ವಿಧಾನಸಭೆಯಲ್ಲಿ ‘ದಲಿತ’ ಪರಿಕಲ್ಪನೆಯ ಚರ್ಚೆ

ಅಂಬೇಡ್ಕರ್‌ವಾದ, ದಲಿತ್ ಪ್ಯಾಂಥರ್ಸ್‌, ದಲಿತ ಚಳವಳಿ, ದಲಿತ ಚಿಂತನೆ ಈ ಎಲ್ಲ ಚಾರಿತ್ರಿಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ‘ದಲಿತ’ ಎಂಬ ಪರಿಕಲ್ಪನೆಗೆ ಕಳೆದ ಐವತ್ತು ವರ್ಷಗಳಲ್ಲಿ ದಕ್ಕಿರುವ ‘ಎಚ್ಚರ’, ‘ಸ್ವಾಭಿಮಾನ’ ‘ಪ್ರತಿಭಟನೆ’ ‘ದಿಟ್ಟತನ’ ಮುಂತಾದ ಸಕಾರಾತ್ಮಕ ಅರ್ಥಗಳನ್ನು ಮುಂಚೂಣಿಗೆ ತರುವ ಜರೂರಿದೆ...

Update: 2024-07-22 05:51 GMT

ಇಪ್ಪತ್ತು ವರ್ಷಗಳ ಕೆಳಗೆ ಕವಿ ಡಾ. ಸಿದ್ಧಲಿಂಗಯ್ಯನವರು ಯಾವುದೋ ಮಾತಿನ ನಡುವೆ ಎಲಿನಾರ್ ಝೆಲಿಯಟ್ ಬರೆದ ‘ಫ್ರಂ ಅನ್ ಟಚಬಲ್ ಟು ದಲಿತ್’ ಪುಸ್ತಕದ ಬಗ್ಗೆ ಹೇಳಿದರು. ಆಗ ಮೊದಲ ಬಾರಿಗೆ ಆ ಪುಸ್ತಕದ ಹೆಸರು ಕೇಳಿದೆ. ಅವರಿಗೂ ಆ ಪುಸ್ತಕ ಸಿಕ್ಕಿರಲಿಲ್ಲ. ಆ ಪುಸ್ತಕದ ವಿವರಗಳನ್ನು ಓದಿ ಅವರು ‘ದಲಿತ’ನಾಗುವ ಪ್ರಕ್ರಿಯೆ ಕುರಿತು ಹೇಳಿದ್ದು ಕುತೂಹಲಕರವಾಗಿತ್ತು:

‘ಒಬ್ಬ ‘ಅಸ್ಪೃಶ್ಯ’ನು ‘ದಲಿತ’ನಾಗುವ ಪ್ರಕ್ರಿಯೆ ಎಂದರೆ, ಪ್ರಜ್ಞಾಪೂರ್ವಕವಾಗಿ ಸಿಟ್ಟಿನ, ಹೋರಾಟದ, ಹೊಸ ಸ್ವಾಭಿಮಾನದ ವ್ಯಕ್ತಿತ್ವವನ್ನು ಪ್ರಧಾನವಾಗಿ ಗಳಿಸಿಕೊಳ್ಳುವುದು’ ಎಂಬ ಆ ಪುಸ್ತಕದ ಒಂದು ಗ್ರಹಿಕೆಯನ್ನು ಸಿದ್ಧಲಿಂಗಯ್ಯ ವಿವರಿಸಿದರು. ಎಲಿನಾರ್ ಝೆಲಿಯಟ್ ಪುಸ್ತಕ ‘ಅಸ್ಪೃಶ್ಯತೆಯಿಂದ ದಲಿತತ್ವದೆಡೆಗೆ’ ನಡೆಯುವ ಪ್ರಕ್ರಿಯೆಯನ್ನು ಇಂಡಿಯಾದ ದಲಿತ್ ಪ್ಯಾಂಥರ್ಸ್, ದಲಿತ ಸಾಹಿತ್ಯ, ದಲಿತ ಚಳವಳಿ, ಬೌದ್ಧ ಧರ್ಮದೆಡೆಗಿನ ಅಂಬೇಡ್ಕರ್ ನಡಿಗೆ ಈ ಎಲ್ಲದರಲ್ಲೂ ಕಂಡುಕೊಳ್ಳುತ್ತದೆ.

