ಕಾದಂಬರಿ ಪ್ರಕಾರವೇ ಮುಗ್ಧತೆಯ ಮ್ಯೂಸಿಯಂ!

‘ಮ್ಯೂಸಿಯಂ ಆಫ್ ಇನ್ನೊಸೆನ್ಸ್’ ಕಾದಂಬರಿ ಓದಿ, ಅದರ ರಮ್ಯಲೋಕದಲ್ಲಿ ಮುಳುಗಿ ತೇಲುತ್ತಿದ್ದ ಕಾಲದಲ್ಲೇ ಕುವೆಂಪು ವಿಶ್ವವಿದ್ಯಾಲಯದ ಸೆಮಿನಾರ್ ಮುಗಿಸಿ, ಶಿವಮೊಗ್ಗೆಗೆ ಹೋಗುವ ಹಾದಿಯಲ್ಲಿ ಗೆಳೆಯರು, ‘ಇಲ್ಲೊಂದು ಹಿಸ್ಟರಿ ಮ್ಯೂಸಿಯಂ ಇದೆ’ ಎಂದರು. ಮ್ಯೂಸಿಯಂ ಎಂದ ತಕ್ಷಣ ಹುಟ್ಟಿದ ಪುಳಕದಲ್ಲಿ ಅದರ ವಿವರ ಓದುತ್ತಿರುವಂತೆ ಅಚ್ಚರಿಯಾಯಿತು! ಅನೇಕ ಸಲ ಘಟನೆಗಳು, ಸಾಹಿತ್ಯಕೃತಿಗಳ ವಿವರಗಳೆಲ್ಲ ಮರೆತು ಹೋಗಿ, ಅವುಗಳ ಕೇಂದ್ರ ಭಾವವಷ್ಟೇ ನಮ್ಮ ಆಳದಲ್ಲಿ ಉಳಿಯುತ್ತದಲ್ಲವೆ? ಶಿವಮೊಗ್ಗೆಗೆ ಹನ್ನೆರಡು ಕಿಲೋಮೀಟರ್ ದೂರವಿರುವ ಲಕ್ಕಿನಕೊಪ್ಪ ಸರ್ಕಲ್‌ನಲ್ಲಿರುವ ‘ಅಮೂಲ್ಯ ಶೋಧ’ ಮ್ಯೂಸಿಯಂನ ಹಿನ್ನೆಲೆಯಲ್ಲಿರುವ ಕೇಂದ್ರ ಭಾವವಷ್ಟೇ ನನ್ನ ಮನಸ್ಸಿನಲ್ಲಿ ಗಾಢವಾಗಿ ಉಳಿದಿದೆ

