ಅಸಲಿ ನಟ ಇರ್ಫಾನ್ ಜೊತೆಯಲ್ಲಿ

ನಟನೊಬ್ಬ ನಿಜಕ್ಕೂ ಸೂಕ್ಷ್ಮವಾಗಿದ್ದರೆ ಅವನ ನಟನೆ, ಮಾತು, ಸ್ಪಂದನ ಎಲ್ಲದರಲ್ಲೂ ಒಂದು ಬಗೆಯ ಪ್ರಬುದ್ಧತೆ ಕಾಣತೊಡಗುತ್ತದೆ. ವಿಶಿಷ್ಟ ಸಂವೇದನೆಯ ಅಪರೂಪದ ನಟನಾಗಿದ್ದ ಇರ್ಫಾನ್ ಖಾನ್ ಜೊತೆ ಕಳೆದ ಒಂದು ದಿನದ ನೆನಪು...

Update: 2024-07-06 06:23 GMT

‘ಲೋಹಿಯಾ ಪಾತ್ರಕ್ಕೆ ಪಕ್ಕಾ ಸೂಟಾಗಬಲ್ಲ ನಟ ನವಾಝುದ್ದೀನ್ ಸಿದ್ಧೀಕಿ’ ಎಂದು ಸಿನೆಮಾ ನಿರ್ದೇಶಕ ಕಬಡ್ಡಿ ನರೇಂದ್ರಬಾಬು ಹೇಳಿದ್ದು ನೆನಪಾಯಿತು.

ಈಚೆಗೆ ನಾನು ‘ಸುಧಾ’ ವಾರಪತ್ರಿಕೆಯಲ್ಲಿ ಬರೆಯುತ್ತಿರುವ ರಾಮಮನೋಹರ ಲೋಹಿಯಾ ಕುರಿತ ಧಾರಾವಾಹಿಯನ್ನು ಸಿನೆಮಾ ಮಾಡುವ ಸಾಧ್ಯತೆಯ ಬಗ್ಗೆ ಮಾತುಕತೆ ನಡೆಯುತ್ತಿತ್ತು; ನರೇಂದ್ರಬಾಬುವಿನ ಆಯ್ಕೆ ಕುರಿತು ಯೋಚಿಸುತ್ತಿದ್ದಾಗ ಇರ್ಫಾನ್ ಖಾನ್ ಮುಖ ನನ್ನೆದುರು ತೇಲಿ ಬಂತು. ಪೆಚ್ಚೆನ್ನಿಸಿತು. ನಾಲ್ಕು ವರ್ಷಗಳ ಕೆಳಗೆ ಇರ್ಫಾನ್ ತೀರಿಕೊಂಡಿದ್ದರು.

ಅಸಲಿ ನಟ ಇರ್ಫಾನ್ ಐದಾರು ವರ್ಷಗಳ ಕೆಳಗೆ ಮೈಸೂರಿನಲ್ಲಿ ಒಂದೇ ದಿನದ ಮೂರು ಭೇಟಿಗಳಲ್ಲಿ ನನಗೆ ಪ್ರಿಯರಾಗಿದ್ದು ನೆನಪಾಯಿತು. ಅವರೊಬ್ಬ ಸೆಲೆಬ್ರಿಟಿ ನಟ ಎಂಬುದು ನನ್ನ ಗಮನಕ್ಕೇ ಬಾರದವರಂತೆ ಅವರು ಬಹುಕಾಲದ ಗೆಳೆಯನಂತೆ ಆರಾಮಾಗಿ ನಮ್ಮೊಡನೆ ಬೆರೆತಿದ್ದರು. ಇರ್ಫಾನ್ ರಂಗಾಯಣದ ‘ಬಹುರೂಪಿ’ ಸಮಾರೋಪಕ್ಕೆ ಬಂದಿದ್ದರು. ರಂಗಾಯಣದ ನಿರ್ದೇಶಕರಾಗಿದ್ದ ಜನ್ನಿ ದಿಲ್ಲಿಯ ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ಇರ್ಫಾನ್‌ಗೆ ಸೀನಿಯರ್. ರಂಗನಿರ್ದೇಶಕಿ ಸುಮತಿ ಇರ್ಫಾನ್, ಅವರ ಪತ್ನಿ ಸುತಾಪ ಇಬ್ಬರಿಗೂ ಕ್ಲಾಸ್‌ಮೇಟ್.