ಅವತ್ತು ಈ ಚರ್ಚೆಯ ನಡುವೆ ‘ಅನ್‌ಟಚಬಲ್ಸ್’ ಎಂಬ ಇಂಗ್ಲಿಷ್ ಸಿನೆಮಾವನ್ನೂ ಸಿದ್ಧಲಿಂಗಯ್ಯನವರು ನೆನಸಿಕೊಂಡರು. ಅದಕ್ಕೂ ನಾವು ನಿತ್ಯ ಚರ್ಚಿಸುವ ‘ಅನ್‌ಟಚಬಲಿಟಿ’ಗೂ ಯಾವ ಸಂಬಂಧವೂ ಇರಲಿಲ್ಲ. ಆದರೆ ಇಂಗ್ಲಿಷ್ ಸಿನೆಮಾದ ಟೈಟಲನ್ನು ‘ಅಸ್ಪೃಶ್ಯ’ ಎಂಬ ಪದಕ್ಕೆ ಕನೆಕ್ಟ್ ಮಾಡುತ್ತಾ ಸಿದ್ಧಲಿಂಗಯ್ಯ ಹೇಳಿದರು: ‘ಇದು ಮುಟ್ಟಬಾರದ ವ್ಯಕ್ತಿಯೊಬ್ಬ ಯಾರೂ ಸುಲಭವಾಗಿ ಮುಟ್ಟಲಾಗದ ವ್ಯಕ್ತಿಯಾಗುವ ರೀತಿ! ಅಂದರೆ, ಒಂದು ಕಾಲಕ್ಕೆ ದೈನ್ಯದ ವ್ಯಕ್ತಿತ್ವ ಪಡೆದಿದ್ದ ವ್ಯಕ್ತಿಯೊಬ್ಬ ಹೊಸ ವಿದ್ಯಾಭ್ಯಾಸ ಪಡೆದು, ವಿಮೋಚನೆಗೊಂಡು, ಸಂಘಟಿತನಾಗಿ, ಹೋರಾಡುತ್ತಾ, ‘ಎಲ್ಲಿ! ನನ್ನ ಟಚ್ ಮಾಡ್ ನೋಡಿ’ ಎಂದು ಸವಾಲೆಸೆಯುವ ದಿಟ್ಟ ವ್ಯಕ್ತಿತ್ವವನ್ನು ಪಡೆಯುತ್ತಾನೆ.’

ಈಚೆಗೆ ವಿಧಾನಸಭೆಯಲ್ಲಿ ಮಳವಳ್ಳಿ ಕ್ಷೇತ್ರದ ಶಾಸಕರಾದ ನರೇಂದ್ರಸ್ವಾಮಿಯವರು ವಿಧಾನಸಭೆಯಲ್ಲಿ ‘ದಲಿತ’ ಎಂಬ ಪದದ ಬಗ್ಗೆ ಎತ್ತಿದ ಚರ್ಚೆ ಕೇಳಿಸಿಕೊಳ್ಳುತ್ತಿರುವಾಗ, ‘ದಲಿತ’ ಎಂಬ ಪದ ಕುರಿತಂತೆ ಕಳೆದ ಐವತ್ತು ವಷರ್ಗಳ ಸುದೀರ್ಘ ತಾತ್ವಿಕ ಚರ್ಚೆಗಳು ನೆನಪಾದವು.