Update: 2024-03-02 07:38 GMT

ಈಕಾದಂಬರಿಯ ನಿರೂಪಕ-ನಾಯಕ ಕೆಮಾಲ್ ತನ್ನ ಪ್ರಿಯತಮೆ ಎಸೆದ ಚಾಕಲೆಟ್ ಕವರ್, ಆಕೆ ಎಂದೋ ಟೀ ಕುಡಿದಿದ್ದ ಕಪ್, ಹ್ಯಾಂಡ್ ಕರ್ಚೀಫ್, ಸೋಡಾ ಬಾಟಲ್, ಪೆನ್ಸಿಲ್ ಹೀಗೆ ಒಂದೊಂದಾಗಿ ಅವಳ ವಸ್ತುಗಳನ್ನು ಎತ್ತಿಕೊಂಡು ಜೇಬಿಗೆ ಇಳಿಬಿಟ್ಟುಕೊಳ್ಳುತ್ತಿರುವಾಗಲೇ ನನಗೆ ಹೊಳೆದು ಹೋಯಿತು: ಇದು ಈ ಕಾಲದ ಮಹಾಪ್ರತಿಭಾಶಾಲಿ ಕಾದಂಬರಿಕಾರ ಒರಾನ್ ಪಾಮುಕ್ ಕೊಡಲಿರುವ ಕಾದಂಬರಿಯ ಹೊಸ ವ್ಯಾಖ್ಯಾನ! ಕಾದಂಬರಿ ಎಂದರೆ ಮುಗ್ಧತೆಯ ಮ್ಯೂಸಿಯಂ! ‘ಮ್ಯೂಸಿಯಂ ಆಫ್ ಇನ್ನೊಸೆನ್ಸ್’ ಎಂಬ ಕಾದಂಬರಿಯ ಹೆಸರು ಕೂಡ ಅದನ್ನೇ ಸೂಚಿಸುತ್ತಿದೆ. ಅವತ್ತಿನಿಂದ ಕಾದಂಬರಿ ಪ್ರಕಾರವೇ ಮುಗ್ಧತೆಯ ಮ್ಯೂಸಿಯಂ ಎಂಬುದು ನನ್ನ ನೆಚ್ಚಿನ ವ್ಯಾಖ್ಯಾನವಾಗಿಬಿಟ್ಟಿತು. ಕಾಲದ ಓಟದಲ್ಲಿ ಪೂರ್ಣವಾಗಿ ನಾಶವಾಗದ ಮುಗ್ಧತೆಯ ರಕ್ಷಕಿಯಾಗಿ ಕಾದಂಬರಿ ಕೆಲಸ ಮಾಡುತ್ತಿರುತ್ತದೆ. ಮುಗ್ಧತೆಯನ್ನು ರಕ್ಷಿಸಲು ಅಗತ್ಯವಾದ ವ್ಯವಧಾನವೂ ಕಾದಂಬರಿ ಪ್ರಕಾರಕ್ಕಿದೆ; ಇಲ್ಲಿ ಕಾಲ ದೇಶಗಳ ವ್ಯಾಪ್ತಿ ಎಷ್ಟು ಬೇಕಾದರೂ ಹಿಗ್ಗಬಲ್ಲಷ್ಟು ವಿಸ್ತಾರವಿದೆ. ಈ ದೃಷ್ಟಿಯಿಂದ ಕೂಡ ಕಾದಂಬರಿಯೇ ಮುಗ್ಧತೆಯ ಕಾಯಂ ಮ್ಯೂಸಿಯಂ!

ಟರ್ಕಿಯ ಇಸ್ತಾಂಬುಲ್ ನಗರದಲ್ಲಿ ನೆಲೆಸಿರುವ ಖಾರಾನ್ ಪಾಮುಕ್ ಬರೆದ ‘ಮ್ಯೂಸಿಯಂ ಆಫ್ ಇನ್ನೊಸೆನ್ಸ್’ ಎಂಬ ಅದ್ಭುತ ಪ್ರಣಯ ಕಾದಂಬರಿಯಲ್ಲಿ ಮೂಡಿದ ಈ ಹೊಸ ವ್ಯಾಖ್ಯಾನ ಬರುವ ಮೊದಲು, ಹಲವು ದಶಕಗಳ ಕೆಳಗೆ ಇಂಗ್ಲಿಷ್ ಕಾದಂಬರಿಕಾರ ಡಿ.ಎಚ್. ಲಾರೆನ್ಸ್, ಬದಲಾಗುತ್ತಾ ಹೋಗುವ ಜೀವಂತ ಸಂಬಂಧಗಳ ಕಾಮನ ಬಿಲ್ಲು- ಕಾದಂಬರಿ ಎಂದಿದ್ದ. ಇದು ನನ್ನ ಪ್ರಿಯವಾದ ಕಾದಂಬರಿ ವ್ಯಾಖ್ಯಾನವಾಗಿತ್ತು. ಇನ್ನೂರು ವರ್ಷಗಳ ಕೆಳಗೆ ಪಶ್ಚಿಮದಲ್ಲಿ ಕಾದಂಬರಿ ವಿಕಾಸಗೊಳ್ಳುತ್ತಿದ್ದ ಕಾಲದಲ್ಲಿ ಅದನ್ನು ‘ಪಾಕೆಟ್ ಥಿಯೇಟರ್’ ಎನ್ನುತ್ತಿದ್ದರು. ಕುವೆಂಪು ಇದನ್ನು ಇನ್ನಷ್ಟು ಚಿತ್ರಕಗೊಳಿಸಿ ‘ಕಾದಂಬರಿ ಕರತಲ ರಂಗಭೂಮಿ’ ಎಂದು ‘ಕಾನೂರು ಹೆಗ್ಗಡಿತಿ’ಯ ಮುನ್ನುಡಿಯಲ್ಲಿ ಬರೆದರು. ಕುವೆಂಪು ಬಣ್ಣನೆಯನ್ನು ಮೊದಲ ಸಲ ಓದಿದಾಗ ‘ಕರತಲ’ಕ್ಕೆ ಅಕ್ಕಮಹಾದೇವಿಯ ‘ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ ಚೆನ್ನಮಲ್ಲಿಕಾರ್ಜುನಾ’ ಎಂಬ ವಚನ ಕೂಡ ಕನೆಕ್ಟಾಗಿ ಥ್ರಿಲ್ಲಾಗಿತ್ತು.

