ಲಾ ವಿದ್ಯಾರ್ಥಿನಿ ಆಲಿಯಾ ಮತ್ತು ಲೇಡಿ ಕಾನ್‌ಸ್ಟೇಬಲ್ ಕೌರ್!

ಮೇಲುನೋಟಕ್ಕೆ ತಕ್ಷಣದ ಕ್ಷಿಪ್ರ ಪ್ರತಿಕ್ರಿಯೆಗಳಂತೆ ಕಾಣುವ ದಿನನಿತ್ಯದ ಘಟನೆಗಳಲ್ಲಿ ವ್ಯಾಪಕ ರಾಜಕೀಯ ಸಂದೇಶಗಳೂ ಅಡಗಿರಬಲ್ಲದು. ಈಚಿನ ಚುನಾವಣಾ ಕಾಲದ ಅಂಥ ಎರಡು ಚುರುಕಾದ ಪ್ರತಿಕ್ರಿಯೆಗಳು ಎಲ್ಲರ ಗಮನಕ್ಕೆ ಅರ್ಹವಾಗಿವೆ!

Update: 2024-06-08 05:26 GMT

ಈಅಂಕಣದಲ್ಲಿ ‘ಸಾಂಸ್ಕೃತಿಕ’, ‘ಸಾಹಿತ್ಯಕ’ ಎನ್ನಲಾಗುವ ಬರಹಗಳನ್ನೇ ಹೆಚ್ಚು ಬರೆಯುತ್ತಿರುವುದನ್ನು ಓದುಗ, ಓದುಗಿಯರು ಗಮನಿಸಿರಬಹುದು. ಆದರೆ ಈ ಅಂಕಣ ಬರೆಯುವ ದಿನ ಲೋಕಸಭೆಯ ರಾಜಕೀಯ ಸುದ್ದಿ, ವಿಶ್ಲೇಷಣೆಗಳಲ್ಲೇ ಮನಸ್ಸು ಮುಳುಗಿತ್ತು; ಹೀಗಾಗಿ, ಈ ಚುನಾವಣಾ ಪರ್ವದ ಎರಡು ವಿಭಿನ್ನ ಘಟನೆಗಳಲ್ಲಿನ ಮಹಿಳಾ ಪ್ರತಿಕ್ರಿಯೆಗಳತ್ತ ಸುತ್ತ ಮನಸ್ಸು ಸುತ್ತತೊಡಗಿತು. ಈ ಎರಡೂ ಘಟನೆಗಳಲ್ಲಿ ಸಾಂಸ್ಕೃತಿಕ ಎನ್ನಬಹುದಾದ ಪ್ರತಿಕ್ರಿಯೆಗಳು ಏಕ್‌ದಂ ಪೊಲಿಟಿಕಲ್ ಪ್ರತಿಕ್ರಿಯೆಗಳಾಗುವ ರೀತಿ ಕೂಡ ಕಾಣುತ್ತದೆ ಎನ್ನುವುದೂ ನಿಜ.

ಮೊದಲನೆಯದು, ಲೋಕಸಭಾ ಚುನಾವಣೆಯ ನಂತರ ನಡೆದ ವಿಧಾನ ಪರಿಷತ್ ಚುನಾವಣೆಯ ಕಾಲದ ಪ್ರತಿಕ್ರಿಯೆ: ನೈಋತ್ಯ ವಿಧಾನ ಪರಿಷತ್ ಕ್ಷೇತ್ರದಿಂದ ಚುನಾವಣೆಗೆ ನಿಂತಿದ್ದ ಉಡುಪಿಯ ಮಾಜಿ ಶಾಸಕ ರಘುಪತಿ ಭಟ್‌ಗೆ ಉಡುಪಿಯ ಆಲಿಯಾ ಅಸಾದಿ ಎಂಬ ಹುಡುಗಿ ಕೊಟ್ಟ ಚುರುಕಾದ ಕುಟುಕು:

‘‘ನಾನು ಹಿಜಾಬ್ ಧರಿಸಿದ ಒಂದೇ ಕಾರಣಕ್ಕೆ ನನ್ನನ್ನು ಕಾಲೇಜಿನಿಂದ ಹೊರದೂಡಲಾಯಿತು. ಆಗ ಅದು ನಿಮ್ಮ ಪಕ್ಷದ ಸಾಧನೆಯೆಂದು ತೋರಿಸಿದಿರಿ. ಆಗ ನಾನು ಉಚ್ಚಾಟಿತ ವಿದ್ಯಾರ್ಥಿನಿಯಾಗಿದ್ದೆ; ನಿಮಗೆ ಪಕ್ಷದಲ್ಲಿ ಸ್ಥಾನವಿತ್ತು. ಇವತ್ತು ನಾನು ಲಾ ವಿದ್ಯಾರ್ಥಿನಿ; ನಿಮ್ಮನ್ನು ಪಕ್ಷದಿಂದ ಹೊರ ಹಾಕಲಾಗಿದೆ.’’

ಇದು ಆಲಿಯಾ ‘ಎಕ್ಸ್’ ವೇದಿಕೆಯಲ್ಲಿ ಬರೆದ ಇಂಗ್ಲಿಷ್ ಪೋಸ್ಟ್‌ನ ಸಾರಾಂಶ.

ಎರಡನೆಯದು, ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ನಂತರದ ಘಟನೆ:

ಚಂಡಿಗಡದ ಏರ್‌ಪೋರ್ಟ್‌ಗೆ ಬಂದಿಳಿದ ಕಂಗನಾ ರಣಾವತ್ ಎಂಬ ತಲೆತಿರುಕ ಹಿಂದಿ ನಟಿಯ ಕೆನ್ನೆಗೆ ಕುಲ್ವಿಂದರ್ ಕೌರ್ ಎಂಬ ಮಹಿಳಾ ಕಾನ್‌ಸ್ಟೇಬಲ್ ಹೊಡೆದರು; ಇಂಡಸ್ಟ್ರಿಯಲ್ ಸೆಂಟ್ರಲ್ ಸೆಕ್ಯುರಿಟಿ ಫೋರ್ಸ್‌ ಗಾಗಿ ಕೆಲಸ ಮಾಡುವ ಈ ಮಹಿಳಾ ಕಾನ್‌ಸ್ಟೇಬಲ್ ತನ್ನ ಸಿಟ್ಟಿನ ಪ್ರತಿಕ್ರಿಯೆಗೆ ಕಾರಣ ಏನೆಂಬುದನ್ನೂ ಹೇಳಿದರು:

‘‘2020ರಲ್ಲಿ ಟಿಕ್ರಿ ಗಡಿಯಲ್ಲಿ ನಡೆದ ರೈತರ ಹೋರಾಟದಲ್ಲಿ ಹೆಂಗಸರೂ ಭಾಗಿಯಾಗಿದ್ದರು. ಈ ಹೆಂಗಸರು ನೂರು ನೂರು ರೂಪಾಯಿ ಇಸ್ಕೊಂಡು ಅಲ್ಲಿ ಹೋರಾಟ ಮಾಡ್ತಿದ್ದಾರೆ ಎಂದಿದ್ದಳು ಈ ಕಂಗನಾ. ನಮ್ಮ ತಾಯಿಯೂ ಆ ಪ್ರತಿಭಟನೆಯಲ್ಲಿ ಕೂತಿದ್ದರು. ಕಂಗನಾ ಮಾತಿನಿಂದ ನನಗೆ ಸಿಟ್ಟು ಬಂದಿತ್ತು. ಈ ಕಂಗನಾ ಅಲ್ಲಿ ಹೋಗಿ ಕೂರ್ತಾಳೇನು?’’