ಸಿನೆಮಾ ನೋಡುವುದನ್ನು ಕೂಡ ಒಪ್ಪದ ಕುಟುಂಬದಿಂದ ಬಂದ ಇರ್ಫಾನ್ ನಾಟಕಶಾಲೆ ಸೇರುವುದನ್ನು ಅಮ್ಮ ಒಪ್ಪಿರಲಿಲ್ಲ; ‘ಎನ್‌ಎಸ್‌ಡಿಯಲ್ಲಿ ಕಲಿತು ಬಂದು ಲೆಕ್ಚರರ್ ಆಗುತ್ತೇನೆ’ ಎಂದು ಅಮ್ಮನನ್ನು ನಂಬಿಸಿ ಇರ್ಫಾನ್ ಅಲ್ಲಿ ಸೇರಿದರಂತೆ! ಎನ್‌ಎಸ್‌ಡಿಯಲ್ಲಿ ತಮ್ಮ ಗುರುವಾಗಿದ್ದ ಪ್ರಸನ್ನ ಕರ್ನಾಟಕದ ಬದನವಾಳಿನಲ್ಲಿ ಶುರು ಮಾಡಿದ್ದ ಸತ್ಯಾಗ್ರಹವನ್ನು ಬೆಂಬಲಿಸಲು ಇರ್ಫಾನ್ ಹಿಂದೊಮ್ಮೆ ಬಂದಿದ್ದರು. ‘ಪ್ರಸನ್ನ ನಿರ್ದೇಶನ ಮಾಡಿದರೆ ರಂಗಭೂಮಿಗೆ ಬಂದು ನಟಿಸುತ್ತೇನೆ’ ಎಂದಿದ್ದರು.

ನಮ್ಮ ಭೇಟಿಯಲ್ಲಿ ರಂಗಭೂಮಿಯ ಬಗ್ಗೆ ಇರ್ಫಾನ್ ಹೇಳಿದ ಮಾತು ರಂಗ ನಟ, ನಟಿಯರಿಗೆ ದಿಕ್ಸೂಚಿಯಂತಿತ್ತು: ‘‘ನಾಟಕದಲ್ಲಿ ಆ್ಯಕ್ಟ್ ಮಾಡೋಕೆ ನನಗೆ ನಿಜಕ್ಕೂ ಇಷ್ಟ. ಆದರೆ ಇವತ್ತು ನಟನೆ ಮಾಡಿದಂತೆ ನಾಳೆ ಮಾಡಬಾರದು; ಇದು ನನ್ನಾಸೆ’’ ಎಂದರು ಇರ್ಫಾನ್. ‘‘ನಟನೆ, ಡೈಲಾಗ್ ಡೆಲಿವರಿ ಎಲ್ಲದರಲ್ಲೂ ನಾಳಿನ ಪ್ರಯೋಗ ಬೇರೆಯದೇ ಆಗಿರಬೇಕು’’ ಎಂದರು ಇರ್ಫಾನ್. ಆ ಮಾತು ನಾಟಕಕ್ಕಷ್ಟೇ ಅಲ್ಲ, ಬರವಣಿಗೆ, ನೃತ್ಯ, ಟೀಚಿಂಗ್ ಎಲ್ಲದಕ್ಕೂ ಅನ್ವಯಿಸಬಲ್ಲದು!