ಕಾದಂಬರಿ ಕುರಿತ ಹಳೆಯ ವ್ಯಾಖ್ಯಾನಗಳನ್ನೆಲ್ಲ ಹೊಡೆದೋಡಿಸುವಂತೆ ಇಪ್ಪತ್ತೊಂದನೆಯ ಶತಮಾನದಲ್ಲಿ ಪಾಮುಕ್ ಕೊಟ್ಟ ಕಾದಂಬರಿ ವ್ಯಾಖ್ಯಾನ ಈಚಿನ ವರ್ಷಗಳಲ್ಲಿ ನನ್ನಲ್ಲಿ ಗಾಢವಾಗಿ ಉಳಿದುಬಿಟ್ಟಿದೆ. ‘ಮ್ಯೂಸಿಯಂ ಆಫ್ ಇನ್ನೊಸೆನ್ಸ್’ ಕಾದಂಬರಿಯ ಸಾರಾಂಶ ಕೊಟ್ಟರೆ ಅದು ಎಲ್ಲ ಸಾರಾಂಶಗಳ ಹಾಗೆ ಬಡವಾಗುತ್ತದೆ. ಈ ಕಾದಂಬರಿ ಓದದಿರುವವರಿಗೆ ಇದರ ಪುಟ್ಟ ಹಂದರ:

ಕಾದಂಬರಿಯ ನಾಯಕ ಕೆಮಾಲ್ ಬೇ, ಸಿಬೆಲ್ ಎಂಬ ಸುಂದರಿಯನ್ನು ಮದುವೆಯಾಗಲಿದ್ದಾಗ ತನ್ನ ಸಂಬಂಧಿ, ಬಡಹುಡುಗಿ, ಫುಸುನ್ ಬಗ್ಗೆ ಮೋಹ ಹುಟ್ಟುತ್ತದೆ. ಅಪಾರ್ಟ್‌ಮೆಂಟೊಂದರಲ್ಲಿ ಕೆಮಾಲ್-ಫುಸುನ್ ತೀವ್ರ ಪ್ರೇಮ ನಡೆಯತೊಡಗುತ್ತದೆ. ತನ್ನ ನರನಾಡಿಗಳಲ್ಲಿ ಫುಸುನ್ ಆವರಿಸಿರುವಾಗ ಕೆಮಾಲ್‌ಗೆ ಸಿಬೆಲ್ ಜೊತೆ ಲೈಂಗಿಕ ಸಂಬಂಧ ಅಸಾಧ್ಯವಾಗುತ್ತದೆ. ಮದುವೆಯ ನಿಶ್ಚಿತಾರ್ಥದ ಉಂಗುರ ಮರಳಿಸಿ, ಸಿಬೆಲ್ ಬೇರೊಬ್ಬನನ್ನು ಮದುವೆಯಾಗಲು ಹೊರಟಾಗ ಕೆಮಾಲ್ ನಿರಾಳನಾಗುತ್ತಾನೆ. ಆದರೆ ಕೆಮಾಲ್ ಮತ್ತೆ ಹುಡುಕಿ ಹೊರಟ ಫುಸುನ್ ಊರು ಬಿಟ್ಟು ದೂರದ ನಾಡಿಗೆ ಹೊರಟು ಹೋಗಿದ್ದಾಳೆ.

