ಇಲ್ಲಿ ನಗುವು ಅಸಹಜ ಧರ್ಮ!

Update: 2024-08-05 06:01 GMT

ಈಚಿನ ಲೋಕಸಭಾ ಚುನಾವಣೆಯಲ್ಲಿ ನಡೆದ ವಾರಣಾಸಿ ಕ್ಷೇತ್ರದ ನಾಮಪತ್ರ ಪ್ರಕರಣ ನಿಮಗೆ ನೆನಪಿರಬಹುದು. ಶ್ಯಾಮ್ ರಂಗೀಲ ಎಂಬ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಹಾಲಿ ಪ್ರೈಂ ಮಿನಿಸ್ಟರ್ ಎದುರು ವಾರಣಾಸಿಯಲ್ಲಿ ಚುನಾವಣೆಗೆ ನಿಲ್ಲಲು ಹೋದರು; ಅವರ ನಾಮಪತ್ರವೇ ತಿರಸ್ಕೃತವಾಯಿತು!

ನನ್ನ ಮೆಚ್ಚಿನ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಕುನಾಲ್ ಕಮ್ರ ಸರಕಾರ ಹಾಗೂ ಸರಕಾರದ ಚೇಲಾಗಳಿಂದ ಕಿರಿಕಿರಿ ಅನುಭವಿಸುತ್ತಲೇ ಇದ್ದಾರೆ. ಆದರೂ ಕುನಾಲ್ ಜಗ್ಗಲಿಲ್ಲ. ಈಚಿನ ಲೋಕಸಭಾ ಚುನಾವಣೆಯ ಕಾಲದಲ್ಲಿ ‘ಎಕ್ಸ್’ ವೇದಿಕೆಯಲ್ಲಿ ಕುನಾಲ್ ಪ್ರಸಾರ ಮಾಡಿದ ಮೋದಿ ಸರಕಾರದ ರಿಪೋರ್ಟ್ ಕಾರ್ಡ್ ಲಕ್ಷಾಂತರ ನೋಡುಗರನ್ನು ಪಡೆಯಿತು. ಚುನಾವಣೆಯಲ್ಲಿ ತನ್ನ ಕೆಲಸ ಮಾಡಿತು.

ಇದೆಲ್ಲ ಬರೆಯುತ್ತಲೇ ತತ್ವಜ್ಞಾನಿ ಸಾಕ್ರೆಟಿಸ್ ತನ್ನ ಬಗೆಗಿನ ತಮಾಷೆ, ಕಟಕಿಯನ್ನು ಎದುರಿಸಿದ ಕತೆಯನ್ನು ನೆನಪಿಸುವೆ. ಸಾಕ್ರೆಟಿಸ್ ಬಗ್ಗೆ ನೀವು ಕೇಳಿರಬಹುದು. 2,400 ವರ್ಷಗಳ ಕೆಳಗೆ ಬದುಕಿದ್ದ ದಿಟ್ಟ, ಸ್ವತಂತ್ರ ಗ್ರೀಕ್ ಫಿಲಾಸಫರ್ ಸಾಕ್ರೆಟಿಸ್ ತರುಣ ಜನಾಂಗವನ್ನು ಸ್ವತಂತ್ರವಾಗಿ ಯೋಚಿಸುವಂತೆ ಪ್ರೇರೇಪಿಸುತ್ತಿದ್ದ. ‘ನಮ್ಮನ್ನು ನಾವು ಪರೀಕ್ಷೆಗೆ ಒಡ್ಡಿಕೊಳ್ಳದ ಜೀವನ ಬದುಕಲು ಲಾಯಕ್ಕಲ್ಲ’ ಎಂದು ಹೇಳುತ್ತಿದ್ದ. ಸಾಕ್ರೆಟಿಸ್ ಹೊಸ ತಲೆಮಾರನ್ನು ತಪ್ಪು ಹಾದಿಗೆ ಎಳೆಯುತ್ತಿದ್ದಾನೆಂದು ಹಳೆಯ ತಲೆಮಾರಿನವರು ಸಿಟ್ಟಾಗಿದ್ದರು. ಈ ಹಳಬರ ಪೂರ್ವಗ್ರಹಗಳು ಗ್ರೀಕ್ ವಿನೋದ ನಾಟಕಕಾರ ಅರಿಸ್ಟೋಫನಿಸ್‌ನ ನಾಟಕಗಳಲ್ಲೂ ಬಂದವು. ವಿನೋದ ನಾಟಕಕಾರನೊಬ್ಬ ತನ್ನ ಕಾಲವನ್ನು ಟೀಕಿಸಿ ತಮಾಷೆ ಮಾಡುವಾಗ ಕಾಲದ ಪೂರ್ವಗ್ರಹವನ್ನೂ ತಲೆಯೊಳಗೆ ತುಂಬಿಕೊಂಡಿದ್ದ.