ಅವತ್ತು ಸಂಜೆ ರಂಗಾಯಣದಲ್ಲಿ ಇರ್ಫಾನ್ ಮಾತಾಡಬೇಕಾಗಿತ್ತು. ‘ಇರ್ಫಾನ್ ಓಪನ್ನಾಗಿ ಮಾತಾಡುತ್ತಾ ಹೋದರೆ ನೇರವಾಗಿ ಸತ್ಯ ಹೇಳುತ್ತಾರೆ; ಅದು ಮತ್ತೆಲ್ಲಿಗೋ ಹೋಗಿ ವಿವಾದವಾಗುತ್ತದೆ’ ಎಂದು ಸುತಾಪ ಆತಂಕದಲ್ಲಿದ್ದರು. ಅಷ್ಟೊತ್ತಿಗಾಗಲೇ ಇರ್ಫಾನ್, ಶಾರುಕ್ ಥರದ ದೊಡ್ಡ ನಟರ ಸಾಮಾಜಿಕ ಪ್ರತಿಕ್ರಿಯೆಗಳಿಗೆ ಮತೀಯ ಬಣ್ಣ ಬಳಿಯುವ ಸೈತಾನ ಕಾರ್ಖಾನೆ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಶುರುವಾಗಿತ್ತು.

ಇರ್ಫಾನ್ ಸಭಿಕರ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾ, ‘‘ಈ ದೇಶದಲ್ಲಿ ನಾನು ಏನು ಹೇಳಿದರೂ ಅದನ್ನು ಒಬ್ಬ ಮುಸ್ಲಿಮ್ ಹೇಳುತ್ತಿದ್ದಾನೆ ಎಂದು ತಿರುಚಿದರೆ ನನಗೆಷ್ಟು ನೋವಾಗುತ್ತದೆ, ಯೋಚಿಸಿ’’ ಎಂದರು. ದೇಶದಲ್ಲಿ ನಡೆಯುತ್ತಿದ್ದ ವಿಕಾರಮಯ ಕೋಮು ಬೆಳವಣಿಗೆಗಳ ಬಗ್ಗೆ ಸಿಟ್ಟಾದರು. ರಂಗಾಯಣದ ಪ್ರೇಕ್ಷಕರಿಗೆ ಇರ್ಫಾನ್ ನೋವು, ಕಾಳಜಿ, ಆತಂಕ ಅರ್ಥವಾಗತೊಡಗಿತು. ಇರ್ಫಾನ್ ಆಳದಲ್ಲಿ ಅನ್ನಿಸಿದ್ದನ್ನು ಹೇಳುತ್ತಿದ್ದರು. ದೇಶದಲ್ಲಿ ಯಾವುದೇ ಒಂದು ಮಾರ್ಗ ಪ್ರಬಲವಾದರೆ ಆಗುವ ಅಪಾಯದ ಬಗ್ಗೆ, ನಟರು ಸಾಮಾಜಿಕ ಪ್ರಶ್ನೆಗಳ ಬಗ್ಗೆ ಮಾತಾಡಲೇಬೇಕಾದ ಬಗ್ಗೆ ಹೇಳುತ್ತಾ ಹೋದರು.