ಕೆಲ ಕಾಲಾನಂತರ ಫುಸುನ್ ಮರಳಿ ಬರುತ್ತಾಳೆ. ನಟಿಯಾಗುವ ಅವಳ ಕನಸಿಗೆ ನೀರೆರೆದ ಚಿತ್ರಕಥಾಲೇಖಕನ ಜೊತೆ ಅವಳ ಮದುವೆಯಾಗಿದೆ. ಆದರೇನಂತೆ! ಕೆಮಾಲ್ ಸುಮ್ಮನೆ ಫುಸುನ್ ಸಾನ್ನಿಧ್ಯದಲ್ಲಿದ್ದರೆ ಸಾಕೆಂದು ಚಡಪಡಿಸುತ್ತಾನೆ. ಪಾಪಪ್ರಜ್ಞೆ, ಅವಳನ್ನು ಕಳೆದುಕೊಂಡ ನೋವು ಎರಡೂ ಕೂಡಿ, ಕಾತರ ಹೆಚ್ಚಾಗಿ, ಕೆಮಾಲ್ ತೀವ್ರ ಪ್ರೇಮ ಹುಚ್ಚಾಗಿ ಹಬ್ಬುತ್ತದೆ. ಫುಸುನ್‌ಗೆ ಸಂಬಂಧಿಸಿದ ಎಲ್ಲ ವಸ್ತುಗಳನ್ನೂ ಸಂಗ್ರಹಿಸಲು ಶುರು ಮಾಡುತ್ತಾನೆ.

ಏಳುನೂರೈವತ್ತು ಪುಟಗಳ ಕಾದಂಬರಿ ಮುಗಿಯಲು ನೂರೈವತ್ತು ಪುಟಗಳಿರುವಾಗ ಫುಸುನ್ ಕಾರ್ ಡ್ರೈವಿಂಗ್ ಕಲಿಯಲು ಹೊರಟ ತಕ್ಷಣ ನನ್ನ ಕತೆಗಾರ ಮನಸ್ಸು ಫುಸುನ್ ತೀರಿಕೊಳ್ಳುತ್ತಾಳೆ ಎಂದು ಬೆಚ್ಚಿತು; ಬೆಚ್ಚಿದ ಮನಸ್ಸು ಕಾದಂಬರಿ ಓದುವುದನ್ನೇ ಮುಂದೂಡುವಂತೆ ತಾಕೀತು ಮಾಡತೊಡಗಿತು. ಬರಬರುತ್ತಾ ಕಾದಂಬರಿಯ ರೊಮ್ಯಾಂಟಿಕ್ ಲೋಕ ಹೇಗೆ ನನ್ನೊಳಗಿನ ರಮ್ಯಲೋಕವನ್ನು ಆಕ್ರಮಿಸಿಕೊಂಡಿತೆಂದರೆ, ಈ ಕಾದಂಬರಿ ಯನ್ನು ಓದಿ ಮುಗಿಸಲೇಬಾರದು ಅನ್ನಿಸತೊಡಗಿತು. ಕಾದಂಬರಿಯೊಂದನ್ನು ಹೀಗೆ ಓದಿಕೊಂಡರೆ ಮಾತ್ರ ಅದು ಕಾದಂಬರಿಯ ಅನುಭವ ಹೀರಿಕೊಳ್ಳುವ ಪಯಣ; ಇಲ್ಲದಿದ್ದರೆ ಆ ಪಯಣವೇ ವ್ಯರ್ಥ ಅನ್ನಿಸಿತು.

ಕಾದಂಬರಿ ಓದುವ ಹಲವರಿಗೆ ಇಂಥ ಅನುಭವವಾಗಿ, ಅವರು ನೋಡುವ ನೋಟವೇ ಬದಲಾಗಿರಬಹುದು. ಸಾಹಿತ್ಯದ ಮೇಡಂ, ಮೇಷ್ಟ್ರುಗಳಿಗೆ ತಂತಮ್ಮ ಓದಿನಲ್ಲಿ ಈ ಥರದ ಅನುಭವವಾಗಿದ್ದರೆ, ಕ್ಲಾಸ್ ರೂಮಿನ ವಾತಾವರಣವೇ ‘ಛಾರ್ಜ್’ ಆಗತೊಡಗುತ್ತದೆ! ಆಗ ಕೃತಿಯ ಅನುಭವ ತೀವ್ರವಾಗಿ ಹುಡುಗ, ಹುಡುಗಿಯರಿಗೆ ತಲುಪತೊಡಗುತ್ತದೆ; ‘ಅನ್ನಾಕರೆನಿನಾ’, ‘ಲವ್ ಇನ್ ದ ಟೈಮ್ ಆಫ್ ಕಾಲರಾ’ ಥರದ ಅನನ್ಯ ಪ್ರೇಮ ಕಾದಂಬರಿಗಳನ್ನು ಟೀಚ್ ಮಾಡುವಾಗ ಉಂಟಾದ ನನ್ನ ಕ್ಲಾಸ್ ರೂಂ ಅನುಭವದಿಂದ ಈ ಮಾತು ಹೇಳುತ್ತಿರುವೆ. ಇಂಥ ಕಾದಂಬರಿಗಳು ನಮ್ಮೊಳಗೆ ಇರುವ, ಮುದುಡಿ ಮಲಗಿರುವ ಮುಗ್ಧಲೋಕವನ್ನು ಮೆಲ್ಲಗೆ ತಟ್ಟಿ ಮೇಲೇಳಿಸುತ್ತವೆ; ನಾವು ಕಾದಂಬರಿಯ ಪಾತ್ರಗಳ ಮುಗ್ಧ ರಮ್ಯಲೋಕದ ಸಹಪಾತ್ರಗಳಾಗುತ್ತೇವೆ. ಕಾದಂಬರಿ ಎಂಬ ಮುಗ್ಧತೆಯ ಮ್ಯೂಸಿಯಂನಲ್ಲಿ ವಿಹರಿಸುವ ದಣಿವಿರದ ಪಯಣಿಗರಾಗುತ್ತೇವೆ; ನಮ್ಮ ಮುಗ್ಧತೆ ಅರಳತೊಡಗುತ್ತದೆ.