1972ರಲ್ಲಾಗಲೇ ‘ದಲಿತ’ ಎಂಬ ಪದಕ್ಕೆ ಆತ್ಮಗೌರವ, ಸ್ವಾಭಿಮಾನ, ಪ್ರತಿಭಟನೆ ಮುಂತಾದ ಕ್ರಾಂತಿಕಾರಕ ಅರ್ಥಗಳನ್ನು ಮಹಾರಾಷ್ಟ್ರದ ‘ದಲಿತ್ ಪ್ಯಾಂಥರ್ಸ್’ ಲೇಖಕರು ಪ್ರತಿಪಾದಿಸಿದ್ದರು. ಇದಕ್ಕೂ ಮೊದಲು ಅಮೆರಿಕದ ಆಫ್ರೋ-ಅಮೆರಿಕನ್ ಹೋರಾಟಗಾರರು ತಮ್ಮನ್ನು ತಾವು ‘ಬ್ಲ್ಯಾಕ್ ಪ್ಯಾಂಥರ್ಸ್’ (ಕಪ್ಪು ಚಿರತೆಗಳು) ಎಂದು ಬಣ್ಣಿಸಿಕೊಂಡಿದ್ದರು. ಯಾವುದನ್ನು ಬಿಳಿಯರು ‘ಕಪ್ಪು’ ಎಂದು ಹೀಗಳೆದಿದ್ದರೋ, ಅದನ್ನೇ ಕರಿಯರು ಪಾಸಿಟಿವ್ ಆಗಿಸಿ, ‘ಬ್ಲ್ಯಾಕ್’ ಪ್ಯಾಂಥರ್ಸ್ ಚಳವಳಿ ಶುರು ಮಾಡಿದ್ದರು. ‘ಬ್ಲ್ಯಾಕ್ ಈಸ್ ಬ್ಯೂಟಿಫುಲ್’ ಘೋಷಣೆಯನ್ನೂ ರೂಪಿಸಿ ಹಬ್ಬಿಸಿದರು. ದಲಿತ್ ಪ್ಯಾಂಥರ್ಸ್ ‘ಬ್ಲ್ಯಾಕ್ ಪ್ಯಾಂಥರ್ಸ್’ ಹಾದಿಯಲ್ಲಿ ಮುಂದುವರಿದು, ‘ದಲಿತ’ ಪದವನ್ನು ಸ್ವಾಭಿಮಾನದ, ಸ್ವಮರ್ಯಾದೆಯ ಪದವನ್ನಾಗಿ ಮಾಡಿತು. ದಲಿತ ಕಾವ್ಯದ, ದಲಿತ ಸಾಹಿತ್ಯದ, ದಲಿತ ಚಳವಳಿಯ ಆರಂಭ ಘಟ್ಟವನ್ನೂ ಉದ್ಘಾಟಿಸಿತು. ಕರ್ನಾಟಕವೂ ಸೇರಿದಂತೆ ಎಲ್ಲೆಡೆ ಈ ತಾತ್ವಿಕತೆ ಹಬ್ಬಿತು.

‘ದಲಿತ’ ಪದವನ್ನು ಮೊದಲು ಬಳಸಿದವರು ಜ್ಯೋತಿಬಾ ಫುಲೆ ಎನ್ನುತ್ತಾರೆ. ಅಂಬೇಡ್ಕರ್ ಕುರಿತು ಅಶೋಕ್ ಗೋಪಾಲ್ ಬರೆದ ಜೀವನ ಚರಿತ್ರೆ ‘ಎ ಪಾರ್ಟ್ ಅಪಾರ್ಟ್’ನಲ್ಲಿ ‘ದಲಿತ’ ಎಂಬ ಪದ ಸಾವಿತ್ರಿಬಾಯಿ ಫುಲೆ 1854ರಲ್ಲಿ ಬರೆದ ‘ಕಾವ್ಯಫುಲೆ’ (ಹೂ ಕವಿತೆಗಳು) ಕವನ ಸಂಕಲನದಲ್ಲಿ ಮೊದಲು ಸಾಹಿತ್ಯಕವಾಗಿ ಕಾಣಿಸಿಕೊಂಡಿತು ಎಂಬ ದಾಖಲೆಯಿದೆ. ಈ ನಿಟ್ಟಿನಲ್ಲಿ ‘ದಲಿತ’ ಎಂಬ ಪದ, ಪರಿಕಲ್ಪನೆ ಕುರಿತು ಎಲಿನಾರ್ ಝೆಲಿಯಟ್, ಆನಂದ್ ತೇಲ್ತುತುಂಬ್ಡೆ, ಅಶೋಕ್ ಗೋಪಾಲ್ ಅವರ ಪುಸ್ತಕಗಳಿಂದ ಆಯ್ದ ಕೆಲವು ಗ್ರಹಿಕೆಗಳು:

ಆರಂಭದಲ್ಲಿ ‘ಅನ್‌ಟಚಬಲ್ಸ್’ ಪದವನ್ನು ಬಳಸುತ್ತಿದ್ದ ಬಾಬಾಸಾಹೇಬರಿಗೆ ಮುಂದೆ ಬ್ರಿಟಿಷರು ಬಳಸುತ್ತಿದ್ದ ‘ಡಿಪ್ರೆಸ್ಡ್ ಕ್ಲಾಸಸ್’ ಎಂಬ ಪದ ಸರಿಯಾಗಿ ಕಂಡಿತು. ಆನಂತರ ಅವರು 1924ರಲ್ಲಿ ‘ಬಹಿಷ್ಕೃತ ಹಿತಕಾರಿಣಿ ಸಭಾ’ ಸ್ಥಾಪಿಸಿದ ಕಾಲಕ್ಕೆ ‘ಬಹಿಷ್ಕೃತ’ ಪದವನ್ನು ಬಳಸಿದರು. ‘ಬಹಿಷ್ಕೃತ್ ಭಾರತ್’ ಪತ್ರಿಕೆಯ ಒಂದು ಲೇಖನದಲ್ಲಿ ‘ದಲಿತ’ ಪದವನ್ನು ಅಲ್ಲಲ್ಲಿ ಬಳಸಿದರು. ಸಾಮಾಜಿಕ ಶ್ರೇಣಿಯಲ್ಲಿ ನಡೆಯುತ್ತಿದ್ದ ದಮನ, ತುಳಿತ, ಅವಮಾನಗಳನ್ನು ಚರ್ಚಿಸುವಾಗ ‘ಅನ್‌ಟಚಬಲ್ಸ್’ ಪದವನ್ನು ಬಳಸಿದರು. ಸರಕಾರಿ ಕಾರ್ಯಕ್ರಮಗಳು, ಮೀಸಲಾತಿಗಳ ಸಂದರ್ಭದಲ್ಲಿ ‘ಪರಿಶಿಷ್ಟ್ಟ ಜಾತಿ’ ಎಂಬ ವರ್ಗೀಕರಣವನ್ನು ಬಳಸಿದರು.