ರಾತ್ರಿ ಪಾರ್ಟಿಯಲ್ಲಿ ಇರ್ಫಾನ್ ಇನ್ನಷ್ಟು ಮುಕ್ತವಾಗಿದ್ದರು. ಇರ್ಫಾನ್ ಆರಾಮಾಗಿ ಬೆರೆಯುತ್ತಾ ಹರಟುತ್ತಿದ್ದುದನ್ನೇ ನೋಡುತ್ತಿದ್ದ ನನಗೆ, ಅವರು ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ಕಾಣುವ ತೆಳ್ಳಗಿನ ಮುಸ್ಲಿಮ್ ತರುಣರ ಹಾಗೆ ಕಂಡರು! ಅದಕ್ಕೆ ಸರಿಯಾಗಿ ಕೊರಳಿಗೆ ಮಫ್ಲರ್ ಬೇರೆ! ಎನ್‌ಎಸ್‌ಡಿಯಲ್ಲಿ ವಿದ್ಯಾರ್ಥಿಯಾಗಿದ್ದ ಇರ್ಫಾನ್ ದಪ್ಪಗಾಗಲಿ ಎಂದು ಅವರ ಅಮ್ಮಿ ಕ್ಯಾರಿಯರ್ ತುಂಬ ತುಪ್ಪ ತಂದು ಕೊಡುತ್ತಿದ್ದುದನ್ನೂ, ಅದನ್ನು ಇರ್ಫಾನ್ ಯಾರಿಗೂ ಕೊಡದೆ ತಿನ್ನುತ್ತಿದ್ದುದನ್ನೂ ಸುಮತಿ ನೆನಪಿಸಿದರು. ‘‘ನಾನು ಕಡ್ಡೀ ಪೈಲ್ವಾನ್ ಥರಾ ಇದ್ನಲ್ಲಾ, ದಪ್ಪ ಆಗಬೇಕೂಂತ ತುಪ್ಪಾನ ಯಾರಿಗೂ ಕೊಡದೆ ಒಬ್ಬನೇ ತಿನ್ನುತ್ತಿದ್ದೆ. ದಪ್ಪ ಆಗಬೇಕು ಅಂತ ರೋಡ್‌ಸೈಡ್ ತಿಂಡೀನೂ ತಿನ್ನುತ್ತಿದ್ದೆ. ಏನೂ ಪ್ರಯೋಜನವಾಗಲಿಲ್ಲ!’’ ಎಂದು ಇರ್ಫಾನ್ ನಕ್ಕರು.

ಆ ಕಾಲಕ್ಕೆ ನನಗೆ ಇರ್ಫಾನ್ ಒಬ್ಬ ವಿಶಿಷ್ಟ ನಟನೆಂಬ ಅಂದಾಜಿತ್ತೇ ಹೊರತು, ಅವರ ಮುಖ್ಯ ಸಿನೆಮಾಗಳನ್ನು ನೋಡಿರಲಿಲ್ಲ. ‘ಸ್ಲಂ ಡಾಗ್ ಮಿಲಿಯನೇರ್’, ‘ಲಂಚ್ ಬಾಕ್ಸ್’ ಥರದ ಸಿನೆಮಾಗಳನ್ನು ಗಮನಿಸಿದ್ದೆ. ಅವರ ನಟನೆಯ ತುಣುಕುಗಳನ್ನು ನೋಡಿದ್ದೆ. ವ್ಯಕ್ತಿಯೊಬ್ಬ ನಿಜವಾದ ನಟನೋ ಅಲ್ಲವೋ ಎಂಬುದನ್ನು ತಿಳಿಯಲು ಒಂದೇ ಸಿನೆಮಾ, ಒಂದೇ ಪಾತ್ರ ಸಾಕು ಎಂಬುದು ನನ್ನ ಅನುಭವ. ನಾನು ಗಮನಿಸಿದ್ದ ಕೆಲವೇ ಪಾತ್ರಗಳಲ್ಲೇ ಇರ್ಫಾನ್ ಪಾತ್ರಕ್ಕೆ ತಕ್ಕಂತೆ ‘ನಟಿಸದೆ’, ಯಾವುದೇ ಪಾತ್ರವನ್ನಾಗಲೀ ಮರು ಸೃಷ್ಟಿಸುವ ಸೃಜನಶೀಲ ಕಲಾವಿದ ಎಂಬುದು ಮನದಟ್ಟಾಗಿತ್ತು.