‘ಮ್ಯೂಸಿಯಂ ಆಫ್ ಇನ್ನೊಸೆನ್ಸ್’ ಕಾದಂಬರಿಯ ಫುಸುನ್ ಕೊನೆಗೂ ಕಾರ್ ಡ್ರೈವ್ ಮಾಡುತ್ತಾ ತೀರಿಕೊಳ್ಳುತ್ತಾಳೆ. ಚಿರವಿರಹಿ ಕೆಮಾಲ್ ತನ್ನ ಪ್ರಿಯ ಸಖಿಯ ನೆನಪಿನ ಮನೆಯನ್ನೇ ಮ್ಯೂಸಿಯಂ ಮಾಡುತ್ತಾನೆ; ಅಲ್ಲಿ ಅವಳ ವಸ್ತುಗಳನ್ನು, ಅವಳ ನೆನಪಿಗೆ ಸಂಬಂಧಿಸಿದ ವಸ್ತುಗಳನ್ನು ಜೋಡಿಸಿಡುತ್ತಾನೆ. ಶಹಜಹಾನ್ ಕಟ್ಟಿದ ತಾಜ್‌ಮಹಲ್ ಕತೆ ನಮಗೆ ನೆನಪಾದರೆ, ಕೆಮಾಲ್ ಮಾಡಿದ ಮ್ಯೂಸಿಯಂ ಹಿಂದಿರುವ ತೀವ್ರ ಮೋಹ ಕೂಡ ಅರ್ಥವಾಗುತ್ತದೆ. ಇದರ ಜೊತೆಗೆ, ಬೇಂದ್ರೆಯ ‘ಮಮತಾಜಳನು ಹುಗಿದು ತಾಜಮಹಲನು ಕಟ್ಟಿ ನಿಜ ದುಃಖ ಮರೆಸಬಹುದೆ?’ ಎಂಬ ರುದ್ರಗೀತ ಗುಂಗಾಗಿ ಕಾಡಿದರೆ, ಈ ಕಾದಂಬರಿಯ ರುದ್ರ-ರಮ್ಯ ದುಃಖ ನಮ್ಮ ನರನಾಡಿಗಳಲ್ಲಿ ಹಬ್ಬಿಕೊಳ್ಳತೊಡಗುತ್ತದೆ.