ಎ.ಎನ್. ಮೂರ್ತಿರಾವ್ ಅನುವಾದಿಸಿರುವ ‘ಸಾಕ್ರೆಟಿಸನ ಕೊನೆಯ ದಿನಗಳು’ ಪುಸ್ತಕದಲ್ಲಿ ಒಂದು ಭಾಗವಿದೆ: ಅರಿಸ್ಟೋಫನಿಸ್ ತನ್ನ ‘ದ ಕ್ಲೌಡ್ಸ್’ ನಾಟಕದಲ್ಲಿ ಸಾಕ್ರೆಟಿಸ್‌ನನ್ನು ಗೇಲಿ ಮಾಡಿ, ಅವನನ್ನು ಜನರ ದ್ವೇಷಕ್ಕೂ ತಿರಸ್ಕಾರಕ್ಕೂ ಗುರಿ ಮಾಡುತ್ತಾನೆ. ಆಗ ಇನ್ನೂ ಬದುಕಿದ್ದ ಸಾಕ್ರೆಟಿಸ್‌ಗೆ ಎಷ್ಟು ಆತ್ಮವಿಶ್ವಾಸ ಇತ್ತೆಂದರೆ, ಅವನು ಆ ಬಗ್ಗೆ ತಲೆ ಕೆಡಿಸಿಕೊಳ್ಳಲೇ ಇಲ್ಲ. ಒಮ್ಮೆ ಅಥೆನ್ಸ್‌ನ ಬಯಲು ರಂಗಮಂದಿರದಲ್ಲಿ

‘ದ ಕ್ಲೌಡ್ಸ್’ ನಾಟಕ ನಡೆಯುತ್ತಿತ್ತು. ಸಾಕ್ರೆಟಿಸ್‌ನನ್ನು ಹೋಲುವ ಪಾತ್ರ ರಂಗದ ಮೇಲೆ ಬಂತು. ಆಗ ಸಾಕ್ರೆಟಿಸ್ ‘ಈ ನಾಟಕದಲ್ಲಿ ಗೇಲಿಗೊಳಗಾಗುತ್ತಿರುವವನು ನಾನೇ’ ಎಂಬುದು ಎಲ್ಲರಿಗೂ ಕಾಣುವಂತೆ ಎದ್ದು ನಿಂತುಕೊಂಡ!