ಇದೆಲ್ಲ ಮನಸ್ಸಿನಲ್ಲಿದ್ದುದರಿಂದ ಆ ರಾತ್ರಿ, ‘‘ಒಂದಲ್ಲ ಒಂದು ದಿನ ನಿಮಗೆ ಆಸ್ಕರ್ ಪ್ರಶಸ್ತಿ ಬಂದೇ ಬರುತ್ತದೆ’’ ಎಂದೆ. ಇರ್ಫಾನ್ ಕಣ್ಣರಳಿಸಿದರು. ನಾನು ವಿವರಿಸಿದೆ: ‘‘ಒಂದು ಕಾಲಕ್ಕೆ ನಾಸಿರುದ್ದೀನ್ ಶಾ ನಟನೆಗೆ ಆಸ್ಕರ್ ಬರಬಹುದೆಂದುಕೊಂಡಿದ್ದೆ; ಬರಬರುತ್ತಾ ಅವರ ನಟನೆ ಇಳಿಮುಖವಾಯಿತು; ನಾನಾ ಪಾಟೇಕರ್ ಸತ್ವ ಕಳಕೊಂಡು ಟೈಪ್ಡ್ ನಟನಾದರು. ನೀವು ಈಗಿನ ಹಾದಿಯಲ್ಲೇ ಮುಂದುವರಿದರೆ ಮುಂದೊಮ್ಮೆ ಆಸ್ಕರ್ ಬರುವುದು ಗ್ಯಾರಂಟಿ; ಇದು ನನ್ನ ನಂಬಿಕೆ.’’

ಇರ್ಫಾನ್ ಅಚ್ಚರಿಗೊಳ್ಳಲಿಲ್ಲ. ಇರ್ಫಾನ್‌ಗೆ ದೊಡ್ಡ ದೊಡ್ಡ ರಾಷ್ಟ್ರೀಯ, ಅಂತರ್‌ರಾಷ್ಟ್ರೀಯ ಪ್ರಶಸ್ತಿಗಳು ಬಂದಿದ್ದವು. ನಟನಾಲೋಕದ ನಿತ್ಯವಿದ್ಯಾರ್ಥಿಯಂತಿದ್ದ ಇರ್ಫಾನ್‌ಗೆ ಆಸ್ಕರ್ ಬಗೆಗೂ ಆತ್ಮವಿಶ್ವಾಸ ಇದ್ದಂತಿತ್ತು! ‘‘ಹೌ ಡೂ ಯೂ ಸೇ ದಟ್?’’ ಎಂದರು. ‘‘ಬಿಕಾಸ್ ಐ ನೋ ಎ ಬಿಟ್ ಆಫ್ ಅಸ್ಟ್ರಾಲಜಿ!’’ ಎಂದೆ! ‘‘ರಿಯಲಿ?’’ ಎನ್ನುತ್ತಾ, ‘‘ನನ್ನ ಕೈ ನೋಡಿ!’’ ಎಂದು ಇರ್ಫಾನ್ ಹಸ್ತ ಚಾಚಿಯೇ ಬಿಟ್ಟರು. ತಬ್ಬಿಬ್ಬಾದ ನಾನು, ‘‘ತಮಾಷೆಗೆ ಅಸ್ಟ್ರಾಲಜಿ ಅಂದೆ! ಆದರೆ ಆಸ್ಕರ್ ಬಗ್ಗೆ ಹೇಳಿದ್ದು ಮಾತ್ರ ನನ್ನ ಆಳದ ನಂಬಿಕೆಯಿಂದ’’ ಎಂದೆ. ಇರ್ಫಾನರ ‘ಮಖಬೂಲ್’, ‘ಪಾನ್ ಸಿಂಗ್ ತೋಮರ್’ ಸೇರಿದಂತೆ ಅವರ ಇನ್ನಿತರ ಮುಖ್ಯ ಸಿನೆಮಾಗಳನ್ನು ನೋಡಿರುವವರು ಈ ಮಾತನ್ನು ಒಪ್ಪುತ್ತಾರೆಂದುಕೊಳ್ಳುವೆ.