ಮುಂದೊಮ್ಮೆ ತನ್ನ ಇಡೀ ಪ್ರಣಯ-ವಿರಹ-ಯಾತನೆ- ಹುಡುಕಾಟಗಳ ಕಥಾನಕವನ್ನು ಕೆಮಾಲ್ ತನ್ನ ದೂರದ ಸಂಬಂಧಿ, ಕಾದಂಬರಿಕಾರ ಒರಾನ್ ಪಾಮುಕ್‌ಗೆ ಹೇಳುತ್ತಾನೆ. ಒರಾನ್ ಅದನ್ನು ಕೆಮಾಲ್ ಭಾಷೆ, ಮೂಡುಗಳಲ್ಲೇ ನಿರೂಪಿಸುತ್ತಾನೆ. ಇದು ಕೂಡ ಕಥಾತಂತ್ರವಿರಬಹುದು. ಕೆಮಾಲ್ ರೂಪಿಸಹೊರಡುವ ಮ್ಯೂಸಿಯಂನಲ್ಲಿ ಒರಾನ್ ಕೂಡ ತೊಡಗುತ್ತಾನೆ. ಗತಿಸಿದ ಬದುಕಿನ ಜೀವಂತ ನೆನಪುಗಳ ತಂಗುದಾಣವಾದ ಕಾದಂಬರಿಯೂ, ಗತಕಾಲದ ನೆನಪುಗಳ ಸಂಗ್ರಹವಾದ ಮ್ಯೂಸಿಯಮ್ಮೂ ಒಂದರೊಡನೊಂದು ಬೆರೆಯುತ್ತವೆ! ಎರಡು ಪ್ರಕಾರಗಳ ಈ ಅದ್ಭುತ ಬೆರೆಯುವಿಕೆ ಈ ಕಾದಂಬರಿಯ ಮಾಸ್ಟರ್ ಸ್ಟ್ರೋಕ್!

‘ಕಾದಂಬರಿ ಯಾವಾಗ ಮುಗಿಯುತ್ತೆ’ ಎನ್ನುತ್ತಾನೆ ಕೆಮಾಲ್. ‘ನಿನ್ನ ಮ್ಯೂಸಿಯಂ ಮುಗಿದ ತಕ್ಷಣ’ ಎನ್ನುತ್ತಾನೆ ಒರಾನ್. ಇದು ಅವರ ನಿತ್ಯದ ಪ್ರಶ್ನೋತ್ತರ! ಕಾದಂಬರಿಯ ಕೊನೆಗೆ ಕೆಮಾಲ್ ಬೀದಿದೀಪದ ಬೆಳಕಿನಲ್ಲಿ ತನ್ನ ಜೇಬಿನಿಂದ ಫೋಟೊವೊಂದನ್ನು ತೆಗೆದು ತೋರಿಸುತ್ತಾ ಕೇಳುತ್ತಾನೆ: ‘ಲವ್ಲಿಯಾಗಿದಾಳೆ, ಅಲ್ವಾ?’

ಕಥಾನಾಯಕನೂ, ಕಾದಂಬರಿಕಾರನೂ ಫುಸುನ್ ಚಿತ್ರವನ್ನು ಕಣ್ತುಂಬಿಕೊಳ್ಳುತ್ತಾರೆ.

‘ಈ ಫೋಟೊನ ನಿನ್ನ ಮ್ಯೂಸಿಯಂನಲ್ಲಿಡು ಕೆಮಾಲ್ ಬೇ’ ಎನ್ನುತ್ತಾನೆ ಒರಾನ್.

ಈ ಫೋಟೊವನ್ನು ಮಾತ್ರ ಮ್ಯೂಸಿಯಂನಲ್ಲಿಡದೆ ತನ್ನ ಜೇಬಿನಲ್ಲಿಟ್ಟುಕೊಳ್ಳುವ ಕೆಮಾಲ್ ಹೇಳುತ್ತಾನೆ: ‘ಒರಾನ್ ಬೇ, ನಿನ್ನ ಪುಸ್ತಕದಲ್ಲಿ ನನ್ನ ಕೊನೆಯ ಮಾತು ಇದೇ ಆಗಿರಬೇಕು: ‘ನಾನು ಅತ್ಯಂತ ಆನಂದದಿಂದ ಜೀವಿಸಿದೆ. ಇದು ಎಲ್ಲರಿಗೂ ತಿಳಿದಿರಲಿ.’