ಸಾಕ್ರೆಟಿಸ್‌ಗೆ ಸಾವಿರಾರು ವರ್ಷಗಳ ಕೆಳಗೆ ಇದ್ದ ಆತ್ಮವಿಶ್ವಾಸ, ಹಾಸ್ಯಪ್ರಜ್ಞೆ ಹುಂಬ ಜನರ ಹುಸಿ ಭಜನೆಯ ಪರಾಕು ಪಂಪುಗಳಿಂದ ಉಬ್ಬುವ ಬಲೂನುಗಳಾದ ಈ ಕಾಲದ ನಾಯಕರಿಗೆ ಎಲ್ಲಿಂದ ಬಂದೀತು! ಅರುವತ್ತು ವರ್ಷಗಳ ಕೆಳಗೆ, ತಮ್ಮನ್ನು ಗೇಲಿ ಮಾಡಿ ಖ್ಯಾತ ವ್ಯಂಗ್ಯಚಿತ್ರಕಾರ ಶಂಕರ್ ಬರೆದ ಕಾರ್ಟೂನನ್ನು ನೆಹರೂ ತಮ್ಮ ಕಚೇರಿಯ ಗೋಡೆಯ ಮೇಲೆ ತೂಗು ಹಾಕಿಕೊಂಡಿದ್ದರು. ಆದರೆ ಅವರ ಪುತ್ರಿ ಇಂದಿರಾಗಾಂಧಿಯವರನ್ನು ತಮಾಷೆ ಮಾಡಿದ್ದ ನಾಟಕವೊಂದು ನಡೆಯಲು ಇಂದಿರಾ ಭಕ್ತರು ಬಿಡಲಿಲ್ಲ! ಆದರೂ ಆ ಕಾಲವೇ ಎಷ್ಟೋ ಪರವಾಗಿರಲಿಲ್ಲ. ಆಳುವವರನ್ನು ಟೀಕಿಸುವ ನಾಟಕಗಳು ಬರುತ್ತಲೇ ಇದ್ದವು. ಆದರೆ ಈ ಕಾಲದ ಸರಕಾರಗಳು, ಅವುಗಳ ಗುಂಪುಗಳು ಸ್ಟ್ಯಾಂಡ್ ಅಪ್ ಕಾಮಿಡಿ ಮಾಡುವ ಹುಡುಗ, ಹುಡುಗಿಯರಿಗೆ ಕಿರಿಕಿರಿ ಮಾಡುತ್ತಲೇ ಇರುತ್ತವೆ; ‘ಕಿರುಕುಳಜೀವಿ’ಗಳ, ಅಂದರೆ ‘ಕಿಕುಜೀ’ಗಳ, ಉಪಟಳ ನಡೆಯುತ್ತಲೇ ಇರುತ್ತದೆ.

ಸಹಜ ನಗೆ ಕಳೆದುಕೊಂಡ ನಾಡು ಅಸಹನೆಯ ಬೀಡಾಗತೊಡಗುತ್ತದೆ. ಸಂಗೀತ, ಕಲೆ, ಸಾಹಿತ್ಯಗಳ ಖದರ್ ಕಳೆದುಕೊಂಡ ಸಮಾಜಗಳು ಸ್ಮಶಾನಗಳಾಗುತ್ತವೆ; ಮನುಷ್ಯರು ರಕ್ಕಸರಾಗತೊಡಗುತ್ತಾರೆ. ಹಿಂದೊಮ್ಮೆ ಸ್ವಘೋಷಿತ ‘ದೇವಮಾನವ’ ಗರ್ಮೀತ್ ರಾಮ್ ರಹೀಮರನ್ನು ರಿಯಾಲಿಟಿ ಶೋನಲ್ಲಿ ಅಣಕ ಮಾಡಿದ್ದಕ್ಕೆ ಹರ್ಯಾಣದ ನಟ, ಕಾಮಿಡಿಯನ್ ಕಿಕು ಶಾರ‌್ದ ಮೊಕದ್ದಮೆ ಎದುರಿಸಬೇಕಾಯಿತು. ಸಂವಿಧಾನವೇ ಬೇಡವೆನ್ನುವ ಧಾರ್ಮಿಕ ಮುಖಂಡರು ಸಂವಿಧಾನ ಕೊಟ್ಟ ಕೋರ್ಟುಗಳನ್ನು ದುರ್ಬಳಕೆ ಮಾಡಿಕೊಂಡ ಪ್ರಸಂಗಗಳಲ್ಲಿ ಇದೂ ಒಂದು. ತನ್ನ ಶೋ ಬಗ್ಗೆ ಕಿಕು ಕ್ಷಮೆ ಯಾಚಿಸಿದ ಮೇಲೂ ರಾಮ್ ರಹೀಮ್ ಭಕ್ತನೊಬ್ಬ ತನ್ನ ‘ಧಾರ್ಮಿಕ ಭಾವನೆಗಳಿಗೆ ನೋವುಂಟಾಗಿದೆ’ ಎಂದು ಕಾನೂನಿನ ಮೊರೆ ಹೋದ.