ಮೊದಲು ‘ಸಪ್ರೆಸ್ಡ್ ಕ್ಲಾಸಸ್’ ಎಂಬ ಪದಗುಚ್ಛ ಬಳಸಿದ್ದ ಗಾಂಧೀಜಿ ಮುಂದೆ ‘ಹರಿಜನ್’ ಎಂಬ ಪದ ಬಳಸಿದರು. ‘ಹರಿಜನ್’ ಪದವನ್ನು ಮೊದಲು ಬಳಸಿದವರು ಗಾಂಧೀಜಿಯಲ್ಲ ಎಂಬುದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ಗಾಂಧೀಜಿ ಸಂಪಾದಿಸುತ್ತಿದ್ದ ‘ನವಜೀವನ್’ ಪತ್ರಿಕೆಯ ಓದುಗರೊಬ್ಬರು 1931ರಲ್ಲಿ ಗಾಂಧೀಜಿಗೆ ಪತ್ರ ಬರೆದರು: ‘ಅಂತ್ಯಜ’, ‘ಅಸ್ಪೃಶ್ಯ’ ಮುಂತಾದ ಪದಗಳಿಂದ ನಮಗೆ ನೋವಾಗುತ್ತದೆ. ಹದಿನೈದನೇ ಶತಮಾನದ ಗುಜರಾತಿ ಕವಿ ನರಸಿಂಹ ಮೆಹ್ತಾ ತಮ್ಮ ಕವಿತೆಯೊಂದರಲ್ಲಿ ನೊಂದ ಸಮುದಾಯಗಳ ಜನರನ್ನು ‘ಹರಿಜನ’ ಎಂದಿದ್ದಾರೆ. ನೀವೂ ಆ ಹೆಸರನ್ನು ಬಳಸಬಹುದು ಎಂದಿದ್ದರು.

1932ರಿಂದೀಚೆಗೆ ಗಾಂಧೀಜಿ ‘ಹರಿಜನ’ ಪದ ಬಳಸತೊಡಗಿದರು; ಈ ಪದದ ಬಳಕೆಯಿಂದ ಸವರ್ಣೀಯರ ಧಾರ್ಮಿಕ ಭಾವನೆ ಉದ್ದೀಪನಗೊಂಡು, ಅವರು ಅಸ್ಪೃಶ್ಯತೆಯ ಆಚರಣೆಯನ್ನು ಕೈಬಿಡುತ್ತಾರೆ ಎಂದು ಅವರು ನಂಬಿದ್ದರು. ಆದರೆ ಆ ಮಡಿ, ಜಡ ಮನಸ್ಸು ಬದಲಾಗಲಿಲ್ಲ. ‘ಹರಿಜನ’ ಪದವನ್ನು ಅಂಬೇಡ್ಕರ್ ಹಾಗೂ ಎಚ್ಚೆತ್ತ ದಲಿತರು ಒಪ್ಪಲಿಲ್ಲ.

1972ರಲ್ಲಿ ದಲಿತ್ ಪ್ಯಾಂಥರ್ಸ್ ಹುಟ್ಟಿ ಬೆಳೆದ ನಂತರ ದೇಶಾದ್ಯಂತ ಅಂಬೇಡ್ಕರ್‌ವಾದಿಗಳು ‘ಎಚ್ಚೆತ್ತ’ ‘ಸ್ವಾಭಿಮಾನ’ದ, ‘ವಿಮೋಚನೆಗೊಂಡ, ‘ಹಕ್ಕುಗಳಿಗಾಗಿ ಹೋರಾಡುವ’ ಎಂಬ ಪಾಸಿಟಿವ್ ಅರ್ಥದಲ್ಲಿ ‘ದಲಿತ’ ಪದವನ್ನು ಬಳಸತೊಡಗಿದರು. ಅಂದರೆ, ನೂರು ವಷರ್ಗಳ ಕೆಳಗೆ ಅಂಬೇಡ್ಕರ್ ಅವರು ಕೊಟ್ಟ ‘ಎಜುಕೇಟ್, ಅಜಿಟೇಟ್, ಆರ್ಗನೈಸ್’ ಕರೆಯನ್ನು ಒಪ್ಪಿ, ಅನುಸರಿಸಿ, ಜಾರಿಗೆ ತಂದ ಹೊಸ ತಲೆಮಾರು ಈ ಪದವನ್ನು ಒಪ್ಪಿ, ಬಳಸಿ ಚಾಲ್ತಿಗೆ ತಂದಿತು. ದಲಿತ ಎಂಬ ಪದ ದಲಿತ ಚಿಂತನೆ, ದಲಿತ ಸ್ತ್ರೀವಾದ, ದಲಿತಾಧ್ಯಯನ, ದಲಿತ ರಾಜಕಾರಣ ಹೀಗೆ ಕಳೆದ ಐವತ್ತು ವಷರ್ಗಳಲ್ಲಿ ಬೆಳೆದು ಮಹತ್ವದ ಚಾರಿತ್ರಿಕ ಸ್ಥಾನ ಪಡೆದು ಈಗ ಒಂದು ಸ್ವತಂತ್ರ ಫಿಲಾಸಫಿಯೇ ಆಗಿದೆ.

