರಪಡಿಸಿಕೊಂಡರು. ವ್ಯವಹಾರದಲ್ಲಿ ನಿಪುಣತೆಯಿದ್ದ ದ್ವಾರಕೀಶ್ ಅವರು ಚಿತ್ರನಿರ್ಮಾಣದ ಕಡೆಗೆ ಒಲವು ತೋರಿಸಿ 1966ರಲ್ಲಿ ‘ಮಮತೆಯ ಬಂಧನ’ ಎಂಬ ಚಿತ್ರದ ಸಹನಿರ್ಮಾಪಕರಾಗಿ ಚಿತ್ರ ವ್ಯವಹಾರವನ್ನು ಅರಿತರು. ಬಳಿಕ ರಾಜ್ ಅವರ ಕಾಲ್‌ಶೀಟ್ ಪಡೆದು ದ್ವಾರಕೀಶ್ ಚಿತ್ರ ಸಂಸ್ಥೆಯಡಿ ನಿರ್ಮಿಸಿದ ಮೇಯರ್ ಮುತ್ತಣ್ಣ(1969) ಆ ಕಾಲದ ಭಾರೀ ಹಿಟ್ ಚಿತ್ರವೆನಿಸಿ ಅವರು ಚಿತ್ರನಿರ್ಮಾಣದ ಕಡೆಗೆ ಹೆಚ್ಚು ಗಮನ ಹರಿಸಿದರು.
ಸದಾ ಹೊಸ ಪ್ರಯೋಗಗಳನ್ನು ಧ್ಯಾನಿಸುತ್ತಿದ್ದ ದ್ವಾರಕೀಶ್ ಅವರಿಗೆ ತಾವೇ ನಾಯಕರಾಗಿ ನಟಿಸಲು ನಿರ್ಧರಿಸಿದಾಗ ಚಿತ್ರರಂಗ ಹುಬ್ಬೇರಿಸಿತು. ದೈಹಿಕವಾಗಿ ಎತ್ತರವಿಲ್ಲದ ಕಲಾವಿದನೊಬ್ಬ ನಾಯಕನಟನಾಗಿ ಯಶಸ್ಸು ಸಾಧಿಸುವುದು ಅಸಾಧ್ಯ ಎಂಬ ಜನಪ್ರಿಯ ನಂಬಿಕೆಯಿತ್ತು. ಆದರೆ ತಮಗಿಂತಲೂ ಎತ್ತರವಾದ ನೃತ್ಯನಟಿ ತೆಲುಗಿನ ಜ್ಯೋತಿಲಕ್ಷ್ಮಿಯವರನ್ನು ನಾಯಕಿಯಾಗಿಸಿ ದ್ವಾರಕೀಶ್ ನಟಿಸಿ ನಿರ್ಮಿಸಿದ ಚಿತ್ರ ‘ಕುಳ್ಳ, ಏಜೆಂಟ್ 000’(1972) ಯಶಸ್ಸು ಕಂಡು ಪಂಡಿತರ ನಿರೀಕ್ಷೆಯನ್ನು ಹುಸಿಗೊಳಿಸಿತು. ಅದೇ ಹುರುಪಿನಲ್ಲಿ ಅದೇ ಜೋಡಿಯ ಜೊತೆ ನಿರ್ಮಿಸಿದ ಚಿತ್ರ ‘ಕೌಬಾಯ್ ಕುಳ್ಳ’(193) ಸಹ ಯಶಸ್ಸು ಕಂಡಿತು. ಈ ಎರಡು ಚಿತ್ರಗಳ ಯಶಸ್ಸು ದ್ವಾರಕೀಶ್ ಅವರಿಗೆ ನಟನಾಗಿ, ನಿರ್ಮಾಪಕನಾಗಿ ಭದ್ರ ವಾಗಿ ನಿಲ್ಲಲು ನೆರವಾದವು.