ಇದರಿಂದ ಮತ್ತೊಂದು ತಮಾಷೆ ನಡೆಯಿತು. ಭಕ್ತನ ಉತ್ಸಾಹದ ಫಲವಾಗಿ ಅವನ ಗುರುವಿನ ಬಗೆಗಿನ ತಮಾಷೆಗೆ ಹೆಚ್ಚು ಪ್ರಚಾರ ಸಿಕ್ಕಿತು; ಆ ತಮಾಷೆ ಎಂಥದಿರಬಹುದೆಂದು ಕುತೂಹಲಿಗಳು ಜಾಲತಾಣಗಳನ್ನು ಹುಡುಕತೊಡಗಿದರು. ಗುರುವಿನ ‘ಮಾನ’ ರಕ್ಷಣೆಗೆ ಹೊರಟ ಭಕ್ತನೊಬ್ಬ ಗುರುವಿನ ಮಾನ ಹರಾಜು ಹಾಕಿದ! ಪ್ರಜಾಪ್ರಭುತ್ವ ಬಂದ ಮೇಲೆ ರಾಜರುಗಳು ಸಿಂಹಾಸನ ಖಾಲಿ ಮಾಡಿದರೂ ಭಾರತೀಯರ ತಲೆಯಿಂದ ಜಾಗ ಖಾಲಿ ಮಾಡಿಲ್ಲ! ಇಲ್ಲಿ ಶಾಸಕ, ಮಂತ್ರಿ, ಮುಖ್ಯಮಂತ್ರಿ, ಪ್ರಧಾನಮಂತ್ರಿ ಎಲ್ಲರೂ ರಾಜರೇ! ಇಲ್ಲಿ ಸಾಧುಗಳನ್ನು ‘ಸಾಧು ಮಹಾರಾಜ್’ ಎನ್ನುತ್ತಾರೆ! ಈ ‘ಮಹಾರಾಜ’ರಿಗೆ ಚರಿತ್ರೆಯ ಮಹಾರಾಜರು ವಿದೂಷಕರನ್ನು ಇಟ್ಟುಕೊಂಡು ತಮ್ಮನ್ನೇ ಯಾಕೆ ಗೇಲಿ ಮಾಡಿಸಿಕೊಳ್ಳುತ್ತಿದ್ದರು ಎಂಬುದು ಗೊತ್ತಿರಲಿಕ್ಕಿಲ್ಲ.

ಅಕ್ಬರನ ಆಸ್ಥಾನದಲ್ಲಿದ್ದ ಬೀರಬಲ್, ಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ತೆನಾಲಿ ರಾಮಕೃಷ್ಣಥರದವರ ಜಾಣ್ಮೆಯ ಪ್ರಸಂಗಗಳು ಎಲ್ಲರಿಗೂ ಗೊತ್ತಿವೆ. ಅವೆಲ್ಲ ಎಷ್ಟು ನಿಜವೋ, ಆ ಕಾಲದ ಜನರ ಕಲ್ಪನಾವಿಲಾಸಗಳಿಂದ ಎಷ್ಟು ಹುಟ್ಟಿ ಬೆಳೆದವೋ ಹೇಳುವುದು ಕಷ್ಟ. ಒಂದು ಕಾಲದ ಜನ ಒಬ್ಬ ಬುದ್ಧಿವಂತನ ಸುತ್ತ ಇಂಥ ಕತೆಗಳನ್ನು ಹೆಣೆದಿರುವ ಸಾಧ್ಯತೆಗಳಿವೆ. ಇವು ಒಂದು ಕಾಲದಿಂದ ಮತ್ತೊಂದು ಕಾಲದ ಜಾಣನಿಗೂ ಹಬ್ಬಿ, ಆಯಾ ಕಾಲದ ಸ್ಥಳೀಯ ಕತೆಗಳಾಗಿರುವ ಸಾಧ್ಯತೆಗಳಿವೆ.

