‘ಶೂದ್ರ’: ಅರೆ ಶತಮಾನದ ನಡಿಗೆ

23 ಸೆಪ್ಟಂಬರ್ 1973ರಂದು ಪ್ರಕಟವಾದ ‘ಶೂದ್ರ’ ಪತ್ರಿಕೆಯನ್ನು ಮೈಸೂರಿನಲ್ಲಿ ನಡೆದ ಐತಿಹಾಸಿಕ ಜಾತಿವಿನಾಶ ಸಮ್ಮೇಳನದಲ್ಲಿ ಹಂಚಿದ ಶ್ರೀನಿವಾಸ್, ಸಮ್ಮೇಳನವನ್ನು ಉದ್ಘಾಟಿಸಿದ ಕುವೆಂಪು ಅವರ ಕೈಗೂ ಕೊಟ್ಟರು. ‘‘ನಿಮ್ಮ ಹೆಸರೇನು?’’ ಎಂದರು ಕುವೆಂಪು. ‘‘ಶ್ರೀನಿವಾಸ ರೆಡ್ಡಿ’’ ಎಂದರು ಸಂಪಾದಕರು. ‘‘ನೀವು ಶೂದ್ರ ಶ್ರೀನಿವಾಸ’’ ಎಂದರು ಕುವೆಂಪು. ಅವತ್ತಿನಿಂದ ಸಂಪಾದಕರು ಶೂದ್ರ ಶ್ರೀನಿವಾಸ್, ಅಲಿಯಾಸ್, ಶೂದ್ರ ಆದರು! ಆ ಕಾಲಕ್ಕೆ ‘ಶ್ರೀನಿವಾಸ’ ಎಂಬ ಕಾವ್ಯನಾಮದಲ್ಲಿ ಬರೆಯುತ್ತಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ‘ಶೂದ್ರ’ದ ಸಂಪಾದಕರನ್ನು ‘‘ನಾನು ನಿಮ್ಮನ್ನ ಶೂದ್ರ ಅನ್ನೋಲ್ಲಪ್ಪ! ಶ್ರೀನಿವಾಸ ರೆಡ್ಡಿ ಅಂತಲೇ ಕರೀತೀನಿ’’ ಎನ್ನುತ್ತಿದ್ದರಂತೆ; ಇದು ಕೂಡ ಮಾಸ್ತಿ-ಕುವೆಂಪು ನಡುವಣ ಸಾಂಸ್ಕೃತಿಕ ವಾಗ್ವಾದದ ಅಡಿಟಿಪ್ಪಣಿಯಂತಿದೆ!

Update: 2024-02-17 05:56 GMT

ಇಸವಿ 1973. ಸಮಾಜವಾದಿ ಯುವಜನ ಸಭಾ, ವೈಚಾರಿಕ ಚಳವಳಿ, ಪ್ರತಿಭಟನೆಗಳಲ್ಲಿ ಉತ್ಸಾಹದಿಂದ ಓಡಾಡುತ್ತಿದ್ದ ಎಂ. ಶ್ರೀನಿವಾಸ ರೆಡ್ಡಿ ಒಂದು ಸಾಂಸ್ಕೃತಿಕ ಪತ್ರಿಕೆ ಮಾಡಬೇಕೆಂದು ಎಂ.ಡಿ. ನಂಜುಂಡಸ್ವಾಮಿಯವರ ಬಳಿ ಬಂದರು. ಎಂಡಿಎನ್ ಈ ಮಾಸಪತ್ರಿಕೆಗೆ ‘ಶೂದ್ರ’ ಎಂದು ಹೆಸರಿಟ್ಟು, ಮೊದಲ ಸಂಚಿಕೆಯ ಮುಖಪುಟ ರೂಪಿಸಿದರು. ಅದೇ ಆಗ ಜರ್ಮನಿಯಲ್ಲಿ ರಿಸರ್ಚ್ ಮಾಡುವುದನ್ನು ಕೈ ಬಿಟ್ಟು ವಾಪಸ್ ಬಂದಿದ್ದ ಎಂಡಿಎನ್ ಬೆಂಗಳೂರಿನ ಬಿ.ಎಂ.ಎಸ್. ಸಂಜೆ ಲಾ ಕಾಲೇಜಿನಲ್ಲಿ ಕಾನೂನು ಪಾಠ ಮಾಡುತ್ತಾ, ರವಿವರ್ಮಕುಮಾರ್ ಥರದ ಹೊಸ ನ್ಯಾಯವಾದಿಗಳನ್ನು ತಯಾರು ಮಾಡುತ್ತಿದ್ದರು; ಸಮಾಜವಾದಿ ಯುವಜನಸಭಾದ ಮೂಲಕ ತರುಣ, ತರುಣಿಯರನ್ನು ಸ್ವತಂತ್ರ ಮನಸ್ಸಿನ ದಿಟ್ಟ ವ್ಯಕ್ತಿಗಳನ್ನಾಗಿ ರೂಪಿಸುತ್ತಿದ್ದ ಎಂಡಿಎನ್ ಗ್ರೀಕ್ ತತ್ವಜ್ಞಾನಿ ಸಾಕ್ರೆಟೀಸ್ ಮಾಡಿದಂಥ ಕೆಲಸವನ್ನು ಕನ್ನಡನಾಡಿನಲ್ಲಿ ಮುಂದುವರಿಸುತ್ತಿದ್ದರು.