1980 ಮತ್ತು 1990ರ ದಶಕದಲ್ಲಿ ದ್ವಾರಕೀಶ್ ಅವರು ನಟರಾಗಿ ಮತ್ತು ಚಿತ್ರ ನಿರ್ದೇಶಕರಾಗಿ ಅಭೂತಪೂರ್ವ ಯಶಸ್ಸು ಕಂಡರು. ವಿಶೇಷವಾಗಿ ಅವರು ವಿಷ್ಣುವರ್ಧನ್ ಅವರ ಜೊತೆಯಾಗಿ ಅಭಿನಯಿಸಿದ ಚಿತ್ರಗಳು ಜನಮೆಚ್ಚುಗೆ ಪಡೆದವು. ಅವರು ಜೊತೆಯಾಗಿ ನಟಿಸಿದ ಕಳ್ಳ ಕುಳ್ಳ, ಮಕ್ಕಳ ಭಾಗ್ಯ, ಸೊಸೆ ತಂದ ಸೌಭಾಗ್ಯ, ಕಿಟ್ಟು ಪುಟ್ಟು, ಸಿಂಗಾಪುರದಲ್ಲಿ ರಾಜಾ ಕುಳ್ಳ, ಗಲಾಟೆ ಸಂಸಾರ, ಶ್ರೀಮಂತನ ಮಗಳು, ಅಸಾಧ್ಯ ಅಳಿಯ, ಮನೆಮನೆ ಕಥೆ, ಗುರು ಶಿಷ್ಯರು, ಇಂದಿನ ರಾಮಾಯಣ ಮುಂತಾದವು ಬಾಕ್ಸ್ ಆಫೀಸಿನಲ್ಲಿ ಯಶಸ್ಸು ಕಂಡವು.
ಜೊತೆಗೆ ಸಹನಟರಾಗಿ ದ್ವಾರಕೀಶ್ ಅವರಿಗೆ ತೆರೆಯ ಮೇಲೆ ಹೆಚ್ಚಿನ ಸಮಯ ದೊರಕಿದ್ದು ಅವರ ನಟನೆಗೆ ಅವಕಾಶ ಸಿಕ್ಕಿತು. ಇದೇ ಅವಧಿಯಲ್ಲಿ ದ್ವಾರಕೀಶ್ ಅವರು ಸಿಂಗಾಪುರದಲ್ಲಿ ರಾಜಾ ಕುಳ್ಳ ಚಿತ್ರದ ಜೊತೆಗೆ ಮೇಲೆ ಉಲ್ಲೇಖಿಸಿರುವ ಹಲವು ಚಿತ್ರಗಳನ್ನು ನಿರ್ಮಿಸಿದ್ದರು. ಜೊತೆಗೆ ನೀ ಬರೆದ ಕಾದಂಬರಿ ಮೂಲಕ(1985) ಚಿತ್ರ ನಿರ್ದೇಶನಕ್ಕೂ ಇಳಿದ ದ್ವಾರಕೀಶ್ ಅವರು ನೀ ತಂದ ಕಾಣಿಕೆ, ಡ್ಯಾನ್ಸ್ ರಾಜಾ ಡ್ಯಾನ್ಸ್, ಶ್ರುತಿಯಂಥ ಯಶಸ್ವಿ ಚಿತ್ರಗಳಲ್ಲದೆ ಒಟ್ಟು 19 ಚಿತ್ರಗಳನ್ನು ನಿರ್ದೇಶಿಸಿದರು.