ರಾಜರು ಯಾಕೆ ವಿದೂಷಕರನ್ನು ಇಟ್ಟುಕೊಂಡಿರುತ್ತಾರೆ? ಈ ಕುರಿತು ಫ್ರಾಯ್ಡಿಯನ್ ಮನೋವಿಜ್ಞಾನವನ್ನು ಆಧರಿಸಿ ಪಶ್ಚಿಮದ ಮನೋವೈಜ್ಞಾನಿಕ ಸಾಹಿತ್ಯವಿಮರ್ಶೆ ಕುತೂಹಲಕರ ವ್ಯಾಖ್ಯಾನ ಕೊಡುತ್ತದೆ: ಅದರ ಪ್ರಕಾರ, ರಾಜ ‘ಇಗೋ’ದ (ಅಹಂ) ಸಂಕೇತ; ವಿದೂಷಕ ರಾಜನ ‘ಆಲ್ಟರ್ ಇಗೋ’ದ (ಪರ್ಯಾಯ ಅಹಂ) ಸಂಕೇತ. ರಾಜ ಮಾಡಲಾರದ್ದನ್ನೆಲ್ಲ ವಿದೂಷಕ ಮಾಡುತ್ತಾನೆ. ರಾಜ ಘನಗಂಭೀರವಾಗಿ ‘ನಾವು ಕೂಲಂಕಷವಾಗಿ ಪರಾಂಬರಿಸುತ್ತೇವೆ’ ಎಂಬ ಉಬ್ಬಿದ ಭಾಷೆಯಲ್ಲಿ ಮಾತಾಡುತ್ತಿರುತ್ತಾನೆ; ವಿದೂಷಕ ಹಾದಿಬೀದಿಯ ಸ್ಟೈಲಿನಲ್ಲಿ ಮಾತಾಡುತ್ತಿರುತ್ತಾನೆ; ರಾಜಭಾಷೆಯನ್ನು ಗೇಲಿ ಮಾಡುತ್ತಿರುತ್ತಾನೆ. ರಾಜ ಗಂಭೀರವಾಗಿ ನಡೆಯುತ್ತಿದ್ದರೆ, ವಿದೂಷಕ ಪಲ್ಟಿ ಹೊಡೆಯುತ್ತಿರುತ್ತಾನೆ. ವಿದೂಷಕನ ಗೇಲಿಯ ಮೂಲಕ ರಾಜ ತಾನು ಕಾಣದ ವಾಸ್ತವಗಳನ್ನು ಕಾಣಲೆತ್ನಿಸುತ್ತಾನೆ. ಅಹಮ್ಮಿನಲ್ಲಿ ಮೇಲೆ ತೇಲುತ್ತಿರುವ ರಾಜನನ್ನು ವಿದೂಷಕ ನೆಲಕ್ಕೆಳೆದು ತರುತ್ತಿರುತ್ತಾನೆ.

ಈಚೆಗೆ ತಮ್ಮ ‘ಧಾರ್ಮಿಕ ಭಾವನೆಗಳಿಗೆ ನೋವುಂಟಾಗುತ್ತಿದೆ’ ಎಂದು ಹುಸಿ ದೂರು ಕೊಡುವವರ ಸಂಖ್ಯೆ ಹೆಚ್ಚುತ್ತಿದೆ. ಇಂಥವರಿಗೆ ಆಸಕ್ತ ಹಿತಗಳು ಹಾಗೂ ಮೂಲಭೂತವಾದಿ ಗುಂಪುಗಳ ಧನಬೆಂಬಲವೂ ಇರುತ್ತದೆ. ವಿಚಾರವಾದಿ ಹುಲಿಕಲ್ ನಟರಾಜ್ ನಡೆಸಿಕೊಟ್ಟ ‘ಪವಾಡ ಬಯಲು’ ಕಾರ್ಯಕ್ರಮದಿಂದ ತನ್ನ ಧಾರ್ಮಿಕ ಭಾವನೆಗಳಿಗೆ ನೋವಾಗಿದೆಯೆಂದು ವ್ಯಕ್ತಿಯೊಬ್ಬ ಪೊಲೀಸರಿಗೆ ದೂರು ಕೊಟ್ಟ. ಪೊಲೀಸರು ಮೊಕದ್ದಮೆ ದಾಖಲಿಸಿದರು. ವಿಚಾರವಾದಿ, ನ್ಯಾಯವಾದಿ ರವಿವರ್ಮಕುಮಾರ್ ಆ ದೂರನ್ನು ಆಧರಿಸಿದ ಮೊಕದ್ದಮೆಯ ರದ್ದತಿಗಾಗಿ ರಾಜ್ಯ ಹೈಕೋರ್ಟನ್ನು ಕೋರಿದರು.