23 ಸೆಪ್ಟಂಬರ್ 1973ರಂದು ಪ್ರಕಟವಾದ ‘ಶೂದ್ರ’ ಪತ್ರಿಕೆಯನ್ನು ಮೈಸೂರಿನಲ್ಲಿ ನಡೆದ ಐತಿಹಾಸಿಕ ಜಾತಿವಿನಾಶ ಸಮ್ಮೇಳನದಲ್ಲಿ ಹಂಚಿದ ಶ್ರೀನಿವಾಸ್, ಸಮ್ಮೇಳನವನ್ನು ಉದ್ಘಾಟಿಸಿದ ಕುವೆಂಪು ಅವರ ಕೈಗೂ ಕೊಟ್ಟರು. ‘‘ನಿಮ್ಮ ಹೆಸರೇನು?’’ ಎಂದರು ಕುವೆಂಪು. ‘‘ಶ್ರೀನಿವಾಸ ರೆಡ್ಡಿ’’ ಎಂದರು ಸಂಪಾದಕರು. ‘‘ನೀವು ಶೂದ್ರ ಶ್ರೀನಿವಾಸ’’ ಎಂದರು ಕುವೆಂಪು. ಅವತ್ತಿನಿಂದ ಸಂಪಾದಕರು ಶೂದ್ರ ಶ್ರೀನಿವಾಸ್, ಅಲಿಯಾಸ್, ಶೂದ್ರ ಆದರು! ಆ ಕಾಲಕ್ಕೆ ‘ಶ್ರೀನಿವಾಸ’ ಎಂಬ ಕಾವ್ಯನಾಮದಲ್ಲಿ ಬರೆಯುತ್ತಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ‘ಶೂದ್ರ’ದ ಸಂಪಾದಕರನ್ನು ‘‘ನಾನು ನಿಮ್ಮನ್ನ ಶೂದ್ರ ಅನ್ನೋಲ್ಲಪ್ಪ! ಶ್ರೀನಿವಾಸ ರೆಡ್ಡಿ ಅಂತಲೇ ಕರೀತೀನಿ’’ ಎನ್ನುತ್ತಿದ್ದರಂತೆ; ಇದು ಕೂಡ ಮಾಸ್ತಿ-ಕುವೆಂಪು ನಡುವಣ ಸಾಂಸ್ಕೃತಿಕ ವಾಗ್ವಾದದ ಅಡಿಟಿಪ್ಪಣಿಯಂತಿದೆ!

1973ರಿಂದ 2010ರವರೆಗೂ ಪ್ರತೀ ತಿಂಗಳು, ಕೆಲವೊಮ್ಮೆ ಎರಡು ತಿಂಗಳಿಗೆ, ಪ್ರಕಟವಾದ ‘ಶೂದ್ರ’ 2018ರ ಹೊತ್ತಿಗೆ ಸುಮ್ಮನಾಯಿತು. ಈಚೆಗೆ ಅವರ ಗೆಳೆಯರು ‘ಶೂದ್ರ-50’ ಕಾರ್ಯಕ್ರಮ ಮಾಡಿದರು. ವಿಮರ್ಶಕರಾದ ಎಚ್. ದಂಡಪ್ಪ ನವರು ‘ಶೂದ್ರ ಶ್ರೀನಿವಾಸ್: ಬದುಕು ಬರಹ’ ಎಂಬ ಪುಸ್ತಕ ಸಂಪಾದಿಸಿ, ‘ಶೂದ್ರ’ ಪತ್ರಿಕೆ ಹಾಗೂ ಲೇಖಕ-ಸಂಪಾದಕ ಶ್ರೀನಿವಾಸರ ಸಾಧನೆಯನ್ನು ದಾಖಲು ಮಾಡಿದರು.