ಕಾದಂಬರಿಯ ಕೆಮಾಲ್ ತನ್ನ ಪ್ರಿಯಸಖಿಯ ವಸ್ತುಗಳನ್ನು ಒಟ್ಟುಗೂಡಿಸಿ ಮಾಡಿದ ಮ್ಯೂಸಿಯಂ ಥರದ ಮ್ಯೂಸಿಯಂನ್ನೇ ಮುಂದೆ ಒರಾನ್ ಪಾಮುಕ್ ಟರ್ಕಿಯ ಇಸ್ತಾಂಬುಲ್ ನಗರದಲ್ಲಿ ಮಾಡಿದ. ಈ ಸುದ್ದಿ ಓದಿದಾಗ ಯಾಕೋ ಪೆಚ್ಚೆನ್ನಿಸಿತು. ಕಾದಂಬರಿಯ ಒಡಲನೂಲಿನಿಂದಲೇ ಮೂಡಿದ್ದ ‘ಮುಗ್ಧತೆಯ ಮ್ಯೂಸಿಯಂ’ನಲ್ಲಿ ಮೂಡಿದ್ದ ರೂಪಕಾರ್ಥ ವಾಚ್ಯಾರ್ಥಕ್ಕಿಳಿದಿತ್ತು. ‘ಮ್ಯೂಸಿಯಂ ಆಫ್ ಇನ್ನೊಸೆನ್ಸ್’ಗೆ ಇರುವ ವ್ಯಾಪಕಾರ್ಥ ಕುಬ್ಜಗೊಂಡಿತ್ತು!

ಅದೇನೇ ಇರಲಿ, ‘ಮ್ಯೂಸಿಯಂ ಆಫ್ ಇನ್ನೊಸೆನ್ಸ್’ ಕಾದಂಬರಿ ಹಾಗೂ ಅಸಲಿ ಮ್ಯೂಸಿಯಂ ಒಂದೇ ದಿನ ಲೋಕಾರ್ಪಣೆಯಾಗಬೇಕೆಂದು ಒರಾನ್ ಪಾಮುಕ್ ಆಸೆಯಾಗಿತ್ತು. ಕಾದಂಬರಿಯೇ ಮೊದಲು ಪ್ರಕಟವಾಯಿತು; ಆಮೇಲೆ ಮ್ಯೂಸಿಯಂ. ಈಚೆಗೆ ಈ ಕುರಿತ ಡಾಕ್ಯುಮೆಂಟರಿ ಸಿನೆಮಾ ಕೂಡ ಬಂತು. ಇಂಗ್ಲಿಷ್ ಅಧ್ಯಾಪಕ ಚಾಂದ್ ಪಾಶ ಒರಾನ್ ಪಾಮುಕ್ ಕೃತಿಗಳ ಮೇಲೆ ಸಂಶೋಧನೆ ಮಾಡುವಾಗ ಇಸ್ತಾಂಬುಲ್‌ಗೂ ಹೋಗಿ, ‘ಮ್ಯೂಸಿಯಂ ಆಫ್ ಇನ್ನೊಸೆನ್ಸ್’ ನೋಡಿಕೊಂಡು ಬಂದರು. ನನಗೂ ಎಷ್ಟೋ ಸಲ ಇಸ್ತಾಂಬುಲ್‌ಗೆ ಹೋಗಿ ಒರಾನ್ ಪಾಮುಕ್ ಅವರನ್ನು ಕಂಡು, ಮ್ಯೂಸಿಯಂ ಆಫ್ ಇನ್ನೊಸೆನ್ಸ್ ನೋಡಿಕೊಂಡು ಬರಬೇಕೆನ್ನಿಸಿದೆ. ಆದರೆ ಕಾದಂಬರಿ ನನ್ನೊಳಗೆ ನಿರ್ಮಿಸಿರುವ ಮುಗ್ದತೆಯ ಮ್ಯೂಸಿಯಂನ್ನು ಸಾಕಾರದಲ್ಲಿ ನೋಡಲು ಮನಸ್ಸು ಹಿಂಜರಿಯುತ್ತಲೇ ಇದೆ!