ಈಗ ಅಮಾನತಿಗೊಳಗಾಗಿ ವಿಚಾರಣೆ ಎದುರಿಸಲಿರುವ ಕೌರ್, ‘‘ಕಂಗನಾ ರೈತರನ್ನು ಅವಮಾನಿಸಿದ್ದಕ್ಕಾಗಿ ನಾನು ಹೀಗೆ ಮಾಡಿದೆ’’ ಎಂದಿದ್ದಾರೆ. ರೈತ ಕುಟುಂಬಕ್ಕೆ ಸೇರಿದ ಕೌರ್ 2009ರಿಂದ ಕಾನಸ್ಟೇಬಲ್ ಕೆಲಸದಲ್ಲಿದ್ದಾರೆ. ಈ ಹಿಂದೆ ಅವರ ವಿರುದ್ಧ ಯಾವುದೇ ದೂರು, ವಿಚಾರಣೆ ದಾಖಲಾಗಿಲ್ಲ. ಅವರ ಗಂಡ ಕೂಡ ಇದೇ ಏರ್‌ಪೋರ್ಟ್ ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಸಮಾಜ, ರಾಜಕಾರಣ, ಸಂಸ್ಕೃತಿಗಳ ಮೊದಲ ಪ್ರಾಥಮಿಕ ಪಾಠವೂ ಗೊತ್ತಿರದ ಕಂಗನಾ ‘‘ಈ ಟೆರರಿಸಂ ಮತ್ತು ಉಗ್ರವಾದ ಎಂದು ಕೊನೆಗೊಳ್ಳುವುದೋ...’’ ಎಂದೆಲ್ಲ ಹುಂಬ ಪ್ರತಿಕ್ರಿಯೆ ಬರೆದುಕೊಂಡಿದ್ದಾರೆ; ಕೌರ್ ಕೊಟ್ಟ ಕೆನ್ನೆಯೇಟು ಭವ್ಯ ಬಂಗಲೆಯಲ್ಲಿ ಕೂತು ತಾನು ಮಾಡುವ ‘ಡಿಜಿಟಲ್ ಟೆರರಿಸಂ’ಗೆ ಅನೇಕರ ಪ್ರತಿಕ್ರಿಯೆಯೂ ಆಗಿರಬಹುದು ಎಂಬುದು ಈ ನವ ರಾಜಕಾರಣಿ ನಟೀಮಣಿಗೆ ಗೊತ್ತಿರಲಿಕ್ಕಿಲ್ಲ. ಅದೇ ಸಂದರ್ಭದಲ್ಲಿ ಕಂಗನಾ ತಂಡದ ಗಂಡಸೊಬ್ಬ ಬೇರೊಬ್ಬ ಮಹಿಳೆಯ ಕೆನ್ನೆಗೆ ಹೊಡೆದ ವೀಡಿಯೋವನ್ನೂ ನೆಟ್ಟಿಗರು ಹೊರ ಬಿಟ್ಟು ಕಂಗನಾಗೆ ಪ್ರಶ್ನೆ ಎಸೆಯುತ್ತಿದ್ದಾರೆ. ಈ ಬಗ್ಗೆ ಮಾತ್ರ ಆಕೆ ತುಟಿ ಬಿಚ್ಚಿಲ್ಲ.

ಅಂತೂ ಪೋಷಕ ನಟಿ ಸ್ಮತಿ ಇರಾನಿ ಇಲ್ಲದ ನವ ಪಾರ್ಲಿಮೆಂಟಿನಲ್ಲಿ ಹೊಸ ಹೀರೋಯಿನ್ ಆಗಿ ಮಿಂಚಬಹುದೆಂದು ಹೊರಟಿದ್ದ ಕಂಗನಾ ಎದುರು ಲೇಡಿ ಕಾನ್‌ಸ್ಟೇಬಲ್ ಕೌರ್ ಹೊಸ ಹೀರೋಯಿನ್ ಆಗಿ ಎಮರ್ಜ್ ಆಗಿರುವುದು ಕುತೂಹಲಕರವಾಗಿದೆ!