ಕಳೆದ ಐವತ್ತು ವರ್ಷಗಳಲ್ಲಿ ‘ಶೂದ್ರ’ದ ಜೊತೆ ಬೆಳೆದವರಿಗೆಲ್ಲ ‘ಶೂದ್ರ’ದ ಕೊಡುಗೆ, ಚಾರಿತ್ರಿಕ ಮಹತ್ವ ಗೊತ್ತಿರುತ್ತದೆ. ಸೋಷಲಿಸ್ಟ್ ಚಿಂತನೆಗಳ ಜೊತೆಜೊತೆಗೇ ಬೆಳೆದ ಶ್ರೀನಿವಾಸ್ ಜೆ.ಪಿ.ಯವರ ನವನಿರ್ಮಾಣ ಚಳವಳಿಯಿಂದ ಹಿಡಿದು ಹಲವು ಜನತಾ ಚಳವಳಿಗಳನ್ನು ಹತ್ತಿರದಿಂದ ಬಲ್ಲವರು. ಕನ್ನಡದ ಹಿರಿಯ, ಕಿರಿಯ ಸಾಹಿತಿಗಳ ಒಡನಾಡುತ್ತಾ ಅವರ ಸರಸಮಯ-ವಿರಸಮಯ ಪ್ರಸಂಗಗಳಿಗೆ ಸಾಕ್ಷಿಯಾಗಿದ್ದವರು. ಸಂಪಾದಕರ ಈ ಬಗೆಯ ಪೂರ್ಣಾವಧಿ ಸಾರ್ವಜನಿಕ ಸಾಹಿತ್ಯಕ ಬದುಕು ‘ಶೂದ್ರ’ಕ್ಕೆ ನೆರವಾಗಿದೆ; ಎಪ್ಪತ್ತರ ದಶಕದಿಂದ ಬಹುತೇಕ ಪ್ರಗತಿಪರರು, ಉದಾರವಾದಿಗಳು, ಹಲವು ಪಂಥದವರು ಇಲ್ಲಿ ಬರೆದಿದ್ದಾರೆ. ಲಂಕೇಶ್, ಡಿ.ಆರ್. ನಾಗರಾಜ್ ಥರದ ದೊಡ್ಡ ಲೇಖಕರಿಗೂ ಅವತ್ತು ‘ಶೂದ್ರ’ವೇ ವೇದಿಕೆಯಾಗಿತ್ತು. ಚಂದ್ರಶೇಖರ ಕಂಬಾರ, ಜಿ.ಎಸ್.ಶಿವರುದ್ರಪ್ಪ, ಚನ್ನವೀರ ಕಣವಿಯವರಂಥ ಕವಿಗಳು, ಎಚ್.ಎಸ್. ರಾಘವೇಂದ್ರರಾವ್, ಕಿ.ರಂ. ನಾಗರಾಜ, ಬಸವರಾಜ ಕಲ್ಗುಡಿಯವರಂಥ ವಿಮರ್ಶಕರು; ಚರಿತ್ರಕಾರ ಎಸ್. ಚಂದ್ರಶೇಖರ್, ಅರ್ಥಶಾಸ್ತ್ರಜ್ಞ ಟಿ.ಆರ್. ಚಂದ್ರಶೇಖರ್; ಕಲಾವಿಮರ್ಶಕರು, ಮನೋವಿಶ್ಲೇಷಕರು, ಸಮಾಜವಿಜ್ಞಾನಿಗಳು ‘ಶೂದ್ರ’ದಲ್ಲಿ ಬರೆದರು.