ಆದರೆ, ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಚಿತ್ರಗಳನ್ನು ತೆಗೆಯಲು ಹೋದ ಅವರ ಸಾಹಸ ನಷ್ಟದಲ್ಲಿ ಕೊನೆಗೊಂಡದ್ದು ವಿಪರ್ಯಾಸ. ರಜನೀಕಾಂತ್ ಅವರನ್ನು ಹಾಕಿಕೊಂಡು ಅವರು ನಿರ್ಮಿಸಿದ ಅಡತ್ತ ವಾರೀಸು, ಗಂಗ್ವಾ ಮತ್ತು ಆಫ್ರಿಕಾದಲ್ಲಿ ಚಿತ್ರೀಕರಣ ನಡೆಸಿ ಬಹುಭಾಷೆಯಲ್ಲಿ ನಿರ್ಮಿಸಿದ ಆಫ್ರಿಕಾದಲ್ಲಿ ಶೀಲಾ ಚಿತ್ರಗಳು ಅಪಾರವಾದ ನಷ್ಟವನ್ನು ತಂದವು. ಹೀಗೆ ಅಭೂತಪೂರ್ವ ಯಶಸ್ಸು ಮತ್ತು ಸೋಲನ್ನು ಕಂಡ ದ್ವಾರಕೀಶ್ ಅವರಿಗೆ ಸಿನೆಮಾ ಮೋಹ ಮಾತ್ರ ಕಡಿಮೆಯಾಗಲಿಲ್ಲ.
1966ರಿಂದ 2019ರವರೆಗೆ ಸುಮಾರು ಅರವತ್ತು ಚಿತ್ರಗಳ ನಿರ್ಮಾಣದಲ್ಲಿ ಭಾಗಿಯಾಗಿದ್ದ ದ್ವಾರಕೀಶ್ ಅವರು ವಾಣಿಜ್ಯ ಚಿತ್ರಗಳನ್ನೇ ಹೆಚ್ಚು ನಿರ್ಮಿಸಿದರೂ ಆನಂದ ಭೈರವಿಯಂಥ ಕಲಾತ್ಮಕ ಚಿತ್ರದ ನಿರ್ಮಾಣಕ್ಕೂ ಕೈಜೋಡಿಸಿದ್ದರು. ತಮ್ಮ ಚಿತ್ರ ಗಳು ವಿಭಿನ್ನವಾಗಿರಬೇಕು, ಪ್ರೇಕ್ಷಕರಿಗೆ ಹೊಸದನ್ನು ನೀಡಿ ಸೆಳೆಯ ಬೇಕೆಂಬ ಹಂಬಲವಿದ್ದ ಅವರು ಅನೇಕ ಪ್ರಯೋಗಗಳನ್ನು ಮಾಡಿ ದರು. ಆ ನಿಟ್ಟಿನಲ್ಲಿ ಹಲವು ವಿಕ್ರಮಗಳನ್ನು ಸೃಷ್ಟಿಸಿದರು.
ವಿದೇಶಿ ನೆಲದಲ್ಲಿ ಮೊದಲ ಬಾರಿಗೆ ಕನ್ನಡ ಚಿತ್ರವೊಂದರ ಚಿತ್ರೀಕರಣ
ಹಿಂದಿಯ ಕಿಶೋರ್ ಕುಮಾರ್ ಅವರ ಮೂಲಕ ಕನ್ನಡ ಹಾಡಿನ ಗಾಯನ: ಸಿದ್ದಲಿಂಗಯ್ಯ, ಭಾರ್ಗವ ಅವರು ಸ್ವತಂತ್ರ ನಿರ್ದೇಶಕರಾಗಲು ಅವಕಾಶ: ವಿನೋದ್ ರಾಜ್, ಹರ್ಷವರ್ಧನ ಅವರಂಥ ನಟರ ಪರಿಚಯ: ಅನ್ಯಭಾಷೆಗಳ ನಾಯಕಿಯರಿಗೆ ಅವಕಾಶ: ಶ್ರುತಿ , ಸುನೀಲ್ ಅವರ ವೃತ್ತಿ ಬದುಕಿಗೆ ಬೆಂಬಲ: ಹೀಗೆ ಹಲವು ದಾಖಲೆಗಳು ಅವರ ಹೆಸರಲ್ಲಿವೆ. ಸುಮಾರು ನಾಲ್ಕು ದಶಕಗಳಿಂದ ಕನ್ನಡದ ನಾಲ್ಕು ತಲೆಮಾರಿನ ಕಲಾವಿದರು ಮತ್ತು ತಂತ್ರಜ್ಞರ ಜೊತೆ ಭಾಗಿಯಾಗಿದ್ದ ದ್ವಾರಕೀಶ್ ಕನ್ನಡದ ಹಳೆಯ ತಲೆಮಾರಿನ ಕ್ರಿಯಾಶೀಲತೆಯ ಪ್ರತಿನಿಧಿಯಂತಿದ್ದರು.