ಇತ್ತ ರಾಜಕೀಯದಲ್ಲಿ ಪಳಗಿರುವ ರಘುಪತಿ ಭಟ್ ಆಲಿಯಾ ಮಾಡಿದ ಚುಡಾವಣೆಯನ್ನು ಡಿಪ್ಲೊಮ್ಯಾಟಿಕ್ ಆಗಿ ನಿಭಾಯಿಸಲು ಯತ್ನಿಸಿದ್ದಾರೆ. ತಾನು ಅಂಥವನಲ್ಲ ಎಂದು ಸಮಜಾಯಿಷಿ ಕೊಡಲು ಹೋಗಿ ತಮಾಷೆಯ ವಸ್ತುವಾಗಿದ್ದಾರೆ. ಆದರೂ ಒಬ್ಬ ಶಾಸಕನಾಗಿ ಅವತ್ತಿನ ಹಿಜಾಬ್ ಪ್ರಕರಣದಲ್ಲಿ ಕೊನೇ ಪಕ್ಷ ನ್ಯೂಟ್ರಲ್ ಆಗಿಯಾದರೂ ಇರಬೇಕಿತ್ತು ಎಂದು ಇವತ್ತು ಅವರಿಗೆ ಅನ್ನಿಸಿರಬಹುದೆ? ಅಕಸ್ಮಾತ್ ಅವತ್ತು ಅವರು ಹಿಜಾಬ್ ವಿರುದ್ಧದ ತರಲೆಯಲ್ಲಿ ದೂರ ಕಾಯ್ದುಕೊಂಡು ಈ ಬಡಪಾಯಿ ಹುಡುಗಿಯರು ಪರೀಕ್ಷೆ ಬರೆಯಲಾದರೂ ನೆರವಾಗಿದ್ದರೆ ಆಲಿಯಾ ಥರದ ನೂರು ಹುಡುಗಿಯರು ಅವರಿಗೆ ವೋಟು ಕೊಟ್ಟಿರುತ್ತಿದ್ದರು. ‘ನಾವು ಕೊಡುವುದಕ್ಕಿಂತ ಹೆಚ್ಚಿನ ಪ್ರೀತಿ ಕೊಡುವವರು ದಲಿತರು ಮತ್ತು ಮುಸ್ಲಿಮರು’ ಎಂದು ಲಂಕೇಶರು ಬರೆದ ಮಾತಿನ ಆಳದ ಸತ್ಯ ಭಟ್ಟರಂಥವರಿಗೆ ಗೊತ್ತಿರಲಿಕ್ಕಿಲ್ಲ.

ಇದೇ ರೀತಿಯಲ್ಲಿ, ಕಂಗನಾ ಅವತ್ತು ಟಿಕ್ರಿ ಗಡಿಯಲ್ಲಿ ಬಿಸಿಲು, ಮಳೆಯೆನ್ನದೆ ರೊಟ್ಟಿ ಬೇಯಿಸಿ ರೈತರಿಗೆ ಕೊಡುತ್ತಿದ್ದ ಧೀರ ರೈತ ಮಹಿಳೆಯರ ಬಗ್ಗೆ ಒಂದು ಗೌರವದ ಮಾತಾಡಿದ್ದರೂ ಸಾಕಾಗಿತ್ತು; ಇವತ್ತು ಕೆನ್ನೆಗೆ ಹೊಡೆದ ಕಾನ್‌ಸ್ಟೇಬಲ್ ಕೌರ್ ಆಕೆಯ ಆಟೋಗ್ರಾಫ್ ಕೇಳಿರುತ್ತಿದ್ದರು. ರೈತರು, ಸಮಾಜ ಯಾವುದರ ಬಗೆಗೂ ಏನೂ ಗೊತ್ತಿರದೆ ಒಂದು ಜುಜುಬಿ ಲೋಕಸಭಾ ಸ್ಥಾನಕ್ಕಾಗಿ ಬಿಜೆಪಿಯನ್ನು ಮೆಚ್ಚಿಸಲು ಏನೇನೋ ಬರೆದು ತನಗಿದ್ದ ಅಷ್ಟಿಷ್ಟು ಗೌರವವನ್ನೇ ಕಳೆದುಕೊಂಡ ಕಂಗನಾ ಸ್ಥಿತಿ ನಗೆಪಾಟಲಾಗಿದೆ; ಅದೇ ರೀತಿಯಲ್ಲಿ, ಬಿಜೆಪಿಯನ್ನು ಮೆಚ್ಚಿಸಲು ಏನೆಲ್ಲಾ ಸರ್ಕಸ್ ಮಾಡಿದರೂ ಈಚೆಗೆ ಎರಡೆರಡು ಸಲ ಟಿಕೆಟ್ ನಿರಾಕರಿಸಲಾದ ರಘುಪತಿ ಭಟ್ ಸ್ಥಿತಿ ಕೂಡ.