1974ರಲ್ಲಿ ‘ಇವು ಕವಿತೆಗಳೋ ಅಲ್ಲವೋ’ ಎಂಬ ಅನುಮಾನದಲ್ಲಿ ಇನ್ನೂ ನೋಟ್ಬುಕ್ ಹಾಳೆಗಳಲ್ಲಿದ್ದ ಸಿದ್ದಲಿಂಗಯ್ಯ ನವರ ‘ಹೊಲೆ ಮಾದಿಗರ ಹಾಡು’ ಸಂಕಲನದ ಪದ್ಯಗಳನ್ನು ಪ್ರಕಟಿಸಿ ಲೋಕದ ಗಮನ ಸೆಳೆದ ‘ಶೂದ್ರ’, ನಾಲ್ಕು ಕನ್ನಡ ಸಾಹಿತ್ಯ ಚಳವಳಿಗಳ ಸಂಗಾತಿಯಾಗಿತ್ತು: ನವ್ಯ, ದಲಿತ, ಬಂಡಾಯ, ಸ್ತ್ರೀವಾದಿ ಮಾರ್ಗಗಳ ಥಿಯರಿಗಳು, ಬರಹಗಳು, ಈ ಮಾರ್ಗಗಳ ಜೊತೆಜೊತೆಗೇ ಸೃಷ್ಟಿಯಾದ ವಿಮರ್ಶೆಗಳು ಇಲ್ಲಿ ವಿಕಾಸಗೊಂಡಿವೆ, ಸಮಾಜವಾದ, ಅಂಬೇಡ್ಕರ್ ವಾದ, ಸ್ತ್ರೀವಾದ, ದಲಿತ ಚಳವಳಿಗಳ ಥಿಯರಿಗಳು ಇಲ್ಲಿ ರೂಪುಗೊಂಡಿವೆ. ಜಾಗೃತ ಸಾಹಿತ್ಯ ಸಮ್ಮೇಳನಕ್ಕೂ ‘ಶೂದ್ರ’ ಜೊತೆಗಾರನಾಗಿತ್ತು. ಯಾವುದನ್ನೂ ಗಟ್ಟಿಯಾಗಿ ಘೋಷಿಸದೆ, ತಾನು ಚಾರಿತ್ರಿಕ ಮಹತ್ವದ ಕೆಲಸದಲ್ಲಿ ತೊಡಗಿದ್ದೇನೆಂಬ ಹಮ್ಮು ಸಂಪಾದಕರಲ್ಲೂ ಇಲ್ಲದೆ ಪ್ರಕಟವಾಗುತ್ತಿದ್ದ ಸಾಂಸ್ಕೃತಿಕ ಪತ್ರಿಕೆಯೊಂದು ಸಂಸ್ಕೃತಿ ನಿರ್ಮಾಣದ ಕೆಲಸದಲ್ಲಿ ತೊಡಗಿಕೊಂಡ ಅನನ್ಯ ಪರಿ ವಿಸ್ಮಯ ಹುಟ್ಟಿಸುತ್ತದೆ.


 



ಆ ಕಾಲಕ್ಕೆ ‘ಶೂದ್ರ’ದಲ್ಲಿ ಪ್ರಕಟವಾದ ಬರಹ, ಕವಿತೆ, ವಿಮರ್ಶೆಗಳು ಕನ್ನಡ ಸಾಹಿತ್ಯದ ಗಂಭೀರ ಲೇಖಕ, ಲೇಖಕಿಯರ ಕಣ್ಣಿಗೆ ಬೀಳುವ ಸಾಧ್ಯತೆ ಹೆಚ್ಚು ಇತ್ತು; ಇದು ಕೂಡ ಬರೆಯುವವರಿಗೆ ಒಂದು ವಿಶೇಷ ಪ್ರಯೋಜನ ಸೃಷ್ಟಿಸಿತು. ‘‘ಶೂದ್ರದಲ್ಲಿ ಪ್ರಕಟವಾದ ನಿಮ್ಮ ‘ಗದ್ದೆ ಬದುವಿನಗುಂಟ ಕಾರ್ಲ್ ಮಾರ್ಕ್ಸ್ ಎಂಬೋನು’ (1988) ಪದ್ಯ ಓದಿ ನಿಮ್ಮ ಬರವಣಿಗೆಯ ಬಗ್ಗೆ ಆಸಕ್ತಿ ಹುಟ್ಟಿತು’’ ಎಂದು ಹಿರಿಯ ಲೇಖಕ ಎಚ್.ಎಸ್. ರಾಘವೇಂದ್ರರಾವ್ ಈಚೆಗೆ ನನಗೆ ಬರೆದಿದ್ದು ಒಂದು ರೀತಿಯಲ್ಲಿ ಪ್ರಾತಿನಿಧಿಕ ಅಭಿಪ್ರಾಯ ಎನ್ನಿಸುತ್ತದೆ; ನನ್ನಂತೆಯೇ ನೂರಾರು ಉದಯೋನ್ಮುಖರು ‘ಶೂದ್ರ’ದ ಮೂಲಕ ಮುಖ್ಯ ಲೇಖಕರ ಗಮನ ಸೆಳೆದು, ಸ್ಪಂದನ ಪಡೆದು ಬೆಳೆದಿರುವ ಸಾಧ್ಯತೆಯನ್ನು ಈ ಮಾತು ಸೂಚಿಸುತ್ತಿದೆ.