ರಾತ್ರಿ ಹನ್ನೊಂದಾಗುತ್ತಿತ್ತು. ಇರ್ಫಾನ್, ಸುತಾಪ ಬೆಂಗಳೂರಿನಲ್ಲಿ ಮಧ್ಯರಾತ್ರಿಯ ವಿಮಾನ ಹಿಡಿಯಬೇಕಾಗಿತ್ತು. ವಾಚ್ ನೋಡುತ್ತಾ ಮೇಲೆದ್ದ ಇರ್ಫಾನ್, ತಮ್ಮ ಕೈಯಲ್ಲಿದ್ದ ಗ್ಲಾಸನ್ನು ಕೊಂಚ ಮೇಲೆತ್ತಿ, ‘‘ಇದನ್ನು ಕಾರಿನಲ್ಲಿ ಒಯ್ಯಬಹುದೇ?’’ ಎಂದರು. ಆ ರಾತ್ರಿ ನಸುನಗುತ್ತಾ ಭವಿಷ್ಯ ಕೇಳಲು ಇರ್ಫಾನ್ ನನ್ನೆದುರು ಚಾಚಿದ ಕೈ ಹಾಗೂ ಗ್ಲಾಸ್ ಹಿಡಿದ ಕೈ ಎರಡೂ ನನ್ನ ಕಣ್ಣ ಮುಂದಿವೆ. ಈ ಆತ್ಮೀಯ ಭೇಟಿಯ ನಂತರ ಇರ್ಫಾನ್ ಸಿನೆಮಾಗಳನ್ನು ಹೆಚ್ಚು ಗಮನಿಸಿದೆ.

ನಂತರ ಕರಕುಶಲಿಗಳ ಪರವಾಗಿ ಪ್ರಸನ್ನ ರೂಪಿಸಿದ ಹೋರಾಟಕ್ಕೂ ಇರ್ಫಾನ್ ಬಂದರು; ‘‘ಕೈ, ಕಾಲು, ಆತ್ಮ, ಭಾವನೆ, ಮಾತುಗಳನ್ನು ಬಳಸಿ ನಟನೆ ಮಾಡುವ ನನಗೆ, ಕೈಗಳನ್ನು ಬಳಸಿ ಕೆಲಸ ಮಾಡುವ ಕುಶಲಕರ್ಮಿಗಳು ನನ್ನ ಅಣ್ಣ ತಂಗಿಯರಂತೆ ಕಾಣುತ್ತಾರೆ. ನನಗೆ ದುಡ್ಡು ಬರುತ್ತೆ; ಆದರೆ ಈ ಕುಶಲಕರ್ಮಿಗಳು ತಮ್ಮ ಉಳಿವಿಗಾಗಿ ಹೋರಾಡುತ್ತಿದ್ದಾರೆ’’ ಎಂದು ಇರ್ಫಾನ್ ಕಾಳಜಿಯಿಂದ ಹೇಳಿದ್ದರು. ಅವರ ನಟನೆಯ ಸೂಕ್ಷ್ಮತೆ ಅವರ ಮಾತಿನಲ್ಲೂ ಇತ್ತು.