ರಾಜ್, ಉದಯ್, ಕಲ್ಯಾಣ್, ರಾಜೇಶ್, ಶ್ರೀನಾಥ್ ಗಂಗಾಧರ್ ಅವರಿಂದ ಹಿಡಿದು ವಿಷ್ಣುವರ್ಧನ್ ಶಿವರಾಜ್ ಕುಮಾರ್‌ವರೆಗೆ, ಹುಣಸೂರು ಅವರಿಂದ ಕೆ.ಎಂ.ಚೈತನ್ಯರವರೆಗೆ ದ್ವಾರಕೀಶ್‌ರ ವೃತ್ತಿ ಸಂಬಂಧ ಹಬ್ಬಿತ್ತು. ತಮಿಳಿನ ರಜನೀಕಾಂತ್‌ರಿಂದ ಹಿಂದಿಯ ಶಬನಾ ಅಝ್ಮಿಯ ವರೆಗೆ ಅವರ ಭಾರತೀಯ ಚಿತ್ರ ನಂಟು ಹರಡಿತ್ತು. ಅನೇಕ ಕಲಾವಿದರನ್ನು ಪರಿಚಯಿಸಿದ, ಅನೇಕ ಕಲಾವಿದರ ವೃತ್ತಿ ಬದುಕು ಉಜ್ವಲವಾಗಲು ಕಾರಣರಾದ ದ್ವಾರಕೀಶ್‌ರಿಗೆ ತಮ್ಮ ಮಕ್ಕಳಾದ ಅಭಿಷೇಕ್ ಮತ್ತು ಗಿರಿಯವರನ್ನು ನಾಯಕ ನಟರಾಗಿ ನಿಲ್ಲಿಸಲು ಸಾಧ್ಯವಾಗದೇ ಹೋದದ್ದು ವಿಪರ್ಯಾಸಗಳಲ್ಲಿ ಒಂದು.
ಕನ್ನಡ ಚಲನಚಿತ್ರರಂಗಕ್ಕೆ ರೀಮೇಕ್ ಪಿಡುಗು ಹಬ್ಬಲು ಪ್ರಮುಖರೆಂದು ದ್ವಾರಕೀಶ್ ರ ಮೇಲೆ ಆರೋಪವಿದೆ, ನಿಜ ಆದರೂ ಮೇಯರ್ ಮುತ್ತಣ್ಣ, ಆನಂದ ಭೈರವಿಯಂಥ ಚಿತ್ರಗಳನ್ನು, ಗುರು ಶಿಷ್ಯರು, ಆಪ್ತಮಿತ್ರದಂಥ ಸಾರ್ವಕಾಲಿಕ ಯಶಸ್ಸಿನ ಚಿತ್ರಗಳನ್ನು ನೀಡಿದ ಕನ್ನಡಕ್ಕೆ ಸಿದ್ದಲಿಂಗಯ್ಯ ಮತ್ತು ಭಾರ್ಗವರನ್ನು ಕೊಟ್ಟ ಅವರ ಕಾಣಿಕೆ ಕನ್ನಡ ಚಿತ್ರರಂಗದ ಅಭಿವೃದ್ಧಿಯಲ್ಲಿ ಸಣ್ಣ ಕಾಣಿಕೆಯಂತೂ ಅಲ್ಲ.