ವಾರ್ಷಿಕ ಚಂದಾ ಕೊಡಲಿ, ಬಿಡಲಿ, ‘ಶೂದ್ರ’ ಬಹುತೇಕ ಮುಖ್ಯ ಲೇಖಕ, ಲೇಖಕಿಯರ ಮನೆ ತಲುಪುತ್ತಿತ್ತು. ಎಷ್ಟೋ ಸಲ ಸಂಪಾದಕರೇ ಪೋಸ್ಟ್ ಆಫೀಸಿಗೆ ಅಲೆಯುತ್ತಾ, ತಮ್ಮ ಟಿವಿಎಸ್ ವಾಹನದಲ್ಲಿ ಅಡ್ಡಾಡುತ್ತಾ, ‘ಶೂದ್ರ’ವನ್ನು ತಲುಪಿಸುತ್ತಿದ್ದರು. ಸಾಹಿತ್ಯ ಬರಹಗಳನ್ನು ಮೆಚ್ಚುವವರಿಗೆ, ರಿಸರ್ಚ್ ಮಾಡುವವರಿಗೆ, ವಿಮರ್ಶೆ ಬರೆಯುವುದನ್ನು ಕಲಿಯುವವರಿಗೆ ಇಲ್ಲಿ ಹಲವು ಮಾರ್ಗಗಳ ಬರಹಗಳಿರುತ್ತಿದ್ದವು. ಕನ್ನಡ ವಿಮರ್ಶಾ ಪರಿಭಾಷೆಯ ವಿಕಾಸ, ಇಂಗ್ಲಿಷ್ ಹಾಗೂ ಕನ್ನಡ ಟೀಚರುಗಳು ವಿಮರ್ಶೆಯನ್ನು ಬೆಳೆಸಿದ ಕನ್ನಡ ವಿಮರ್ಶೆಯ ಚರಿತ್ರೆಯ ಘಟ್ಟಗಳು ‘ಶೂದ್ರ’ದ ನಾಲ್ಕು ದಶಕಗಳ ಸಂಚಿಕೆಗಳಲ್ಲಿ ದಾಖಲಾಗಿವೆ.