‘ಮ್ಯೂಸಿಯಂ ಆಫ್ ಇನ್ನೊಸೆನ್ಸ್’ ಕಾದಂಬರಿ ಓದಿ, ಅದರ ರಮ್ಯಲೋಕದಲ್ಲಿ ಮುಳುಗಿ ತೇಲುತ್ತಿದ್ದ ಕಾಲದಲ್ಲೇ ಕುವೆಂಪು ವಿಶ್ವವಿದ್ಯಾಲಯದ ಸೆಮಿನಾರ್ ಮುಗಿಸಿ, ಶಿವಮೊಗ್ಗೆಗೆ ಹೋಗುವ ಹಾದಿಯಲ್ಲಿ ಗೆಳೆಯರು, ‘ಇಲ್ಲೊಂದು ಹಿಸ್ಟರಿ ಮ್ಯೂಸಿಯಂ ಇದೆ’ ಎಂದರು. ಮ್ಯೂಸಿಯಂ ಎಂದ ತಕ್ಷಣ ಹುಟ್ಟಿದ ಪುಳಕದಲ್ಲಿ ಅದರ ವಿವರ ಓದುತ್ತಿರುವಂತೆ ಅಚ್ಚರಿಯಾಯಿತು! ಅನೇಕ ಸಲ ಘಟನೆಗಳು, ಸಾಹಿತ್ಯಕೃತಿಗಳ ವಿವರಗಳೆಲ್ಲ ಮರೆತು ಹೋಗಿ, ಅವುಗಳ ಕೇಂದ್ರ ಭಾವವಷ್ಟೇ ನಮ್ಮ ಆಳದಲ್ಲಿ ಉಳಿಯುತ್ತದಲ್ಲವೆ? ಶಿವಮೊಗ್ಗೆಗೆ ಹನ್ನೆರಡು ಕಿಲೋಮೀಟರ್ ದೂರವಿರುವ ಲಕ್ಕಿನಕೊಪ್ಪ ಸರ್ಕಲ್‌ನಲ್ಲಿರುವ ‘ಅಮೂಲ್ಯ ಶೋಧ’ ಮ್ಯೂಸಿಯಂನ ಹಿನ್ನೆಲೆಯಲ್ಲಿರುವ ಕೇಂದ್ರ ಭಾವವಷ್ಟೇ ನನ್ನ ಮನಸ್ಸಿನಲ್ಲಿ ಗಾಢವಾಗಿ ಉಳಿದಿದೆ:

ಹಿಸ್ಟರಿ ಉಪನ್ಯಾಸಕ ಖಂಡೋಬರಾವ್, ಅಗಲಿದ ತಮ್ಮ ಪತ್ನಿ ಯಶೋದ ಅವರ ನೆನಪಿನಲ್ಲಿ ಒಂದು ಎಕರೆ ಫಾರ್ಮ್ ಹೌಸ್‌ನಲ್ಲಿ, 2007ರಲ್ಲಿ ‘ಅಮೂಲ್ಯ ಶೋಧ’ ಮ್ಯೂಸಿಯಂ ಮಾಡಿದ್ದರು! ಹಿಸ್ಟರಿ ಉಪನ್ಯಾಸಕಿ ಯಶೋದ, ‘ತಾಜ್ ಮಹಲ್ ಪ್ರೇಮದ ಸಂಕೇತ ಮಾತ್ರ ಅಲ್ಲ; ನಿಜವಾದ ಪ್ರೇಮಿಗಳ ಆತ್ಮ’ ಎನ್ನುತ್ತಿದ್ದರಂತೆ. ಒರಾನ್ ಪಾಮುಕ್ ಮ್ಯೂಸಿಯಂ ಆಫ್ ಇನ್ನೊಸೆನ್ಸ್’ ಬರೆದು, ಮ್ಯೂಸಿಯಂ ಮಾಡುವ ಮೊದಲೇ ಮಲೆನಾಡಿನ ಮೇಷ್ಟರು ತಮ್ಮ ಹಣ ಹಾಕಿ ಇಲ್ಲೊಂದು ಮುಗ್ಧತೆಯ ಮ್ಯೂಸಿಯಂ ಮಾಡಿದ್ದರು. ರಮ್ಯ, ಕೋಮಲ ಭಾವಗಳು ನಿಜಕ್ಕೂ ಯೂನಿವರ್ಸಲ್. ಎಲ್ಲಿಯ ಇಸ್ತಾಂಬುಲ್! ಎಲ್ಲಿಯ ಮಲೆನಾಡಿನ ಲಕ್ಕಿನಕೊಪ್ಪ! ಎತ್ತಣಿಂದ ಎತ್ತಲಾದರೂ ನೋಡಿ: ಮಾನವರ ಮುಗ್ಧ ಭಾವಗಳು, ಅದರಲ್ಲೂ ಗಂಡು-ಹೆಣ್ಣಿನ ಸಂಬಂಧದ ಮೂಲ ಮುಗ್ಧ ಭಾವಗಳು, ಎಲ್ಲಿಂದ ಎಲ್ಲಿಗೆ ಹೋದರೂ ಒಂದೇ ಥರ!

https://natarajhuliyar.com

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ನಟರಾಜ್ ಹುಳಿಯಾರ್

contributor

Similar News