ಮೊಕದ್ದಮೆಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಮೋಹನದಾಸ್ ಕೊಟ್ಟ ತೀರ್ಪನ್ನು (‘ಹುಲಿಕಲ್ ನಟರಾಜ್ ವರ್ಸಸ್ ಸ್ಟೇಟ್ ಆಫ್ ಕರ್ನಾಟಕ’) ನೀವು ಹೈಕೋರ್ಟ್ ವೆಬ್‌ಸೈಟಿನಲ್ಲಿ ನೋಡಬಹುದು. ಈ ತೀರ್ಪಿನಲ್ಲಿ ವಾಕ್ ಸ್ವಾತಂತ್ರ್ಯ ಕುರಿತ ಮಹತ್ವದ ವ್ಯಾಖ್ಯಾನವನ್ನು ಪತ್ರಕರ್ತರು, ಸಾರ್ವಜನಿಕ ಜೀವನದಲ್ಲಿರುವವರು ತಪ್ಪದೆ ಗಮನಿಸಬೇಕು: ಸಂವಿಧಾನ ಕೊಟ್ಟಿರುವ ‘ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ’ದಲ್ಲಿ ‘ಫ್ರೀಡಂ ಟು ಡಿಸೆಂಟ್’ (ಭಿನ್ನಮತ ವ್ಯಕ್ತಪಡಿಸುವ ಸ್ವಾತಂತ್ರ್ಯ) ಹಾಗೂ ವಿಮರ್ಶಿಸುವ ಸ್ವಾತಂತ್ರ್ಯ (ಫ್ರೀಡಂ ಟು ಕ್ರಿಟಿಸೈಸ್) ಕೂಡ ಸೇರಿವೆ ಎಂಬುದನ್ನು ತೀರ್ಪು ಗುರುತಿಸುತ್ತದೆ. ಇದು ಸಂವಿಧಾನದ 42ನೆಯ ತಿದ್ದುಪಡಿಯ ನಂತರ ಸೇರಿರುವ ‘ಫಂಡಮೆಂಟಲ್ ರೈಟ್ಸ್’ನ ಭಾಗವೂ ಆಗಿದೆ ಎನ್ನುತ್ತದೆ ಈ ತೀರ್ಪು: ‘ಆರ್ಟಿಕಲ್ 51ಎ (ಎಚ್) ಪ್ರಕಾರ ವೈಜ್ಞಾನಿಕ ಮನೋಭಾವ, ಮಾನವೀಯತೆ ಹಾಗೂ ಎಲ್ಲವನ್ನೂ ಪರೀಕ್ಷಿಸುವ ಮನಸ್ಸುಗಳನ್ನು ಬೆಳೆಸುವುದರ ಮೂಲಕ ಸಮಾಜದಲ್ಲಿ ಪರಿವರ್ತನೆ ತರುವುದು ನಮ್ಮ ಮೂಲಭೂತ ಕರ್ತವ್ಯಗಳಲ್ಲಿ ಒಂದು.

ಸ್ಥಾವರವಾದ ಸ್ವಾಮೀಜಿಗಳನ್ನು, ಮಠಗಳನ್ನು ವೈಚಾರಿಕವಾಗಿ ವಿಮರ್ಶಿಸಿ, ಸಮಾಜವನ್ನು ತಿದ್ದುವ ರೀತಿಯನ್ನು ವಚನ ಸಾಹಿತ್ಯವೇ ನಮಗೆ ತೋರಿಸಿಕೊಟ್ಟಿದೆ. ‘ಭಕ್ತಿಯೆಂಬುದು ತೋರುಂಬ ಲಾಭ’ ಎನ್ನುತ್ತಾನೆ ಅಲ್ಲಮ. ಹೀಗೆ ‘ತೋರುಂಬ ಲಾಭ’ ವಾಗಿರುವ ‘ಭಕ್ತಿ’ಯನ್ನು ಜನರಲ್ಲಿ ಬಿತ್ತುತ್ತೇವೆಂದು ಹೇಳಿಕೊಳ್ಳುತ್ತಾ, ಲೆಕ್ಕಪತ್ರಗಳಿಲ್ಲದ ಕೋಟಿಗಟ್ಟಲೆ ಹಣ ನುಂಗುವ ಸ್ವಾಮಿಗಳಾಗಲೀ, ರಾಜಕಾರಣಿಗಳಾಗಲೀ ತಮ್ಮ ಕ್ರಿಯೆಗಳು ಪ್ರಶ್ನಾತೀತವೆಂದು ತಿಳಿಯಲಾಗದು. ಸಕಾರಣ ಟೀಕೆ, ವಿಮರ್ಶೆ ಹಾಸ್ಯಗಳನ್ನು ಅವರು ಸ್ವೀಕರಿಸುತ್ತಲೇ ಇರಬೇಕಾಗುತ್ತದೆ.