ಈ ನಡುವೆ ಶೂದ್ರ ಮತ್ತು ಶ್ರೀನಿವಾಸ್ ಅನುಭವಿಸಿದ ಕಷ್ಟಗಳೂ ಹತ್ತಾರು. 1976ರ ಎಮರ್ಜೆನ್ಸಿಯ ಕಾಲದಲ್ಲಿ ಶ್ರೀನಿವಾಸ್ ಅರೆಸ್ಟಾದಾಗ ಅವರ ಮನೆಯಿಂದ ಪೊಲೀಸರು ವಶಪಡಿಸಿಕೊಂಡ ಪುಸ್ತಕಗಳ ನಡುವೆ ‘ಶೂದ್ರ’ದ ಆರಂಭದ ಸಂಚಿಕೆಗಳೂ ಸೇರಿದ್ದವು. ಎಮರ್ಜೆನ್ಸಿ ಕಾಲದಲ್ಲಿ ‘ಶೂದ್ರ’ವನ್ನು ಅಚ್ಚು ಹಾಕಲು ಹಿಂಜರಿದ ಮುದ್ರಕರೂ ಇದ್ದರು. ಅಂಥ ಕಾಲದಲ್ಲಿ ‘ಶೂದ್ರ’ವನ್ನು ಅಚ್ಚು ಮಾಡಿದ್ದಷ್ಟೇ ಅಲ್ಲ, ಹಲವು ಸಂಕಷ್ಟಗಳಲ್ಲಿ ಪತ್ರಿಕೆಯ ಜೊತೆ ಗಟ್ಟಿಯಾಗಿ ನಿಂತ ಇಳಾ ವಿಜಯಾ ಅವರು ‘ಇಳಾ ಮುದ್ರಣ’ದಲ್ಲಿ ಎಷ್ಟೋ ವರ್ಷ ಪತ್ರಿಕೆಯನ್ನು ಅಚ್ಚು ಹಾಕುತ್ತಿದ್ದರು. ಇವತ್ತಿಗೂ ‘ಶೂದ್ರ’ದ ಮೊದಲ ಸಂಚಿಕೆ ಸಂಪಾದಕರ ಬಳಿ ಇಲ್ಲ. ಈ ಅಂಕಣ ಓದುತ್ತಿರುವ ಯಾರ ಬಳಿಯಾದರೂ ‘ಶೂದ್ರ’ದ ಮೊದಲ ಸಂಚಿಕೆಯಿದ್ದರೆ ದಯಮಾಡಿ ತಿಳಿಸಿ.

ಹೈಸ್ಕೂಲ್ ಮೇಷ್ಟರ ಕೆಲಸ ಮಾಡುತ್ತಲೇ ಬೆಂಗಳೂರಿನ ಎಲ್ಲ ಮುಖ್ಯ ಸಾಹಿತ್ಯ ಸಂಕಿರಣಗಳು, ಪ್ರಗತಿಪರ ರಾಜಕೀಯ ಚಟುವಟಿಕೆಗಳ ಜೊತೆಗಿರುತ್ತಿದ್ದ ಶ್ರೀನಿವಾಸ್ ಪ್ರತೀ ತಿಂಗಳೂ ಲೇಖನ, ಕವಿತೆ, ವಿಮರ್ಶೆಗಳನ್ನು ಕಾಡಿ ಬೇಡಿ ಬರೆಸಿ, ತಪ್ಪದೆ ‘ಶೂದ್ರ’ವನ್ನು ತರುತ್ತಿದ್ದರು. ತಾವೇ ಮುದ್ರಣಾಲಯವನ್ನೂ ಶುರು ಮಾಡಿ ಸುಸ್ತಾದರು. ಪ್ರತೀ ಸಂಚಿಕೆಯ ತಯಾರಿಯ ಪ್ರಯಾಸ, ಪ್ರಸಾರದ ಉಲ್ಲಾಸ, ಖ್ಯಾತಿಗಳನ್ನು ಅನುಭವಿಸಿದಂತೆಯೇ ಬಗೆಬಗೆಯ ಗೇಲಿ, ಅವಮಾನಗಳನ್ನೂ ನುಂಗಿಕೊಳ್ಳುತ್ತಿದ್ದರು. ‘ಓಕೇ ಓಕೇ ನೈಸ್ ನೈಸ್!’ ಎನ್ನುತ್ತಾ ತಣ್ಣನೆಯ ಬಿಯರ್ ಗುಟುಕಿನಲ್ಲಿ ಲೇಖಕರ ಕುಟುಕುಗಳನ್ನು ನೆನೆದು ನಕ್ಕು ಮೀರುತ್ತಿದ್ದರು. ತಮ್ಮ ಕಾಳರಾತ್ರಿಗಳ ಅಲೆದಾಟದಲ್ಲಿ ಕಂಡ ಅಸ್ಪಷ್ಟ ಚಿತ್ರಗಳನ್ನು, ಸಾಹಿತ್ಯಲೋಕದ ಗಾಸಿಪ್ಪುಗಳನ್ನು ತಮ್ಮದೇ ಶೈಲಿಯ ವಿಚಿತ್ರ ಪ್ರಜ್ಞಾಪ್ರವಾಹ ದಲ್ಲಿ ಬರೆಯುತ್ತಾ ಸೃಜನಶೀಲರಾಗುತ್ತಿದ್ದರು. ಇದ್ದಕ್ಕಿದ್ದಂತೆ ಎಲ್ಲೆಲ್ಲೋ ಜಿಗಿವ ಶೂದ್ರ ವಾಕ್ಯಗಳು ಓದುಗರ ಗಲಿಬಿಲಿ, ಕಚಗುಳಿಗಳಿಗೂ ಕಾರಣವಾಗುತ್ತಿದ್ದವು! ಕತೆ, ಕಾದಂಬರಿ ಬರೆಯುವ ಕಲೆಯನ್ನೂ ಸಂಪಾದಕರು ಉಳಿಸಿಕೊಂಡರು.