ಇರ್ಫಾನ್‌ಗೆ ಬ್ರೈನ್ ಟ್ಯೂಮರ್ ಆದಾಗ ದುಗುಡಗೊಂಡವರಲ್ಲಿ ನಾನೂ ಒಬ್ಬ. ಇರ್ಫಾನ್ ಸಾವನ್ನು ಗೆದ್ದು ಬಂದು ‘ಆಂಗ್ರೇಝಿ ಮೀಡಿಯಂ’ ಸಿನೆಮಾದಲ್ಲೂ ನಟಿಸಿದರು. ಕೊನೆಯ ಸಿನೆಮಾದಲ್ಲೂ ಅವರ ಸತ್ವ ಮುಕ್ಕಾಗಿರಲಿಲ್ಲ. ಇರ್ಫಾನ್‌ಗೆ ಕಲೆಯೇ ಮರುಜೀವ ತುಂಬಿದಂತಿತ್ತು. ಸಾವಿನೊಂದಿಗೆ ಸೆಣಸಿದ್ದ ಇರ್ಫಾನ್ ತಮ್ಮ ಬದುಕಿನಲ್ಲಿ ಇಂಗ್ಲಿಷಿನೊಂದಿಗೂ ಸೆಣಸಿದ್ದರು! ಅದು ಕೂಡ ಈ ಸಿನೆಮಾದಲ್ಲಿತ್ತು. ಒಳ್ಳೆಯ ಇಂಗ್ಲಿಷ್ ಬರದೆ ಮುಂಬೈನಲ್ಲಿ ಸೆಲೆಬ್ರಿಟಿ ನಟನಾಗುವುದು ಸಾಧ್ಯವಿಲ್ಲ ಎಂಬ ಮೂಢನಂಬಿಕೆಯ ನಡುವೆ ತಮಗೆ ಗೊತ್ತಿದ್ದಷ್ಟೇ ಇಂಗ್ಲಿಷಿನಲ್ಲಿ ಹಾಲಿವುಡ್ ಸಿನೆಮಾಗಳಲ್ಲೂ ಇರ್ಫಾನ್ ನಟಿಸಿ ಗೆದ್ದಿದ್ದರು; ಅಸಲಿ ನಟನಾ ಪ್ರತಿಭೆ ಏನನ್ನಾದರೂ ಅನುಕರಿಸಬಲ್ಲದು, ಮರು ಸೃಷ್ಟಿಸಬಲ್ಲದು ಎಂಬುದನ್ನು ಇಪ್ಪತ್ತು ವರ್ಷಗಳಲ್ಲಿ ಸಾಧಿಸಿ ತೋರಿಸಿದರು. ‘ಈ ಪಾತ್ರವನ್ನು ಇರ್ಫಾನ್ ಅಲ್ಲದೆ ಬೇರೆ ಯಾರೂ ನಿಭಾಯಿಸಲಾರರು’ ಎಂಬಷ್ಟರ ಮಟ್ಟಿಗೆ ಬೆಳೆಯುತ್ತಾ ಹೋದರು.

ಒಮ್ಮೆ ಕ್ಲಿಕ್ಕಾದ ರೀತಿಯ ಪಾತ್ರವನ್ನು ಮತ್ತೆ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಇರ್ಫಾನ್ ನಂಬಿದ್ದರು. ‘ಹೀರೋ’ಗೆ ಇಂಥದೇ ಮುಖವಾಗಲೀ, ಇಂಥದೇ ಮೈಕಟ್ಟಾಗಲೀ ಮುಖ್ಯವಲ್ಲ; ಅಸಲಿಗೆ, ನಟನೊಬ್ಬ ‘ಹೀರೋ’ ಆಗಲೇಬೇಕಾಗಿಲ್ಲ; ನಟನೊಳಗಿನ ಸತ್ವ ಮಾತ್ರ ಅವನನ್ನು ಕಲಾವಿದನನ್ನಾಗಿ ಮಾಡುತ್ತದೆ ಎಂದು ಇರ್ಫಾನ್ ತೋರಿಸಿದರು. ಪ್ರತೀ ಪಾತ್ರದ ಒಳಸತ್ವವನ್ನು ಗುರುತಿಸಿ, ವ್ಯಾಖ್ಯಾನಿಸಿ, ವಿಸ್ತರಿಸಿ, ಆಯಾ ವ್ಯಕ್ತಿತ್ವಗಳ ಅಗೋಚರ ಸತ್ಯಗಳನ್ನು ಕಾಣಿಸಿದರು.