ಮುಂದೆ ದಾದಾಸಾಹೇಬ್ ಕಾನ್ಷೀರಾಂ ಬಹುಜನ ಸಮಾಜ ಪಕ್ಷದ ಮೂಲಕ ದಲಿತ ರಾಜಕಾರಣವನ್ನು ರಾಜಕೀಯ ಅಧಿಕಾರದತ್ತ ಒಯ್ದರು. ತಮಿಳುನಾಡಿನಲ್ಲಿ ‘ದಲಿತ್ ಪ್ಯಾಂಥರ್ಸ್’ನ ತಮಿಳು ರೂಪವಾದ ‘ವಿಡುದಲೈ ಚಿರುದೈಗಳ್ ಕಚ್ಚಿ’ (ವಿಸಿಕೆ) ರಾಜಕೀಯ ಪಕ್ಷದಲ್ಲಿ ಈಗ ಲೋಕಸಭಾ ಸದಸ್ಯರು, ವಿಧಾನಸಭಾ ಸದಸ್ಯರೂ ಇದ್ದಾರೆ. ಈಗ ತಮಿಳುನಾಡಿನಲ್ಲಿ ಡಿಎಂಕೆ ಸುಭದ್ರವಾಗಿರಲು ‘ವಿಸಿಕೆ’ಯ ದಲಿತ ರಾಜಕಾರಣ ಕೂಡ ಪ್ರಬಲ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ, ಮೊನ್ನೆ ವಿಧಾನಸಭೆಯಲ್ಲಿ ನರೇಂದ್ರಸ್ವಾಮಿಯವರು ‘ದಲಿತ’ ಶಬ್ದ ಕುರಿತು ಎತ್ತಿದ ಚರ್ಚೆಗೆ ಮತ್ತೆ ಬರುತ್ತೇನೆ: ವಾಲ್ಮೀಕಿ ನಿಗಮದಲ್ಲಿ ಎದುರಾಗಿರುವ ಸಮಸ್ಯೆಯ ವಿಚಾರದಲ್ಲಿ ‘ದಲಿತ’ ಎಂಬ ಪದವನ್ನು ಮತ್ತೆ ಮತ್ತೆ ಬಳಸುತ್ತಿರುವ ಕ್ರಮ ‘ದಲಿತ’ ಪರಿಕಲ್ಪನೆಯ ದುರ್ಬಳಕೆಯೇ ಹೌದೆನ್ನಿಸುತ್ತದೆ. ಕಾರಣ, ನಿಗಮ ಇರುವುದು ಶೆಡ್ಯೂಲ್ಡ್ ಟ್ರೈಬ್ ಅಥವಾ ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕೆ. ಈ ಪಂಗಡಗಳಲ್ಲಿ ಅಂಬೇಡ್ಕರ್‌ವಾದದಿಂದ ಸ್ಫೂರ್ತಿಗೊಂಡವರು ತಮ್ಮನ್ನು ತಾವು ‘ದಲಿತ’ ಎಂದು ಸ್ವಾಭಿಮಾನದಿಂದ ಗುರುತಿಸಿಕೊಂಡಿರುವ ಸಾಧ್ಯತೆ ಇದ್ದೇ ಇದೆ. ಆದರೆ ಇಡೀ ಜನಸಮುದಾಯದಲ್ಲಿ ದಲಿತ ಪರಿಕಲ್ಪನೆಯ ಸ್ವಾಭಿಮಾನದ ತಾತ್ವಿಕ ಭಾವ ವ್ಯಾಪಕವಾಗಿ ಹಬ್ಬತೊಡಗಿದೆಯೇ ಎನ್ನುವ ಬಗ್ಗೆ ವಿವರವಾಗಿ ಚರ್ಚಿಸಬೇಕಾಗುತ್ತದೆ; ಆ ಪ್ರಜ್ಞೆ ಹಬ್ಬಲಿ ಎಂಬ ಆಸೆ ಎಲ್ಲ ಅಂಬೇಡ್ಕರ್‌ವಾದಿಗಳದೂ ಆಗಿದೆ.