ಇವತ್ತು ಹಿಂದಿರುಗಿ ನೋಡಿದರೆ, ಅವತ್ತು ‘ಶೂದ್ರ’ ಪತ್ರಿಕೆ ಜನಪ್ರಿಯ ಸಂಸ್ಕೃತಿಯ ಭರಾಟೆಯ ವಿರುದ್ಧ ತನ್ನ ಮಟ್ಟದಲ್ಲಿ ಗಂಭೀರವಾಗಿ ಸೆಣಸಿದ ಚಿತ್ರಗಳು ಕಾಣತೊಡಗುತ್ತವೆ. ಕೊನೆಯ ಪಕ್ಷ ಸಾವಿರ ಜನ ಹೊಸ ಲೇಖಕ, ಲೇಖಕಿಯರಿಗಾದರೂ ಬರೆವ ಆತ್ಮವಿಶ್ವಾಸ ಹುಟ್ಟಿ, ಅವರ ಬರವಣಿಗೆ ಬೆಳೆಯುವಲ್ಲಿ ‘ಶೂದ್ರ’ದ ಪಾಲೂ ಇರಬಲ್ಲದು. ಒಂದು ಕಾಲಕ್ಕೆ ಐನೂರು, ಸಾವಿರ ಪ್ರತಿಗಳಿಂದ ಹಿಡಿದು ತೊಂಬತ್ತರ ದಶಕದಲ್ಲಿ 3,000 ಪ್ರತಿಗಳವರೆಗೂ ಅಚ್ಚಾದ ‘ಶೂದ್ರ’ಕ್ಕೆ ಎಂ.ಪಿ.ಪ್ರಕಾಶ್, ಬಿ. ಬಸವಲಿಂಗಪ್ಪ, ಕೆ.ಎಚ್. ರಂಗನಾಥ್, ಜೆ.ಎಚ್. ಪಟೇಲರಂಥ ಸೂಕ್ಷ್ಮ ರಾಜಕಾರಣಿಗಳೂ ಓದುಗರಾಗಿದ್ದರು. ಜಿ.ಎಸ್. ಶಿವರುದ್ರಪ್ಪ, ಕವಿ ಸಿದ್ದಲಿಂಗಯ್ಯ, ಅಗ್ರಹಾರ ಕೃಷ್ಣಮೂರ್ತಿ, ರಾಜೀವ್ ತಾರಾನಾಥ್, ಯಶವಂತ ಚಿತ್ತಾಲ, ಅನಂತಮೂರ್ತಿ, ತಿರುಮಲೇಶ್, ಮರುಳಸಿದ್ಧಪ್ಪ, ರಾಮಚಂದ್ರಶರ್ಮ ಥರದವರು ಕೂಡ ‘ಶೂದ್ರ’ದ ಲೇಖನಗಳನ್ನು ಓದಿ ಚರ್ಚಿಸುತ್ತಿದ್ದರು.