ಇರ್ಫಾನ್ ಎಷ್ಟು ಗಂಭೀರ ನಟನೆಂದರೆ, ರಾತ್ರಿ ಎಷ್ಟೋ ಹೊತ್ತಿನ ತನಕ ನಾಳೆಯ ಶೂಟಿಂಗ್ ಸ್ಕ್ರಿಪ್ಟ್ ಓದುತ್ತಿದ್ದರು. ಬಜಾರಿನಲ್ಲಿ, ರಸ್ತೆಯಲ್ಲಿ, ಲಿಫ್ಟಿನಲ್ಲಿ ಇರ್ಫಾನ್ ಡೈಲಾಗುಗಳನ್ನು ಗಟ್ಟಿ ಮಾಡಿಕೊಳ್ಳುತ್ತಿದ್ದುದನ್ನು ಸುತಾಪ ತಮಾಷೆ ಮಾಡುತ್ತಿದ್ದರು. ಇವೆಲ್ಲ ಪ್ರತೀ ಪಾತ್ರದ ವಿಶಿಷ್ಟ ಮನೋಲೋಕವನ್ನು ಅರಿತು, ಆ ಪಾತ್ರದ ಸಾಧ್ಯತೆಗಳನ್ನು ವಿಸ್ತರಿಸಬೇಕು ಎಂದು ನಂಬಿದ್ದ ಇರ್ಫಾನರ ನಿತ್ಯತಯಾರಿಗಳಾಗಿದ್ದವು. ಪ್ರತಿಯೊಬ್ಬ ಜೀವಿಗೂ ತನ್ನದೇ ಆದ ವಿಶಿಷ್ಟ ಅಸ್ತಿತ್ವ, ಮಹತ್ವ ಇರುತ್ತದೆ ಎಂಬ ಸತ್ಯವನ್ನು ಅವರ ನಟನೆ ಹುಡುಕುತ್ತಿತ್ತು. ವಿಶಾಲ್ ಬಾರದ್ವಾಜ್ ಹೆಂಡತಿಗೆ ಹೊಡೆಯುವ ಪಾತ್ರವೊಂದನ್ನು ಇರ್ಫಾನರಿಗೆ ಕೊಟ್ಟರು; ಆ ಪಾತ್ರ ಮಾಡಲು ಮೊದಮೊದಲು ಒಲ್ಲೆನೆಂದಿದ್ದ ಇರ್ಫಾನ್, ‘‘ಆ ಪಾತ್ರದಲ್ಲಿ ನಾನು ಶೋಧಿಸುವುದಾಗಲೀ, ಕಲಿಯುವುದಾಗಲೀ ಏನೂ ಇಲ್ಲ’’ ಎಂದಿದ್ದರು.

ಮನುಷ್ಯನ ಒಳಲೋಕದ ವಿಚಿತ್ರಗಳನ್ನು, ಮಾನವ ವ್ಯಕ್ತಿತ್ವದ ಸೂಕ್ಷ್ಮಗಳನ್ನು ಎಲ್ಲ ಬಗೆಯ ಪ್ರೇಕ್ಷಕರಿಗೂ ಕಾಣಿಸಬಲ್ಲ ಇರ್ಫಾನ್ ಥರದ ಪ್ರತಿಭೆಗಳು ತೀರ ಕಡಿಮೆ. ಇಂಥ ಅಪರೂಪದ ನಟರು ಹಠಾತ್ತನೆ ನಿರ್ಗಮಿಸಿದಾಗ ಸಿನೆಮಾ ರಂಗಕ್ಕೆ ನಿಜಕ್ಕೂ ದೊಡ್ಡ ನಷ್ಟ. ಈಚೆಗೆ ಲೋಹಿಯಾ ಪಾತ್ರದ ಚರ್ಚೆ ಬಂದಾಗ ಇರ್ಫಾನ್ ಮತ್ತೆ ನೆನಪಾದರು. ಆ ನೆಪದಲ್ಲಿ ಆ ಅಪೂರ್ವ ನಟನ ಬಗೆಗೆ ಈ ಟಿಪ್ಪಣಿ.

https://natarajhuliyar.com

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ನಟರಾಜ್ ಹುಳಿಯಾರ್

contributor

Similar News