ಅಂದರೆ, ಅಂಬೇಡ್ಕರ್ ಅವರು ರೂಪಿಸಿಕೊಟ್ಟ ಸಾಮಾಜಿಕ-ಆರ್ಥಿಕ ಕಾರ್ಯಕ್ರಮಗಳಿಂದ ಫಲ ಪಡೆದ ಎಲ್ಲರಲ್ಲೂ ದಲಿತ ಎಚ್ಚರ ನಿಜಕ್ಕೂ ಹಬ್ಬಿ, ಹಿಂದುಳಿದ ವರ್ಗ, ಮಹಿಳಾ ವರ್ಗಗಳೂ ಸೇರಿದಂತೆ ಎಲ್ಲ ಫಲಾನುಭವಿ ಸಮುದಾಯಗಳು ಅಂಬೇಡ್ಕರ್ ವಾದಿಗಳಾಗುವುದು ಹಾಗೂ ಆ ಮೂಲಕ ಎಚ್ಚೆತ್ತ ದಲಿತವಾದಿಯಾಗುವುದು ಕರ್ನಾಟಕದಲ್ಲಿ ದೊಡ್ಡ ಬದಲಾವಣೆ ತರಬಲ್ಲದು. ಆದ್ದರಿಂದ ಇಡೀ ಚರ್ಚೆ ಆ ದಿಕ್ಕಿನಲ್ಲಿ ನಡೆಯುವುದು ಒಳ್ಳೆಯದು.

ಕಳೆದ ಐವತ್ತು ವರ್ಷಗಳಲ್ಲಿ ‘ದಲಿತ’ ಎಂಬ ಪರಿಕಲ್ಪನೆ ಇಡೀ ದೇಶದಲ್ಲಿ ಸೃಷ್ಟಿಸಿರುವ ಏಕತೆ, ಕ್ರಾಂತಿಕಾರಕತೆ ಹಾಗೂ ಸ್ವಾಭಿಮಾನದ ಚಳವಳಿ ರಾಜಕಾರಣವನ್ನು ಕಂಡು ದಿಗಿಲುಗೊಂಡು, ‘ದಲಿತ’ ಎಂಬ ಪದಕ್ಕೇ ಕುತ್ತು ತರುವ ಹುನ್ನಾರವೂ ಈ ಹಿಂದೆ ನಡೆದಿದೆ. ಆದ್ದರಿಂದ ಈ ನಿಟ್ಟಿನಲ್ಲಿ ದಲಿತ ಸಂಘರ್ಷ ಸಮಿತಿಗಳು, ದಲಿತ ಸಾಹಿತ್ಯ, ದಲಿತ ಚಳವಳಿ, ದಲಿತ ಚಿಂತನೆ, ದಲಿತ ರಾಜಕಾರಣ ಹಾಗೂ ಒಟ್ಟಾರೆ ಪ್ರಗತಿಪರ ಚಿಂತನೆ ಆಳವಾಗಿ ಚರ್ಚಿಸಿ ಮುನ್ನಡೆಯಬೇಕಾದ ಜರೂರು ಈಗ ಎದುರಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ನಟರಾಜ್ ಹುಳಿಯಾರ್

contributor

Similar News