ಇವೆಲ್ಲವೂ ಕಾಲದ ಕೂಸಾಗಿ ಹುಟ್ಟಿದ ಕನ್ನಡ ಸಾಹಿತ್ಯಪತ್ರಿಕೆಯೊಂದು ನಿರ್ವಹಿಸುತ್ತಾ ಬಂದ ಮಹತ್ವದ ಜವಾಬ್ದಾರಿಗಳನ್ನು ಸೂಚಿಸುತ್ತವೆ. ಸಾಹಿತ್ಯ, ಸಂಸ್ಕೃತಿಗಳ ಬಗ್ಗೆ ಸೂಕ್ಷ್ಮವಾಗಿ ಯೋಚಿಸಿ, ವ್ಯವಧಾನದಿಂದ, ಆತ್ಮಪರೀಕ್ಷೆಯ ಮೂಲಕ ಹುಟ್ಟುವ ಬರವಣಿಗೆಗೆ ವೇದಿಕೆಯಾಗುವ ‘ಶೂದ್ರ’ದಂಥ ಪತ್ರಿಕೆಗಳಿಂದಲೂ ಸೂಕ್ಷ್ಮಜೀವಿಗಳು ಸೃಷ್ಟಿಯಾಗುತ್ತಾರೆ; ಲೇಖಕ, ಲೇಖಕಿಯರಾಗಿ, ಬುದ್ಧಿಜೀವಿಗಳಾಗಿ ಬೆಳೆಯುತ್ತಾರೆ. ಈಗ ಮತ್ತೆ ಬರಲಾರಂಭಿಸಿರುವ ಆರ್.ಜಿ. ಹಳ್ಳಿ ನಾಗರಾಜ್-ಪುಷ್ಪ ಅವರ ‘ಅನ್ವೇಷಣೆ’ಯಾಗಲೀ, ಹೊಸ ತಲೆಮಾರಿನ ಟಿ.ಎಸ್. ಗೊರವರ್ ಸಂಪಾದಿಸುವ ‘ಅಕ್ಷರ ಸಂಗಾತ’ವಾಗಲೀ ಈ ಥರದ ಜವಾಬ್ದಾರಿಗಳನ್ನು ಈ ಕಾಲದಲ್ಲಿ ಮುಂದುವರಿಸಲು ‘ಶೂದ್ರ’ದ ನಲವತ್ತೈದು ವರ್ಷಗಳ ನಡಿಗೆ ಅಪೂರ್ವ ಪ್ರೇರಣೆಯಾಗಬಲ್ಲದು.

ಕಳೆದ ತಿಂಗಳು ಒಂದು ಮುಸ್ಸಂಜೆ ‘ಶೂದ್ರ’ದ ಏಳುಬೀಳು ಕುರಿತು ಮಾತಾಡುತ್ತಿದ್ದ ಶ್ರೀನಿವಾಸ್ ‘ಶೂದ್ರ ಸಂತ’ನಂತೆ ಕೂತು, ಕಹಿಯಿಲ್ಲದೆ ತಮ್ಮ ಸುದೀರ್ಘ ಶೂದ್ರ ಪಯಣವನ್ನು ನೆನಸಿಕೊಳ್ಳುತ್ತಿದ್ದರು. ಶೂದ್ರದ ಎಷ್ಟೋ ಹಳೆಯ ಸಂಚಿಕೆಗಳು ಕೈಗೇ ಸಿಗದ ಕಾಲದಲ್ಲಿ ಲೇಖಕಿ ಸಂಧ್ಯಾರೆಡ್ಡಿ ತಮ್ಮ ಬಳಿ ಇದ್ದ ಎಲ್ಲ ಸಂಚಿಕೆಗಳನ್ನೂ ಬೈಂಡ್ ಮಾಡಿಸಿ ಕೊಟ್ಟ ಸಂಪುಟಗಳನ್ನು ತೋರಿಸಿದರು. ಶೂದ್ರ ಸಂಚಿಕೆಗಳು ಡಿಜಿಟಲೈಸ್ ಆಗಿ ಈ ಕಾಲದ ಸಾಹಿತ್ಯಜೀವಿಗಳಿಗೆ ಸಿಕ್ಕುವ ಕಾಲವೂ ಬರಲಿದೆ; ಶೂದ್ರದ ಅಪರೂಪದ ಲೇಖನಗಳ ಸಂಪುಟಗಳೂ ಬರಲಿವೆ. ಐವತ್ತು ವರ್ಷಗಳ ಹಿಂದೆ ಶುರುವಾದ ‘ಶೂದ್ರ’ದ ನಡಿಗೆ ಇನ್ನೂ ನಿಂತಿಲ್ಲ ಎಂಬ ಖಾತ್ರಿಯನ್ನಂತೂ ಕೊಡಬಲ್ಲೆ!

https://natarajhuliyar.com 

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ನಟರಾಜ್ ಹುಳಿಯಾರ್

contributor

Similar News