ಈ ನಡುವೆ, ತನ್ನ ಹಾಗೂ ತನ್ನ ಗೆಳತಿಯರಿಗೆ ಆದ ಅನ್ಯಾಯ ಕಂಡು ರೇಗಿ, ಪುಟಿದೆದ್ದು ಲಾ ಓದುತ್ತಿರುವ ಆಲಿಯಾ ‘ಎಕ್ಸ್’, ‘ಫೇಸ್‌ಬುಕ್’ ಪೋಸ್ಟುಗಳ ಹುಸಿ ಮಂಪರಿನಲ್ಲಿ ಮುಳುಗದಿರಲಿ. ಅಲ್ಲಿ ತನ್ನ ಪರವಾಗಿ ಹೆಬ್ಬೆಟ್ಟೆತ್ತಿ ರೈಲು ಹತ್ತಿಸುವ ಅನಾಮಿಕರ ಪ್ರೋತ್ಸಾಹಕ್ಕೆ ಮರುಳಾಗದಿರಲಿ! ಕಾನೂನಿನ ಪ್ರಬಲ ಅಸ್ತ್ರದ ಮೂಲಕ ಆಲಿಯಾ ತನ್ನ ಸಮುದಾಯದ ಅಸಹಾಯಕ ಮಹಿಳೆಯರಿಗೆ ನೆರವಾಗುವಂತಾಗಲಿ.

ಅತ್ತ ಚಂಡಿಗಡದ ಕಾನ್‌ಸ್ಟೇಬಲ್ ಕೌರ್ ಕೂಡ ರೈತ ಮಹಿಳೆಯರ ಪರವಾಗಿ ಅಹಿಂಸಾತ್ಮಕವಾಗಿ, ಕಾನೂನಿನ ಚೌಕಟ್ಟಿನಲ್ಲೇ ಕೆಲಸ ಮಾಡುವಂತಾಗಲಿ. ಕೌರ್‌ಗೆ ಕಾನೂನಿನ ಪ್ರಕಾರ ತೊಂದರೆಯಾದರೆ ರೈತರು ಆಕೆಯ ನೆರವಿಗೆ ಬರಲಿ.

ಕೊನೆ ಟಿಪ್ಪಣಿ: ಜಾತಿ, ಧರ್ಮಗಳ ಗೋಡೆ

ಕಳಚಿ ಬಿದ್ದ ಗಳಿಗೆ

ಈ ಸಲದ ಚುನಾವಣೆಗಳ ಕಾಲದ ಮತ್ತೊಂದು ದೃಶ್ಯ: ಚುನಾವಣೆಯಲ್ಲಿ ಸೋತಿದ್ದ ಡಿ.ಕೆ. ಸುರೇಶ್‌ರನ್ನು ಮಂತ್ರಿ ಝಮೀರ್ ಅಹ್ಮದ್‌ಖಾನ್ ಅಪ್ಪಿಕೊಂಡ ಫೋಟೋ ನೋಡಿದೆ. ಆಗ ಹದಿಹರೆಯದ ಆರಂಭದ ನಮ್ಮೂರ ಪಂಚಾಯತ್ ಚುನಾವಣೆಯ ಫಲಿತಾಂಶದ ಕಾಲದ ದೃಶ್ಯ ನೆನಪಾಯಿತು. ಆ ದೃಶ್ಯ ಇವತ್ತಿಗೂ ನನ್ನ ಕಣ್ಣಿಗೆ ಕಟ್ಟಿದಂತಿದೆ.