‘ಆಳವಾದ ವಿನೋದಪ್ರಜ್ಞೆ ಇರುವವರಲ್ಲಿ ಉನ್ನತ ಬುದ್ಧಿಶಕ್ತಿ, ಗಟ್ಟಿ ಪ್ರಾಮಾಣಿಕತೆ ಇರುತ್ತವೆ’ ಎಂಬ ಚಿಂತಕರೊಬ್ಬರ ಮಾತನ್ನು ನೀವು ಕೇಳಿರಬಹುದು. ವಿನೋದಪ್ರಜ್ಞೆ ಮನುಷ್ಯರ ವ್ಯಕ್ತಿತ್ವಕ್ಕೆ ತರುವ ಗಟ್ಟಿತನ ಎಂಥದೆಂಬುದು ರಾಜಕಾರಣಿಗಳಿಗೆ, ಸ್ವಾಮೀಜಿಗಳಿಗೆ ಗೊತ್ತಿರಲಿಕ್ಕಿಲ್ಲ. ‘ನಗುವು ಸಹಜದ ಧರ್ಮ’ ಎಂದ ಸರ್ವಜ್ಞನ ಜನಪ್ರಿಯ ತ್ರಿಪದಿಯನ್ನು ಈ ಮಹಾಶಯರು ಕೇಳಿಸಿಕೊಂಡಿರಲಿಕ್ಕಿಲ್ಲ. ಮುಲ್ಲಾ ನಸಿರುದ್ದೀನನ ಕತೆಗಳನ್ನು ಕೇಳಿರಬಹುದಾದ ಮುಲ್ಲಾಗಳಿಗೂ ಹಾಸ್ಯಪ್ರಜ್ಞೆ ಇರುವ ಕುರುಹು ಕಾಣುತ್ತಿಲ್ಲ! ರಾಜಕಾರಣಿಗಳು ಚುನಾವಣೆಯಲ್ಲಾದರೂ ಜನರ ಟೀಕೆ, ತಮಾಷೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಸ್ವಾಮೀಜಿಗಳು ಪಲ್ಲಕ್ಕಿಯಿಂದ, ರಾಜ್ಯಪಾಲರುಗಳ ಕುರ್ಚಿಗಿಂತ ಒಂದಿಂಚು ಎತ್ತರಕ್ಕೆ ಹಾಕಿಕೊಳ್ಳುವ ಸಿಂಹಾಸನಗಳಿಂದ, ಕೆಳಗಿಳಿದು ಸತ್ಯ ಕಾಣಬೇಕಾಗುತ್ತದೆ. ಇಲ್ಲದಿದ್ದರೆ ಇವರೂ ನಿಗೂಢವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸ್ವಾಮೀಜಿಗಳ ಹಾದಿ ಹಿಡಿಯಬೇಕಾಗಬಹುದು. ಆತ್ಮಹತ್ಯೆಗೆ ಮುನ್ನ, ತಮ್ಮನ್ನು ನೋಡಿ ತಾವೇ ನಗುವ ಸಹಜ ಧರ್ಮವನ್ನು ಸ್ವಾಮೀಜಿಗಳೂ ಮೈಗೂಡಿಸಿಕೊಳ್ಳಲಿ!

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ನಟರಾಜ್ ಹುಳಿಯಾರ್

contributor

Similar News