ಅದೇ ಆಗ ಹೈಸ್ಕೂಲ್ ಮುಗಿಸಿದ್ದ ನಾನು ಅವತ್ತು ನಮ್ಮ ಮಿಡ್ಲ್‌ಸ್ಕೂಲಿನ ಮೈದಾನದಲ್ಲಿ ನಿಂತಿದ್ದೆ. ಆ ಮಧ್ಯಾಹ್ನ ಅಲ್ಲಿ ಪಂಚಾಯತ್ ಚುನಾವಣೆಗಳ ಫಲಿತಾಂಶ ಘೋಷಣೆಯಾಗುತ್ತಿತ್ತು. ಹುಳಿಯಾರಿನ ವಾರ್ಡ್ ಒಂದರಿಂದ ರಹಮತುಲ್ಲಾ ಸಾಬ್ ಗೆದ್ದಿದ್ದರು. ಅವರ ಅಭಿಮಾನಿಗಳು ಹಾರಗಳನ್ನು ಹಿಡಿದು ಅವರನ್ನು ಮುತ್ತಿಕೊಂಡಿದ್ದರು. ಅಲ್ಲೇ ಕೊಂಚ ದೂರದಲ್ಲಿ ಖಾಕಿ ನಿಕ್ಕರ್ ಹಾಗೂ ಖಾಕಿಷರಟು ಹಾಕಿದ್ದ ನಮ್ಮೂರ ಸ್ವೀಪರ್ ಸಂಕೋಚದಿಂದ ನಿಂತಿದ್ದರು. ರಹಮತ್ ತಕ್ಷಣ ಅವರತ್ತ ತೋಳು ಚಾಚುತ್ತಾ ‘‘ನೀವು ಕಣ್ರೋ ನೀವು!’’ ಎಂದು ಕೃತಜ್ಞತೆಯಿಂದ ಅವರನ್ನು ಬಾಚಿ ತಬ್ಬಿಕೊಂಡರು.

ನನ್ನ ಬಾಲ್ಯದ ಸಾಂಪ್ರದಾಯಿಕ ಸಮಾಜದಲ್ಲಿ ನಾನು ಎಂದೂ ಕಾಣದಿದ್ದ ಒಂದು ‘ಮುಟ್ಟಿಸಿಕೊಂಡ’ ಘಟನೆ ನಡೆದಿತ್ತು. ನಮ್ಮಂಥ ಹುಡುಗರ ಮನಸ್ಸಿನಲ್ಲಿ ಸಮಾಜ, ಶಾಲೆ, ಮನೆ, ನೆರೆಹೊರೆಗಳಿಂದಾಗಿ ಬೆಳೆದು ನಿಂತಿದ್ದ ಅಸ್ಪಶ್ಯತೆಯ ಗೋಡೆ ಏಕ್‌ದಂ ಮುರಿದು ಬಿದ್ದಿತ್ತು; ಅದು ಮುರಿದು ಬಿದ್ದಿದ್ದು ರಹಮತ್ ಸಾಹೇಬರು ನಮ್ಮೂರ ಸ್ವೀಪರ್ ಒಬ್ಬರನ್ನು ಸಹಜವಾಗಿ ಅಪ್ಪಿಕೊಂಡ ರೀತಿಯಿಂದ.

ಆದ್ದರಿಂದಲೇ ಇಂಥ ಆರೋಗ್ಯಕರ ಬಹಿರಂಗ ವರ್ತನೆಗಳ ಪರಿಣಾಮದ ಬಗ್ಗೆ ಇವತ್ತಿಗೂ ನನಗೆ ನಂಬಿಕೆಯಿದೆ. ಝಮೀರ್ ಸುರೇಶ್‌ರನ್ನು ಅಪ್ಪಿಕೊಂಡಿದ್ದು ನನಗೆ ಕೃತಕ ಅನ್ನಿಸಲಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ನಟರಾಜ್ ಹುಳಿಯಾರ್

contributor

Similar News